'ಘೋಸ್ಟ್‌'ನಲ್ಲಿ ಬಹುಭಾಷಾ ನಟರ ಮಿಂಚು: 48 ಗಂಟೆಗಳ ಸಿನಿಮಾಕ್ಕೆ 3 ಕೋಟಿ ರೂಪಾಯಿ ವೆಚ್ಚದ ಜೈಲು ಸೆಟ್

11-10-22 02:25 pm       Source: Vijayakarnataka   ಸಿನಿಮಾ

ಶ್ರೀನಿ ನಿರ್ದೇಶನ ಮಾಡುತ್ತಿರುವ ‘ಘೋಸ್ಟ್’ ಸಿನಿಮಾದಲ್ಲಿ ಬಹುಭಾಷಾ ಕಲಾವಿದರು ನಟಿಸಲಿದ್ದಾರೆ. ಈ ಬಗ್ಗೆ ಶ್ರೀನಿ ಮಾಹಿತಿ ನೀಡಿದ್ದಾರೆ.

ಶಿವರಾಜ್‌ಕುಮಾರ್‌ ನಾಯಕರಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಘೋಸ್ಟ್‌' ಸಿನಿಮಾದ ಮೂಲಕ ಮಲಯಾಳಂನ ಖ್ಯಾತ ನಟ ಜಯರಾಮ್‌ ಸೇರಿದಂತೆ ಹಲವು ಬೇರೆ ಬೇರೆ ಭಾಷೆಯ ಕಲಾವಿದರು ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ.

ನಟ, ನಿರ್ದೇಶಕ ಶ್ರೀನಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ 'ಘೋಸ್ಟ್‌' ಸಿನಿಮಾ ತನ್ನ ಫಸ್ಟ್‌ ಲುಕ್‌ನಿಂದಾಗಿ ಗಮನ ಸೆಳೆದಿತ್ತು. ಈಗ ಸಿನಿಮಾ ಕಲಾವಿದರ ವಿಚಾರಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಶೇಷ ಎಂದರೆ 'ಘೋಸ್ಟ್‌' 48 ಗಂಟೆಗಳಲ್ಲಿ ನಡೆಯುವ ಕಥೆಯಾಗಿದೆ.

Jayaram approached for Shivarajkumar-Srini's Ghost- Cinema express

ಪೊಲೀಸ್‌ ಅಧಿಕಾರಿ ಜಯರಾಮ್‌: ತೆಲುಗಿನ 'ಅಲಾ ವೈಕುಂಠಪುರಂಲೋ' ಸೇರಿದಂತೆ ಹಲವು ತೆಲುಗು, ತಮಿಳು ಮತ್ತು ಮಲಯಾಳಂನ ಸಿನಿಮಾಗಳ ಮೂಲಕ ಚಿರಪರಿಚಿತರಾಗಿರುವ ಜಯರಾಮ್‌ ಘೋಸ್ಟ್‌ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. 'ನಾನು ಮತ್ತು ಶಿವಣ್ಣ ಕಥೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾಗ, ಪೊಲೀಸ್‌ ಅಧಿಕಾರಿಯ ಪಾತ್ರಕ್ಕೆ ಯಾರು ಎಂದು ಯೋಚಿಸುತ್ತಿದ್ದೆ. ಆಗ ಶಿವಣ್ಣ ಅವರೇ ಜಯರಾಮ್‌ ಅವರ ಹೆಸರು ಹೇಳಿದರು. ಜತೆಗೆ ಅವರೇ ಜಯರಾಮ್‌ ಬಳಿ ಮಾತನಾಡಿ ಕಥೆ ಹೇಳಲು ಬರುತ್ತಾರೆ ಎಂದಿದ್ದರು. ಜಯರಾಮ್‌ ಅವರ ಬಳಿ ಹೋಗಿ ಕಥೆ ವಿವರಿಸಿದಾಗ ಬಹಳ ಖುಷಿಯಿಂದ ಈ ಪಾತ್ರವನ್ನು ಒಪ್ಪಿಕೊಂಡರು. ಜತೆಗೆ ಶಿವರಾಜ್‌ಕುಮಾರ್‌ ಅವರ ಜತೆ ಕೆಲಸ ಮಾಡಬೇಕು ಎಂದು ಬಹಳ ದಿನಗಳಿಂದ ಕಾಯುತ್ತಿದ್ದೆ, ಒಳ್ಳೆಯ ಪಾತ್ರದ ಮೂಲಕ ಅದು ಈಡೇರುತ್ತಿದೆ ಎಂದರು. ಇದಲ್ಲದೆ ತಮ್ಮ ತೆಲುಗು ಮತ್ತು ಮಲಯಾಳಂ ಚಿತ್ರಗಳ ಡೇಟ್ಸ್‌ ಮುಂದಕ್ಕೆ ಹಾಕಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ' ಎಂದಿದ್ದಾರೆ ಶ್ರೀನಿ.

Prashant Narayanan plays a baddie with a twist | Hindi Movie News - Times  of India

ಪ್ರಶಾಂತ್‌ ನಾರಾಯಣ್‌: 'ಹಿಂದಿಯ ರಂಗಬಾಜ್‌, ಮರ್ಡರ್‌-2, ಸೇರಿದಂತೆ ಹಲವು ಸಿನಿಮಾಗಳು ಮತ್ತು ವೆಬ್‌ ಸಿರೀಸ್‌ನಲ್ಲಿ ನಟಿಸಿರುವ ಪ್ರಶಾಂತ್‌ ನಾರಾಯಣನ್‌ ಕೂಡ ಈ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ. ಇವರದ್ದು, ಈ ಚಿತ್ರದಲ್ಲಿ ಮುಖ್ಯವಾದ ಪಾತ್ರ. ಇವರ ಜತೆಗೆ ಬಹಳ ವರ್ಷಗಳ ನಂತರ ಸತ್ಯಪ್ರಕಾಶ್‌ 'ಘೋಸ್ಟ್‌' ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಆಸೀಫ್‌ ಕ್ಷತ್ರಿಯ, ದೇವರಾಜ್‌, ದತ್ತಣ್ಣ, ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ' ಎಂದು ಮಾಹಿತಿ ನೀಡಿದರು ಶ್ರೀನಿ.

ನಾಯಕಿಯೇ ಇಲ್ಲ: ವಿಶೇಷ ಎಂದರೆ 'ಘೋಸ್ಟ್‌' ಸಿನಿಮಾದಲ್ಲಿ ನಾಯಕಿಯೇ ಇಲ್ಲ. ಆ ಪಾತ್ರದ ಅವಶ್ಯಕತೆ ಇಲ್ಲದ ಕಾರಣ ನಿರ್ದೇಶಕ ಶ್ರೀನಿ ನಾಯಕಿಯನ್ನು ಈ ಕಥೆಯಲ್ಲಿ ತಂದಿಲ್ಲ. ಚಿತ್ರೀಕರಣ ಮಿನರ್ವ ಮಿಲ್‌ನಲ್ಲಿ ಆರಂಭವಾಗಲಿದೆ. ಅದಕ್ಕಾಗಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ದೊಡ್ಡದಾದ ಜೈಲ್‌ ಸೆಟ್‌ ಒಂದನ್ನು ಹಾಕಿಸಲಾಗಿದೆ. ಈ ಸಿನಿಮಾಗೆ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದು, ಮಹೇನ್‌ ಸಿಂಹ ಸಿನಿಮಾಟೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮಾಸ್ತಿ ಮತ್ತು ಪ್ರಸನ್ನ ಸಂಭಾಷಣೆಯನ್ನು ಬರೆಯುತ್ತಿದ್ದಾರೆ.

MG Srinivas to direct Century Star Shivarajkumar in a film called Ghost

'ಘೋಸ್ಟ್' ಆಕ್ಷನ್ ಥ್ರಿಲ್ಲರ್ ಮಾದರಿಯ ಸಿನಿಮಾ. ಶಿವಣ್ಣ ಅವರ ಲುಕ್ ಮತ್ತು ಸಿನಿಮಾದ ಕಥೆ, ನಿರೂಪಣೆಯೇ ಇದರ ವಿಶೇಷತೆಯಾಗಿದೆ. ಹೊಸ ರೀತಿಯ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಶ್ರೀನಿ ಹೇಳಿದ್ದಾರೆ.

Multi Star Cast In Shiva Rajkumar Starrer Kannada Movie Ghost.