'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ನಟಿಸುವ ಆಸೆ ಇಟ್ಟುಕೊಂಡಿದ್ದ ರಜನಿಕಾಂತ್‌; ಆದರೆ ಆಗಿದ್ದೇ ಬೇರೆ!

07-09-22 12:51 pm       Source: Vijayakarnataka   ಸಿನಿಮಾ

ಮಣಿರತ್ನಂ ನಿರ್ದೇಶನದ ಬಹುಕೋಟಿ ವೆಚ್ಚದ 'ಪೊನ್ನಿಯಿನ್ ಸೆಲ್ವನ್ 1' ಸಿನಿಮಾವು ಇದೆ ಸೆ.30ರಂದು ತೆರೆಗೆ ಬರಲಿದೆ. ಈ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ...

ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ 'ಪೊನ್ನಿಯಿನ್ ಸೆಲ್ವನ್ 1' ಸಿನಿಮಾವು ಇದೆ ಸೆ.30ರಂದು ಅದ್ದೂರಿಯಾಗಿ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡ ಸಂಭ್ರಮಿಸಿದೆ. ಅದಕ್ಕಾಗಿ ಸೆ.6ರಂದು ಅದ್ದೂರಿ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ 'ಸೂಪರ್ ಸ್ಟಾರ್' ರಜನಿಕಾಂತ್ ಮತ್ತು ಕಮಲ್ ಹಾಸನ್ ಕೂಡ ಆಗಮಿಸಿದ್ದರು. ಈ ವೇಳೆ ಒಂದು ಇಂಟರೆಸ್ಟಿಂಗ್ ವಿಚಾರವನ್ನು ರಜನಿಕಾಂತ್ ಹಂಚಿಕೊಂಡಿದ್ದಾರೆ. ರಜನಿಕಾಂತ್ ಅವರಿಗೂ 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ ನಟಿಸುವ ಆಸೆ ಇತ್ತಂತೆ. ಆದರೆ ಅದು ಈಡೇರದೇ ಇರಲು ಮಣಿರತ್ನಂ ಕಾರಣ ಎಂಬ ವಿಚಾರ ಬಹಿರಂಗವಾಗಿದೆ.

ನಾನು ನಟಿಸಬೇಕು ಎಂದುಕೊಂಡಿದ್ದೆ...
'ನಾನು ಕೂಡ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಭಾಗವಾಗಬೇಕು ಎಂದುಕೊಂಡಿದ್ದೆ. ಮಣಿರತ್ನಂ ಅವರಿಗೆ ಪೆರಿಯಾ ಪಳುವೆಟ್ಟರೈಯಾರ್ ಪಾತ್ರವನ್ನು ನನಗೆ ಕೊಡುವಂತೆ ಕೇಳಿದ್ದೆ. ನಾನು ಅತಿಥಿ ಪಾತ್ರವನ್ನು ಮಾಡುವೆ ಎಂದಿದ್ದೆ. ಅದಕ್ಕೆ ಮಣಿರತ್ನಂ, 'ನಿಮ್ಮ ಅಭಿಮಾನಿಗಳಿಂದ ನನಗೆ ಛಿಮಾರಿ ಹಾಕಿಸಬೇಕೆಂದು ನಿರ್ಧರಿಸಿದ್ದೀರಾ..' ಎಂದು ಕೇಳಿದರು. ಬೇರೆ ಯಾರಾದರೂ ಆಗಿದ್ದರೆ, ನಾನು ಕೇಳಿದ ಕೂಡ ಒಪ್ಪಿಕೊಂಡು ಬಿಡುತ್ತಿದ್ದರು. ಆದರೆ ಮಣಿ ಆ ರೀತಿ ಮಾಡಲಿಲ್ಲ. ಅದು ಮಣಿರತ್ನಂ ಅಂದ್ರೆ..' ಎಂದು ಹೊಗಳಿದ್ದಾರ ರಜನಿಕಾಂತ್. ಅಂದಹಾಗೆ, 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ ಪೆರಿಯಾ ಪಳುವೆಟ್ಟರೈಯಾರ್ ಪಾತ್ರವನ್ನು ಆರ್. ಶರತ್‌ಕುಮಾರ್ ಮಾಡಿದ್ದಾರೆ.

Rajinikanth wanted to be a part of Ponniyin Selvan but Mani Ratnam refused.  Here's why - Movies News

ಅರುಲ್ಮೋಳಿ ವರ್ಮನ್ ಪಾತ್ರವನ್ನು ಕಮಲ್ ಮಾಡಬೇಕು
ಈ ಚಿತ್ರದ ಪಾತ್ರಗಳ ಬಗ್ಗೆ ಮಾತನಾಡಿರುವ ರಜನಿಕಾಂತ್, 'ನಾನು ಮೊದಲ ಬಾರಿಗೆ ಈ ಕಥೆಯನ್ನು ಓದಿದಾಗ, ಅರುಲ್ಮೋಳಿ ವರ್ಮನ್ ಪಾತ್ರವನ್ನು ಕಮಲ್ ಮಾಡಿದರೆ ಚೆನ್ನಾಗಿರುತ್ತದೆ ಎಂದುಕೊಂಡಿದ್ದೆ. ಕುಂದವೈ ಪಾತ್ರವನ್ನು ಶ್ರೀದೇವಿ, ಆದಿತ್ಯ ಕರಿಕಾಲನ್ ಪಾತ್ರವನ್ನು ವಿಜಯ್‌ಕಾಂತ್, ಪಳುವೆಟ್ಟರೈಯಾರ್ ಪಾತ್ರವನ್ನು ಸತ್ಯರಾಜ್ ಮಾಡಿದರೆ ಚೆನ್ನಾಗಿರುತ್ತದೆ ಅಂತ ಅಂದುಕೊಂಡಿದ್ದೆ. ಒಮ್ಮೆ ಮ್ಯಾಗಜೀನ್‌ವೊಂದರಲ್ಲಿ ಸಂದರ್ಶನ ನೀಡಿದ್ದ ಜೆ. ಜಯಲಲಿತಾ ಅವರು, ವಂದಿಯಾದೇವನ್ ಪಾತ್ರವನ್ನು ರಜನಿಕಾಂತ್ ಮಾಡಿದರೆ ಚೆನ್ನಾಗಿರುತ್ತದೆ ಎಂದಿದ್ದರು. ನಾನು ಆಗ ತುಂಬ ಖುಷಿ ಪಟ್ಟಿದ್ದೆ. ಆಗ ನಾನು ಆ ಪುಸ್ತಕವನ್ನು ಓದಿದ್ದೆ. ನಂತರ ನಾನು ಕಲ್ಕಿ ಅವರ ಮನೆಗೆ ಹೋಗಿ, ಅವರ ಪಾದಗಳಿಗೆ ನಮಸ್ಕಾರ ಮಾಡಿದ್ದೆ. ಎಂಥ ಅದ್ಭುತ ಕಥೆ ಇದು! 'ಪೊನ್ನಿಯಿನ್ ಸೆಲ್ವನ್' ಎಂದರೆ ಬರೀ ಅರುಣ್‌ಮೋಳಿ ವರ್ಮನ್ ಮಾತ್ರವಲ್ಲ, ನಂದಿನಿ ಕೂಡ. ಪೊನ್ನಿಯಿನ್ ಸೆಲ್ವಿ ಕೂಡ.. ಎಂಥ ಪಾತ್ರಗಳು! ಅಂಥ ಪಾತ್ರಗಳನ್ನು ಈಗ ಯಾರಿಂದಲೂ ಬರೆಯಲು ಸಾಧ್ಯವಿಲ್ಲ. ಆ ಪಾತ್ರವೇ ಪಡೆಯಪ್ಪ ಸಿನಿಮಾದಲ್ಲಿ ರಮ್ಯಾಕೃಷ್ಣ ನಟಿಸಿದ್ದ ನೀಲಾಂಬರಿ ಪಾತ್ರಕ್ಕೆ ಸ್ಪೂರ್ತಿ ಆಗಿತ್ತು' ಎಂದು ರಜನಿಕಾಂತ್ ಹೇಳಿದ್ದಾರೆ.

Rajinikanth, Kamal launch magnificent trailer of Mani Ratnam#8217;s film Ponniyin  Selvan 1#8217;

ಯಾರು ಯಾವ ಪಾತ್ರ ಮಾಡಿದ್ದಾರೆ?
'ಪೊನ್ನಿಯಿನ್ ಸೆಲ್ವನ್ 1' ಚಿತ್ರದಲ್ಲಿ ಆದಿತ್ಯ ಕರಿಕಾಲನ್ ಪಾತ್ರದಲ್ಲಿ ವಿಕ್ರಮ್‌ ನಟಿಸಿದ್ದಾರೆ. ಅರುಲ್ಮೋಳಿ ವರ್ಮನ್ (ಪೊನ್ನಿಯಿನ್ ಸೆಲ್ವನ್ / ರಾಜ ರಾಜ ಚೋಳ) ಪಾತ್ರದಲ್ಲಿ 'ಜಯಂ' ರವಿ, ವಲ್ಲವರಾಯನ್ ವಂದಿಯಾದೇವನ್ ಪಾತ್ರವನ್ನು ಕಾರ್ತಿ, ನಂದಿನಿ ಮತ್ತು ಮಂದಾಕಿನಿ ದೇವಿಯಾಗಿ ಐಶ್ವರ್ಯಾ ರೈ ಬಚ್ಚನ್, ಕುಂದವೈ ಪಿರತ್ತಿಯಾರ್ ಪಾತ್ರದಲ್ಲಿ ತ್ರಿಷಾ, ಸುಂದರ ಚೋಳ ಆಗಿ ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ.

ಕಲ್ಕಿ ಕೃಷ್ಣಮೂರ್ತಿ ಬರೆದಿರುವ 'ಪೊನ್ನಿಯಿನ್ ಸೆಲ್ವನ್' ಎಂಬ ಐತಿಹಾಸಿಕ ಪುಸ್ತಕವನ್ನು ಆಧರಿಸಿರುವ ಚಿತ್ರ 'ಪೊನ್ನಿಯಿನ್ ಸೆಲ್ವನ್ 1'. 9ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನು ಆಳಿದ ರಾಜ ರಾಜ ಚೋಳನ ಜೀವನಗಾಥೆಯೇ ಈ ಚಿತ್ರ. ಸುಮಾರು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ತಮಿಳು, ಹಿಂದಿ, ಕನ್ನಡ, ತೆಲುಗು, ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ತೆರೆಕಾಣಲಿದ್ದು, ಅನೇಕ ಅನುಭವಿ ಕಲಾವಿದರು ಬಣ್ಣ ಹಚ್ಚಿದ್ದಾರೆ.

Super Star Rajinikanth Talks About Mani Ratnams Ponniyin Selvan.