ಕೆನಡಾಕ್ಕೆ ವಿದ್ಯಾರ್ಥಿಯಾಗಿ ಹೋಗುವರ ಜೇಬು ಭಾರವಾಗಲಿದೆ!

08-09-21 12:10 pm       Goodreturns   ದೇಶ - ವಿದೇಶ

ಕೆನಡಾ ದೇಶಕ್ಕೆ ವಿದ್ಯಾರ್ಥಿ ವೀಸಾ ಕೋರಿಕೆಯನ್ನ ಸಲ್ಲಿಸಿ ಸಾವಿರಾರು ಅಪ್ಲಿಕೇಶನ್ ಸಲ್ಲಿಸಲಾಗಿದೆ. ಕೋವಿಡ್ ಕಾರಣದಿಂದ ವಿದ್ಯಾರ್ಥಿ ವೀಸಾವನ್ನ ಪ್ರೋಸೆಸ್ ಮಾಡುವಲ್ಲಿ ಬಹಳಷ್ಟು ನಿಧಾನವಾಗುತ್ತಿದೆ.

ನಾವು ಭಾರತೀಯರು ವಿದ್ಯಾಭ್ಯಾಸಕ್ಕೆ ಬಹಳ ಹಿಂದಿನಿಂದಲೂ ಅತ್ಯಂತ ಮಹತ್ವ ನೀಡುತ್ತಾ ಬಂದವರು. ನಹೀ ಜ್ಞಾನೇನ ಸದೃಶಂ ಎನ್ನುವುದನ್ನ ನಂಬಿದವರು ನಾವು . ಅಂದರೆ ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎನ್ನುವ ಅರ್ಥ ಇದಾಗಿದೆ. ದೂರ ದೂರದ ದೇಶಗಳಿಂದ ನಮ್ಮ ತಕ್ಷಶಿಲೆಗೆ ಜ್ಞಾನ ಅರಸಿ ಬರುತ್ತಿದ್ದರು ಅನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ . ಇವತ್ತು ಯೂನಿವರ್ಸಿಟಿ ಎಂದು ನಾವು ಏನು ಹೇಳುತ್ತೇವೆ ಅದು ಅಂದಿನ ದಿನಗಳಲ್ಲೇ ನಮ್ಮಲ್ಲಿ ಇತ್ತು . ಹಲವಾರು ವಿಷಯಗಳಲ್ಲಿ ನಿಪುಣತೆ ಹೊಂದಲು ಅಲ್ಲಿ ಸಹಾಯ ಮಾಡುತ್ತಿದ್ದರು . ಎಲ್ಲಕ್ಕೂ ಮುಖ್ಯ ಕಲಿತ ವಿದ್ಯೆ ಜೀವನದಲ್ಲಿ ಕೆಲಸಕ್ಕೆ ಬರುತ್ತಿತ್ತು.

ಆದರೆ ಕಳೆದ ಮೂರು ದಶಕದಲ್ಲಿ ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣವಾಗಿದೆ . ಇಂದು ಹಣವಿಲ್ಲದೆ ಯಾವ ಸಂಸ್ಥೆ ತಾನೇ ನೆಡೆದೀತು ? ಅಲ್ಲವೇ ? ಆದರೆ ಅವರು ಕಲಿಸುತ್ತಿರುವ ವಿಷಯದ ಗುಣಮಟ್ಟ ಅಂದರೆ ಶಿಕ್ಷಣದ ಗುಣಮಟ್ಟ ಯಾವ ಮಟ್ಟಕ್ಕೆ ಇಳಿದಿದೆ ಎಂದರೆ ಪದವಿ ಪಡೆದು ಹೊರಬಂದ ವಿದ್ಯಾರ್ಥಿಗಳು ಯಾವ ಕೆಲಸ ಮಾಡಲೂ ನಾಲಾಯಕ್ಕು ಎನ್ನುವ ಮಟ್ಟಕ್ಕೆ ! . ಈ ಮಾತನ್ನ ಉತ್ಪ್ರೇಕ್ಷೆ ಎಂದು ಕೊಳ್ಳಬಹುದು. ಆದರೆ ಇಂದು ಶಿಕ್ಷಣದ ಮಟ್ಟ ಕುಸಿದಿದೆ ಎನ್ನುವುದಕ್ಕೆ ಕಾರ್ಪೊರೇಟ್ ವಲಯದಲ್ಲಿ ಕೆಲಸಗಳು ಬಹಳಷ್ಟು ಖಾಲಿ ಇದ್ದರೂ ಅಲ್ಲಿಗೆ ಸೂಕ್ತ ವ್ಯಕ್ತಿ ಸಿಗದೇ ಇರುವುದನ್ನ ಉದಾಹರಿಸಬಹುದು. ಕಾರ್ಪೊರೇಟ್ ವಲಯದಲ್ಲಿ 'ಸ್ಕಿಲ್ ಗ್ಯಾಪ್' (ಕೌಶಲ್ಯದ ಕೊರತೆ ) ಎನ್ನುವುದು ಅತ್ಯಂತ ಸಾಮಾನ್ಯವಾಗಿ ಕೇಳಿಬರುವ ಮಾತಾಗಿದೆ.



ಪೋಷಕರು ತಮ್ಮ ಮಕ್ಕಳನ್ನ ವಿದೇಶಿ ಯೂನಿವೆರ್ಸಿಟಿಯಲ್ಲಿ ವ್ಯಾಸಂಗ ಮಾಡಲು ಕಳಿಸುವುದು ಎಂದು ಬಹುತೇಕ ಭಾರತೀಯ ಪೋಷಕರು ನಂಬಿದಂತಿದೆ ! ಹೀಗೆ ಹೇಳಲು ಕಾರಣ ದೆಹಲಿಯಲ್ಲಿರುವ ಕೆನಡಾ ರಾಯಭಾರ ಕಛೇರಿಯಲ್ಲಿ ಕೆನಡಾ ದೇಶಕ್ಕೆ ವಿದ್ಯಾರ್ಥಿ ವೀಸಾ ಕೋರಿಕೆಯನ್ನ ಸಲ್ಲಿಸಿ ಸಾವಿರಾರು ಅಪ್ಲಿಕೇಶನ್ ಸಲ್ಲಿಸಲಾಗಿದೆ. ಕೋವಿಡ್ ಕಾರಣದಿಂದ ವಿದ್ಯಾರ್ಥಿ ವೀಸಾವನ್ನ ಪ್ರೋಸೆಸ್ ಮಾಡುವಲ್ಲಿ ಬಹಳಷ್ಟು ನಿಧಾನವಾಗುತ್ತಿದೆ. ಈ ಬಾರಿ ಹೊಸ ಸೆಮಿಸ್ಟರ್ ಶುರುವಾಗುವ ಮುನ್ನ ವಿದ್ಯಾರ್ಥಿಗಳು ಕೆನಡಾ ತಲುಪುವುದು ಸಂಶಯ ಎನ್ನುವ ಮಾತನ್ನ ಹೈ ಕಮಿಷಿನರ್ ಆಫ್ ಕೆನಡಾ ರಾಯಭಾರ ಕಛೇರಿಯಿಂದ ಹೇಳಿಕೆ ನೀಡಿದ್ದಾರೆ.

ಕೆನಡಾ ದೇಶ ಭಾರತದಿಂದ ಬರುವ ಟೂರಿಸ್ಟ್‌ಗಳು , ವಿದ್ಯಾರ್ಥಿಗಳು ಮತ್ತಿತರೇ ಜನರು ಕೋವಿಡ್ ಶೀಲ್ಡ್ ಲಸಿಕೆಯನ್ನ ತೆಗೆದುಕೊಂಡಿದ್ದರೆ ಅವರನ್ನ ತನ್ನ ದೇಶಕ್ಕೆ ಬಿಟ್ಟು ಕೊಳ್ಳುತ್ತಿದೆ. ಆದರೆ ಅಲ್ಲಿಗೆ ಹೋದ ನಂತರ ಮತ್ತೆ ಕೋವಿಡ್ ಟೆಸ್ಟ್ ಪಡೆಯುವುದು ಕಡ್ಡಾಯ. ಆದರೆ ಕೆನಡಾ ಭಾರತದಿಂದ ನೇರವಾಗಿ ತನ್ನ ದೇಶಕ್ಕೆ ವಿಮಾನವನ್ನ ಬಿಟ್ಟು ಕೊಳ್ಳುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮತ್ತಿತರರು ಬೇರೆ ಮೂರನೇ ದೇಶಕ್ಕೆ ಮೊದಲು ಹೋಗಿ ಆ ನಂತರ ಕೆನಡಾ ದೇಶದಕ್ಕೆ ಹೋಗಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣಕಾಸು ಹೊರೆಯಾಗಲಿದೆ. ಇದಲ್ಲದೆ ಅಲ್ಲಿನ ವಸತಿ ಜೊತೆಗೆ ಎಲ್ಲವೂ ಒಂದಷ್ಟು ದುಬಾರಿಯಾಗಿವೆ. ಇದಕ್ಕೆ ಕೋವಿಡ್ ಕಾರಣವಾಗಿದೆ. ಅಚ್ಚರಿಯೆಂದರೆ ಇಷ್ಟೆಲ್ಲಾ ಸಂಕಷ್ಟಗಳ ನಡುವೆ ಕೂಡ ಕೆನಡಾಗೆ ವೀಸಾ ಬಯಸಿ ನೀಡುವ ಅರ್ಜಿಗಳ ಸಂಖ್ಯೆಯಲ್ಲಿ ಮಾತ್ರ ಇಳಿಮುಖವಾಗಿಲ್ಲ. ಕೆನಡಾ ದೇಶದಲ್ಲಿ ವೇಗವಾಗಿ ಪರ್ಮನೆಂಟ್ ರೆಸಿಡೆನ್ಸಿ ಸಿಗುವುದು ಪ್ರಮುಖ ಆರ್ಕಷಣೆಯಲಿ ಒಂದಾಗಿದೆ.