ಮಂಗಳೂರು ವಿವಿ ಕನ್ನಡ ಪರೀಕ್ಷೆಯಲ್ಲಿ ಎಡವಟ್ಟು ; ಪರೀಕ್ಷೆ ಮುಂದೂಡಿಕೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಖಂಡನೆ 

05-09-22 06:13 pm       Mangalore Correspondent   ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಸೋಮವಾರ ನಡೆಯಲಿದ್ದ ಪದವಿ ಹಂತದ ಕನ್ನಡ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟು ಆಗಿದ್ದು ಕನ್ನಡ ಪರೀಕ್ಷೆಯನ್ನೇ ಮುಂದೂಡಲಾಗಿದೆ. 

ಮಂಗಳೂರು, ಸೆ.5: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಸೋಮವಾರ ನಡೆಯಲಿದ್ದ ಪದವಿ ಹಂತದ ಕನ್ನಡ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟು ಆಗಿದ್ದು ಕನ್ನಡ ಪರೀಕ್ಷೆಯನ್ನೇ ಮುಂದೂಡಲಾಗಿದೆ. 

ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಎರಡನೇ ಮತ್ತು ಮೂರನೇ ಸೆಮಿಸ್ಟರ್ ಪರೀಕ್ಷೆ ಇಂದು ನಡೆಯಬೇಕಾಗಿತ್ತು. ಆದರೆ ವಿದ್ಯಾರ್ಥಿಗಳಿಗೆ ಮೊದಲ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನೇ ನೀಡಲಾಗಿತ್ತು. ಈ ಬಗ್ಗೆ ವಿದ್ಯಾರ್ಥಿಗಳು ಪರೀಕ್ಷೆ ಮೇಲ್ವಿಚಾರಕರ ಗಮನಕ್ಕೆ ತಂದಿದ್ದರು. ಬಳಿಕ ಪ್ರಶ್ನೆ ಪತ್ರಿಕೆಯನ್ನು ತರಾತುರಿಯಲ್ಲಿ ಮರಳಿ ಪಡೆದಿದ್ದು ಮಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವರು ಪರೀಕ್ಷೆ ಮುಂದೂಡಿ ಆದೇಶ ಮಾಡಿದ್ದಾರೆ. ಅಲ್ಲದೆ, ಇತರೇ ಪರೀಕ್ಷೆಗಳು ವೇಳಾಪಟ್ಟಿ ರೀತಿಯಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ. 

ನಿರ್ಲಕ್ಷ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ 

ಮಂಗಳೂರು ವಿವಿಯ ಪರೀಕ್ಷಾಂಗ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಎಡವಟ್ಟಿನಿಂದ ಈ ರೀತಿಯ ಪ್ರಮಾದ ಆಗಿದ್ದು ಇಂತಹ ನಡೆಯನ್ನು ಖಂಡಿಸುವುದಾಗಿ ಎಬಿವಿಪಿ ಪತ್ರಿಕಾ ಹೇಳಿಕೆ ನೀಡಿದೆ.‌ ಸಾವಿರಾರು ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ಪರೀಕ್ಷೆಗೆ ತಯಾರಾಗಿ ಬಂದಿದ್ದರು. ಆದರೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷಾಂಗ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರ ನಿರ್ಲಕ್ಷ್ಯದಿಂದಾಗಿ ಒಂದನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆಯನ್ನು ನೀಡಿ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ. ವಿದ್ಯಾರ್ಥಿಗಳು ತಪ್ಪು ಪ್ರಶ್ನೆ ಪತ್ರಿಕೆಯನ್ನು ನೀಡಿರುವುದನ್ನು ಗುರುತಿಸಿ ಆಕ್ಷೇಪಿಸಿದ ನಂತರ, ಪರೀಕ್ಷೆಯನ್ನು ಮುಂದೂಡಲಾಗಿದೆ. 

ಮಂಗಳೂರು ವಿಶ್ವ ವಿದ್ಯಾನಿಲಯವು ತನ್ನದೇ ಆದ ಘನತೆ ಗೌರವವನ್ನು ಹೊಂದಿದ್ದು, ದೇಶ ವಿದೇಶದಿಂದ ಸಾವಿರಾರು ವಿದ್ಯಾರ್ಥಿಗಳು ಈ ವಿಶ್ವ ವಿದ್ಯಾನಿಲಯಕ್ಕೆ ವಿದ್ಯಾಭ್ಯಾಸ ನಡೆಸಲು ಬರುತ್ತಿದ್ದಾರೆ. ಆದರೆ ವಿಶ್ವವಿದ್ಯಾನಿಲಯವು ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯ, ಮೌಲ್ಯ ಮಾಪನದಲ್ಲಿ ವಿಳಂಬದ ವಿಚಾರಗಳಿಗೆ ಹೆಸರಾಗುತ್ತಿರುವುದು ಶೋಚನೀಯ. ಪರೀಕ್ಷೆಯ ವಿಚಾರದಲ್ಲು ನಿರ್ಲಕ್ಷ್ಯವಾಗಿ ವರ್ತಿಸಿರುವುದನ್ನು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವುದನ್ನು ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಈ ರೀತಿಯ ನಿರ್ಲಕ್ಷ್ಯಕ್ಕೆ ಕಾರಣವಾದ ವ್ಯಕ್ತಿಗಳನ್ನು ಕೂಡಲೇ ಅಮಾನತುಗೊಳಿಸಿ, ತನಿಖೆಗೆ ಒಳಪಡಿಸುವಂತೆ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಆಗ್ರಹಿಸಿದ್ದಾರೆ. ‌

Mangalore university makes blunder in Kannada exam question paper, exam postponed.