ಸಾಮಾಜಿಕ ಸೇವಾ ಮುಂದುವರಿಸಿದ ಕಿಚ್ಚ ಸುದೀಪ್: ಮತ್ತೆ ನಾಲ್ಕು ಶಾಲೆ ದತ್ತು

10-08-20 05:07 pm       Headline Karnataka News Network   ಸಿನಿಮಾ

ನಟ ಕಿಚ್ಚ ಸುದೀಪ್‌ ತಮ್ಮ ಸಾಮಾಜಿಕ ಸೇವಾ ಕೈಂಕರ್ಯ ಮುಂದುವರಿಸಿದ್ದು, ಕಿಚ್ಚ ಸುದೀಪ್‌ ಚಾರಿಟಬಲ್ ಟ್ರಸ್ಟ್‌ನಿಂದ ಮತ್ತೆ ನಾಲ್ಕು ಶಾಲೆಗಳನ್ನು ಅಭಿವೃದ್ಧಿಪಡಿಸಲು ದತ್ತು ಸ್ವೀಕರಿಸಿದ್ದಾರೆ.

ನಟ ಕಿಚ್ಚ ಸುದೀಪ್‌ ತಮ್ಮ ಸಾಮಾಜಿಕ ಸೇವಾ ಕೈಂಕರ್ಯ ಮುಂದುವರಿಸಿದ್ದು, ಕಿಚ್ಚ ಸುದೀಪ್‌ ಚಾರಿಟಬಲ್ ಟ್ರಸ್ಟ್‌ನಿಂದ ಮತ್ತೆ ನಾಲ್ಕು ಶಾಲೆಗಳನ್ನು ಅಭಿವೃದ್ಧಿಪಡಿಸಲು ದತ್ತು ಸ್ವೀಕರಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕೆಂದ ಸುದೀಪ್‌ ಒತ್ತಾಸೆಯಂತೆ, ಈ ಶಾಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇದರ ಭಾಗವಾಗಿ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದೆ. ಈ ಶಾಲೆಗಳಲ್ಲಿ ಶಿಕ್ಷಕರ ವೇತನ ಮತ್ತು ವಿದ್ಯಾರ್ಥಿಗಳ ವೇತನ ಹೊರತುಪಡಿಸಿ, ಶಾಲೆಯ ಅಭಿವೃದ್ಧಿ ಚಟುವಟಿಕೆಗಳ ಜವಾಬ್ದಾರಿಯನ್ನು ಈ ಟ್ರಸ್ಟ್ ನಿರ್ವಹಿಸಲಿದೆ.

ಆವಿಗೆಹಳ್ಳಿ ಸಾಗರದಿಂದ 49 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿನ ಶಾಲೆ ಇರುವುದು ದಟ್ಟ ಕಾನನದ ನಡುವೆ. ಕಾಡಿನಲ್ಲಿ ವಾಸವಿರುವ ಗುಡ್ಡಗಾಡಿನ ಕುಣಬಿ ಜನಾಂಗದವರ ಮಕ್ಕಳಿಗಾಗಿ ಸರ್ಕಾರ ಶಾಲೆಯನ್ನು ಕಟ್ಟಿಸಿದೆ. ಶಾಲೆಗೆ ಮುಖ್ಯೋಪಾಧ್ಯಾಯರನ್ನೂ ನೇಮಿಸಿದೆ. ಆದರೆ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರೇ ಇಲ್ಲ. ಇಡೀ ಊರಿನಲ್ಲಿ ಹುಡುಕಿದರೂ ಸಿಗುವುದು ಮೂರೇ ಮೂರುಮಂದಿ ವಿದ್ಯಾವಂತರು. ಒಬ್ಬರು ಪದವಿ, ಇನ್ನಿಬ್ಬರು ಪಿಯುಸಿಯವರೆಗೆ ಓದಿದ್ದಾರೆ. ಈ ಮೂವರಲ್ಲಿ ಭಾಸ್ಕರ ಎಂಬಾತನೇ ಮಕ್ಕಳ ಪಾಲಿಗೆ ಕಾಯಂ ಟೀಚರ್. ಈ ಶಾಲೆಯ ಮಕ್ಕಳು ಪ್ರತಿ ನಿತ್ಯ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ನಡೆದು ಬರಬೇಕು. ಈ ವಿಷಯ ಗೊತ್ತಾಗಿದ್ದೇ ತಡ ಸುದೀಪ್‌ ತಮ್ಮ ಚಾರಿಟೆಬಲ್‌ ಟ್ರಸ್ಟ್‌ ಸದಸ್ಯರ ತಂಡವನ್ನು ಆವಿಗೆಹಳ್ಳಿಗೆ ಕಳುಹಿಸಿ, ಶಾಲೆಗೆ ಬೇಕಾದ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕೆಲಸ ಕೈಗೆತ್ತಿಕೊಂಡಿದ್ದಾರೆ. ಶಾಲೆಯ ಅಭಿವೃದ್ಧಿ ಜೊತೆಗೆ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ವ್ಯವಸ್ಥೆ ಮಾಡುವ ಆಲೋಚನೆಯಲ್ಲೂ ಇದ್ದಾರೆ ಎನ್ನುತ್ತಾರೆ ಟ್ರಸ್ಟ್‌ ಸದಸ್ಯರು.

ಕೊರೊನಾ ಲಾಕ್‌ಡೌನ್‌ ವೇಳೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ಹಿರಿಯೂರು ಮತ್ತು ಚಳ್ಳಕೆರೆ ಬಿಇಒಗಳ ಸಮ್ಮುಖದಲ್ಲಿ ಕಿಚ್ಚ ಸುದೀಪ್‌ ಚಾರಿಟಬಲ್ ಟ್ರಸ್ಟ್ ಇತ್ತೀಚೆಗಷ್ಟೇ ದತ್ತು ತೆಗೆದುಕೊಂಡಿತ್ತು.

ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್ ಅವರು ಸರ್ಕಾರದ ಜೊತೆ ಕೈ ಜೋಡಿಸಿ ಶಿವಮೊಗ್ಗ ಜಿಲ್ಲೆಯ 4 ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ಅವರ ಕಾರ್ಯ ಅತ್ಯಂತ ಸಂತಸದ ವಿಷಯ. ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಟ್ವೀಟ್‌ ಮಾಡಿ, ಅಭಿನಂದಿಸಿದ್ದಾರೆ.