ಪ್ರಧಾನಿ ಮೋದಿ ಎದುರಲ್ಲೇ ಬಿಎಸ್ ಯಡಿಯೂರಪ್ಪ ಪರ ಹರ್ಷೋದ್ಗಾರ ! ಕರಾವಳಿಯಲ್ಲೂ ಯಡಿಯೂರಪ್ಪ ಹವಾ 

02-09-22 10:27 pm       Mangalore Correspondent   ಕರಾವಳಿ

ಮಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಎದುರಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರು ಕೇಳಿಬರುತ್ತಿದ್ದಂತೆ ಹರ್ಷೋದ್ಗಾರ ಕೇಳಿಬಂದಿದೆ.

ಮಂಗಳೂರು, ಸೆ.2 : ಮಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಎದುರಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರು ಕೇಳಿಬರುತ್ತಿದ್ದಂತೆ ಹರ್ಷೋದ್ಗಾರ ಕೇಳಿಬಂದಿದೆ. ಸರ್ಕಾರಿ ಕಾರ್ಯಕ್ರಮ ಆಗಿದ್ದರೂ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಮೋದಿ ಕಾರ್ಯಕ್ರಮವನ್ನು ಪಕ್ಷದ ಪ್ರಚಾರ ವೇದಿಕೆ ಎಂದೇ ಪರಿಗಣಿಸಲಾಗಿತ್ತು. ಈ ವೇಳೆ, ಯಡಿಯೂರಪ್ಪ ಹೆಸರನ್ನು ಉಲ್ಲೇಖ ಮಾಡುತ್ತಿದ್ದಂತೆ ಕರಾವಳಿ ಜನ ಹರ್ಷ ತೋರಿದ್ದನ್ನು ವಿಶೇಷವಾಗಿ ಪರಿಗಣಿಸಲಾಗಿದೆ. 

ಅಂದಾಜು ಎರಡು ಲಕ್ಷದಷ್ಟು ಸೇರಿದ ಜನರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಮನ ಸೆಳೆದಿದ್ದಾರೆ. ಕೇಂದ್ರ ಸರ್ಕಾರಕ್ಕೆ ಸೇರಿದ್ದ ಕಾರ್ಯಕ್ರಮ ಆಗಿದ್ದರೂ ಯಡಿಯೂರಪ್ಪ ವೇದಿಕೆಯಲ್ಲಿ ಸ್ಥಾನ ಪಡೆದಿದ್ದರು. ಇದಕ್ಕೆ ಪ್ರಧಾನಿ ಮೋದಿ ವೈಯಕ್ತಿಕ ಆಹ್ವಾನವೇ ಕಾರಣ ಎನ್ನಲಾಗುತ್ತಿದೆ.‌ ಇತ್ತೀಚೆಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿರುವ ಯಡಿಯೂರಪ್ಪ ಅವರು ವೇದಿಕೆಗೆ ಬರುತ್ತಿದ್ದಂತೆ ಜನರು ಹರ್ಷೋದ್ಘಾರ ಮಾಡಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ವೇದಿಕೆಗೆ ಆಗಮಿಸಿದ ಬಳಿಕ ಎಲ್ಲರನ್ನೂ ಸ್ವಾಗತಿಸುವ ವೇಳೆಯೂ ಬಿಎಸ್ ವೈ ಹೆಸರು ಬಂದಾಗ ಜನರು ಜಯಘೋಷ ಕೂಗಿದ್ದಾರೆ. ಇದನ್ನು ಪ್ರಧಾನಿ ಮೋದಿ ಎದುರುಗಡೆ ಅಭಿಮಾನಿಗಳು ರಾಜ್ಯದಲ್ಲಿ ಯಡಿಯೂರಪ್ಪ ವರ್ಚಸ್ಸಿನ ಪ್ರದರ್ಶನ ಮಾಡಿದ್ದಾಗಿ ವ್ಯಾಖ್ಯಾನಿಸಲಾಗುತ್ತಿದೆ. ಕರಾವಳಿಯಲ್ಲೂ ಯಡಿಯೂರಪ್ಪ ವರ್ಚಸ್ಸು ಹೊಂದಿರುವುದನ್ನು ಮತ್ತು ಕರಾವಳಿಯವರೇ ರಾಜ್ಯಾಧ್ಯಕ್ಷ ಆಗಿದ್ದರೂ ಯಡಿಯೂರಪ್ಪ ತನ್ನ ಖದರ್ ಉಳಿಸಿಕೊಂಡಿರುವುದನ್ನು ಸೂಚಿಸಿತ್ತು ಎನ್ನುವ ಮಾತು ಕೇಳಿಬಂದಿದೆ. 

ಉಡುಪಿ ಕೃಷ್ಣ ಮತ್ತು ಪರಶುರಾಮ ಪುತ್ಥಳಿ 

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ ಮಲ್ಲಿಗೆ ಹೂವಿನ ಮಾಲೆ ಹಾಕಿ ಸನ್ಮಾನಿಸಲಾಯಿತು. ಅಲ್ಲದೆ ಉಡುಪಿ ಶ್ರೀಕೃಷ್ಣ ದೇವರ ಪುತ್ಥಳಿ ಮತ್ತು ಪರಶುರಾಮ ಪುತ್ಥಳಿಯನ್ನು ನೀಡಿ ಗೌರವಿಸಲಾಯಿತು. ಪರಶುರಾಮ ಕೊಡಲಿ ಬೀಸಿ ತುಳುನಾಡೆಂದು ಕರೆಯಲ್ಪಡುವ ಕರಾವಳಿ ಭಾಗವನ್ನು ಸೃಷ್ಟಿಸಿದ್ದಾನೆ ಎನ್ನುವ ಪ್ರತೀತಿ ಇರುವುದರಿಂದ ಇದೇ ವಿಗ್ರಹವನ್ನು ಉಡುಪಿಯಲ್ಲಿ ತಯಾರಿಸಲಾಗಿತ್ತು.

Modi in Mangalore, large crowd greets B S Yediyurappa as he walks on stage. Prime Minister Narendra Modi arrived at Goldfinch City grounds at Bangra Kuluru in Mangaluru at 2.10 p.m. on September 2, 2022 to dedicate and lay foundation stone for eight projects worth Rs. 3,800 crore.