ಟ್ವೀಟ್ ಪ್ರಕರಣ: ಲತಾ ಮಂಗೇಶ್ಕರ್, ಸಚಿನ್ ತೆಂಡೂಲ್ಕರ್ ವಿಚಾರಣೆ ಇಲ್ಲ

16-02-21 09:53 am       Source: FILMIBEAT Manjunatha C   ಸಿನಿಮಾ

'ಸೆಲೆಬ್ರಿಟಿಗಳ ಟ್ವೀಟ್ ಬಗೆಗಿನ ನನ್ನ ಹೇಳಿಕೆಯನ್ನು ತಿರುಚಿ ಪ್ರಕಟಿಸಲಾಗಿದೆ. ಲತಾ ಮಂಗೇಶ್ಕರ್ ಅವರು ನಮಗೆ ದೇವರ ಸಮಾನ, ಸಚಿನ್ ಅವರನ್ನು ದೇಶವೇ ಗೌರವಿಸುತ್ತದೆ, ಅವರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ' ಎಂದಿದ್ದಾರೆ.

ರಿಹಾನಾ ಟ್ವೀಟ್‌ನ ನಂತರ ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್ ಸೇರಿದಂತೆ ಹಲವು ನಟ-ನಟಿಯರು ಮಾಡಿದ ಸರಣಿ ಟ್ವೀಟ್‌ಗಳ ಬಗ್ಗೆ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶ ಮಾಡಿದೆ, ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲತಾ ಮಂಗೇಶ್ಕರ್ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ವಿಚಾರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್ ದೇಶ್‌ಮುಖ್, 'ಸೆಲೆಬ್ರಿಟಿಗಳ ಟ್ವೀಟ್ ಬಗೆಗಿನ ನನ್ನ ಹೇಳಿಕೆಯನ್ನು ತಿರುಚಿ ಪ್ರಕಟಿಸಲಾಗಿದೆ. ಲತಾ ಮಂಗೇಶ್ಕರ್ ಅವರು ನಮಗೆ ದೇವರ ಸಮಾನ, ಸಚಿನ್ ಅವರನ್ನು ದೇಶವೇ ಗೌರವಿಸುತ್ತದೆ, ಅವರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ' ಎಂದಿದ್ದಾರೆ.

'ನನ್ನ ಹೇಳಿಕೆಯನ್ನು ತಪ್ಪಾಗಿ ಪ್ರೆಸೆಂಟ್ ಮಾಡಲಾಗಿದ್ದು, ಸೆಲೆಬ್ರಿಟಿಗಳ ವಿಚಾರಣೆ ನಡೆಯಲಿದೆ ಎಂದು ನಾನು ಹೇಳಿಲ್ಲ, ಪ್ರಕರಣದ ಬಗ್ಗೆ ಬಿಜೆಪಿ ಐಟಿ ಸೆಲ್ ನ ತನಿಖೆ ಆಗಲಿದೆ' ಎಂದಿದ್ದಾರೆ ಅನಿಲ್ ದೇಶ್‌ಮುಖ್.

'ಪ್ರಕರಣದಲ್ಲಿ ಬಿಜೆಪಿ ಐಟಿ ಸೆಲ್‌ನ ಪಾತ್ರ ಇದೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ. ಟ್ವೀಟ್ ಮಾಡಿದ ಸೆಲೆಬ್ರಿಟಿಗಳಿಗೆ ಬಿಜೆಪಿ ಐಟಿ ಸೆಲ್‌ನಿಂದ ಒತ್ತಡ ಹಾಕಲಾಗಿತ್ತೆ, ಟ್ವೀಟ್‌ನ 'ಸ್ಕ್ರಿಪ್ಟ್' ಅನ್ನು ನೀಡಲಾಗಿತ್ತೆ ಎಂಬುದನ್ನು ತನಿಖೆ ಮಾಡಲಾಗುತ್ತದೆ' ಎಂದಿದ್ದಾರೆ ಅನಿಲ್. ಈ ವರೆಗಿನ ತನಿಖೆಯ ಪ್ರಕಾರ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಹಾಗೂ ಇನ್ನೂ 12 ಮಂದಿಯ ಹೆಸರು ಕೇಳಿ ಬಂದಿದೆ, ತನಿಖೆ ಜಾರಿಯಲ್ಲಿದೆ ಎಂದು ಗೃಹ ಸಚಿವ ಅನಿಲ್ ಮಾಹಿತಿ ನೀಡಿದ್ದಾರೆ.

ರೈತ ಪ್ರತಿಭಟನೆ ಬಗ್ಗೆ ಅಂತರಾಷ್ಟ್ರೀಯ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮಾಡಿದ ಬಳಿಕ, ಭಾರತದ ಸಿನಿಮಾ ಹಾಗೂ ಕ್ರೀಡಾ ಸೆಲೆಬ್ರಿಟಿಗಳು ರಿಹಾನಾ ಟ್ವೀಟ್ ವಿರುದ್ಧವಾಗಿ ಸರಣಿ ಟ್ವೀಟ್ ಮಾಡಿದರು. ಅಕ್ಷಯ್ ಕುಮಾರ್,ಅಜಯ್ ದೇವಗನ್, ಸುನಿಲ್ ಶೆಟ್ಟಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ಇನ್ನೂ ಹಲವಾರು ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದರು.

This News Article is a Copy of FILMIBEAT