ಕಾಂಗ್ರೆಸ್ ನಾಯಕರಲ್ಲಿ ಹೆಚ್ಚಿದ ಅಸಮಾಧಾನ ; ಅಧ್ಯಕ್ಷ ಹುದ್ದೆಗೆ ಮುಕುಲ್ ವಾಸ್ನಿಕ್ ಹೆಸರನ್ನು ಸೂಚಿಸಿದ್ದ ಜಿ-23 ನಾಯಕರು ! ಪಕ್ಷ ಒಡೆದು ಹೋಗುವ ಆತಂಕದಲ್ಲಿ ಸೋನಿಯಾಗೇ ಪಟ್ಟ!  

14-03-22 04:25 pm       HK Desk news   ದೇಶ - ವಿದೇಶ

ಪಂಚ ರಾಜ್ಯಗಳ ಚುನಾವಣೆ ಸೇರಿದಂತೆ ಕಳೆದ ಎರಡು ವರ್ಷಗಳಲ್ಲಿ ಬೆನ್ನು ಬೆನ್ನಿಗೆ ವಿವಿಧ ರಾಜ್ಯಗಳ ಅಸೆಂಬ್ಲಿ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣುತ್ತಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಪೂರ್ಣಾವಧಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಆಗಬೇಕೆಂದು ರಾಷ್ಟ್ರ ಮಟ್ಟದಲ್ಲಿ ಪ್ರಬಲ ಒತ್ತಾಯ ಕೇಳಿಬಂದಿತ್ತು.

ನವದೆಹಲಿ, ಮಾ.14 : ಪಂಚ ರಾಜ್ಯಗಳ ಚುನಾವಣೆ ಸೇರಿದಂತೆ ಕಳೆದ ಎರಡು ವರ್ಷಗಳಲ್ಲಿ ಬೆನ್ನು ಬೆನ್ನಿಗೆ ವಿವಿಧ ರಾಜ್ಯಗಳ ಅಸೆಂಬ್ಲಿ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣುತ್ತಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಪೂರ್ಣಾವಧಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಆಗಬೇಕೆಂದು ರಾಷ್ಟ್ರ ಮಟ್ಟದಲ್ಲಿ ಪ್ರಬಲ ಒತ್ತಾಯ ಕೇಳಿಬಂದಿತ್ತು. ಭಾನುವಾರ ಕಾರ್ಯಕಾರಿ ಮಂಡಳಿ ಸಭೆ ನಡೆಯೋದಕ್ಕೂ ಮೊದಲೇ ಜಿ-23 ನಾಯಕರು ಹಿರಿಯ ನಾಯಕ ಮುಕುಲ್ ವಾಸ್ನಿಕ್ ಅವರನ್ನು ಅಧ್ಯಕ್ಷ ಹುದ್ದೆಗೇರಿಸಬೇಕೆಂದು ಒತ್ತಾಯಿಸಿದ್ದರು.

ಆದರೆ ಪಕ್ಷದ ಹೀನಾಯ ಸೋಲಿನ ನಡುವೆಯೂ ಗಾಂಧಿ ಕುಟುಂಬದ ನಿಷ್ಠರು ಪಕ್ಷದ ಹಿಡಿತವನ್ನು ಬೇರೆ ವ್ಯಕ್ತಿಗೆ ನೀಡಲು ಒಪ್ಪಿಗೆ ಸೂಚಿಸಿಲ್ಲ. ಭಾನುವಾರ ಸಂಜೆಯಿಂದ ತಡರಾತ್ರಿ ವರೆಗೂ ಐದು ಗಂಟೆಗಳ ಕಾಲ ಚರ್ಚೆ ನಡೆದಿದ್ದು ಒಂದು ಹಂತದಲ್ಲಿ ಸೋನಿಯಾ ಗಾಂಧಿ ತಮ್ಮ ಸ್ಥಾನ ಬಿಟ್ಟುಕೊಡಲು ಮುಂದಾದರೂ, ಕಾರ್ಯಕಾರಿ ಮಂಡಳಿ ಸದಸ್ಯರು ನಿರಾಕರಿಸಿದ್ದಾರೆ. ಗಾಂಧಿ ಕುಟುಂಬದ ಹಿಡಿತ ತಪ್ಪಿದರೆ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗುತ್ತದೆ, ಹೋಳಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಕೆಲವು ನಾಯಕರು ಪಕ್ಷದ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿಯನ್ನೇ ನೇಮಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಕರ್ನಾಟಕದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಆಗ್ರಹ ಮಾಡಿದವರಲ್ಲಿ ಪ್ರಮುಖರು.

ಆದರೆ ಕಳೆದ ಬಾರಿ ಪಕ್ಷದ ಅಧ್ಯಕ್ಷರ ಬದಲಾವಣೆಗೆ ಪ್ರಬಲ ಒತ್ತಾಯ ಮಂಡಿಸಿದ್ದ ಜಿ-23 ನಾಯಕರು ಮುಕುಲ್ ವಾಸ್ನಿಕ್ ಗೆ ಪಟ್ಟ ಕಟ್ಟಬೇಕೆಂದು ವಾದಿಸಿದ್ದಾರೆ. ಆನಂದ್ ಶರ್ಮಾ, ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಸೇರಿದಂತೆ ಪ್ರಮುಖ ನಾಯಕರು ಮುಕುಲ್ ವಾಸ್ನಿಕ್ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗಿದ್ದರೂ, ಹೈಕಮಾಂಡ್ ಹೆಸರಲ್ಲಿ ಪಕ್ಷದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಕೆ.ಸಿ.ವೇಣುಗೋಪಾಲ್, ಅಜಯ್ ಮಾಕೆನ್ ಮತ್ತು ರಣದೀಪ್ ಸುರ್ಜೇವಾಲಾ. ಇವರ ಹೆಸರಲ್ಲಿ ರಾಹುಲ್ ಗಾಂಧಿ ಹಿಂಬಾಗಿಲಲ್ಲಿ ನಿಂತು ಅಧಿಕಾರ ಚಲಾಯಿಸುತ್ತಿದ್ದಾರೆ. ಯಾವುದೇ ವಿಚಾರದಲ್ಲೂ ಇತರ ನಾಯಕರ ಮಾತು ಕೇಳುತ್ತಿಲ್ಲ. ಅಧ್ಯಕ್ಷ ಸ್ಥಾನದಲ್ಲಿ ಇಲ್ಲದೆ ಹಿಂಬಾಗಿಲಲ್ಲಿ ಅಧಿಕಾರ ನಡೆಸುತ್ತಿರುವುದು ಸರಿಯಲ್ಲ. ನಾವು ಕೂಡ ಪಕ್ಷದ ಹಿತ ಬಯಸುವವರು. ಪಕ್ಷ ವಿರೋಧಿಗಳಲ್ಲ ಎಂದು ಜಿ-23 ಗುಂಪಿನ ನಾಯಕರು ಅಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

Sonia Gandhi to take up corrective measures to strengthen party, says  Congress after CWC meet

ಇದೇ ಕಾರಣಕ್ಕೆ ಪಕ್ಷಕ್ಕೆ ಪೂರ್ಣಾವಧಿಗೆ ಅಧ್ಯಕ್ಷರ ನೇಮಕ ಆಗಬೇಕೆಂದು ಪ್ರಮುಖ ನಾಯಕರು ಪ್ರತಿಪಾದಿಸಿದ್ದಾರೆ. ಆದರೆ ಈ ಭಿನ್ನರಾಗದ ನಾಯಕರ ಪ್ರಸ್ತಾಪಕ್ಕೆ ಕಾರ್ಯಕಾರಿ ಮಂಡಳಿಯಲ್ಲಿರುವ ಗಾಂಧಿ ಕುಟುಂಬದ ನಿಷ್ಠರು ಒಪ್ಪಿಗೆ ಸೂಚಿಸಿಲ್ಲ. ಗಾಂಧಿ ಕುಟುಂಬದ ಹಿಡಿತ ತಪ್ಪಿದರೆ ದೇಶದ ವಿವಿಧ ರಾಜ್ಯಗಳ ಘಟಕಗಳ ಮೇಲೆ ಹಿಡಿತ ತಪ್ಪುತ್ತದೆ, ಹೋಳಾಗುವ ಸಾಧ್ಯತೆಯಿದೆ ಎನ್ನುವ ನೆಪದಲ್ಲಿ ಮುಂದಿನ ಚುನಾವಣೆ ವರೆಗೂ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರನ್ನೇ ಮುಂದುವರಿಸಲು ನಿರ್ಧರಿಸಿದ್ದಾರೆ. 2019ರಲ್ಲಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ, ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರಿಂದ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

May be an image of text

ರಾಹುಲ್ ಗಾಂಧಿ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಅನಾರೋಗ್ಯದ ನಡುವೆಯೂ ಸೋನಿಯಾ ಅವರನ್ನು ಹಂಗಾಮಿ ಅಧ್ಯಕ್ಷೆಯಾಗಿಸಿದ್ದಕ್ಕೆ ಎಐಸಿಸಿ ಒಳಗಡೆಯೇ ಅಸಮಾಧಾನ ಉಂಟಾಗಿತ್ತು. ಯುಪಿಎ ಕಾಲದಲ್ಲಿ ಸಚಿವರಾಗಿದ್ದ ಕಪಿಲ್ ಸಿಬಲ್, ಚಿದಂಬರಂ, ಜೈರಾಮ್ ರಮೇಶ್, ಆನಂದ ಶರ್ಮಾ, ಅಭಿಷೇಕ್ ಸಿಂಘ್ವಿ, ವೀರಪ್ಪ ಮೊಯ್ಲಿ, ಮನೀಶ್ ತಿವಾರಿ, ಗುಲಾಂ ನಬಿ ಆಜಾದ್ ಸೇರಿದಂತೆ 23 ಮಂದಿ ಪ್ರಮುಖ ನಾಯಕರು ಹಂಗಾಮಿ ಅಧ್ಯಕ್ಷರ ನೇಮಕ ಮಾಡುವುದಕ್ಕೆ ಆಕ್ಷೇಪ ಸೂಚಿಸಿದ್ದರು. ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಬದಲಾವಣೆ ತರಬೇಕು, ಪೂರ್ಣಾವಧಿಗೆ ಅಧ್ಯಕ್ಷರ ನೇಮಕ ಆಗಬೇಕು, ಇಲ್ಲದಿದ್ದರೆ ಬಿಜೆಪಿಯನ್ನು ಎದುರಿಸಲು ಸಾಧ್ಯವಿಲ್ಲ ಎಂದು ಪಕ್ಷದ ವೇದಿಕೆಯಲ್ಲೇ ಈ ನಾಯಕರು ಪ್ರತಿಪಾದಿಸಿದ್ದರು. ಆದರೆ, ಗಾಂಧಿ ಕುಟುಂಬದ ನಿಷ್ಠರಾದ ವೇಣುಗೋಪಾಲ್, ಸುರ್ಜೇವಾಲಾ, ಎಕೆ ಆಂಟನಿ, ಅಜಯ್ ಮಾಕೆನ್, ಅಹ್ಮದ್ ಪಟೇಲ್ ಸೇರಿದಂತೆ ಕೆಲವು ನಾಯಕರು ಪಕ್ಷದ ಹಿಡಿತವನ್ನು ತಮ್ಮಲ್ಲಿ ಇಟ್ಟುಕೊಂಡಿದ್ದಾರೆ. ವರ್ಕಿಂಗ್ ಕಮಿಟಿಯಲ್ಲಿರುವ ಈ ನಾಯಕರು ಮತ್ತೆ ಸೋನಿಯಾ ಗಾಂಧಿಯನ್ನೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಸಿದ್ದು ಮತ್ತು ಗಾಂಧಿ ಕುಟುಂಬದ ಹೆಸರಲ್ಲಿ ಇವರು ಅಧಿಕಾರ ಚಲಾಯಿಸುತ್ತಿರುವುದು ಪಕ್ಷದ ಇತರ ನಾಯಕರಲ್ಲಿ ಅಸಮಾಧಾನ ಹೆಚ್ಚಿಸಿದೆ.  

Rahul Gandhi's roadmap: Come up with vision for Gujarat, 25 people to  execute it | Cities News,The Indian Express

ಆದರೆ, ಒಂದು ಕಡೆ ಸೋನಿಯಾ ಗಾಂಧಿ ಪರವಾಗಿರುವ ಗುಂಪು, ಮತ್ತೊಂದು ಕಡೆ ನಾಯಕತ್ವ ಬದಲಾವಣೆ ಆಗಬೇಕು ಎನ್ನುವ ಗುಂಪು. ಗಾಂಧಿ ಕುಟುಂಬ ಹೊರತಾದ ವ್ಯಕ್ತಿಗೆ ಅಧ್ಯಕ್ಷ ಹುದ್ದೆ ನೀಡಿದರೆ, ಪಕ್ಷದ ಹಿಡಿತ ತಪ್ಪುತ್ತದೆ, ಪಕ್ಷ ಒಡೆದು ಹೋಗುವ ಸಾಧ್ಯತೆಯಿದೆ ಎಂಬ ನೆಪವೊಡ್ಡಿ ಕುಟುಂಬ ನಿಷ್ಠ ನಾಯಕರು ಸೋನಿಯಾ ಗಾಂಧಿ ಅವರನ್ನೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಸಿದ್ದಾರೆ.   

ಇಷ್ಟಕ್ಕೂ ಮುಕುಲ್ ವಾಸ್ನಿಕ್ ಯಾರು ?

62 ವರ್ಷದ ಮುಕುಲ್ ಬಾಲಕೃಷ್ಣ ವಾಸ್ನಿಕ್, ಮಹಾರಾಷ್ಟ್ರ ಮೂಲದ ಬೌದ್ಧ ಮನೆತನದ ಹಿನ್ನೆಲೆಯವರು. ಮೂರು ಬಾರಿ ಸಂಸದ, ಒಂದು ಬಾರಿ ಶಾಸಕರಾಗಿ ಮಹಾರಾಷ್ಟ್ರ ಸರಕಾರದಲ್ಲಿ ಸಾಮಾಜಿಕ ನ್ಯಾಯ ವಿಭಾಗದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದರು. 1984ರಲ್ಲಿ ಮೊದಲ ಬಾರಿಗೆ ತನ್ನ 25ರ ಹರೆಯದಲ್ಲೇ ಬುಲ್ದಾನಾ ಕ್ಷೇತ್ರದಲ್ಲಿ ಸಂಸದರಾಗಿದ್ದ ವಾಸ್ನಿಕ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಸದರಾಗಿರುವ ಹಿರಿಮೆ ಹೊಂದಿದ್ದಾರೆ. 2014ರ ಬಳಿಕ ಪಕ್ಷದ ಎಐಸಿಸಿಯಲ್ಲಿ ಮಾತ್ರ ಇದ್ದ ಅವರನ್ನು 2020ರಲ್ಲಿ ಜನರಲ್ ಸೆಕ್ರಟರಿಯಾಗಿ ಮಾಡಲಾಗಿತ್ತು. ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆ, ರೂಪುರೇಷೆ ಬದಲಾವಣೆ ಆಗಬೇಕು ಎನ್ನುವವರಲ್ಲಿ ವಾಸ್ನಿಕ್ ಒಬ್ಬರು.

Veteran Congress leader Mukul Wasnik was the suggested name by the G-23 leaders for the post of Congress Party President, reported ANI quoting inside sources.