ಮನೆಮದ್ದು: ಮಕ್ಕಳಿಗೆ ಕಾಡುವ ಕೆಮ್ಮಿನ ಸಮಸ್ಯೆಗೆ, ಓಮ ಕಾಳಿನ ಚಿಕಿತ್ಸೆ

10-02-22 10:41 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಸಣ್ಣ ಮಕ್ಕಳಿಗೆ ಆಗಾಗ ಕಾಡುವ ಶೀತ ಮತ್ತು ಕೆಮ್ಮಿನ ಸಮಸ್ಯೆಗೆ ಓಮ ಕಾಳು ಬೆಸ್ಟ್ ಮನೆಮದ್ದು

ಸಾಮಾನ್ಯವಾಗಿ ಹವಾಮಾನ ಬದಲಾವಣೆಯಿಂದಾಗಿ ಸಣ್ಣ ಮಕ್ಕಳಲ್ಲಿ ಶೀತ, ಕೆಮ್ಮು ಹಾಗೂ ಜ್ವರ ಕಾಣಿಸಿ ಕೊಳ್ಳುವುದು ಸಹಜ. ಅದರಲ್ಲೂ ಚಳಿಗಾಲದಲ್ಲಿ ಅಂತೂ ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು!

ಇನ್ನು ಮಕ್ಕಳಲ್ಲಿ ಕೆಮ್ಮಿನ ಸಮಸ್ಯೆ ಕಾಣಿಸಿಕೊಂಡರೆ ಅಂತೂ ಕೇಳುವುದೇ ಬೇಡ, ರಾತ್ರಿ ಇಡೀ ನಿದ್ದೆ ಮಾಡಲು ತಡವಡಿಸುತ್ತಾರೆ. ಹೆಚ್ಚಾಗಿ ಮಕ್ಕಳಿಗೆ ಕಾಡುವ ಕೆಮ್ಮಿನ ಸಮಸ್ಯೆಗೆ ಹಲವಾರು ರೀತಿಯ ಸಿರಪ್‌ಗಳು ಇವೆ. ಆದರೆ ಮಕ್ಕಳಿಗೆ ಕೆಲವೊಂದು ನೈಸರ್ಗಿಕ ಮನೆಮದ್ದನ್ನು ಬಳಸಿದರೆ, ಅದು ತುಂಬಾ ಪರಿಣಾಮಕಾರಿ ಆಗಿರುವುದು. ಅದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಓಮ ಕಾಳಿನ ಗಂಟು

  • ಮೊದಲಿಗೆ ಎರಡು ಟೇಬಲ್ ಚಮಚ ಆಗುವಷ್ಟು ಓಮ ಕಾಳನ್ನು ಕಾವಲಿಗೆ ಹಾಕಿಕೊಂಡು, ಚೆನ್ನಾಗಿ ಹುರಿಯಿರಿ. ಸುಮಾರು ಎರಡು ಮೂರು ನಿಮಿಷಗಳಲ್ಲಿ, ಅದರ ಸುವಾಸನೆ ಬರಲು ಶುರುವಾದ ಬಳಿಕ ಗ್ಯಾಸ್ ಆಫ್ ಮಾಡಿ. ಇದರ ಬಳಿಕ ಓಮಕಾಳನ್ನು ತೆಗೆದು ಒಂದು ಸ್ವಚ್ಛ ಬಿಳಿ ಬಟ್ಟೆಯಲ್ಲಿ ಹಾಕಿ, ಮತ್ತು ಅದನ್ನು ಹಾಗೆ ಗಂಟಿನ ರೀತಿ ಇರುವ ಹಾಗೆ ಕಟ್ಟಿಕೊಳ್ಳಿ,
  • ಇದನ್ನು ಹಾಗೆ ಮಗುವಿನ ಎದೆಯ ಮೇಲೆ ಇಡಬಹುದು. ಇದರಿಂದ, ಮಗುವಿನ ಎದೆಯಲ್ಲಿ ಕಟ್ಟಿದ ಕಫ ನೀರಾಗುವುದು, ಜೊತೆಗೆ ಕ್ರಮೇಣವಾಗಿ ಮಗುವಿನ ಕೆಮ್ಮು ಕಮ್ಮಿ ಆಗುವುದು.
  • ಅಷ್ಟೇ ಅಲ್ಲದೇ ಮಕ್ಕಳಲ್ಲಿ ಶೀತದಿಂದಾಗಿ ಮೂಗು ಸೋರುವಿಕೆ ಸಮಸ್ಯೆ ಇದ್ದರೆ ಕೂಡ ಕಮ್ಮಿ ಆಗುವುದು. ಈ ಗಂಟು ಹೆಚ್ಚು ಬೇಡ, ಸ್ವಲ್ಪ ಬಿಸಿ ಬಿಸಿಯಾಗಿರಲಿ. ನೆನಪಿಡಿ ಅತಿಯಾದ ಅತಿಯಾಗಿ ಬಿಸಿಯಾಗಿದ್ದರೆ, ಮಕ್ಕಳ ಚರ್ಮಕ್ಕೆ ಹಾನಿಯಾಗಬಹುದು

ಬೆಳ್ಳುಳ್ಳಿ ಮತ್ತು ಓಮ ಕಾಳು

  • ಸುಮಾರು ಎರಡು ಟೇಬಲ್ ಚಮಚ ಆಗುವಷ್ಟು ಓಮ ಕಾಳಿನ ಜತೆಗೆ, ಮೂರು ನಾಲ್ಕು ಬೆಳ್ಳುಳ್ಳಿ ಎಸಳುಗಳನ್ನುಹುರಿದುಕೊಂಡು ಅದನ್ನು ಒಂದು ಗಂಟು ಮಾಡಿ ಕಟ್ಟಿಕೊಳ್ಳಿ.
  • ಇನ್ನು ಇದನ್ನು ಮಗು ಮಲಗುವ ತಲೆದಿಂಬಿನ ಅಡಿಭಾಗದಲ್ಲಿ ಇದನ್ನು ಹಾಗೆ ಇಟ್ಟುಬಿಡಿ. ಹೀಗೆ ಮಾಡುವುದಕ್ಕೆ ಮುಖ್ಯ ಕಾರಣ ಬೆಳ್ಳುಳ್ಳಿಯ ಎಸಳಿನ ಘಾಟು ಮಗು ಉಸಿರಾಡುವ ಗಾಳಿಯಲ್ಲಿ ಸೇರಿಕೊಂಡು ಕಫ ಕಟ್ಟುವಿಕೆ ದೂರ ಮಾಡುವುದು. ತಪ್ಪಿಯೂ ಇದನ್ನು ಮಗುವಿನ ಎದೆ ಭಾಗಕ್ಕೆ ಇಡಬೇಡಿ.

​ಬೆಲ್ಲ ಮತ್ತು ಓಮ ಕಾಳು

  • ಮಕ್ಕಳಿಗೆ ಕೆಮ್ಮು ಶುರುವಾದಾಗ, ಈ ಮನೆಮದ್ದು ಅದ್ಭುತವಾಗಿ ಕೆಲಸ ಮಾಡುವುದು, ನಮ್ಮ ಹಿರಿಯರೇ ಹೇಳುತ್ತಾರೆ. ಒಂದೆರಡು ಟೇಬಲ್ ಆಗುವಷ್ಟು ಓಮದ ಕಾಳನ್ನು ಹುರಿದು, ಅದನ್ನು ಹಾಗೆಯೇ ರುಬ್ಬಿಕೊಂಡು ಸಣ್ಣಗೆ ಪೌಡರ್ ರೀತಿ ಮಾಡಿಕೊಳ್ಳಿ, ಅಂದರೆ ಹುಡಿ ಮಾಡಿ ಮಾಡಿಕೊಳ್ಳಿ
  • ಇನ್ನು ಸ್ವಲ್ಪ ಹುಡಿ ತೆಗೆದುಕೊಂಡು, ಅದನ್ನು ಸಾವಯವ ಬೆಲ್ಲದ ಜೊತೆಗೆ ಮಿಶ್ರಣ ಮಾಡಿ. ಅರ್ಧ ಚಮಚ ತುಪ್ಪಕ್ಕೆ ಇದನ್ನು ಹಾಕಿಕೊಂಡು ಅದನ್ನು ಮಗುವಿಗೆ ನೀಡಿ.

ಓಮ ಕಾಳಿನ ಕಷಾಯ 

  • ಒಂದು ಹಿಡಿಯಷ್ಟು, ಅಂದ್ರೆ ಸರಿಸುಮಾರು 10 ತುಳಸಿ ಎಲೆಗಳು ಅಗುವಷ್ಟು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ನಂತರ ಇದನ್ನು ಒಂದು ಪಾತ್ರೆಯಲ್ಲಿ ಹಾಕಿ, ಒಂದು ಸಣ್ಣ ತುಂಡು ಶುಂಠಿ ತುರಿಯಿರಿ ಮತ್ತು ಎರಡು ಚಮಚ ಓಮಕಾಳು ಹಾಕಿ, ನಂತರ ಒಂದೆರಡು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಿ.
  • ಇಷ್ಟಾದ ಮೇಲೆ ಇದನ್ನು ಸೋಸಿಕೊಂಡ ಬಳಿಕ ದಿನಕ್ಕೆ ಎರಡು ಸಲ ಒಂದು ಚಮಚಕ್ಕಿಂತಲೂ ಕಡಿಮೆ ನೀಡಿ. ಆರು ತಿಂಗಳಿಗಿಂತ ಮೇಲ್ಪಟ್ಟ ಮಗುವಿಗೆ ಮಾತ್ರ ಇದನ್ನು ನೀಡಬಹುದು.

ಮಸಾಜ್ ಎಣ್ಣೆ

ಓಮ ಕಾಳನ್ನು ಚೆನ್ನಾಗಿ ಹುರಿದುಕೊಂಡು, ಎಣ್ಣೆ ತಯಾರಿಸಿಕೊಳ್ಳಿ, ಅದರಿಂದ ಮಗುವಿನ ಬೆನ್ನಿಗೆ, ತಲೆಗೆ ಹಾಗೂ ಮತ್ತು ಎದೆಯ ಭಾಗಕ್ಕೆ ಈ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಇದರಿಂದ ಎದೆಕಟ್ಟುವಿಕೆ ದೂರವಾಗುವುದು.

Simple Remedies To Use Ajwain Seeds To Get Rid From Cough And Cold Naturally.