'ಕಾಂತಾರ' ಎಫೆಕ್ಟ್; ಸೆಟ್ಟೇರುತ್ತಿರುವ ದೈವ ಮತ್ತು ಸ್ಥಳೀಯ ಸಂಸ್ಕೃತಿ ಬಿಂಬಿಸುವ ಕಥೆ ಆಧಾರಿತ ಚಿತ್ರಗಳು

22-11-22 01:35 pm       Source: Vijayakarnataka   ಸಿನಿಮಾ

ಒಂದು ಸಿನಿಮಾ ಯಶಸ್ಸಾದರೆ ಅದೇ ಜಾಡಿನಲ್ಲಿಹಲವು ಸಿನಿಮಾಗಳು ಸೆಟ್ಟೇರುತ್ತವೆ. ಈಗ ‘ಕಾಂತಾರ’ ಸಿನಿಮಾದ ಯಶಸ್ಸಿನಿಂದಾಗಿ ರಾಜ್ಯದ ಕರಾವಳಿ ಭಾಗ ಸೇರಿದಂತೆ ಇತರ ಕಡೆಗಳಲ್ಲಿರುವ ಸ್ಥಳೀಯ ದೈವ ಮತ್ತು ಆರಾಧನೆಗಳ ಕಥೆಯ ಸಿನಿಮಾ ಸೆಟ್ಟೇರುತ್ತಿದೆ.

ಕನ್ನಡ ಮಾತ್ರವಲ್ಲದೆ, ಇಡೀ ಭಾರತೀಯ ಚಿತ್ರರಂಗದಲ್ಲಿ‘ಕಾಂತಾರ’ ಸಿನಿಮಾ ಮಾಡಿರುವ ಮೋಡಿ ಬಹಳ ದೊಡ್ಡದು. ದಕ್ಷಿಣ ಕನ್ನಡದ ಕರಾವಳಿ ಭಾಗದ ದೈವದ ಕಥೆಯಿದ್ದ ಈ ಸಿನಿಮಾವನ್ನು ದೇಶದೆಲ್ಲೆಡೆಯ ಜನರು ಮೆಚ್ಚಿಕೊಂಡರು. ಈಗ ಇಂತಹ ದೈವ ಮತ್ತು ಸ್ಥಳೀಯ ಸಂಸ್ಕೃತಿ ಬಿಂಬಿಸುವ ಕಥೆಗಳಿರುವ ಸಿನಿಮಾಗಳು ಸೆಟ್ಟೆರುತ್ತಿದ್ದು, ಇದು ಅಕ್ಷರಶಃ ‘ಕಾಂತಾರ’ ಸಿನಿಮಾದ ಎಫೆಕ್ಟ್ ಎನ್ನಲಾಗಿದೆ. ಈ ಸಿನಿಮಾದಿಂದ ಸ್ಫೂರ್ತಿ ಪಡೆದು ಬರಲಿರುವ ಕೆಲವು ಸಿನಿಮಾಗಳ ವಿವರ ಇಲ್ಲಿದೆ.

ಕೊರಗಜ್ಜನ ಕಥೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿಕೊರಗಜ್ಜನ ಕಾರ್ಣಿಕದ ಬಗ್ಗೆ ಜನರಿಗೆ ಅಪಾರ ನಂಬಿಕೆ ಇದೆ. ಈಗ ಕೊರಗಜ್ಜನ ಮಹಿಮೆಯನ್ನು ತೆರೆಯ ಮೇಲೆ ತೋರಿಸಲು ಸಿನಿಮಾವೊಂದು ಸೆಟ್ಟೇರಿದ್ದು, ಅದಕ್ಕೆ ‘ಕರಿ ಹೈದ...ಕರಿ ಅಜ್ಜ..’ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ಸುಧೀರ್‌ ಅತ್ತಾವರ್‌ ನಿರ್ದೇಶನ ಮಾಡುತ್ತಿದ್ದು, ಅವರು ಕೊರಗಜ್ಜನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಆ ಜನಾಂಗದ ಮಹನೀಯರೊಂದಿಗೆ ಚರ್ಚಿಸಿ, ಕೊರಗಜ್ಜನ ನಿಜ ಬದುಕಿನ ಬಗ್ಗೆ ಯಾರಿಗೂ ತಿಳಿದಿರದಂತಹ ಹಲವು ವಿಷಯಗಳನ್ನು ಈ ಸಿನಿಮಾದ ಮೂಲಕ ಜಗತ್ತಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಕಬೀರ್‌ ಬೇಡಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಹಿರಿಯ ನಟಿಯರಾದ ಭವ್ಯಾ ಮತ್ತು ಶ್ರುತಿ ಕೂಡ ಅಭಿನಯಿಸುತ್ತಿದ್ದಾರೆ. ಭರತ್‌ ಸೂರ್ಯ ಎಂಬ ಹೊಸ ಕಲಾವಿದನನ್ನು ಈ ಚಿತ್ರದ ಮೂಲಕ ಪರಿಚಯಿಸಲಾಗುತ್ತಿದ್ದು, ಈ ಸಿನಿಮಾದಲ್ಲಿಯೂ ಪಂಜುರ್ಲಿ ಪಾತ್ರ ಬರಲಿದೆ. ಹಿರಿಯ ನಟಿ ಶ್ರುತಿ ಇನ್‌ಸ್ಟಾಗ್ರಾಮ್‌ನಲ್ಲಿಶೇರ್‌ ಮಾಡಿಕೊಂಡಿರುವ ವಿಡಿಯೊದಲ್ಲಿ ಪಂಜುರ್ಲಿಯ ಎದುರು ಶ್ರುತಿ ನಿಂತಿರುವ ದೃಶ್ಯವಿದೆ.

After Kantara, a Film on Karaga Festival? Rishab Shetty Answers

ಕಾಂತಾರ ಸಿಕ್ವೇಲ್‌
ರಿಷಭ್‌ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾದ ಯಶಸ್ಸಿನ ನಂತರ ಅದರ ಮುಂದುವರೆದ ಭಾಗ ಅಥವಾ ಪ್ರಿಕ್ವೆಲ್‌ ಮಾಡುವ ಐಡಿಯಾ ಚಿತ್ರತಂಡಕ್ಕೆ ಬಂದಿದೆ ಎಂಬ ಮಾತು ಕೇಳಿ ಬಂದಿದೆ. ಇದರಲ್ಲಿ ಪಂಜುರ್ಲಿ, ಗುಳಿಗನ ಕಥೆ ಮತ್ತೆ ಮುಂದುವರೆಯಲಿದ್ದು, ಈ ದೈವಗಳನ್ನು ನೋಡಲು ಜನರು ಮತ್ತೆ ಚಿತ್ರಮಂದಿರಕ್ಕೆ ಹೋಗುತ್ತಾರೆ. ಇದು ವ್ಯಾಪಾರದ ದೃಷ್ಟಿಯಲ್ಲಿ ಉತ್ತಮ ಉಪಾಯ ಮತ್ತು ಇದರಿಂದ ಬಿಸ್ನೆಸ್‌ ಮತ್ತಷ್ಟು ವಿಸ್ತಾರವಾಗುತ್ತದೆ ಎನ್ನಲಾಗುತ್ತಿದೆ.

ಸ್ಥಳೀಯ ಸಂಸ್ಕೃತಿಗೆ ಆದ್ಯತೆ
ಕಾಂತಾರ ಸಿನಿಮಾದಿಂದಾಗಿ ರಾಜ್ಯದ ಬೇರೆ ಬೇರೆ ಪ್ರದೇಶಗಳ ಸ್ಥಳೀಯ ದೇವರ ಬಗೆಗಿನ ಸಿನಿಮಾಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ‘ಒರಟ’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀ ಈಗ ‘ಕೋರ’ ಎಂಬ ಸಿನಿಮಾ ಮಾಡಿದ್ದು, ಅದು ಸ್ಥಳೀಯ ದೇವರ ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾ ‘ಕಾಂತಾರ’ಗಿಂತಲೂ ಮುನ್ನ ಮಾಡಿದ್ದಾದರೂ ಈಗ ಬಿಡುಗಡೆಯಾಗುತ್ತಿರುವುದರಿಂದ ಕಾಂತಾರಗೆ ಕನೆಕ್ಟ್ ಮಾಡಲಾಗುತ್ತಿದೆ. ಒಟ್ಟಿನಲ್ಲಿಸ್ಥಳೀಯ ದೇವರ ಸಿನಿಮಾಗಳ ಜತೆಗೆ, ನಮ್ಮ ಸಂಸ್ಕೃತಿಯ ಸಿನಿಮಾಗಳನ್ನೂ ಮಾಡಬೇಕು ಎಂಬ ಒಲವು ಚಿತ್ರರಂಗದವರಲ್ಲಿಹೆಚ್ಚಾಗಿದೆ. ಕಾಲಿವುಡ್‌, ಟಾಲಿವುಡ್‌ ಸಿನಿಮಾಗಳನ್ನು ರಿಮೇಕ್‌ ಮಾಡಬೇಕು ಎಂದು ಓಡಾಡುತ್ತಿದ್ದ ನಿರ್ಮಾಪಕರೇ ಈಗ ನಮ್ಮ ನಮ್ಮದೇ ನೆಲದ ಸಂಸ್ಕೃತಿ ಸಾರುವ ಸಿನಿಮಾಗಳನ್ನು ಮಾಡೋಣ ಎನ್ನುತ್ತಿದ್ದಾರೆ.

ಕುತೂಹಲ ಮೂಡಿಸಿದ ಪಿಂಗಾರ
ರಾಷ್ಟ್ರಪ್ರಶಸ್ತಿ ವಿಜೇತ ‘ಪಿಂಗಾರ’ ಸಿನಿಮಾದಲ್ಲಿಯೂ ದಕ್ಷಿಣ ಕನ್ನಡದ ಕರಾವಳಿ ಭಾಗದ ದೈವದ ಕಥೆಯಿದೆ. ಈ ಸಿನಿಮಾ ‘ಕಾಂತಾರ’ಗಿಂತಲೂ ಮೊದಲೇ ನಿರ್ಮಾಣವಾಗಿದೆ. ನಿರ್ದೇಶಕ ಪ್ರೀತಂ ಶೆಟ್ಟಿ ಇದರ ಕಥೆಯನ್ನು ಕಲಾತ್ಮಕವಾಗಿ ತೋರಿಸಿದ್ದು, ಈ ಸಿನಿಮಾ ಬಿಡುಗಡೆಯನ್ನು ಜನರು ಕುತೂಹಲದಿಂದ ಕಾಯುವಂತಾಗಿದೆ.

"ಕಾಂತಾರ ನಂತರ ಅದೇ ಮಾದರಿಯ ಸಿನಿಮಾಗಳನ್ನು ಮಾಡಲು ಹಲವರು ಉತ್ಸಾಹ ತೋರುತ್ತಿದ್ದಾರೆ. ಸ್ಥಳೀಯ ದೇವರ ಮಹಿಮೆಗಳನ್ನು ಹೇಳುವ ಕಥೆಗಳು ಮತ್ತು ನೆಲಮೂಲದ ಸಂಸ್ಕೃತಿಗಳ ಸಿನಿಮಾ ಮಾಡಲು ಆಸಕ್ತಿ ವಹಿಸುತ್ತಿದ್ದಾರೆ. ಕೆಲವರು ಟೈಟಲ್‌ಗಳನ್ನು ಸಹ ನೋಂದಣಿ ಮಾಡಿಸುತ್ತಿದ್ದಾರೆ" ಎಂದಿದ್ದಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್‌

After Kantara Movie Daiva Related Stories Number Increase.