ಆಘಾತ ತಂದ ನಿರ್ಣಯ: ವಿಜಯ್ ವಿರುದ್ಧ ಚಿತ್ರಮಂದಿರ ಮಾಲೀಕರು ತೀವ್ರ ಅಸಮಾಧಾನ

28-01-21 12:48 pm       Source: FILMIBEAT Manjunatha C   ಸಿನಿಮಾ

ತಮಿಳಿನ ಖ್ಯಾತ ನಟ ವಿಜಯ್ ವಿರುದ್ಧ ಚಿತ್ರಮಂದಿರಗಳ ಮಾಲೀಕರು, ಸಿನಿಮಾ ವಿತರಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ತಮಿಳಿನ ಖ್ಯಾತ ನಟ ವಿಜಯ್ ವಿರುದ್ಧ ಚಿತ್ರಮಂದಿರಗಳ ಮಾಲೀಕರು, ಸಿನಿಮಾ ವಿತರಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯ್ ನಟನೆಯ 'ಮಾಸ್ಟರ್' ಸಿನಿಮಾವನ್ನು ಜನವರಿ 29 ರಂದು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಮಾಡುವ ನಿರ್ಧಾರ ಇಂದು ಪ್ರಕಟಿಸಿದ್ದು, ಇದೇ ಕಾರಣಕ್ಕೆ ಚಿತ್ರಮಂದಿರ ಮಾಲೀಕರು ವಿಜಯ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೊನಾ ನಡುವೆಯೂ 'ಮಾಸ್ಟರ್' ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಮಾಡಲಾಗಿತ್ತು. ವಿಜಯ್ ರ ಈ ನಿರ್ಣಯಕ್ಕೆ ಚಿತ್ರಮಂದಿರ ಮಾಲೀಕರು ಸಂತಸ ವ್ಯಕ್ತಪಡಿಸಿದ್ದರು. ಆದರೆ ಸಿನಿಮಾ ಬಿಡುಗಡೆ ಆಗಿ ಎರಡು ವಾರದಲ್ಲಿಯೇ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿರುವುದು ಚಿತ್ರಮಂದಿರ ಮಾಲೀಕರಿಗೆ ತೀವ್ರ ಬೇಸರ ತಂದಿದೆ.



'ಮಾಸ್ಟರ್' ಚಿತ್ರತಂಡದ ನಿರ್ಧಾರದ ಬಗ್ಗೆ ಬೇಸರ

'ಮಾಸ್ಟರ್' ಚಿತ್ರತಂಡದ ನಿರ್ಣಯದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ತಮಿಳುನಾಡು ಚಿತ್ರಮಂದಿರಗಳ ಮಾಲೀಕರ ಸಂಘದ ಅಧ್ಯಕ್ಷ ತಿರುಪೂರು ಸುಬ್ರಹ್ಮಣಿಯನ್, 'ನಾವು ಚಿತ್ರತಂಡವನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ' ಅವರೊಟ್ಟಿಗೆ ಮಾತನಾಡುತ್ತೇವೆ ಎಂದಿದ್ದಾರೆ.

ಚಿತ್ರಮಂದಿರಗಳಿಗೆ ಲಾಭ ಬರುವ ಮುಂಚೆಯೇ ಸಿನಿಮಾ ಮಾರಾಟ

ಸಾಮಾನ್ಯವಾಗಿ ಚಿತ್ರಮಂದಿರಗಳು ಲಾಭ ಮಾಡುವುದು ಮೂರನೇ ಅಥವಾ ನಾಲ್ಕನೇ ವಾರದ ಕಲೆಕ್ಷನ್‌ನಲ್ಲಿ. ಮೊದಲ ಎರಡು ವಾರದ ಕಲೆಕ್ಷನ್ ಚಿತ್ರ ನಿರ್ಮಾಪಕರಿಗೆ ಹೋಗುತ್ತದೆ. ಹೀಗಿದ್ದಾಗ ಎರಡೇ ವಾರಕ್ಕೆ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಿದರೆ ನಾವು ಲಾಭ ಕಾಣುವುದು ಹೇಗೆ ಎಂದು ಚೆನ್ನೈನ ಜನಪ್ರಿಯ ವೆಟ್ರಿ ಚಿತ್ರಮಂದಿರ ಮಾಲೀಕ ರಾಕೇಶ್ ಹೇಳಿದ್ದಾರೆ.



ಬಿಡುಗಡೆ ಆದ 16 ದಿನಕ್ಕೆ ಸಿನಿಮಾ ಮಾರಾಟ

ಸಿನಿಮಾ ಬಿಡುಗಡೆ ಮಾಡಿದ 16 ದಿನಕ್ಕೆ ಅದನ್ನು ಒಟಿಟಿಗೆ ನೀಡುತ್ತೇವೆ ಎಂದು ಚಿತ್ರತಂಡ ನಮಗೆ ಮೊದಲೇ ಹೇಳಿದ್ದರೆ, ನಾವು ಚಿತ್ರ ನಿರ್ಮಾಪಕರೊಂದಿಗೆ ಅಥವಾ ವಿತರಕರೊಂದಿಗೆ ಬೇರೆ ರೀತಿಯ ಲಾಭ ಹಂಚಿಕೆ ಒಪ್ಪಂದ ಮಾಡಿಕೊಂಡಿರುತ್ತಿದ್ದೆವು, ಈ ಹಠಾತ್ ನಿರ್ಣಯ ಚಿತ್ರಮಂದಿರಗಳ ಮಾಲೀಕರಿಗೆ ಮಾಡಿದ ಮೋಸವಾಗಿದೆ ಎಂದಿದ್ದಾರೆ ರಾಕೇಶ್.



ಜನವರಿ 13 ಕ್ಕೆ ಬಿಡುಗಡೆ ಆಗಿದ್ದ ಸಿನಿಮಾ

ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಇದೇ ಜನವರಿ 13 ರಂದು ಬಿಡುಗಡೆ ಆಗಿತ್ತು. ಇದೇ 29 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಕೆಲವೇ ದಿನಗಳಲ್ಲಿ ಈ ಸಿನಿಮಾವು 200 ಕೋಟಿ ಹಣ ಗಳಿಸಿ ಇನ್ನೂ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿತ್ತು. ಈ ನಡುವೆಯೇ ಸಿನಿಮಾವನ್ನು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

This News Article is a Copy of FILMIBEAT