ಬಿಜೆಪಿ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಯತ್ನ ; ಮೂವರು ಆಗಂತುಕರಿಗೆ ಶೋಧ 

03-08-22 11:14 am       Mangalore Correspondent   ಕರಾವಳಿ

ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವನನ್ನ ಮಾರಕಾಸ್ತ್ರಗಳನ್ನ ಹಿಡಿದಿದ್ದ ಮೂವರ ತಂಡ ದಾಳಿಗೆ ಯತ್ನಿಸಿದ ಘಟನೆ ಇಂದು ಬೆಳ್ಳಂಬೆಳಗ್ಗೆ ಉಚ್ಚಿಲ, ಮುಳ್ಳುಗಡ್ಡೆ ಎಂಬಲ್ಲಿ ನಡೆದಿದೆ. 

ಉಳ್ಳಾಲ, ಆ.3: ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವನನ್ನ ಮಾರಕಾಸ್ತ್ರಗಳನ್ನ ಹಿಡಿದಿದ್ದ ಮೂವರ ತಂಡ ದಾಳಿಗೆ ಯತ್ನಿಸಿದ ಘಟನೆ ಇಂದು ಬೆಳ್ಳಂಬೆಳಗ್ಗೆ ಉಚ್ಚಿಲ, ಮುಳ್ಳುಗಡ್ಡೆ ಎಂಬಲ್ಲಿ ನಡೆದಿದೆ. 

ಉಚ್ಚಿಲ ಜಾಲ ಹಿತ್ತಿಲು ನಿವಾಸಿ ಕಿಶೋರ್ ಸಾಲ್ಯಾನ್ (49) ಎಂಬವರ ಮೇಲೆ ದಾಳಿಗೆ ಯತ್ನ ನಡೆದಿದೆ. ಬೆಳಗ್ಗೆ ಸುಮಾರು 7.30 ಗಂಟೆ ವೇಳೆಗೆ ಕಿಶೋರ್ ಅವರು ಮುಳ್ಳುಗುಡ್ಡೆಯ ನಿರ್ಜನ ಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾಗ ಮೂವರು ಆಗಂತುಕರು ಮಾರಕಾಸ್ತ್ರಗಳನ್ನ ಹಿಡಿದು ಅಟ್ಟಾಡಿಸಿದ್ದಾರೆ. ಕಿಶೋರ್ ಅವರು ಪ್ರಾಣ ಉಳಿಸಲು ಓಡಿದ್ದು ರಕ್ಷಣೆಗಾಗಿ ಅಲ್ಲೇ ಇದ್ದ ಮುಸ್ಲಿಮರ ಅಂಗಡಿಯೊಂದಕ್ಕೆ ನುಗ್ಗಿದ್ದಾರೆ. ಆಗಂತುಕರು ಬಳಿಕ ಪರಾರಿಯಾಗಿದ್ದಾರೆ.

ಕಿಶೋರ್ ಅವರು ಬಿಜೆಪಿ ಪಾಳಯದಲ್ಲಿ ಗುರುತಿಸಿದ್ದು ಈ ಹಿಂದೆ ಸೋಮೇಶ್ವರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು.

ಕಿಶೋರ್ ದಾಳಿ ಬಗ್ಗೆ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತಕ್ಷಣ ಕಾರ್ಯಪೃವೃತ್ತರಾಗಿದ್ದು ಆಗಂತುಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಉಳ್ಳಾಲದಲ್ಲಿ ಯಾವುದೇ ಹಲ್ಲೆ ಘಟನೆ ಆಗಿಲ್ಲ, ವದಂತಿ ನಂಬಬೇಡಿ ; ಕಮಿಷನರ್ ಸ್ಪಷ್ಟನೆ 

ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ ಆಗಿದೆ ಎಂಬ ಸುದ್ದಿಯಲ್ಲಿ ಹುರುಳಿಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. 

ಇತ್ತೀಚೆಗೆ ಸುರತ್ಕಲ್ ನಲ್ಲಿ ಹತ್ಯೆ ಘಟನೆಯಾದ ಬೆನ್ನಲ್ಲೇ ಎಂಆರ್ ಪಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಆಗಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಪರಿಶೀಲನೆ ನಡೆಸಿದಾಗ, ಅದು ಸುಳ್ಳು ಸುದ್ದಿಯಾಗಿತ್ತು. ಇವತ್ತು ಬೆಳಗ್ಗೆ ಉಳ್ಳಾಲದಲ್ಲಿ ವ್ಯಕ್ತಿ ಮೇಲೆ ಹಲ್ಲೆ ಆಗಿದೆಯೆಂದು ಜಾಲತಾಣದಲ್ಲಿ ವದಂತಿ ಎಬ್ಬಿಸಲಾಗಿದೆ. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ. ದೂರು ನೀಡಿರುವ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದೇನೆ. ಮನೆಯ ಬಳಿ ಯಾರೋ ಹಿಂದಿನಿಂದ ಬಂದಂತಾಯ್ತು ಅಂತ ಹೇಳಿದ್ದಾರೆ. ನಾವು ಆತನನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಕಮಿಷನರ್ ತಿಳಿಸಿದ್ದಾರೆ. 

ಕೋಮು ಸಾಮರಸ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ. ಸಾರ್ವಜನಿಕರು ಸಂಯಮದಿಂದ ವರ್ತಿಸಬೇಕು ಎಂದು ಕಮಿಷನರ್ ಮನವಿ ಮಾಡಿದ್ದಾರೆ.

Mangalore BJP worker attacked with weapons at Ullal, murder attempt. The Kishor Salian was a active BJP worker. Today morning as Kishor was going to work three men with swords run behind him trying to attack him.