ಹೆಚ್ಚುತ್ತಿರುವ ಸೈಬರ್ ಕ್ರೈಮ್ ; ಉಚಿತ ಗಿಫ್ಟ್ ಆಸೆಗೆ ಬಿದ್ದು ಲಕ್ಷಾಂತರ ಕಳಕೊಳ್ತಿದಾರೆ ಮಂಗಳೂರಿನ ವಿದ್ಯಾವಂತರು !  

02-07-21 09:18 pm       Giridhar Shetty, Mangaluru   ನ್ಯೂಸ್ View

ಕಂಪನಿಯವರ ಉಚಿತ ಗಿಫ್ಟ್ ಸಂದೇಶವನ್ನು ನಂಬಿ, ಅದರ ಹಿಂದೆ ಬಿದ್ದು ಮೋಸ ಹೋಗುವ ಪ್ರಕರಣಗಳು ನಿತ್ಯವೂ ಕೇಳಿಬರುತ್ತಿವೆ. ಆದರೆ, ಈ ರೀತಿಯ ಸಂದೇಶಗಳನ್ನೇ ನಂಬಿ ಲಕ್ಷಾಂತರ ರೂಪಾಯಿ ಕಳಕೊಂಡವರೆಲ್ಲ ಒಳ್ಳೇ ವಿದ್ಯಾವಂತರೇ ಎನ್ನುವ ಮಾಹಿತಿಯನ್ನು ಪೊಲೀಸರು ನೀಡುತ್ತಿದ್ದಾರೆ.  

ಮಂಗಳೂರು, ಜುಲೈ 2: ನಗರದ ಮಂದಿಗೆ ಮೊಬೈಲ್ ಇಲ್ಲದೆ ಜೀವನವೇ ಇಲ್ಲ. ಆದರೆ ಮೊಬೈಲನ್ನು ನಾವು ಹೇಗೆ ಬಳಸಿಕೊಳ್ತೀವೋ ಅದಕ್ಕೆ ಹೊಂದಿಕೊಂಡು ಅದರ ಪರಿಣಾಮಗಳೂ ಇರುತ್ತವೆ ಎನ್ನುವುದನ್ನು ಮರೆಯಬಾರದು. ನಿಮ್ಮ ಮೊಬೈಲ್ ಸಂಖ್ಯೆಗೆ ಕೋಟಿ ರೂ. ಬಹುಮಾನ ಬಂದಿದೆ ಎಂದೋ, ಯಾವುದೋ ಕಂಪನಿಯವರ ಉಚಿತ ಗಿಫ್ಟ್ ಸಂದೇಶವನ್ನು ನಂಬಿ, ಅದರ ಹಿಂದೆ ಬಿದ್ದು ಮೋಸ ಹೋಗುವ ಪ್ರಕರಣಗಳು ನಿತ್ಯವೂ ಕೇಳಿಬರುತ್ತಿವೆ. ಆದರೆ, ಈ ರೀತಿಯ ಸಂದೇಶಗಳನ್ನೇ ನಂಬಿ ಲಕ್ಷಾಂತರ ರೂಪಾಯಿ ಕಳಕೊಂಡವರೆಲ್ಲ ಒಳ್ಳೇ ವಿದ್ಯಾವಂತರೇ ಎನ್ನುವ ಮಾಹಿತಿಯನ್ನು ಪೊಲೀಸರು ನೀಡುತ್ತಿದ್ದಾರೆ.  

ಮಂಗಳೂರು ನಗರ ಭಾಗದಲ್ಲೇ ತಿಂಗಳಲ್ಲಿ ಕನಿಷ್ಠ ಎಂದರೂ ಐವತ್ತಕ್ಕೂ ಹೆಚ್ಚು ಈ ರೀತಿ ಹಣ ಕಳಕೊಂಡವರು ದೂರು ಕೊಡುತ್ತಲೇ ಇದ್ದಾರೆ. ಸಣ್ಣ ಪುಟ್ಟ ಹಣ ಕಳಕೊಂಡವರನ್ನು ಹೊರತುಪಡಿಸಿ ಸೈಬರ್ ಠಾಣೆಯಲ್ಲಿ ಈ ರೀತಿಯ ಕೇಸುಗಳೇ ತುಂಬಿ ಹೋಗಿವೆ. ಹಾಗಿದ್ದರೂ, ಜನರು ಯಾರದೋ ಮರುಳು ಮಾತನ್ನು ನಂಬಿ ಹಣ ಕಳಕೊಳ್ತಿರುವ ಪ್ರಕರಣಗಳಿಗೆ ಕಡಿವಾಣ ಬಿದ್ದೇ ಇಲ್ಲ. ಬದಲಿಗೆ, ದಿನದಿಂದ ದಿನಕ್ಕೆ ಮೋಸದ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇತ್ತೀಚೆಗೆ, 12 ಲಕ್ಷದ ಬಹುಮಾನದ ಆಸೆಗೆ ಬಿದ್ದು ಮಹಿಳೆಯೊಬ್ಬರು 7.80 ಲಕ್ಷ ರೂಪಾಯಿ ಹಣ ಕಳಕೊಂಡಿದ್ದು ಈ ರೀತಿಯ ಪ್ರಕರಣಗಳಲ್ಲಿ ಲೇಟೆಸ್ಟ್ ಸುದ್ದಿ.

ಮಂಗಳೂರಿನ ಅಶೋಕ ನಗರದ ಮಹಿಳೆಯೊಬ್ಬರಿಗೆ ಕಳೆದ ಡಿಸೆಂಬರ್ ತಿಂಗಳ 9ರಂದು ನ್ಯಾಪ್ಟಾಲ್ ಗಿಫ್ಟ್ ಹೆಸರಲ್ಲಿ ಪಾರ್ಸೆಲ್ ಬಂದಿತ್ತು. ಮೊಬೈಲಿಗೆ ಬಂದಿದ್ದ ಸಂದೇಶವನ್ನು ಬೆನ್ನತ್ತಿ ಎಡ್ರಸ್ ಕಳಿಸಿದ್ದರಿಂದ ಮೊದಲಿಗೆ ಪಾರ್ಸೆಲ್ ಕಳಿಸಿದ್ದರು. ಪಾರ್ಸೆಲ್ ನಲ್ಲಿ 12 ಲಕ್ಷದ ಬಹುಮಾನ ಬಂದಿರುವ ಬಗ್ಗೆ ಮಾಹಿತಿಗಳಿದ್ದವು. ಆದರೆ ಷರತ್ತುಗಳು ಅನ್ವಯ ಅನ್ನೋದನ್ನೂ ನಮೂದು ಮಾಡಿದ್ದರು. ಅದರಲ್ಲಿರುವ ನಂಬರಿಗೆ, ಮತ್ತೆ ಮೆಸೇಜ್ ಮಾಡಿದ್ದರು ಮಹಿಳೆ. ಆನಂತರ ಅತ್ತ ಕಡೆಯಿಂದ ತನ್ನನ್ನು ಪ್ರದೀಪ ಪೂಜಾರಿ ಎಂದು ಪರಿಚಯಿಸಿದ್ದ ವ್ಯಕ್ತಿಯೊಬ್ಬ ಫೋನ್ ಮಾಡಿದ್ದ. ನಿಮ್ಮ ಪಾರ್ಸೆಲ್ ರೆಡಿಯಿದೆ, ಅದನ್ನು ತಲುಪಿಸಲು 44 ಸಾವಿರ ರೂಪಾಯಿ ನೀವು ಕಟ್ಟಬೇಕು ಎಂದು ಕನ್ನಡದಲ್ಲಿ ಮಾತನಾಡಿ, ತಾನು ಕೂಡ ಕರಾವಳಿಯದ್ದೇ ವ್ಯಕ್ತಿ ಎನ್ನುವ ರೀತಿ ನಂಬಿಸಿದ್ದ.

ಇದನ್ನು ನಂಬಿದ ಮಹಿಳೆ, ತನ್ನ ಅಕೌಂಟಿನಿಂದ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದರು. ಆನಂತರ ಪಾರ್ಸೆಲ್ ಚಾರ್ಜ್, ಕಸ್ಟಮ್ ಚಾರ್ಜ್ ಹೀಗೆ ಬೇರೆ ಬೇರೆ ಹೆಸರಲ್ಲಿ ಸರದಿಯಂತೆ 7 ಲಕ್ಷ 85 ಸಾವಿರ 800 ರೂಪಾಯಿ ಮೊತ್ತವನ್ನು ಮಹಿಳೆ ಕಳಕೊಂಡಿದ್ದಾರೆ. ವಿಶೇಷ ಅಂದ್ರೆ, ಸರದಿಯಾಗಿ ಆಕೆಯೇ ಸ್ವತಃ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿದ್ದರು. ಅಷ್ಟೂ ಹಣ ಕಳಕೊಂಡರೂ, 12 ಲಕ್ಷದ ಗಿಫ್ಟ್ ಬರದಿರುವುದು ಖಾತ್ರಿಯಾಗುತ್ತಿದ್ದಂತೆ, ಮಹಿಳೆಗೆ ಮೋಸದ ಅರಿವಾಗಿದೆ. ಇಷ್ಟೂ ಹಣ ಹೋಯಿತಲ್ಲಾ ಎಂದು ತಲೆಗೆ ಕೈಹೊತ್ತುಕೊಂಡು ಕುಳಿತ ಮಹಿಳೆ ಈ ವಿಚಾರವನ್ನು ವಿದೇಶದಲ್ಲಿದ್ದ ಗಂಡನಿಗೂ ತಿಳಿಸಿರಲಿಲ್ಲ.

ಇದೇ ವಿಚಾರದಲ್ಲಿ ಕೊರಗುತ್ತಿದ್ದ ಮಹಿಳೆ, ಹಣ ಕಳಕೊಂಡ ಮೂರ್ನಾಲ್ಕು ತಿಂಗಳ ಬಳಿಕ ಕಳೆದ ಎಪ್ರಿಲ್ ತಿಂಗಳಲ್ಲಿ ತಮ್ಮನಿಗೆ ವಿಚಾರ ತಿಳಿಸಿದ್ದಾರೆ. ಮಹಿಳೆಯ ಮಾತು ಕೇಳಿ ಗಾಬರಿಯಾದ ಯುವಕ ಹಣ ಕಳುಹಿಸಿದ್ದ ಬಗ್ಗೆ ದಾಖಲೆ ಇರುವುದನ್ನು ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್ ಖಾತೆಯ ವಿವರಗಳು, ಗೂಗಲ್ ಪೇ ಮತ್ತು ಫೋನ್ ಕರೆಯ ವಿವರಗಳ ಮಹಿಳೆ ತಿಳಿಸುತ್ತಲೇ ಯುವಕ ಕೂಡಲೇ ಮಂಗಳೂರಿನ ಸೈಬರ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಆದರೆ ದೊಡ್ಡ ಮೊತ್ತದ ಪ್ರಕರಣ ಆಗಿರುವುದರಿಂದ ಸ್ವತಃ ಮಹಿಳೆಯೇ ಬಂದು ದೂರು ನೀಡುವಂತೆ ತಿಳಿಸಿದ್ದರು. ಅದರಂತೆ, ಎಪ್ರಿಲ್ 30ರಂದು ದೂರು ಸ್ವೀಕರಿಸಿ, ಎನ್ಸಿ ಮಾಡಿಕೊಂಡಿದ್ದ ಮಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ ಬಳಿಕ, ಒಂದಷ್ಟು ಹಣ ಮರಳಿ ಪೀಕಿಸಬಹುದು ಎಂದು ಖಾತ್ರಿಯಾದ ಬಳಿಕವೇ ಜೂನ್ 30ರಂದು ಎಫ್ಐಆರ್ ಮಾಡಿದ್ದಾರೆ.

ಹಣ ವರ್ಗಾವಣೆಗೆ ನೀಡಿದ್ದ ಖಾತೆಗಳು ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಇರುವುದು ತನಿಖೆಯಲ್ಲಿ ಕಂಡುಬಂದಿದ್ದು, ಅವನ್ನು ಬ್ಯಾಂಕ್ ನೋಡಲ್ ಅಧಿಕಾರಿಗಳ ಜೊತೆ ವ್ಯವಹರಿಸಿ ಸೀಜ್ ಮಾಡಿಸಿದ್ದಾರೆ. ಇದೇ ವೇಳೆ, ಪ್ರದೀಪ ಪೂಜಾರಿ ಹೆಸರಲ್ಲಿ ಕನ್ನಡದಲ್ಲಿ ಮಾತನಾಡಿದ್ದ ವ್ಯಕ್ತಿಯ ಬಗ್ಗೆ ಟ್ರೇಸ್ ಮಾಡುವ ಕೆಲಸವನ್ನೂ ಸೈಬರ್ ಪೊಲೀಸರು ಮಾಡುತ್ತಿದ್ದಾರೆ.

ಸದ್ಯಕ್ಕೆ ಸೈಬರ್ ಠಾಣೆಯ ಇನ್ ಸ್ಪೆಕ್ಟರ್ ರವಿ ನಾಯ್ಕ್ ರಜೆಯಲ್ಲಿರುವ ಕಾರಣ ಸಿಸಿಬಿ ಇನ್ ಸ್ಪೆಕ್ಟರಿಗೆ ಹೆಚ್ಚುವರಿ ಚಾರ್ಜ್ ವಹಿಸಲಾಗಿದೆ. ಸೈಬರ್ ಠಾಣೆಗೆ ದಿನವೂ ಹಣ ಕಳಕೊಂಡವರು, ಮೋಸ ಹೋದವರು ಬರುತ್ತಲೇ ಇದ್ದಾರೆ. ಸೈಬರ್ ಠಾಣೆಯಲ್ಲಿ ಎಫ್ಐಆರ್ ರಾಶಿ ಬಿದ್ದಿರುವುದರಿಂದ ಅಗತ್ಯ ಇದ್ದರೆ, ಮಾತ್ರ ಪೊಲೀಸರು ಕೇಸು ದಾಖಲಿಸಿಕೊಳ್ಳುವ ಹಂತಕ್ಕೆ ಬಂದಿದ್ದಾರೆ.  ಯಾಕಂದ್ರೆ, ಹೆಚ್ಚಿನ ಪ್ರಕರಣಗಳು ಟ್ರೇಸ್ ಆಗದೇ ಹಳ್ಳ ಹಿಡಿಯುವುದರಿಂದ ಕೇಸ್ ರಿಜಿಸ್ಟರ್ ಮಾಡಿ ತಲೆಕೆಡಿಸಿಕೊಳ್ಳುವುದು ಬೇಡ ಎನ್ನುವ ಹಂತಕ್ಕೆ ಪೊಲೀಸರಿದ್ದಾರೆ. ಯಾಕಂದ್ರೆ, ಈ ರೀತಿಯ ಪ್ರಕರಣಗಳಲ್ಲಿ ಆರೋಪಿಗಳು ಉತ್ತರ ಭಾರತ ಮೂಲದ ಸೈಬರ್ ತಂತ್ರಜ್ಞರೇ ಆಗಿರುತ್ತಾರೆ. ಯಾರದ್ದೋ ಖಾತೆಯಲ್ಲಿ ಹಣ ವರ್ಗಾವಣೆಯ ಕೆಲಸ ಮಾಡಿಕೊಂಡು ಇನ್ಯಾರನ್ನೋ ಯಾಮಾರಿಸಿ ಹಣ ಕೀಳುವ ಕೆಲಸ ಮಾಡುತ್ತಾರೆ. ದೇಶದಲ್ಲೀಗ ಅತಿ ಹೆಚ್ಚು ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗುತ್ತಿದ್ದು, ಪೊಲೀಸ್ ಇಲಾಖೆಗೆ ಇವನ್ನು ಪತ್ತೆ ಮಾಡುವುದೇ ಸವಾಲಾಗಿ ಪರಿಣಮಿಸಿದೆ.

ವಸ್ತುಸ್ಥಿತಿ ಹೀಗಿದ್ದರೂ, ಬುದ್ಧಿವಂತರು, ವಿದ್ಯಾವಂತರೆನ್ನಿಸಿಕೊಂಡ ಜನರು ಇಡೀ ದಿನ ಮೊಬೈಲ್ ಎಂಬ ಮಾಯಾಲೋಕದಲ್ಲಿ ಜೋತು ಬಿದ್ದುಕೊಂಡಿದ್ದರೂ, ಯಾರೋ ಒಬ್ಬ ಗಿಫ್ಟ್ ಕಳಿಸಿದ ಸಂದೇಶವನ್ನು ನಂಬಿ ಮೋಸ ಹೋಗುವುದು, ಅದರ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣ ಕಳಕೊಳ್ಳುತ್ತಾರೆ ಅನ್ನುವುದೇ ದೊಡ್ಡ ದುರಂತ.

Surge in cybercrime amidst Covid pandemic in Mangalore hundreds falling prey to a phishing scam. Recently a lady from the city has lost Seven lakhs to an online fraudster from Naptol and has transferred Money via Google Pay.