'ಕರ್ನಾಟಕದ ಮೇಲೆ ಒಂದು ವಿಶೇಷ ಪ್ರೀತಿ, ಅಭಿಮಾನ ನನಗೆ ಇದೆ..'- ನಟ ವಿಜಯ್ ದೇವರಕೊಂಡ

23-08-22 02:10 pm       Source: Vijayakarnataka   ಸಿನಿಮಾ

ಲೈಗರ್ ಚಿತ್ರದ ನಟ ವಿಜಯ್‌ ದೇವರಕೊಂಡ ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ನೀಡಿದ ಎಕ್ಸ್‌ಕ್ಲೂಸಿವ್‌ ಸಂದರ್ಶನ ಇಲ್ಲಿದೆ.

* ವಿಜಯ್‌ ದೇವರಕೊಂಡ ಎಲ್ಲದರಲ್ಲೂ ಟ್ರೆಂಡ್‌ ಕ್ರಿಯೇಟ್‌ ಮಾಡಲು ಹೊರಡ್ತಾರೆ. ಯಾಕೆ ಹಾಗೆ..?
ನಾನು ನನಗೆ ಏನು ಅನಿಸುತ್ತದೋ ಅದನ್ನು ಮಾಡುತ್ತೇನೆ. ಕಥೆ ಆಯ್ಕೆ, ಕಾಸ್ಟ್ಯೂಮ್‌, ನನ್ನ ಮಾತು ಎಲ್ಲವೂ ನನಗೆ ಏನನ್ನಿಸುತ್ತದೋ ಅದನ್ನು ಮಾಡುತ್ತೇನೆ. ಆದರೆ ಅದು ಟ್ರೆಂಡ್‌ ಆಗುತ್ತಿದೆ, ಅಷ್ಟೇ. ಟ್ರೆಂಡ್‌ ಆದರೂ ನಾನು ಅದರ ಬಗ್ಗೆ ಯೋಚಿಸುವುದಿಲ್ಲ. ಅದು ಏನೇ ಆದರೂ ನನಗದು ಗೊತ್ತಿಲ್ಲ.

* ಜನ ಹಣ ಗಳಿಸಿದ ಮೇಲೆ ಆಸ್ತಿ, ಕಾರು ಖರೀದಿ ಮಾಡುತ್ತಾರೆ. ಆದರೆ ನೀವು ಚಿತ್ರಮಂದಿರ ಕಟ್ಟಿದಿರಿ. ಈ ರೀತಿಯ ಆಲೋಚನೆ ಏಕೆ ಬಂತು?
ಮೆಹಬೂಬ್‌ ನಗರ ನನ್ನ ಹುಟ್ಟೂರು. ನನ್ನ ತಂದೆ ತಾಯಿ ಅಲ್ಲಿಯವರು. ಅಲ್ಲಿ ಹಲವು ಚಿತ್ರಮಂದಿರಗಳಿದ್ದವು. ಆದರೆ ವ್ಯವಸ್ಥಿತವಾದ ಚಿತ್ರಮಂದಿರಗಳು ಇರಲಿಲ್ಲ. ಅಲ್ಲಿನ ಕುಟುಂಬಗಳು ಸಹ ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿರುವಂತಹ ಚಿತ್ರಮಂದಿರಗಳ ಅನುಭವವನ್ನು ಪಡೆಯುವಂತಹ ವ್ಯವಸ್ಥೆ ಅಲ್ಲಾಗಬೇಕು ಎಂದು ಯೋಚಿಸಿದೆ. ಜತೆಗೆ, ನಾನು ಸಿನಿಮಾ ನಟನಾಗಿದ್ದೇನೆ. ಇಷ್ಟು ಯಶಸ್ಸು, ಹಣ ಎಲ್ಲವೂ ಜನರಿಂದಲೇ ಸಿಕ್ಕಿದ್ದು. ಅದಕ್ಕಾಗಿ ನನ್ನ ಕಡೆಯಿಂದ ಇದೊಂದು ಅಳಿಲು ಸೇವೆ ಅನ್ನಬಹುದು.
(ಹರೀಶ್‌ ಬಸವರಾಜ್‌)

* ಹಾಗಾದರೆ ನೀವು ನಿಮಗೆ ಅಂತ ಆಸ್ತಿ ಮಾಡಿಕೊಂಡಿಲ್ವಾ..?

ನನಗ್ಯಾಕೋ ಅಷ್ಟೊಂದು ಆಸಕ್ತಿ ಇಲ್ಲ. ನಿಮಗೆ ಗೊತ್ತಿರಲಿ, ನನ್ನ ಹೆಸರಿನಲ್ಲಿ ಒಂದೇ ಒಂದು ಮನೆ ಇಲ್ಲ. ಮನೆ ತೆಗೆದುಕೊಂಡೆ. ನಂತರ ಯಾವುದೋ ಕಾರಣಕ್ಕೆ ಮಾರಾಟ ಮಾಡಿದೆ. ಇನ್ನೊಂದು ವಿಷಯವೆಂದರೆ, ನನ್ನದೇ ಆದ ಕಾರು ಸಹ ಇಲ್ಲ. ನಾನು ಓಡಾಡುತ್ತಿರುವ ಕಾರು ಬಾಡಿಗೆಯದ್ದು. ನಾನು ದುಡಿಯುವ ಹಣ ಸಿನಿಮಾ ನಿರ್ಮಾಣಕ್ಕೆ, ನನ್ನ ಬಟ್ಟೆ ಉದ್ಯಮಕ್ಕೆ ಮತ್ತಿತರ ಹೊಸ ಆಲೋಚನೆಗಳಿಗೆ ಖರ್ಚು ಮಾಡುತ್ತೇನೆ ಅಷ್ಟೇ.

* ಕರ್ನಾಟಕ ಅಂದರೆ ಏನು ನೆನಪಿಗೆ ಬರುತ್ತದೆ?

ಕರ್ನಾಟಕದ ಬಗ್ಗೆ ನನಗೆ ಮೊದಲು ಪ್ರೀತಿ ಹುಟ್ಟಲು ಕಾರಣ ರಾಹುಲ್‌ ದ್ರಾವಿಡ್‌ ಮತ್ತು ಜಾವಗಲ್‌ ಶ್ರೀನಾಥ್‌. ನನ್ನ ಬಾಲ್ಯದ ನೆಚ್ಚಿನ ಆಟಗಾರರು ಅವರು. ದ್ರಾವಿಡ್‌, ಶ್ರೀನಾಥ್‌, ಅನಿಲ್‌ ಕುಂಬ್ಳೆಯವರಂತಹ ಅದ್ಭುತ ಆಟಗಾರರನ್ನು ಕರ್ನಾಟಕ ಕೊಟ್ಟಿದೆ. ಈ ಕಾರಣದಿಂದ ನನಗೆ ಮೊದಲಿನಿಂದಲೂ ಈ ರಾಜ್ಯದ ಮೇಲೆ ಏನೋ ಒಂದು ಪ್ರೀತಿ, ಅಭಿಮಾನ.

* ಬೆಂಗಳೂರು ಗೊತ್ತಾ? ಹೀರೋ ಆಗುವ ಮೊದಲು ಇಲ್ಲಿಓಡಾಡಿದ್ದೀರಾ..?

ಬಹಳ ಸಲ ಓಡಾಡಿದ್ದೇನೆ. ನನ್ನ ಸ್ನೇಹಿತರು ಜಾಲಹಳ್ಳಿಯಲ್ಲಿದ್ದರು. ಹೈದರಾಬಾದ್‌ನಿಂದ ಬಂದು ಅಲ್ಲಿ ಇರುತ್ತಿದ್ದೆ. ಅವರ ಆ್ಯಕ್ಟಿವಾ ಸ್ಕೂಟರ್‌ ತೆಗೆದುಕೊಂಡು ಬೆಂಗಳೂರಿನಲ್ಲಿ ಎಲ್ಲೆಡೆ ಸುತ್ತಿದ್ದೇವೆ. ಹೆಬ್ಬಾಳ, ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಹಲವೆಡೆ ಓಡಾಡಿದ್ದೇವೆ. ಆ ದಿನಗಳೇ ಚಂದ. ಬೆಂಗಳೂರಿನ ವಾತಾವರಣ ಅಂದು ಇಷ್ಟೇ ಚೆನ್ನಾಗಿತ್ತು. ಇಂದು ಸಹ ಅದೇ ರೀತಿಯ ವಾತಾವರಣವಿದೆ. ಬೆಂಗಳೂರಿನ ಹಲವು ನೆನಪುಗಳು ನನ್ನಲ್ಲಿವೆ.

​* ಕನ್ನಡ ಬರುತ್ತಾ? ಎಷ್ಟು ಪದಗಳು ಬರುತ್ತವೆ? ಯಾರು ಕಲಿಸಿದರು?

‘ಚೆನ್ನಾಗಿದ್ದೀರಾ’ ಸೇರಿದಂತೆ ಒಂದಷ್ಟು ಪದಗಳು ಬರುತ್ತವೆ ಅಷ್ಟೇ. ಬೆಂಗಳೂರಿಗೆ ಬರುತ್ತಿದ್ದ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಓಡಾಡುವಾಗ ಅವರು ಮಾತನಾಡುವುದನ್ನು ನೋಡಿ ಕಲಿತುಕೊಂಡಿದ್ದೇನೆ ಅಷ್ಟೇ.

* ಭವಿಷ್ಯದಲ್ಲಿ ಕೇವಲ ಪ್ಯಾನ್‌ ಇಂಡಿಯಾ ಸಿನಿಮಾ ಮಾತ್ರ ಮಾಡುತ್ತೀರಾ?

ಇಲ್ಲಹಾಗೇನಿಲ್ಲ, ನನ್ನ ಮುಂದಿನ ಸಿನಿಮಾ ‘ಖುಷಿ’ ತೆಲುಗಿನ ಸಿನಿಮಾ. ಅದನ್ನು ತಮಿಳು ಮತ್ತು ಕನ್ನಡಕ್ಕೆ ಡಬ್‌ ಮಾಡಿ ರಿಲೀಸ್‌ ಮಾಡುತ್ತೇವೆ. ಭಾರತದ ಎಲ್ಲಾ ಆಡಿಯನ್ಸ್‌ಗಾಗಿ ಮಾಡಿರುವ ತೆಲುಗು ಸಿನಿಮಾ ‘ಲೈಗರ್‌’.

​* ನಿಮ್ಮ ಮತ್ತು ರಣ್‌ವೀರ್‌ ನಡುವೆ ಸಾಕಷ್ಟು ಸಾಮ್ಯ ಇದೆ. ಪರ್ಫಾರ್ಮೆನ್ಸ್‌ನಲ್ಲಿ, ಪಾತ್ರಕ್ಕೆ ಸಿದ್ಧವಾಗುವುದರಲ್ಲಿ, ಜತೆಗೆ ಕಾಸ್ಟ್ಯೂಮ್‌ ವಿಚಾರದಲ್ಲಿಯೂ ಸಹ. ಇದಕ್ಕೆ ನಿಮ್ಮ ಅಭಿಪ್ರಾಯ?

ಇಲ್ಲ, ನನಗೆ ಹಾಗೆ ಅನ್ನಿಸಿಲ್ಲ. ಅವರೇ ಬೇರೆ, ನಾನೇ ಬೇರೆ. ಮೊದಲೇ ಹೇಳಿದಂತೆ ನಾನು ಅಂದುಕೊಂಡಿದ್ದನ್ನು ಮಾಡುತ್ತಿದ್ದೇನೆ ಅಷ್ಟೇ. ಮತ್ತು ಪರ್ಫಾರ್ಮೆನ್ಸ್‌ ವಿಚಾರದಲ್ಲಿ ಪಾತ್ರಕ್ಕೆ ಏನು ಬೇಕೋ ಅದಕ್ಕೆ ತಕ್ಕಂತೆ ಸಿದ್ಧವಾಗುತ್ತೇನೆ. ಹಾಗಾಗಿ ಹೋಲಿಕೆ ಬೇಡ.

ಕೋಟ್:

ವಾತಾವರಣ, ಜಾವಗಲ್‌ ಶ್ರೀನಾಥ್‌, ರಾಹುಲ್‌ ದ್ರಾವಿಡ್‌ ಹೀಗೆ ಹಲವು ವಿಚಾರಗಳಿಗಾಗಿ ಬೆಂಗಳೂರು, ಕರ್ನಾಟಕ ನನಗೆ ಚಿಕ್ಕ ವಯಸ್ಸಿನಿಂದಲೂ ಫೇವರಿಟ್‌.

Liger Movie Actor Vijay Deverakonda Talks About Rahul Dravid Javagal Srinath And Bengaluru.