ಸೋಮೇಶ್ವರದಲ್ಲಿ ಶ್ರಾವಣ ಅಮಾವಾಸ್ಯೆ ಉತ್ಸವ ; ಸಹಸ್ರಾರು ಭಕ್ತರಿಂದ ಪವಿತ್ರ ಸಮುದ್ರ ತೀರ್ಥ ಸ್ನಾನ 

27-08-22 01:20 pm       Mangalore Correspondent   ಕರಾವಳಿ

ಶ್ರಾವಣ ಅಮವಾಸ್ಯೆ ಪ್ರಯುಕ್ತ ಪುರಾಣ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಬಳಿಯ ಕಡಲಲ್ಲಿ ಸಹಸ್ರಾರು ಮಂದಿ ಭಕ್ತರು ಪವಿತ್ರ ತೀರ್ಥ ಸ್ನಾನ ಮಾಡಿ ಪುನೀತರಾದರು. 

ಉಳ್ಳಾಲ, ಆ.27: ಶ್ರಾವಣ ಅಮವಾಸ್ಯೆ ಪ್ರಯುಕ್ತ ಪುರಾಣ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಬಳಿಯ ಕಡಲಲ್ಲಿ ಸಹಸ್ರಾರು ಮಂದಿ ಭಕ್ತರು ಪವಿತ್ರ ತೀರ್ಥ ಸ್ನಾನ ಮಾಡಿ ಪುನೀತರಾದರು. 

ಸೋಮೇಶ್ವರದ ಸೋಮನಾಥ ದೇವಸ್ಥಾನದ ಸಾಂಪ್ರದಾಯಿಕ ಉತ್ಸವಗಳಲ್ಲಿ ಶ್ರಾವಣ ಅಮವಾಸ್ಯೆಯ ಪವಿತ್ರ ಸಮುದ್ರ ತೀರ್ಥ ಸ್ನಾನವು ಪ್ರಾಮುಖ್ಯತೆ ಪಡೆದಿದೆ. ಮಳೆಗಾಲದಲ್ಲಿ ಪ್ರಕ್ಷುಬ್ಧಗೊಳ್ಳುವ ಕಡಲು ಶ್ರಾವಣ ಮಾಸದಲ್ಲಿ ಶಾಂತವಾಗುವುದರ ಜೊತೆಗೆ ಕಡಲ ನೀರಲ್ಲಿ ಔಷಧೀಯ ಗುಣದ ಲವಣಾಂಶಗಳು ಸಮೃದ್ಧಿಗೊಂಡಿರುತ್ತದೆ. ಈ ನೀರಲ್ಲಿ ಸ್ನಾನ ಮಾಡಿದರೆ ಚರ್ಮ ವ್ಯಾಧಿ ಮಾತ್ರವಲ್ಲದೆ ಇನ್ನಿತರ ಕಾಯಿಲೆಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. 

ಭಕ್ತರು ಶ್ರಾವಣ ಅಮವಾಸ್ಯೆಯಂದು ಸೋಮೇಶ್ವರದ ಸಮುದ್ರದಲ್ಲಿ ಪವಿತ್ರ ತೀರ್ಥ ಸ್ನಾನವೆಂಬ  ಧಾರ್ಮಿಕ ನಂಬಿಕೆ ಮತ್ತು ವೈಜ್ಞಾನಿಕ ಅರಿವಿನಿಂದ ಸ್ನಾನ ಮಾಡಿ ಪುನೀತರಾಗುತ್ತಾರೆ. ಭಕ್ತರು ವೀಳ್ಯ, ತೆಂಗಿನ ಕಾಯಿಯನ್ನು ಸಮುದ್ರರಾಜನಿಗೆ ಅರ್ಪಿಸಿ ನಂತರ ಸಮುದ್ರ ಸ್ನಾನ ಮಾಡಿ ಕಡ್ಡಾಯವಲ್ಲದಿದ್ದರೂ ಸಮೀಪದ ಗದಾ ತೀರ್ಥ ಕೆರೆಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ತೆರಳುತ್ತಾರೆ. ಸಮುದ್ರದಲ್ಲಿ ತೀರ್ಥ ಸ್ನಾನ ಮಾಡುವ ಸಂದರ್ಭ ಯಾವುದೇ ಅನಾಹುತಗಳು ನಡೆಯದಂತೆ ನುರಿತ ಜೀವರಕ್ಷಕ ಸಿಬ್ಬಂದಿಗಳು ಕಣ್ಗಾವಲು ಇಟ್ಟಿದ್ದರು. ದೇವಸ್ಥಾನಕ್ಕೆ ತೆರಳಿದ ಭಕ್ತರು ಸೋಮನಾಥನಿಗೆ ಪ್ರಿಯವಾದ ಸೇವೆಗಳನ್ನ‌ ಸಲ್ಲಿಸಿ ಕೃತಾರ್ಥರಾದರು.

ಶ್ರಾವಣ ಅಮವಾಸ್ಯೆಯಂದು ಸೋಮೇಶ್ವರ ಕ್ಷೇತ್ರದಲ್ಲಿ ಗೃಹ ಮತ್ತು ಕೃಷಿ ಬಳಕೆಯ ವಿವಿಧ ರೀತಿಯ ಕತ್ತಿಗಳ ವ್ಯಾಪಾರ ಜೋರಾಗಿರುತ್ತದೆ. ಕೃಷಿ ಚಟುವಟಿಕೆ ಆರಂಭದ ಸಮಯವಾದುದರಿಂದ ಸಹಸ್ರಾರು ಮಂದಿ ಸೇರುವ ತೀರ್ಥ ಸ್ನಾನದ ಸಂಧರ್ಭದಲ್ಲಿ ಹಿಂದಿನಿಂದಲೂ ಇಲ್ಲಿ ಕತ್ತಿ ಮಾರಾಟದ ಸಂಪ್ರದಾಯ ಬೆಳೆದುಬಂದಿದೆ. ವಾರದ ಕೊನೆಯ ಶನಿವಾರ ಅಮವಾಸ್ಯೆ ಬಂದ ಕಾರಣ‌‌ ಸೋಮೇಶ್ವರದಲ್ಲಿ ತೀರ್ಥ ಸ್ನಾನ ಮಾಡಲು ಭಕ್ತರ ದಂಡು ಕೊಂಚ ವಿರಳವಾಗಿತ್ತು.

Thousands of people from the city and far off places undertook journey to Lord Somanatha Temple at Someshwara, Ullal here, on the holy occasion of Shravana Amavasya on Sunday September 13.