ರೈತ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್

05-02-21 01:33 pm       Source: FILMIBEAT Bharath Kumar K   ಸಿನಿಮಾ

ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಗುರುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ತಮ್ಮ ಅನಿಸಿಕೆಯನ್ನು ಹೊರಹಾಕಿದ್ದಾರೆ.

ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ರೈತ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಂತೆ ಬಾಲಿವುಡ್ ಸ್ಟಾರ್ಸ್ ಸಕ್ರಿಯರಾಗಿದ್ದಾರೆ. ಅಕ್ಷಯ್ ಕುಮಾರ್, ಅಜಯ್ ದೇವಗನ್, ಕರಣ್ ಜೋಹರ್ ಸೇರಿದಂತೆ ಹಲವರು ಟ್ವೀಟ್ ಮಾಡಿ ವಿದೇಶಿ ಸೆಲೆಬ್ರಿಟಿಗಳ ಬೆಂಬಲ ಖಂಡಿಸಿದ್ದಾರೆ. ಹಲವು ತಿಂಗಳಿಂದ ರೈತ ಪ್ರತಿಭಟನೆ ನಡೆಯುತ್ತಿದ್ದರೂ ಇಷ್ಟು ದಿನ ಯಾವೊಬ್ಬ ಸೆಲೆಬ್ರಿಟಿ ಸಹ ಮಾತನಾಡಿರಲಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಈ ಕುರಿತು ಬಿಟೌನ್ ಖಾನ್‌ಗಳು ತಮ್ಮ ನಿಲುವು ವ್ಯಕ್ತಪಡಿಸಿರಲಿಲ್ಲ.

ಸರಿಯಾದ ಕೆಲಸ ಮಾಡಬೇಕು

ರೈತರ ಪ್ರತಿಭಟನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್ ಖಾನ್, "ಸರಿಯಾದ ಕೆಲಸ ಮಾಡಬೇಕು. ಅತಿ ಸೂಕ್ತವೆನಿಸುವ ಕೆಲಸ ಮಾಡಬೇಕು ಹಾಗೂ ಸಮರ್ಥ ಕಾರ್ಯವನ್ನ ಕೈಗೊಳ್ಳಬೇಕು" ಎಂದಿದ್ದಾರೆ. ಇದಕ್ಕೂ ಮುಂಚೆ ಯಾವುದೇ ಸಾರ್ವಜನಿಕ ವಲಯದಲ್ಲಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ರೈತರ ಪ್ರತಿಭಟನೆ ಕುರಿತು ಸಲ್ಮಾನ್ ಖಾನ್ ಮಾತನಾಡಿರಲಿಲ್ಲ.



ಖಾನ್‌ಗಳು ಮಾತನಾಡಿಲ್ಲ

ರೈತ ಪ್ರತಿಭಟನೆ ಕುರಿತು ಸಲ್ಮಾನ್ ಖಾನ್ ಕೊನೆಗೂ ಹೇಳಿಕೆ ನೀಡಿದ್ದಾರೆ. ಆದರೆ, ಶಾರೂಖ್ ಖಾನ್ ಮತ್ತು ಅಮೀರ್ ಖಾನ್ ನಿಲುವೇನು ಎನ್ನುವುದು ತಿಳಿದಿಲ್ಲ. ಈ ಇಬ್ಬರ ನಟರ ಅಭಿಪ್ರಾಯಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ.



ವಿದೇಶಿ ಸೆಲೆಬ್ರಿಟಿಗಳು ಬೆಂಬಲ

ಬಾಲಿವುಡ್ ಸ್ಟಾರ್‌ಗಳು ಮಾತನಾಡುವುದಕ್ಕೂ ಮೊದಲೇ ವಿದೇಶಿ ಸೆಲೆಬ್ರಿಟಿಗಳು ಭಾರತೀಯ ರೈತರ ಪ್ರತಿಭಟನೆ ಪರ ಬೆಂಬಲ ಸೂಚಿಸಿದ್ದರು. ಅಮೆರಿಕನ್ ಪಾಪ್ ಗಾಯಕಿ ರಿಹಾನ್ನ, ಮಾಜಿ ನೀಲಿತಾರೆ ಮಿಯಾ ಖಲೀಫಾ, ಗ್ರೆಟಾ ಥೆನ್‌ಬರ್ಗ್ ಹಲವು ಅಂತರಾಷ್ಟ್ರೀಯ ಸೆಲೆಬ್ರಿಟಿಗಳು ದೆಹಲಿ ರೈತ ಹೋರಾಟ ಬೆಂಬಲಿಸಿದ್ದರು. ಇದು ಭಾರತೀಯ ಸೆಲೆಬ್ರಿಟಿಗಳು ಕೆರಳುವಂತೆ ಮಾಡಿದೆ. ''ನಮ್ಮ ದೇಶದ ಆಂತರಿಕ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ, ಅಪ್ರಚಾರ ಬೇಡ'' ಎಂದು ನಟ, ನಟಿಯರು ಹಾಗೂ ಕ್ರಿಕೆಟಿಗರು ಆಕ್ರೋಶ ಹೊರಹಾಕಿದ್ದರು.



ಹಿಂದಿ ಕಲಾವಿದರಿಗೆ ತಿರುಗೇಟು ನೀಡಿದ ತಾಪ್ಸಿ ಪನ್ನು

ವಿದೇಶಿ ಸೆಲೆಬ್ರಿಟಿಗಳ ವಿರುದ್ಧ ತಿರುಗಿಬಿದ್ದ ಬಾಲಿವುಡ್‌ ಸೆಲೆಬ್ರಿಟಿಗಳಿಗೆ ತಾಪ್ಸಿ ಪನ್ನು ಪ್ರತಿಕ್ರಿಯಿಸಿದ್ದರು. ''ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಒಡೆಯುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲುಗಾಡಿಸುವುದಾದರೆ, ಒಂದು ಘಟನೆ ನಿಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವುದಾದರೆ, ನೀವು ನಿಮ್ಮ ನಂಬಿಕೆಗಳನ್ನು ಗಟ್ಟಿಮಾಡಿಕೊಳ್ಳಬೇಕಿದೆಯೇ ಹೊರತು ಬೇರೆಯವರಿಗೆ ಆದರ್ಶದ ಪಾಠ ಮಾಡುವ ಶಿಕ್ಷಕರಾಗಬಾರದು'' ಎಂದು ತಿರುಗೇಟು ನೀಡಿದ್ದರು.

This News Article is a Copy of FILMIBEAT