ರಾಜಸ್ಥಾನ ಬಳಿಕ ಜಾರ್ಖಂಡಿನಲ್ಲೂ ಕಾಂಗ್ರೆಸ್ ಹೈಡ್ರಾಮಾ

01-08-20 04:18 pm       Special Correspondant   ದೇಶ - ವಿದೇಶ

ಮಧ್ಯಪ್ರದೇಶ, ರಾಜಸ್ಥಾನದ ಬಳಿಕ ಜಾರ್ಖಂಡಿನಲ್ಲಿಯೂ ರಾಜಕೀಯ ಹೈಡ್ರಾಮಾ ಶುರುವಾಗಿದೆ. ಜೆಎಂಎಂ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಗ್ಗೆ ಅಸಮಾಧಾನಗೊಂಡಿರುವ 15 ಕಾಂಗ್ರೆಸ್ ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದ್ದು ಸೊರೇನ್ ಸರಕಾರದ ಮೇಲೆ ತೂಗುಗತ್ತಿ ಶುರುವಾಗಿದೆ.

ರಾಂಚಿ, ಆಗಸ್ಟ್ 1: ಮಧ್ಯಪ್ರದೇಶ, ರಾಜಸ್ಥಾನದ ಬಳಿಕ ಜಾರ್ಖಂಡಿನಲ್ಲಿಯೂ ರಾಜಕೀಯ ಹೈಡ್ರಾಮಾ ಶುರುವಾಗಿದೆ. ಜೆಎಂಎಂ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಗ್ಗೆ ಅಸಮಾಧಾನಗೊಂಡಿರುವ 15 ಕಾಂಗ್ರೆಸ್ ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದ್ದು ಸೊರೇನ್ ಸರಕಾರದ ಮೇಲೆ ತೂಗುಗತ್ತಿ ಶುರುವಾಗಿದೆ.

ಜಾರ್ಖಂಡಿನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಮೈತ್ರಿಯ ಸರಕಾರ ಆಡಳಿತದಲ್ಲಿದೆ. ಜೆಎಂಎಂ ಪಕ್ಷದ ಸಿಎಂ ಹೇಮಂತ್ ಸೊರೇನ್, ಸಿಎಂ ಸೇರಿ 11 ಮಂದಿ ಸಚಿವ ಸ್ಥಾನಗಳನ್ನು ಮಾತ್ರ ತುಂಬಿದ್ದು, ಇನ್ನೊಂದು ಸ್ಥಾನವನ್ನು ಖಾಲಿ ಇಟ್ಟಿದ್ದಾರೆ. ಈ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸಿನ ಕೆಲವು ಶಾಸಕರು ಲಾಬಿ ನಡೆಸುತ್ತಿದ್ದಾರೆ. ಇದೇ ವೇಳೆ, ಕಾಂಗ್ರೆಸಿನ ಹಿರಿಯ ಶಾಸಕರಾದ ಇರ್ಫಾನ್ ಅನ್ಸಾರಿ, ಉಮಾಶಂಕರ್ ಅಲೇಖ ಮತ್ತು ರಾಜೇಶ್ ಕಶ್ಯಪ್ ದೆಹಲಿಗೆ ತೆರಳಿದ್ದು, ಹಿರಿಯ ನಾಯಕರಿಗೆ ದೂರು ನೀಡಿದ್ದಾರೆ. ಅಲ್ಲದೆ, ಟ್ರಬಲ್ ಶೂಟರ್ ಅಹ್ಮದ್ ಪಟೇಲ್ ಅವರನ್ನು ಭೇಟಿಯಾಗಿ ಸಿಎಂ ಸೊರೇನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ದೆಹಲಿ ನಾಯಕರು ತಮ್ಮ ಅಹವಾಲಿಗೆ ಸ್ಪಂದಿಸಿಲ್ಲ ಎನ್ನುತ್ತಿರುವ ಅಸಮಾಧಾನಿತ ಕಾಂಗ್ರೆಸ್ ಗುಂಪು, ಗೃಹ ಸಚಿವರೂ ಆಗಿರುವ ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಮೇಶ್ವರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ರಾಂಚಿಯಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸೆಳೆಯುತ್ತಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದ ಜೆವಿಎಂ ಪಕ್ಷದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ, ಮತ್ತೆ ಸರಕಾರ ರಚನೆಗೆ ಕಸರತ್ತು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಒಂದಷ್ಟು ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ವಾಲಿದರೂ ಸದ್ಯಕ್ಕೆ ಜೆಎಂಎಂ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಪತನವಾಗಲಾರದು. ಯಾಕಂದ್ರೆ, 81 ಸದಸ್ಯಬಲದ ಜಾರ್ಖಂಡಿನಲ್ಲಿ ಜೆಎಂಎಂ 29, ಕಾಂಗ್ರೆಸ್ 15, ಬಿಜೆಪಿ 26 ಸ್ಥಾನಗಳನ್ನು ಹೊಂದಿದ್ದರೆ, ಆರ್ ಜೆಡಿ, ಎನ್ ಸಿಪಿ ಮತ್ತು ಸಿಪಿಐಎಂ ತಲಾ ಒಂದೊಂದು ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸಿನ 15 ಶಾಸಕರೂ ಬಿಜೆಪಿಯತ್ತ ಬಂದರೆ ಮಾತ್ರ ಸರಕಾರ ಬೀಳುವ ಸಾಧ್ಯತೆಯಿದೆ.