ಶ್ರೀನಾಥ್ ಭಲ್ಲೆ ಅಂಕಣ: ಮುಖದ ಸ್ವಾತಂತ್ರ್ಯ ಅಂತ ಏನಾದರೂ ಇದೆಯೇ?

24-03-21 04:26 pm       By ಶ್ರೀನಾಥ್ ಭಲ್ಲೆ   ನ್ಯೂಸ್ View

ಮೊದಲಿಗೆ ಈ ಸ್ವಾತಂತ್ರ್ಯ ಅಂದ್ರೇನು ಅಂತ ಹೇಳ್ತೀನಿ. ಬೇಡಾ ಬಿಡಿ, ಮಂದಿಯನ್ನು ಕೇಳೋಣ. ಒಂದು ಕೆಲಸ ಮಾಡುವುದಕ್ಕೆ ಯಾವುದೇ ಅಡೆತಡೆ ಇಲ್ಲದಿರುವಿಕೆಯೇ ಸ್ವಾತಂತ್ರ್ಯ ಅಂತ ಕೆಲವರು ಅರ್ಥೈಸಿಕೊಳ್ಳುತ್ತಾರೆ.

ಮೊದಲಿಗೆ ಈ ಸ್ವಾತಂತ್ರ್ಯ ಅಂದ್ರೇನು ಅಂತ ಹೇಳ್ತೀನಿ. ಬೇಡಾ ಬಿಡಿ, ಮಂದಿಯನ್ನು ಕೇಳೋಣ. ಒಂದು ಕೆಲಸ ಮಾಡುವುದಕ್ಕೆ ಯಾವುದೇ ಅಡೆತಡೆ ಇಲ್ಲದಿರುವಿಕೆಯೇ ಸ್ವಾತಂತ್ರ್ಯ ಅಂತ ಕೆಲವರು ಅರ್ಥೈಸಿಕೊಳ್ಳುತ್ತಾರೆ. ನನಗಿಷ್ಟ ಬಂದಿದ್ದನ್ನು ನಾನು ಮಾಡುವುದಕ್ಕೆ ಅವಕಾಶ ಇರುವುದೇ ಸ್ವಾತಂತ್ರ್ಯ ಅಂತ ಮತ್ತೆ ಕೆಲವರು. ಹಲವರಿಗೆ ಮೈ ಚಾಯ್ಸ್ ಅನ್ನುವುದು ಸ್ವಾತಂತ್ರ್ಯ ಅರ್ಥಾತ್ ತಾನೇನು ಮಾಡಿದರೂ ಇದು ಹೀಗಲ್ಲಾ, ಹಾಗಲ್ಲಾ ಎನ್ನಬಾರದು ಅಂತ.

ಈ ಸ್ವಾತಂತ್ರ್ಯ ಅನ್ನುವುದು ಕಾನೂನು ಚೌಕಟ್ಟಿನಲ್ಲಿ ಬೇರೆ ರೀತಿಯದ್ದಾಗಿದೆ. ವಾಕ್ ಸ್ವಾತಂತ್ರ್ಯ ಎಂದರೆ ನನಗೆ ಅನ್ನಿಸಿದ್ದನ್ನು ನಿರ್ಭಿಡೆಯಿಂದ ಹೇಳುವುದು. ಧರ್ಮದ ಸ್ವಾತಂತ್ರ್ಯ ಎಂದರೆ ನನಗೆ ಬೇಕಿರುವ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯ. ಇಂಥದ್ದೇ ಧರ್ಮ ಪಾಲಿಸಬೇಕು ಎಂಬ ಹೇರಿಕೆ, ಹಿಂಗೇ ಮಾತನಾಡಬೇಕು ಎಂಬ ಹೇರಿಕೆ ಇಲ್ಲದಿರುವುದೇ ಸ್ವಾತಂತ್ರ್ಯ.

ಆದರೆ ಈಗ ಹೇಳ ಹೊರಟಿರುವುದು ಮುಖದ ಸ್ವಾತಂತ್ರ್ಯದ ಬಗ್ಗೆ. ಇದಾವ ಬಗೆಯ ಸ್ವಾತಂತ್ರ್ಯ? ಅಭಿವ್ಯಕ್ತಿ ಸ್ವಾತಂತ್ರ್ಯವೇ? ಅಲ್ಲಾ, ಏಕೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಛತ್ರಿಯ ಅಡಿ ಇರುವುದೇ ವಾಕ್, ಧರ್ಮ ಇತ್ಯಾದಿಗಳು. ಇದ್ಯಾವುದೋ ಹೊಸತೇ ಇರಬೇಕೇನೋ, ಸ್ವಲ್ಪ ನೋಡೋಣ ಬನ್ನಿ. ಎಲ್ಲವನ್ನೂ ಓದಿದ ಮೇಲೆ, ಈ ಸ್ವಾತಂತ್ರ್ಯ ನಮಗಿರಬೇಕು ಅನ್ನಿಸಿದರೆ ಅಭಿವ್ಯಕ್ತಿ ಅಡಿ ಸೇರಿಸಲು ಕೇಳಿಕೊಳ್ಳೋಣ. ಈ ಸ್ವಾತಂತ್ರ್ಯ ಬೇಡ ಅಂದರೆ ಬೇಡಾ ಬಿಡಿ, ನನಗೇನೂ ಬೇಸರವಿಲ್ಲ. ಎಲ್ಲ ಅಭಿಯಾನಗಳೂ ಯಶಸ್ವಿಯಾಗಬೇಕು ಅಂತೇನಿಲ್ಲವಲ್ಲ?

ಈಗ ಮುಖ ಸ್ವಾತಂತ್ರ್ಯ ಅರ್ಥಾತ್ Freedom of Face. ಒಂದು ಪುಟ್ಟ ಉದಾಹರಣೆ ತೆಗೆದುಕೊಂಡರೆ ಮನೆಯಾಕೆಯ ಒಪ್ಪಿಗೆ ಇಲ್ಲದೇ ಒಬ್ಬ ಮಹಾಪುರುಷರು ಉಸಿರೂ ಆಡುವುದಿಲ್ಲ ಎಂದುಕೊಳ್ಳೋಣ. ಅಕಸ್ಮಾತ್ ಒಂದು ಹಗಲು ಅವರು ಹೆಂಡತಿಗೆ ಹೇಳದೇ ಮುಖ ಕ್ಷೌರ ಮಾಡಿಕೊಂಡು, ಸ್ನಾನ ಮಾಡಿ ಬಂದರೂ ಅಂದುಕೊಳ್ಳಿ, ಮನೆಯಾಕೆ ಕೇಳೋ ಮೊದಲ ಪ್ರಶ್ನೆ - ಯಾಕ್ರೀ ಕ್ಷೌರ ಮಾಡಿಕೊಂಡಿದ್ದು, ನನಗೆ ಹೇಳದೇ ಕೇಳದೇ? ಅಂತ ತಾನೇ? ಒಬ್ಬರ ಸ್ವಂತ ಮುಖದ ಕ್ಷೌರ ಸೇವೆಗೆ ಅವರಿಗೇ ಅಧಿಕಾರ ಇಲ್ಲದೇ ಹೋದಾಗ ಅವರು ಮುಖ ಸ್ವಾತಂತ್ರ್ಯ ಹೀನರು ಅಂತ ತಾನೇ? ಈಗ ಅಮ್ಮಾವ್ರ ಗಂಡನನ್ನು ಪಕ್ಕಕ್ಕೆ ಹಾಕಿ.

ಇಂದಿನ ಯುಗದ ಸನ್ನಿವೇಶವನ್ನೇ ತೆಗೆದುಕೊಳ್ಳಿ. ಗಂಡು ಸಿಂಹಗಳೇ ಆಗಲಿ, ಹೆಣ್ಣು ಹುಲಿಗಳೇ ಆಗಿರಲಿ ಎಲ್ಲರಿಗೂ ಒಂದೇ ನಿಯಮ. ಮುಖ ಮುಟ್ಟಿಕೊಳ್ಳದಿರಿ, ಮೂಗು ಮುಟ್ಟಿಕೊಳ್ಳದಿರಿ. ಹಾಗೊಂದು ವೇಳೆ ಮುಟ್ಟಿಕೊಂಡರೆ ಚೆನ್ನಾಗಿ ಸೋಪಿನಿಂದ ಉಜ್ಜಿ ಕೈ ತೊಳೆದುಕೊಳ್ಳಿ ಅಂತ, ಹೌದು ತಾನೇ? ಕೊರೊನಾ ವೈರಾಣುವಿನಿಂದಾಗಿ ನಮ್ಮದೇ ಮುಖದ ಮೇಲೆ ನಾವು ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೀವಿ ಅಲ್ಲವೇ? ಕೈಗೆ ಗೋರಂಟಿ ಹಚ್ಚಿದ ಮೇಲೆ ಆ ರಸ ಇಳಿದು ಚಿತ್ತಾರ ಮೂಡುವ ತನಕ ಆ ಕೈ ಅಥವಾ ಕೈಗಳನ್ನು ಬಳಸಕೂಡದು ಅಂತ ಹೇಳುತ್ತಾರೆ ಗೋರಂಟಿ ಹಾಕುವ ತಜ್ಞೆಯರು.

ಅಲ್ಲಿಗೆ ಹಾಕಿಸಿಕೊಂಡವರು ತಮ್ಮದೇ ಕೈಗಳ ಮೇಲೆ ಅವರು ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ ಅಲ್ಲವೇ? ಹಾಗೆಯೇ, Facial ಮಾಡಿಸಿಕೊಂಡ ಹೆಣ್ಣು ಬಿಸಿಲಿಗೆ ಹೋಗಬಾರದು, ಸೋಪನ್ನು ಹಾಕಿ ಮುಖವನ್ನೂ ತೊಳೆಯಬಾರದು. ಅಲ್ಲಿಗೆ ಅವರದ್ದೇ ಸುಂದರ ಮುಖದ ಮೇಲಿನ ಸ್ವಾತಂತ್ರ್ಯ ಢಮಾರ್. ಇರಲಿ ಬಿಡಿ, ತಣ್ಣೀರಿನಿಂದ ಮುಖ ತೊಳೆಯಬಹುದು. ಈಗ ಹಲವು ನೈಜ ಸನ್ನಿವೇಶಗಳತ್ತ ನಮ್ಮದೇ ಮುಖವನ್ನು ತಿರುಗಿಸಿ ನೋಡಿಕೊಳ್ಳೋಣ ಬನ್ನಿ.

ಹೊರಗೆ ಒಂದು ವಾಕಿಂಗ್ ಹೋಗ್ತೀರಾ ಅಂದುಕೊಳ್ಳಿ. ಮಂಡಿನೋವು ಅಂತ ಒಂದು ಕಲ್ಲುಬೆಂಚಿನ ಮೇಲೆ ಕೂರುತ್ತೀರಿ. ನೋವಿನಿಂದ ಮುಖ ಕೊಂಚ ಹಿಂಡಿರುತ್ತೆ ಆದರೆ ಪರಿಚಯದವರು ಕಂಡ ಕೂಡಲೇ ಮುಖ ಅರಳಬಹುದು. ಅಂದರೆ ಸಂತಸದಿಂದಲ್ಲಾ, ಬದಲಿಗೆ ಇವರಿಗೆ ಒಂದು ವಿಷಯ ಹೇಳಿದರೆ ಹತ್ತೇ ನಿಮಿಷದಲ್ಲಿ ಹತ್ತು ಮನೆಗೆ ತಲುಪಿರುತ್ತೆ ಎಂಬ ಭೀತಿಯಿಂದ. ಹಾಗಾಗಿ, ಅವರು ಹೇಗಿದ್ದೀರಿ ಅಂತ ಕೇಳಿದ ಕೂಡಲೇ, ಇಲ್ಲದ ದೇಶಾವರಿ ನಗೆ ಬೀರಿ, ಚೆನ್ನಾಗಿದ್ದೀನಿ ಅಂತ ಹಸಿಹಸೀ ಸುಳ್ಳು ಹೇಳುತ್ತೀರಿ. ನೆಮ್ಮದಿಯಾಗಿ ನೋವು ತೋರಬಲ್ಲ ಮುಖದ ಮೇಲಿನ ಸ್ವಾತಂತ್ರ್ಯ ಕಳೆದುಕೊಂಡಿರುತ್ತೀರಿ. ಯಾರಿಗೋ ಹೆದರಿ ಭಾವನೆ ಬಚ್ಚಿಟ್ಟು, ನಿಮ್ಮದಲ್ಲದ ಚಾಯ್ಸ್ ಅನ್ನು ಬಲವಂತಾಗಿ ಹೇರಿಕೊಳ್ಳುತ್ತೀರಿ. ಸಂತಸದ ಮುಖವಾಡ ಧರಿಸಿದಾಗ, ಸ್ವತಂತ್ರ ಮೊಗ, ಮುಸುಕಿನ ಹಿಂದೆ ಮಸುಕಾಗುತ್ತದೆ.

ಮುಖವಾಡ ಎಂದಾಗ ಮುಖದ ಮೇಲಿನ ಸ್ವಾತಂತ್ರ್ಯ ಕಳೆದುಕೊಂಡಿರುವ, ನಿತ್ಯಸುಖಿಯಂತೆಯೇ ಕಾಣುವ ಗಗನಸಖಿ ನೆನಪಾಗದೇ ಇರುತ್ತಾಳೆಯೇ? ಸದಾ flight ನಲ್ಲಿ ಓಡಾಡುತ್ತಾರೆ ಅಂತೆಲ್ಲಾ ಅವರನ್ನು ನೋಡುವಾಗ ಅನ್ನಿಸಬಹುದು. ಹಲವಾರು ದೇಶಗಳನ್ನು ವಿಸಿಟ್ ಮಾಡುತ್ತಾರೆ ಅಂತಲೂ ಅನ್ನಿಸಬಹುದು. ಆದರೆ ಅವರಿಗೂ ಒಂದು ಸಂಸಾರ ಇರುತ್ತದೆ, ಅವರಿಗೂ ಮಕ್ಕಳು ಅಂತ ಇರುತ್ತಾರೆ. ಇವರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹಾರುವ ಮುನ್ನ ಅವರ ಕೂಸಿಗೆ ಆರೋಗ್ಯ ಸರಿ ಇಲ್ಲ ಅಂತಲೋ, ಮತ್ಯಾವುದೋ ವಿಷಯಕ್ಕೆ ಬೇಸರವಾಗಿದ್ದರೂ, ಬಿಜಿನೆಸ್ ಕ್ಲಾಸ್'ನಲ್ಲಿ ಕೂತು ಪಯಣಿಸುವ ನಿಮ್ಮ ಮುಂದೆ ಬೇಸರದ ಮುಖವನ್ನು ತೋರದೇ ನಸುನಗುತ್ತಾಳೆ. ಪಯಣಿಗರ ಮುಂದೆ ಗಂಭೀರ ವದನ ತೋರಬಾರದು ಎಂದು ರೂಲ್ಸ್ ಹೇರಿ ಅವರ ಮುಖದ ಮೇಲಿನ ಹಕ್ಕನ್ನು ತಾವು ಪಡೆದು, ಅವರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುತ್ತಾರೆ ಅಲ್ಲವೇ? ಆದರೂ, ಕಾಯಕವೇ ಕೈಲಾಸ. ಇಂಥದ್ದೇ ವೃತ್ತಿಧರ್ಮವನ್ನು ಪಾಲಿಸುವವರು ಯಾವುದೇ ಕಂಪನಿಯ ಸ್ವಾಗತಕಾರಿಣಿ ಅಥವಾ receptionist. ನೀವು ಯಾವುದೋ ಒಂದು ಅಂತಹ ಕಂಪನಿಗೆ ಹೋದಾಗ, ಆ ಸ್ವಾಗತಕಾರಿಣಿ ಮನೆಯಲ್ಲಿ ಗಂಡನೊಡನೆ ಜಗಳವಾಡಿದ್ದರೂ, ಅತ್ತೆಯಿಂದ ಮೂದಲಿಸಿಕೊಂಡಿದ್ದರೂ visitor ಆದ ನಿಮ್ಮ ಮುಂದೆ ತೋರಿಸಿಕೊಳ್ಳುವುದಿಲ್ಲ ಅಲ್ಲವೇ? ಒಮ್ಮೆ ಕರ್ಮಭೂಮಿಯಲ್ಲಿದ್ದಾಗ ಅವರ ಮುಖದ ಮೇಲಿನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ ಅಲ್ಲವೇ?

ಇಂಥಾ ವೃತ್ತಿ ಧರ್ಮವನ್ನು ಪಾಲಿಸುತ್ತಾ, ತಮ್ಮ ನೋವನ್ನು ಬದಿಗೊತ್ತಿ, ಮತ್ತೊಬ್ಬರ ನೋವನ್ನು ಶಮನ ಮಾಡುವ ಧನ್ವಂತ್ರಿಗಳು, ಸಾಲಿನಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ. ಮನೆಯಿಂದ ಹೊರಟು ತಮ್ಮ ಕರ್ಮಭೂಮಿಗೆ ಕಾಲಿಟ್ಟ ಕ್ಷಣದಿಂದ ಅವರ ಮುಖದ ಮೇಲಿನ ಸ್ವಾತಂತ್ರ್ಯ ಕಳೆದುಕೊಂಡು ರೋಗಿಗಳ ಸೇವೆಯಲ್ಲೇ ನಿರತರಾಗುತ್ತಾರೆ. ಇವರೊಂದಿಗೆ ನಿಲ್ಲುವವರು ರೋಗಿಗಳ ಸೇವೆಯೇ ತಮ್ಮ ಜೀವನ ಎಂದುಕೊಳ್ಳುವ ನರ್ಸ್ ಗಳು. ದಿನನಿತ್ಯದಲ್ಲಿ ಮಕ್ಕಳೊಡನೆ ಬೆರೆವ ಮತ್ತು ಪಾಠಮಾಡುವ ಪ್ರೈಮರಿ ಶಾಲೆಯ ಶಿಕ್ಷಕರೂ ಈ ಸಾಲಿಗೆ ಸೇರುತ್ತಾರೆ.

ತವರು ತೊರೆದು ಅತ್ತೆಯ ಮನೆಯನ್ನು ಸೇರುವ ಹೆಣ್ಣು, ಮೊದಲ ದಿನದಿಂದಲೇ ಎಲ್ಲಕ್ಕೂ ಹೊಂದಿಕೊಂಡು ಬಿಡಬೇಕು ಎಂದು ಬಯಸುವ ಅತ್ತೆಯ ಮನೆಯವರೊಡನೆ ವ್ಯವಹರಿಸುವಾಗ, ಯಾವ ಹೆಣ್ಣು ತಾನೇ ಸ್ವತಂತ್ರವಾಗಿ ಇರಬಲ್ಲಳು? ಹಲವೊಮ್ಮೆ ಏನೆಲ್ಲಾ ಬೇಗುದಿಯಿದ್ದರೂ ತನ್ನ ಮುಖದ ಮೇಲಿನ ಸ್ವಾತಂತ್ರ್ಯ ಕಳೆದುಕೊಂಡು ನಸುನಗುವಿನ ಮುಖವಾಡವನ್ನು ಧರಿಸಿ ಓಡಾಡುವ ಹೆಂಗಳನ್ನು ದಿನನಿತ್ಯದಲ್ಲಿ ನಾವು ನೋಡುತ್ತೇವೆ ಅಲ್ಲವೇ? ತಮ್ಮ ಮುಖದ ಮೇಲಿನ ಸ್ವಾತಂತ್ರ ಕಳೆದುಕೊಂಡು, ಮತ್ಯಾರನ್ನೋ ಸಂತಸ ಪಡಿಸುವ ಯತ್ನದಲ್ಲಿ ಸೋತರೂ ತಮ್ಮ ಮುಖದ ಮೇಲಿನ ಸ್ವಾತಂತ್ರವನ್ನು ಪಡೆದುಕೊಳ್ಳಲಾರದೇ ಅನುಭವಿಸುವ ಮಂದಿಯನ್ನು ದಿನನಿತ್ಯದಲ್ಲಿ ನೋಡುತ್ತೇವೆ. ಹಲವೊಮ್ಮೆ ಅದು ನಾವೇ ಆಗಿರುತ್ತೇವೆ.

ಒಂದರ್ಥದಲ್ಲಿ ನಾವೆಲ್ಲರೂ ಕನಿಷ್ಠ ಒಂದಲ್ಲಾ ಒಂದು ಕಾರಣಕ್ಕಾಗಿ, ಒಂದಲ್ಲಾ ಒಂದು ಸಂದರ್ಭದಲ್ಲಿ ಮುಖದ ಮೇಲಿನ ಸ್ವಾತಂತ್ರ್ಯವನ್ನು ಕಳೆದುಕೊಂಡೇ ಇರುತ್ತೇವೆ. ಕೆಲವೊಮ್ಮೆ ವೃತ್ತಿಧರ್ಮ ಪಾಲಿಸಲು ನಾವಾಗಿಯೇ ಸ್ವಾತಂತ್ರ್ಯವನ್ನು ತೊರೆದಿದ್ದರೆ, ಹಲವೊಮ್ಮೆ ನಮ್ಮ ಗೋಳು ನಮಗಿರಲಿ, ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದೇಕೆ ಎಂಬ ಮನಸ್ಥಿತಿ ಇದ್ದಾಗ ಆ ಮುಖ ಸ್ವಾತಂತ್ರ್ಯವೇ ನಮ್ಮಿಂದ ದೂರ ಸಾಗಿರುತ್ತದೆ. ನೀವೇನಂತೀರಾ?