ಜನಾರ್ದನ ರೆಡ್ಡಿ ಪುತ್ರನ ಸಿನಿಮಾದ ಶೀರ್ಷಿಕೆ ಏನು? ಟೈಟಲ್ ಲಾಂಚ್‌ಗೆ ಮುಹೂರ್ತ ಫಿಕ್ಸ್

28-09-22 01:27 pm       Source: Vijayakarnataka   ಸಿನಿಮಾ

ಮಾಜಿ ಸಚಿವ ಜನಾರ್ದನ ರೆಡ್ಡಿ (janardhana Reddy) ಅವರ ಪುತ್ರ ಕಿರೀಟಿ (Kireeti) ಅವರ ಚೊಚ್ಚಲ ಸಿನಿಮಾಕ್ಕೆ ಮಾರ್ಚ್ 4ರಂದು ಅದ್ದೂರಿಯಾಗಿ ಮುಹೂರ್ತ ನೆರವೇರಿತ್ತು.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಏಕಕಾಲಕ್ಕೆ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ಗೆ ಎಂಟ್ರಿ ನೀಡಿರುವುದು ಗೊತ್ತೇ ಇದೆ. ಕಿರೀಟಿ ಹೀರೋ ಆಗಿರುವ ಈ ದ್ವಿಭಾಷಾ ಸಿನಿಮಾವನ್ನು 'ಮಯಾಬಜಾರ್' ಸಿನಿಮಾ ಖ್ಯಾತಿಯ ರಾಧಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಶುರುವಾಗಿ 5-6 ತಿಂಗಳು ಕಳೆದರೂ, ಈ ಚಿತ್ರದ ಟೈಟಲ್ ಏನು ಅನ್ನೋದು ಮಾತ್ರ ಯಾರಿಗೂ ಬಹಿರಂಗಗೊಂಡಿರಲಿಲ್ಲ. ಪ್ರೊಡಕ್ಷನ್ ನಂ.15 ಎಂದು ತಾತ್ಕಾಲಿಕ ಟೈಟಲ್‌ನಲ್ಲಿ ಚಿತ್ರದ ಕೆಲಸಗಳು ಸಾಗಿದ್ದವು. ಇದೀಗ ಚಿತ್ರದ ಟೈಟಲ್ ಲಾಂಚ್ ಮಾಡುವ ಸಮಯ ಬಂದಿದೆ. ಹೌದು, ಇದೇ ಸೆ.29ರಂದು ಕಿರೀಟಿ ಹುಟ್ಟುಹಬ್ಬ. ಆ ಸಲುವಾಗಿ, ಅಂದೇ ಟೈಟಲ್ ಲಾಂಚ್ ಮಾಡೋಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ಸೆ.29ರ ಸಂಹೆ 6.39ಕ್ಕೆ ಚಿತ್ರದ ಟೈಟಲ್ ಲಾಂಚ್ ವಿಡಿಯೋವನ್ನು ರಿಲೀಸ್ ಮಾಡಲು ಚಿತ್ರತಂಡ ರೆಡಿ ಆಗಿದೆ. ಆ ಮೂಲಕ ಇಷ್ಟು ದಿನಗಳವರೆಗೂ ಇದ್ದ ಕುತೂಹಲಕ್ಕೆ ತೆರೆಬೀಳಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಎರಡೂ ಭಾಷೆಗೆ ಹೊಂದಿಕೆ ಆಗುವಂತಹ ಶೀರ್ಷಿಕೆ ಇರಲಿದೆಯೇ ಎಂಬ ಪ್ರಶ್ನೆ ಸದ್ಯ ಎಲ್ಲರಲ್ಲೂ ಇದೆ.

SS Rajamouli, Sreeleela, Genelia @ Gali Janardhan Reddy son Kireeti Debut  Movie Opening | New Movie Posters

ತೆಲುಗಿನಲ್ಲಿ 'ಈಗ', 'ಲೆಜೆಂಡ್', 'ಯುದ್ಧಂ ಶರಣಂ' ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಾಯಿ ಕೊರ್ರಪಾಟಿ (Sai Korrapati) ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ವರಾಹಿ ಬ್ಯಾನರ್‌ನ 15ನೇ ಸಿನಿಮಾ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಈ ಸಿನಿಮಾ ತೆರೆಗೆ ಬರಲಿದ್ದು, ಬಿಗ್ ಬಜೆಟ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ತೆಲುಗಿನ ದೊಡ್ಡ ದೊಡ್ಡ ತಂತ್ರಜ್ಞರೇ ಈ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಿಗ್ ಪ್ರಾಜೆಕ್ಟ್‌ಗೆ ಛಾಯಾಗ್ರಾಹಕರಾಗಿ 'ಈಗ', 'ಬಾಹುಬಲಿ', 'ಆರ್‌ಆರ್‌ಆರ್' ಸಿನಿಮಾಗಳ ಖ್ಯಾತಿಯ ಛಾಯಾಗ್ರಾಹಕ ಸೆಂಥಿಲ್‌ಕುಮಾರ್ ಕೆಲಸ ಮಾಡಲಿದ್ದಾರೆ. 'ಮಗಧೀರ', 'ಈಗ', 'ಊಸರವಳ್ಳಿ' ಮುಂತಾದ ಸೂಪರ್ ಹಿಟ್ ತೆಲುಗು ಸಿನಿಮಾಗಳಿಗೆ ಕಲಾ ನಿರ್ದೇಶನ ಮಾಡಿರುವ ರವೀಂದರ್ ಈ ಸಿನಿಮಾದ ಕಲಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಸದ್ಯ ಭಾರತದ ಸೆನ್ಸೇಷನಲ್‌ ಮ್ಯೂಸಿಕ್ ಡೈರೆಕ್ಟರ್‌ ಎನಿಸಿಕೊಂಡಿರುವ ದೇವಿಶ್ರೀ ಪ್ರಸಾದ್ (Devi Sri Prasad) ಈ ಸಿನಿಮಾದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಇನ್ನು ಭಾರತದ ಬಹುಬೇಡಿಕೆಯ ಸ್ಟಂಟ್‌ ಮಾಸ್ಟರ್ ಪೀಟರ್ ಹೇನ್ ಕೂಡ ಈ ಸಿನಿಮಾಗೆ ಕೆಲಸ ಮಾಡಲಿದ್ದಾರೆ. ಈ ಹಿಂದೆ ಕನ್ನಡದಲ್ಲಿ ಅವರು 'ರನ್ನ', 'ನಟಸಾರ್ವಭೌಮ', 'ಸತ್ಯ ಇನ್ ಲವ್' ಸಿನಿಮಾಗಳಿಗೆ ಅವರು ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದರು.

Actress Sreeleela @ BJP Minister Gali Janardhan Reddy son Kireeti Debut  Movie Opening | New Movie Posters

ಮುಖ್ಯಪಾತ್ರದಲ್ಲಿ ರವಿಚಂದ್ರನ್‌
ಕಿರೀಟಿಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದು, 'ಕ್ರೇಜಿ ಸ್ಟಾರ್‌' ರವಿಚಂದ್ರನ್ ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 'ಸತ್ಯ ಇನ್ ಲವ್' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ಒಂದು ಕಾಲದ ಸ್ಟಾರ್ ನಟಿ ಜೆನಿಲಿಯಾ, ಇದೀಗ ಈ ಕಿರೀಟಿ ಸಿನಿಮಾದ ಮೂಲಕ ದಕ್ಷಿಣ ಭಾರತಕ್ಕೆ ಮರಳಿದ್ದಾರೆ. ಉಳಿದಂತೆ ಯಾರೆಲ್ಲ ಇದ್ದಾರೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

Janardhana Reddys Son Kireeti And Sreeleela Starrer New Movie Title Will Be Revealed On September 29th.