ಬ್ರೇಕಿಂಗ್ ನ್ಯೂಸ್
08-08-22 03:51 pm Source: ಆರ್.ಟಿ.ವಿಠ್ಠಲಮೂರ್ತಿ, ಹಿರಿಯ ರಾಜಕೀಯ ವಿಶ್ಲೇಷಕರು ನ್ಯೂಸ್ View
ಕರ್ನಾಟಕದ ರಾಜಕಾರಣದಲ್ಲಿ ಅಪರೂಪದ ಸನ್ನಿವೇಶವೊಂದು ರೂಪುಗೊಳ್ಳುತ್ತಿದೆ. ದಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಹುಟ್ಟುಹಬ್ಬದ ಸಮಾರಂಭ ಇದನ್ನು ಮತ್ತಷ್ಟು ಸ್ಪಷ್ಟಗೊಳಿಸಿರುವುದು ನಿಜ. ಅಂದಹಾಗೆ, ಈ ಸಮಾರಂಭ ನಡೆಯುವವರೆಗೆ ರಾಜ್ಯ ಬಿಜೆಪಿಯಲ್ಲಿ ಒಂದು ಆತ್ಮವಿಶ್ವಾಸ ಬೇರೂರಿತ್ತು. ಪ್ರತಿಪಕ್ಷ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಮಧ್ಯೆ ಕಚ್ಚಾಟ ನಡೆದಿದೆ. ಯಾವ ಕಾರಣಕ್ಕೂ ಈ ಕಚ್ಚಾಟ ನಿಲ್ಲುವುದಿಲ್ಲ. ಇದೇ ರೀತಿ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ಮತ್ತಿತರ ರಾಜ್ಯಗಳ ವಿಧಾನಸಭೆ ಚುನಾವಣೆಗಳ ನಂತರ ಮೋದಿ-ಅಮಿತ್ ಶಾ ಜೋಡಿ ಕರ್ನಾಟಕಕ್ಕೆ ದಂಡೆತ್ತಿ ಬರುತ್ತದೆ. ಹೀಗೆ ದಂಡೆತ್ತಿ ಬರುವ ಮೋದಿ- ಅಮಿತ್ ಶಾ ಜೋಡಿಯನ್ನು ಎದುರಿಸುವ ಶಕ್ತಿ ಯಾವ ಕಾಂಗ್ರೆಸ್ ನಾಯಕರಿಗೂ ಇಲ್ಲ. ಇದಲ್ಲದೆ, ವಿಧಾನಸಭೆ ಚುನಾವಣೆ ಹತ್ತಿರವಾಗುವ ಹೊತ್ತಿಗೆ ರಾಜ್ಯ ಕಾಂಗ್ರೆಸಿನ ಹಲವು ಘಟಾನುಘಟಿ ನಾಯಕರು ಐಟಿ, ಇಡಿ ಇಕ್ಕಳಕ್ಕೆ ಸಿಲುಕಿರುತ್ತಾರೆ. ಹೀಗಾಗಿ ಚುನಾವಣೆ ಎದುರಿಸಲು ಅಗತ್ಯವಾದ ಶಸ್ತ್ರಾಸ್ತ್ರಗಳಿಲ್ಲದೆ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಹೇಗೆ ಅಸಹಾಯಕವಾಯಿತೋ? 2023 ರಲ್ಲೂ ಅಷ್ಟೇ ಅಸಹಾಯಕವಾಗುತ್ತದೆ. ಪರಿಣಾಮ? ನಾವು ನಿರಾಯಾಸವಾಗಿ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ಬಿಜೆಪಿ ನಾಯಕರಲ್ಲಿ ಇತ್ತು.
ಆದರೆ ಅವರ ಈ ಆತ್ಮವಿಶ್ವಾಸಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಯಾರೊಬ್ಬರೂ ಭಂಗ ತಂದಿರಲಿಲ್ಲ. ಇತ್ತೀಚೆಗೆ ಬೆಂಗಳೂರಿನ ನಂದಿಬೆಟ್ಟದ ಸಮೀಪದಲ್ಲಿರುವ ಹೋಟೆಲ್ ಒಂದರಲ್ಲಿ ನಡೆದ ಬಿಜೆಪಿಯ ಚಿಂತನ ಬೈಠಕ್ ನಲ್ಲಿ ಪಕ್ಷದ ಕೆಲವು ನಾಯಕರು ಈ ಆತ್ಮವಿಶ್ವಾಸ ವ್ಯಕ್ತಪಡಿಸಿದಾಗ ಯಡಿಯೂರಪ್ಪ ಎಚ್ಚರಿಕೆ ನೀಡಿದರಂತೆ. ಕರ್ನಾಟಕದ ವಿಧಾನಸಭಾ ಚುನಾವಣೆ ನೀವಂದುಕೊಂಡಷ್ಟು ಸರಳವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರಿಗಿರುವ ಶಕ್ತಿಯ ಬಗ್ಗೆ ತಪ್ಪು ಅಂದಾಜು ಬೇಡ. ಅವರೊಬ್ಬ ಜನನಾಯಕ ಎಂಬುದನ್ನು ಮರೆಯಬೇಡಿ. ಇದೇ ರೀತಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ವಿಷಯದಲ್ಲೂ ತಪ್ಪು ಅಂದಾಜು ಬೇಡ. ಅವರು ಯಾವ ರೀತಿ ನಮಗೆ ಘಾಸಿ ಮಾಡುತ್ತಾರೋ ಹೇಳಲು ಸಾಧ್ಯವಿಲ್ಲ ಅಂತ ಯಡಿಯೂರಪ್ಪ ಎಚ್ಚರಿಸಿದಾಗ ಬೈಠಕ್ ನಲ್ಲಿದ್ದವರು ದುಸುರಾ ಮಾತನಾಡಿರಲಿಲ್ಲ. ಹಾಗಂದಿದ್ದ ಕೆಲವೇ ದಿನಗಳಲ್ಲಿ ನಡೆದ ಸಿದ್ದು ಡೇ ಕಾರ್ಯಕ್ರಮ ಆಡಳಿತಾರೂಢ ಬಿಜೆಪಿಗೆ ಸ್ಪಷ್ಟವಾದ ಸಂದೇಶವನ್ನು ರವಾನಿಸಿದೆ. ಅದೆಂದರೆ ಮುಂದಿನ ಚುನಾವಣೆಯ ನಂತರ ನೀವು ಮೂಲೆಗುಂಪಾಗುವುದು ನಿಶ್ಚಿತ ಎಂದು.
ಇಂತಹದೇ ಸನ್ನಿವೇಶ 1993 ರಲ್ಲಿ ರಾಜ್ಯದಲ್ಲಿ ಎದುರಾಗಿತ್ತು. ಮಾಜಿ ಸಿಎಂ ಸಾರೆಕೊಪ್ಪ ಬಂಗಾರಪ್ಪ ಅವರು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಇದೇ ರೀತಿಯ ಸಂದೇಶ ನೀಡಿದ್ದರು. ಈಗ ದಾವಣಗೆರೆಯಲ್ಲಿ ನಡೆಸಿದ ಸಮಾವೇಶದ ಮೂಲಕ ಸಿದ್ದರಾಮಯ್ಯ ಅದೇ ರೀತಿಯ ಸಂದೇಶ ರವಾನಿಸಿದ್ದಾರೆ. ಸ್ವಲ್ಪ ವ್ಯತ್ಯಾಸ ಏನೆಂದರೆ ಬಂಗಾರಪ್ಪ ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪತನ ನಿಶ್ಚಿತ ಎಂಬ ಸಂದೇಶ ನೀಡಿದ್ದರು. ಆದರೆ ಸಿದ್ಧರಾಮಯ್ಯ ಅವರು ಬಿಜೆಪಿ ಮೂಲೆಗುಂಪಾಗುವುದು ನಿಶ್ಚಿತ, ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದೂ ನಿಶ್ಚಿತ ಎಂಬ ಸಂದೇಶ ರವಾನಿಸಿದ್ದಾರೆ. ಅಂದ ಹಾಗೆ ಬಂಗಾರಪ್ಪ ಅವರಿಗೆ ತಾವು ಕಾಂಗ್ರೆಸ್ ಪಕ್ಷಕ್ಕೆ ನೀಡುವ ಹೊಡೆತದ ಲಾಭವನ್ನು ಜನತಾದಳ ಎನ್ ಕ್ಯಾಶ್ ಮಾಡಿಕೊಳ್ಳಲಿದೆ ಎಂಬುದು ಗೊತ್ತಿತ್ತು. ಆದರೆ ಈಗ ಬಿಜೆಪಿಗೆ ತಾವು ಕೊಡುವ ಹೊಡೆತ ಕಾಂಗ್ರೆಸ್ ಪಕ್ಷಕ್ಕೆ ಎನ್ ಕ್ಯಾಶ್ ಆಗಲಿದೆ ಎಂಬುದು ಸಿದ್ಧರಾಮಯ್ಯ ಲೆಕ್ಕಾಚಾರ.
ಬಂಗಾರಪ್ಪ ಅವರು ಕರ್ನಾಟಕ ಕಾಂಗ್ರೆಸ್ ಪಕ್ಷದ ಸಮಾವೇಶ ನಡೆಸುವ ಕಾಲಕ್ಕೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಒಂದರ ಹಿಂದೆ ಒಂದು ಮತ ಬ್ಯಾಂಕುಗಳನ್ನು ಕಳೆದುಕೊಂಡಿತ್ತು. 1989 ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಮರು ವರ್ಷವೇ ಪ್ರಬಲ ಲಿಂಗಾಯತ ಮತ ಬ್ಯಾಂಕಿನ ಷೇರುಗಳನ್ನು ಕಳಕೊಳ್ಳತೊಡಗಿತ್ತು. 89 ರಲ್ಲಿ ಗೆದ್ದ ಕಾಂಗ್ರೆಸ್ ಪಕ್ಷ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಸರ್ಕಾರ ರಚಿಸಿತ್ತು. ಆದರೆ ಎಐಸಿಸಿ ಅಧಿವೇಶನ ನಡೆಸಲು ಪಾರ್ಟಿ ಫಂಡ್ ಕೊಡಲು ಒಪ್ಪದೇ ಇದ್ದುದು, 89 ರ ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕೆ ಸಹಕಾರ ನೀಡಿದ ಮದ್ಯದ ದೊರೆಗಳ ಮೇಲೇ ಅವರು ಮುಗಿಬಿದ್ದುದು ಕೈ ಪಾಳೆಯದ ವರಿಷ್ಠರನ್ನು ಕೆರಳಿಸಿತ್ತು. ಮತ್ತು ಇದೇ ಕಾರಣಗಳಿಗಾಗಿ ಕುದಿಯುತ್ತಿದ್ದ ಪಾರ್ಟಿ ವರಿಷ್ಡರು ವೀರೇಂದ್ರ ಪಾಟೀಲರ ಅನಾರೋಗ್ಯವನ್ನೇ ನೆಪವಾಗಿಟ್ಟು 1990 ರಲ್ಲಿ ಅಧಿಕಾರದಿಂದ ಕೆಳಗಿಳಿಸಿದರು. ಈ ಬೆಳವಣಿಗೆ ಲಿಂಗಾಯತ ಸಮುದಾಯವನ್ನು ಎಷ್ಟು ಕೆರಳಿಸಿತ್ತು ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಅದು ಅವಕಾಶಕ್ಕಾಗಿ ಕಾಯತೊಡಗಿತು. ಇದೇ ರೀತಿ ಮುಂದೆ ಅಧಿಕಾರಕ್ಕೆ ಬಂದ ಸಾರೆಕೊಪ್ಪ ಬಂಗಾರಪ್ಪ ಅವರನ್ನು ಪ್ರಧಾನಿ ಪಿ.ವಿ.ನರಸಿಂಹರಾವ್ ಕೆಳಗಿಳಿಸಿದರಲ್ಲ? ಆ ಸಂದರ್ಭದಲ್ಲಿ ತಮ್ಮ ಸಮುದಾಯದ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಪ್ರಬಲ ಒಕ್ಕಲಿಗ ಸಮುದಾಯ ಭಾವಿಸಿತ್ತು. ವಸ್ತುಸ್ಥಿತಿ ಎಂದರೆ ಅವತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಉಳಿದೆಲ್ಲರಿಗಿಂತ ಹೆಚ್ಚು ಮಂದಿ ಶಾಸಕರ ಬಲ ಎಸ್.ಎಂ.ಕೃಷ್ಣ ಅವರಿಗೇ ಇತ್ತು.
ಆದರೆ ಆ ಸಂದರ್ಭದಲ್ಲಿ ಕೇರಳದ ಕರುಣಾಕರನ್ ಮತ್ತು ತಮಿಳ್ನಾಡಿನ ಮರಗತಂ ಚಂದ್ರಶೇಖರ್ ಅವರ ಮೂಲಕ ಪಿ.ವಿ.ನರಸಿಂಹರಾಯರ ಮೇಲೆ ಪ್ರಭಾವ ಬೀರಿಸಿದ ವೀರಪ್ಪ ಮೊಯ್ಲಿ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೇರಿಬಿಟ್ಟರು. 89 ರಲ್ಲಿ ದೇವೇಗೌಡರ ರಾಜಕೀಯ ಕುಸಿತದ ಕಾರಣಕ್ಕಾಗಿ ಕೃಷ್ಣ ಅವರ ಬೆನ್ನಿಗೆ ನಿಂತಿದ್ದ ಒಕ್ಕಲಿಗ ಮತದಾರರಿಗೆ, ಕಾಂಗ್ರೆಸ್ ಪಕ್ಷ ತಮಗೆ ಮೋಸ ಮಾಡಿತು ಎಂಬ ಭಾವನೆ ಬೇರೂರಿತ್ತು. ಹೀಗೆ ಲಿಂಗಾಯತ, ಒಕ್ಕಲಿಗ ಸಮುದಾಯಗಳು ತಿರುಗಿ ಬಿದ್ದ ಕಾಲಘಟ್ಟದಲ್ಲೇ ಹಿಂದುಳಿದ ವರ್ಗಗಳ ಚಾಂಪಿಯನ್ ಅನ್ನಿಸಿಕೊಂಡ ಬಂಗಾರಪ್ಪ ಕೂಡಾ ಉಲ್ಟಾ ಹೊಡೆದರಲ್ಲ. ಇದರ ಪರಿಣಾಮವನ್ನು 1994 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಿತು. ಆ ಸಂದರ್ಭದಲ್ಲಿ ಅದು ಗೆದ್ದ ಸೀಟುಗಳ ಸಂಖ್ಯೆ ಕೇವಲ ಮೂವತ್ನಾಲ್ಕು. ಗಮನಿಸಬೇಕಾದ ಅಂಶವೆಂದರೆ 1994 ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ದಿಲ್ಲಿಯ ಅಧಿಕಾರ ಸೂತ್ರ ಕಾಂಗ್ರೆಸ್ ಪಕ್ಷದ ಕೈಲೇ ಇತ್ತು. ಆದರೆ ಈ ಅಂಶ ರಾಜ್ಯ ಕಾಂಗ್ರೆಸ್ ನ ಗ್ರಾಫು ಏರಲು ನೆರವಾಗಲಿಲ್ಲ.
ಹೀಗೆ ಇಪ್ಪತ್ತೆಂಟು ವರ್ಷಗಳ ಹಿಂದೆ ನಡೆದ ಈ ಬೆಳವಣಿಗೆಯ ಪೂರ್ವಭಾವಿ ರೂಪ ಮತ್ತೆ ಕರ್ನಾಟಕದ ನೆಲದಲ್ಲಿ ಕಾಣತೊಡಗಿದೆ. ಇವತ್ತಿನ ರೂಪ ಥೇಟು ಹಿಂದಿನಂತಿಲ್ಲದಿದ್ದರೂ, ಸ್ಥೂಲವಾಗಿ ಗಮನಿಸಿದರೆ ಅವತ್ತಿನ ಬೆಳವಣಿಗೆಯ ಬೀಜಗಳೇ ಮೊಳಕೆಯೊಡೆದು ನಿಂತಿರುವಂತೆ ಭಾಸವಾಗುತ್ತದೆ. ಅಂದ ಹಾಗೆ ಅವತ್ತು ಕಾಂಗ್ರೆಸ್ ಪಕ್ಷ ಇದ್ದ ಜಾಗದಲ್ಲಿ ಇವತ್ತು ಬಿಜೆಪಿ ಇದೆ. 89 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ವೀರೇಂದ್ರ ಪಾಟೀಲರ ಬಲ ಹೇಗೆ ನೆರವು ನೀಡಿತ್ತೋ, ಅದೇ ರೀತಿ ಕಳೆದ ಬಾರಿ ಯಡಿಯೂರಪ್ಪ ಅವರ ಬಲದಿಂದ ಬಿಜೆಪಿ ಅಧಿಕಾರ ಹಿಡಿದಿತ್ತು. ಹಾಗೆ ನೋಡಿದರೆ ವೀರೇಂದ್ರ ಪಾಟೀಲರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಶ್ರಮ ವಹಿಸಿದರೋ, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯಡಿಯೂರಪ್ಪ ಅವರು ಅದಕ್ಕಿಂತ ಹೆಚ್ಚಿನ ಶ್ರಮ ಹಾಕಿದ್ದರು. ಉತ್ತರ ಭಾರತೀಯರ ಪಾರ್ಟಿ ಎನ್ನಿಸಿಕೊಂಡ ಬಿಜೆಪಿ ದಕ್ಷಿಣ ಭಾರತದಲ್ಲಿ ತಲೆ ಎತ್ತಲು ಯಡಿಯೂರಪ್ಪ ಅವರೇ ಮುಖ್ಯ ಕಾರಣ. ಅವರ ಪ್ರಯತ್ನ ಇಲ್ಲದಿದ್ದರೆ 2006 ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಇದೇ ರೀತಿ ಕುಮಾರಸ್ವಾಮಿ ವಿರುದ್ಧ ವಚನದ್ರೋಹದ ಆರೋಪ ಹೊರಿಸಿ ಬೀದಿಗಿಳಿದು ಆರ್ತನಾದ ಮಾಡದೇ ಇದ್ದಿದ್ದರೆ 2008 ರಲ್ಲಿ ಬಿಜೆಪಿ ಅಧಿಕಾರವನ್ನೂ ಹಿಡಿಯುತ್ತಿರಲಿಲ್ಲ.
2018 ರಲ್ಲಿ ಬಿಜೆಪಿಗೆ 104 ಸೀಟುಗಳು ದಕ್ಕಿದ್ದರಲ್ಲಿ, 2019 ರಲ್ಲಿ ಸರ್ಕಾರ ರಚಿಸುವುದರಲ್ಲಿ ಯಡಿಯೂರಪ್ಪ ಅವರೇ ಪ್ರಮುಖ ಪಾತ್ರಧಾರಿ. ಆದರೆ ಅಂತಹ ಯಡಿಯೂರಪ್ಪ ಅವರನ್ನು ಬಿಜೆಪಿ ವರಿಷ್ಟರು ತುಂಬ ನಿರ್ದಾಕ್ಷಿಣ್ಯವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರು. 1990 ರಲ್ಲಿ ತಮ್ಮನ್ನು ಕುರ್ಚಿಯಿಂದ ಇಳಿಸಲು ರಾಜೀವ್ ಗಾಂಧಿ ಮುಂದಾದಾಗ ವೀರೇಂದ್ರ ಪಾಟೀಲ್ ವಿರೋಧಿಸಿದ್ದರು. 2021 ರಲ್ಲಿ ಯಡಿಯೂರಪ್ಪ ಕೂಡಾ ಸಿಎಂ ಹುದ್ದೆಯಿಂದ ನನ್ನನ್ನು ಇಳಿಸಬೇಡಿ. ಇನ್ನಷ್ಟು ಕಾಲಾವಕಾಶ ಕೊಡಿ ಅಂತ ವರಿಷ್ಟರ ಬಳಿ ಕೇಳಿಕೊಂಡಿದ್ದರು. ಆದರೆ ಅವತ್ತು ವೀರೇಂದ್ರ ಪಾಟೀಲರ ಕೂಗು ಹೇಗೆ ಅರಣ್ಯ ರೋಧನವಾಯಿತೋ? 2021 ರಲ್ಲಿ ಯಡಿಯೂರಪ್ಪ ಅವರ ಕೂಗೂ ಅರಣ್ಯ ರೋದನವಾಯಿತು. ಸಮುದಾಯದ ನಾಯಕರ ಇಂತಹ ಅಸಹಾಯಕ ಪರಿಸ್ಥಿತಿಯನ್ನು ಲಿಂಗಾಯತ ಸಮುದಾಯ ಯಾವತ್ತೂ ಸಹಿಸಿಲ್ಲ. ಅದು ನಿಜಲಿಂಗಪ್ಪ ಅವರಿರಬಹುದು. ಬ್ರಾಹ್ಮಣರಾದರೂ ತಮ್ಮ ಸಮುದಾಯಕ್ಕೆ ಶಕ್ತಿ ನೀಡಿದ ರಾಮಕೃಷ್ಣ ಹೆಗಡೆ ಇರಬಹುದು, ವೀರೇಂದ್ರ ಪಾಟೀಲರೇ ಇರಬಹುದು. ಅವರ ವಿಷಯದಲ್ಲಿ ಒಂದು ರಾಜಕೀಯ ಶಕ್ತಿ ತಪ್ಪಾಗಿ ನಡೆದುಕೊಂಡಿದೆ ಎಂಬ ಭಾವನೆ ಬಂದಾಗ ಪರ್ಯಾಯ ಶಕ್ತಿ ತಲೆ ಎತ್ತಿ ನಿಲ್ಲಲು ಲಿಂಗಾಯತ ಮತ ಬ್ಯಾಂಕ್ ಶಕ್ತಿ ನೀಡಿದೆ.
ಆ ದೃಷ್ಟಿಯಿಂದ ಅವತ್ತು ಕಾಂಗ್ರೆಸ್ ಪಕ್ಷ ಇದ್ದ ಜಾಗದಲ್ಲಿ ಇವತ್ತು ಬಿಜೆಪಿ ನಿಂತಿದೆ. ಮತ್ತು ಯಾರೇನೇ ಹೇಳಲಿ. ಅದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ನೀಡಲು ತವಕಿಸುತ್ತಿದೆ. ಇನ್ನು ಒಕ್ಕಲಿಗರ ವಿಷಯಕ್ಕೆ ಬಂದರೆ ಆ ಸಮುದಾಯ ಇವತ್ತಿಗೂ ಬಿಜೆಪಿ ಜತೆಗಿಲ್ಲ. ಬದಲಿಗೆ ದೇವೇಗೌಡ- ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಹಿಂದೆ ದೊಡ್ಡ ಮಟ್ಟದಲ್ಲಿ ನಿಂತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಎರಡು ಮಾತುಗಳು ಆ ಸಮುದಾಯ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಪವರ್ ನೀಡುವಂತೆ ಕಾಣುತ್ತಿದೆ. ಡಿಕೆಶಿ ಆಡಿದ ಮೊದಲ ಮಾತೆಂದರೆ ಕೃಷ್ಣ ಅವರ ನಂತರ ಕಾಂಗ್ರೆಸ್ ನಲ್ಲಿ ಒಕ್ಕಲಿಗ ಸಮುದಾಯದವರೊಬ್ಬರಿಗೆ ಸಿಎಂ ಆಗುವ ಅವಕಾಶ ಬಂದಿದೆ. ಹೀಗಾಗಿ ಈ ಸಲ ನನಗೆ ಬೆಂಬಲ ನೀಡಿ ಎಂಬುದು. ಎರಡನೆಯ ಮಾತೆಂದರೆ, ಸಿದ್ದರಾಮಯ್ಯ ಮುಂದಾಳತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತೇವೆ ಎಂಬುದು. ಈ ಎರಡು ಮಾತುಗಳು ನಾಯಕತ್ವದ ಪೈಪೋಟಿಯಲ್ಲಿ ಅವರು ಕೆಳಗೆ ಜಾರುತ್ತಿದ್ದಾರೆ ಎಂಬುದರ ಸಂಕೇತವೇ ಹೊರತು ಮತ್ತೇನಲ್ಲ.
ಪರಿಣಾಮ? ಒಕ್ಕಲಿಗ ಸಮುದಾಯದ ಮೇಜರ್ ಷೇರು ಜೆಡಿಎಸ್ ಕಡೆ ಹೊರಳುತ್ತದೆ.
ಹೀಗೆ ಜೆಡಿಎಸ್ ಬೆನ್ನ ಹಿಂದೆ ನಿಲ್ಲುವ ಒಕ್ಕಲಿಗರ ಮತಗಳನ್ನು ಯೋಗಿ ಆದಿತ್ಯನಾಥ್ ಅವರ ಮೂಲಕ ಸೆಳೆಯಬಹುದು ಎಂಬ ಬಿಜೆಪಿಯ ಲೆಕ್ಕಾಚಾರಕ್ಕೆ ಶಕ್ತಿ ಕಡಿಮೆ.
ಇಂತಹ ಸಂದರ್ಭದಲ್ಲೇ ನಡೆದ ಸಿದ್ದರಾಮಯ್ಯ ಅವರ ಜನ್ಮ ದಿನೋತ್ಸವ ಕಾರ್ಯಕ್ರಮ ಒಂದು ವಿಷಯವನ್ನು ನಿಕ್ಕಿಗೊಳಿಸಿದೆ. ಅದೆಂದರೆ ಅಹಿಂದ ವರ್ಗಗಳ ಮೇಜರ್ ಷೇರು ಕಾಂಗ್ರೆಸ್ ಬೆನ್ನಿಗೆ ನಿಲ್ಲಲಿವೆ ಎಂಬುದು. ಅಂದರೆ, ಇವತ್ತು ರಾಜ್ಯದ ಪ್ರಬಲ ಲಿಂಗಾಯತ ಸಮುದಾಯ ಬಿಜೆಪಿ ನೆಲೆಯಿಂದ ಜಾರುತ್ತಿದೆ. ಒಕ್ಕಲಿಗ ಪಾಳೇಪಟ್ಟಿನಲ್ಲಿ ಹೆಚ್ಚು ಷೇರು ಪಡೆಯುವ ಅದರ ಕನಸು ಕರಗುತ್ತಿದೆ. ಅಹಿಂದ ವರ್ಗಗಳ ಮೇಲೆ ಹಿಂದುತ್ವದ ಪ್ರಭಾವ ಬೀರಿ ಲಾಭ ಮಾಡಿಕೊಳ್ಳುವ ಲೆಕ್ಕಾಚಾರ ಇನ್ನೂ ನಿರೀಕ್ಷಿತ ಪರಿಣಾಮ ಬೀರಿಲ್ಲ. ಅರ್ಥಾತ್,1994 ರಲ್ಲಿ ಕಾಂಗ್ರೆಸ್ ಯಾವ ಸಂಕಟಗಳಿಗೆ ಗುರಿಯಾಗಿತ್ತೋ? ಇವತ್ತು ಬಿಜೆಪಿ ಕೂಡಾ ಅಂತಹದೇ ಸಂಕಟಗಳನ್ನು ಎದುರಿಸತೊಡಗಿದೆ. ಅಂದ ಹಾಗೆ ಅವತ್ತಿನ ಕಾಂಗ್ರೆಸ್ ನಷ್ಟು ದುರ್ಬಲವಲ್ಲದಿದ್ದರೂ ಸ್ವಯಂಬಲದ ಮೇಲೆ ಮರಳಿ ಅಧಿಕಾರ ಹಿಡಿಯುವ ಸ್ಥಿತಿಯಲ್ಲಂತೂ ಬಿಜೆಪಿ ಇಲ್ಲ. ಈ ಕೊರತೆಯನ್ನು ಅದು ಹೇಗೆ ನೀಗಿಕೊಳ್ಳುತ್ತದೆ? ಎಂಬುದೇ ಸದ್ಯದ ಕುತೂಹಲ.
Political article by Political analyst Vitalmurthy on congress slowly conquering BJP in state.
22-12-24 10:26 pm
HK News Desk
Pralhad Joshi, CT Ravi: ಸಿಟಿ ರವಿಯನ್ನ ಎನ್ಕೌಂಟ...
22-12-24 10:23 am
Bangalore Volvo Car Accident: ಕೋಟಿ ಬೆಲೆಯ ಕಾರಿ...
21-12-24 09:28 pm
CT Ravi Released: ಸಿ.ಟಿ.ರವಿ ಬಂಧನ ಖಂಡಿಸಿ ರಾಜ್ಯ...
20-12-24 10:43 pm
C T Ravi Arrested, Minister Lakshmi Hebbalkar...
19-12-24 08:05 pm
20-12-24 05:01 pm
HK News Desk
ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್...
19-12-24 05:40 pm
ಮುಂಬೈನಲ್ಲಿ ಪ್ರವಾಸಿಗರಿದ್ದ ಫೆರ್ರಿ ಹಡಗಿಗೆ ನೌಕಾಪಡ...
18-12-24 10:37 pm
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
22-12-24 11:03 pm
Mangalore Correspondent
Kundapura Jet ski, Drowning: ತ್ರಾಸಿ ಬೀಚ್ ನಲ್ಲ...
22-12-24 06:04 pm
Celebrate Christmas and New Year in Style wit...
22-12-24 12:33 am
Mangalore Heli Tourism: ಮಂಗಳೂರು ನಗರ ದರ್ಶನಕ್ಕೆ...
21-12-24 08:16 pm
Praveen Nettaru Murder, NIA Arrest: ಪ್ರವೀಣ್ ನ...
21-12-24 11:30 am
22-12-24 07:23 pm
Bangalore Correspondent
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm
Puttur, Gold Robbery, Mangalore Crime: ಪುತ್ತೂ...
21-12-24 07:45 pm
Mangalore, Fraud case, Odisha: ನಕಲಿ ಷೇರು ಮಾರು...
21-12-24 06:24 pm
Kodagu Fake Gold Bank Case; ಕೇರಳದಲ್ಲಿ ನಕಲಿ ಚಿ...
20-12-24 08:20 pm