ಜಿಎಸ್ ಟಿ ಕಾನೂನು ಉಲ್ಲಂಘಿಸಿ ಕೇಂದ್ರ ಎಡವಟ್ಟು ; ಸಿಎಜಿ ವರದಿ  

25-09-20 09:51 pm       Headline Karnataka News Network   ದೇಶ - ವಿದೇಶ

ಜಿಎಸ್ ಟಿಯ ಕೇಂದ್ರದ ಪಾಲು ರಾಜ್ಯಕ್ಕೆ ಬಂದಿಲ್ಲ ಎಂಬ ದೂರಿನ ನಡುವೆಯೇ ಕೇಂದ್ರ ಸರಕಾರ ಜಿಎಸ್ ಟಿ ಸಂಗ್ರಹದಲ್ಲಿ ಎಡವಟ್ಟು ಮಾಡಿಕೊಂಡಿರುವುದು ಬಯಲಾಗಿದೆ.

ನವದೆಹಲಿ, ಸೆಪ್ಟಂಬರ್ 26: ಜಿಎಸ್ ಟಿಯ ಕೇಂದ್ರದ ಪಾಲು ರಾಜ್ಯಕ್ಕೆ ಬಂದಿಲ್ಲ ಎಂಬ ದೂರಿನ ನಡುವೆಯೇ ಕೇಂದ್ರ ಸರಕಾರ ಜಿಎಸ್ ಟಿ ಸಂಗ್ರಹದಲ್ಲಿ ಎಡವಟ್ಟು ಮಾಡಿಕೊಂಡಿರುವುದು ಬಯಲಾಗಿದೆ. ರಾಜ್ಯಗಳಿಗೆ ಪರಿಹಾರ ನೀಡುವುದಕ್ಕಾಗಿ ಸಂಗ್ರಹಿಸಿದ ಜಿಎಸ್ ಟಿ ಸೆಸ್ ಪಾಲಿನ ಎರಡು ವರ್ಷದ 42,272 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರಕಾರ ಬೇರೆಡೆಗೆ ವರ್ಗಾಯಿಸಿರುವ ಬಗ್ಗೆ ಸಿಎಜಿ ಪತ್ತೆ ಮಾಡಿದೆ.

ಲೆಕ್ಕ ಪರಿಶೋಧನಾ ವರದಿಯಲ್ಲಿ ಮಹಾಲೇಖಪಾಲರು ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ. ರಾಜ್ಯ ಸರಕಾರಗಳಿಗೆ ನೀಡಲೆಂದೇ ಇರುವ ಈ ಹಣವನ್ನು ಜಿಎಸ್ ಟಿ ಪರಿಹಾರ ಸೆಸ್ ಸಂಗ್ರಹ ನಿಧಿಗೇ ಜಮೆ ಮಾಡಬೇಕಾಗಿತ್ತು. ಆದರೆ, ಕೇಂದ್ರ ಸರಕಾರ ಜಿಎಸ್ ಟಿ ಜಾರಿಗೆ ಬಂದ 2017 ಮತ್ತು 2018ರ ಎರಡು ವರ್ಷಗಳಲ್ಲಿ ಹೀಗೆ ಸಂಗ್ರಹವಾದ ಹಣವನ್ನು ಜಿಎಸ್ ಟಿ ನಿಧಿಯಲ್ಲಿ ಉಳಿಸಿಕೊಳ್ಳದೇ ಇತರೇ ಉಪಯೋಗಕ್ಕೆ ಬಳಸಿಕೊಂಡಿದೆ ಅನ್ನುವ ಅನುಮಾನ ಕೇಳಿಬಂದಿದೆ.

ಸಿಎಜಿ ಪ್ರಕಾರ, 2017-18ರಲ್ಲಿ 62,612 ಕೋಟಿ ರೂಪಾಯಿ ಜಿಎಸ್ ಟಿ ಸೆಸ್ ಸಂಗ್ರಹವಾಗಿತ್ತು. ಈ ಪೈಕಿ 54,146 ಕೋಟಿ ರೂಪಾಯಿ ಮಾತ್ರ ಜಿಎಸ್ ಟಿ ಪರಿಹಾರ ನಿಧಿಗೆ ಜಮೆಯಾಗಿದೆ. ಇನ್ನು 2018-19ರಲ್ಲಿ ಸಂಗ್ರಹಗೊಂಡ 95,081 ಜಿಎಸ್ ಟಿ ಸೆಸ್ ಪೈಕಿ 54,275 ಕೋಟಿ ರೂ.ಗಳನ್ನು ಜಮೆ ಮಾಡಲಾಗಿತ್ತು. ಹೀಗೆ ಎರಡು ಅವಧಿಗಳಲ್ಲಿ ಜಿಎಸ್ ಟಿ ಸೆಸ್ ಹಣವನ್ನು ಕೇಂದ್ರ ಸರಕಾರ ಬೇರೆ ಉದ್ದೇಶಕ್ಕೆ ಬಳಸಿಕೊಂಡಿರುವುದನ್ನು ಸಿಎಜಿ ಪತ್ತೆ ಮಾಡಿದೆ.

ಜಿಎಸ್ ಟಿ ಪರಿಹಾರ ಸೆಸ್ ಕಾಯ್ದೆ ಪ್ರಕಾರ, ಸಂಗ್ರಹಗೊಂಡ ಪೂರ್ತಿ ಹಣವನ್ನು ಪರಿಹಾರ ನಿಧಿಗೇ ಜಮೆ ಮಾಡಬೇಕಾಗುತ್ತದೆ. ಅಲ್ಲದೆ, ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕೆಂಬ ನಿಯಮ ಇರುತ್ತದೆ. ಈ ರೀತಿ ಜಿಎಸ್ ಟಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವುದು ಅಥವಾ ಉಳಿಸಿಕೊಳ್ಳುವುದು ಜಿಎಸ್ ಟಿ ಕಾಯ್ದೆಯ ಉಲ್ಲಂಘನೆಯಾಗಿರುತ್ತದೆ. 

Join our WhatsApp group for latest news updates (2)