ಸರಕಾರಿ ನೌಕರರಿಗೆ ಮೋದಿ ಕಾರ್ಯಕ್ರಮಕ್ಕೆ ಜನ ಕರೆತರಲು ಟಾಸ್ಕ್ ; ಮೈದಾನ ಸಾಕಾಗುತ್ತಾ ನೋಡಬೇಕು - ಖಾದರ್ ವ್ಯಂಗ್ಯ 

01-09-22 02:47 pm       Mangalore Correspondent   ಕರಾವಳಿ

​​​​​ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಲವಂತವಾಗಿ ಜನರನ್ನು ಕರೆತರಲು ಜಿಲ್ಲಾಡಳಿತಕ್ಕೆ ಟಾರ್ಗೆಟ್ ನೀಡಲಾಗಿದೆ. ಸರಕಾರಿ ನೌಕರರು, ಅವರ ಕುಟುಂಬಸ್ಥರು, ಬ್ಯಾಂಕ್ ನೌಕರರು, ಸ್ವಸಹಾಯ ಗುಂಪುಗಳ ಸದಸ್ಯರನ್ನು ಕರೆತರಲಾಗುತ್ತಿದೆ.

ಮಂಗಳೂರು, ಆಗಸ್ಟ್ 31 : ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಲವಂತವಾಗಿ ಜನರನ್ನು ಕರೆತರಲು ಜಿಲ್ಲಾಡಳಿತಕ್ಕೆ ಟಾರ್ಗೆಟ್ ನೀಡಲಾಗಿದೆ. ಸರಕಾರಿ ನೌಕರರು, ಅವರ ಕುಟುಂಬಸ್ಥರು, ಬ್ಯಾಂಕ್ ನೌಕರರು, ಸ್ವಸಹಾಯ ಗುಂಪುಗಳ ಸದಸ್ಯರನ್ನು ಕರೆತರಲಾಗುತ್ತಿದೆ. ಇದರಿಂದಾಗಿ ಕಾರ್ಯಕ್ರಮ ನಡೆಯುವ ಮೈದಾನ ಸಾಕಾಗುತ್ತಾ ಇಲ್ವಾ ಎನ್ನುವ ಪ್ರಶ್ನೆ ಎದುರಾಗಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ವ್ಯಂಗ್ಯವಾಡಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾದರ್, ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಪಿಡಿಒಗಳಿಗೆ ನೊಟೀಸ್ ನೀಡಲಾಗಿದೆ.‌ ಪ್ರತಿ ಗ್ರಾಮದಿಂದ 250 ಜನರನ್ನು ಕರೆತರಲು ಪಿಡಿಓಗಳಿಗೆ ಜಿಲ್ಲಾಡಳಿತ ಹೊಣೆ ನೀಡಿದೆ.‌ ಕಂದಾಯ ಇಲಾಖೆಯಿಂದ ವಿ.ಎ ಸೇರಿದಂತೆ ಎಲ್ಲಾ ಅಧಿಕಾರಿಗಳು ಬರಬೇಕು ಅಂತಾ ಸೂಚನೆ ನೀಡಲಾಗಿದೆ.‌

ಗ್ರಾ.ಪಂ ಕಾರ್ಯದರ್ಶಿಯಿಂದ ಹಿಡಿದು ಲೈನ್ ಮ್ಯಾನ್, ನೀರು ಬಿಡುವವನಿಗೂ ನೊಟೀಸ್ ಹೋಗಿದೆ.‌ ಶಾಲೆ- ಕಾಲೇಜುಗಳಿಗೆ ರಜೆ ನೀಡಿ ಎಲ್ಲಾ ಮಕ್ಕಳು, ಹೆತ್ತವರು ಕಾರ್ಯಕ್ರಮಕ್ಕೆ ಬರಬೇಕು ಅಂತ ಸೂಚನೆ ನೀಡಲಾಗಿದೆ. ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಿ, ಬ್ಯಾಂಕ್ ಸವಲತ್ತು ಪಡೆದವರನ್ನು ಕರೆತರಬೇಕೆಂದು ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆ ನೀಡಿದ ಮೇಲೆ ಕೆಳ ಅಧಿಕಾರಿಗಳು ಜನರನ್ನು ಕರೆತರಲೇಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಅವರ ಮನೆಯವರನ್ನಾದರೂ ಕರೆತರಬೇಕು. ಇದರಿಂದಾಗಿ ಒಂದು ವಾರದಿಂದ ಎಲ್ಲಾ ಅಧಿಕಾರಿಗಳು ಬ್ಯುಸಿ ಇದ್ದಾರೆ. ಜನರನ್ನು ಸೇರಿಸಬೇಕಾದ್ದರಿಂದ ತಲೆಬಿಸಿಗೂ ಒಳಗಾಗಿದ್ದಾರೆ. 

ಎಲ್ಲಾ ಕಡೆ ಸಿಕ್ಕ‌ ಸಿಕ್ಕ ಮೀನುಗಾರರಿಗೂ ಕಿಸಾನ್ ಕಾರ್ಡ್ ನೀಡಿ ಕಾರ್ಯಕ್ರಮಕ್ಕೆ ಬರಲು ಸೂಚಿಸುತ್ತಿದ್ದಾರೆ. ಇಷ್ಟೆಲ್ಲಾ ಸೂಚನೆ ನೀಡಿದ ಬಳಿಕ ಜನಸಾಗರವೇ ಬರಲಿದೆ. ಸರಕಾರದ ಆಡಳಿತ ಯಂತ್ರವೇ ಇಷ್ಟೆಲ್ಲ ಒದ್ದಾಟ ನಡೆಸಿದ ಮೇಲೆ ಜನರು ಸೇರಲೇಬೇಕು. ಆದರೆ ಜನರಿಗೆ ಯಾವುದೇ ತೊಂದರೆ ಆಗದಂತೆ ಜಿಲ್ಲಾಡಳಿತ ಕ್ರಮ ಜರುಗಿಸಿದರೆ ಸಾಕು. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಜಿಲ್ಲಾಡಳಿತವೇ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

MLA UT Khader taunts Bjp over Modi Visit to Mangalore,  leaders are visiting house to house calling people to attend he slammed.