ರಮಾನಾಥ ರೈ ಈ ಜನ್ಮದಲ್ಲಿ ಮತ್ತೆ ಗೆಲ್ಲೋದಿಲ್ಲ, ಗೆದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ; ಹರಿಕೃಷ್ಣ ಬಂಟ್ವಾಳ್

14-09-22 06:20 pm       HK News Desk   ಕರಾವಳಿ

ಮಾಜಿ ಸಚಿವ ರಮಾನಾಥ ರೈ ತನಗೆ ಟಿಕೆಟ್ ಖಾತ್ರಿ ಪಡಿಸುವುದಕ್ಕಾಗಿ ನಾರಾಯಣ ಗುರುಗಳ ಹೆಸರಲ್ಲಿ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ.

ಮಂಗಳೂರು, ಸೆ.14: ಮಾಜಿ ಸಚಿವ ರಮಾನಾಥ ರೈ ತನಗೆ ಟಿಕೆಟ್ ಖಾತ್ರಿ ಪಡಿಸುವುದಕ್ಕಾಗಿ ನಾರಾಯಣ ಗುರುಗಳ ಹೆಸರಲ್ಲಿ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಾರಾಯಣ ಗುರುಗಳ ಬಗ್ಗೆ ಗೌರವ ಇದ್ದರೆ, ರಮಾನಾಥ ರೈ ಬಂಟ್ವಾಳದಲ್ಲಿ ಹೊಸಬರಿಗೆ ಸೀಟು ಬಿಟ್ಟುಕೊಡಲಿ. 35 ವರ್ಷ ರಾಜಕೀಯ ಮಾಡಿದ್ದಾರೆ, ಈಗ ನಡೆಯುವುದಕ್ಕೂ ಕಷ್ಟಪಡುತ್ತಿದ್ದಾರೆ. ಈ ಜನ್ಮದಲ್ಲಂತೂ ರಮಾನಾಥ ರೈ ಬಂಟ್ವಾಳದಲ್ಲಿ ಗೆದ್ದು ಬರಲ್ಲ. ಕಳೆದ ಬಾರಿ 15 ಸಾವಿರ ಓಟಿಗೆ ಸೋತಿದ್ದರು. ಈ ಬಾರಿ ಅದಕ್ಕಿಂತ ಹೆಚ್ಚು ಮತಗಳಿಂದ ಸೋಲಿಸುತ್ತೇವೆ. ಒಂದ್ವೇಳೆ ರಮಾನಾಥ ರೈ ಗೆದ್ದಲ್ಲಿ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಸವಾಲು ಹಾಕಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಹರಿಕೃಷ್ಣ ಬಂಟ್ವಾಳ್, ಕಳೆದ ಬಾರಿ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ಹೆಸರಿಡುವಾಗ ಕಾಂಗ್ರೆಸ್ ವಿರೋಧ ಮಾಡಿಲ್ಲವೇ..?  ಮಾಜಿ ಶಾಸಕ ಜೆಆರ್ ಲೋಬೊ ವಿರೋಧ ಮಾಡಿಲ್ಲವೇ..? ಆಗ ನಾರಾಯಣ ಗುರುಗಳಿಗೆ ಅಪಮಾನ ಎಂದು ರಮಾನಾಥ ರೈಗೆ ಅನಿಸಿಲ್ಲ ಯಾಕೆ.?  ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕುದ್ರೋಳಿಯಲ್ಲಿ ದಸರಾ ನಡೆಯುತ್ತಿದ್ದಾಗಲೇ ಮಂಗಳೂರಿಗೆ ಬಂದಿದ್ದರು. ಸಂಜೆ ಕುದ್ರೋಳಿಗೆ ಬರುವುದೆಂದು ನಿಗದಿಯಾಗಿತ್ತು. ಆದರೆ, ರಮಾನಾಥ ರೈಯನ್ನು ಕುದ್ರೋಳಿ ಭೇಟಿ ತಪ್ಪಿಸಿ ಗುಂಡು ತುಂಡು ಕೊಟ್ಟು ನೇರವಾಗಿ ಏರ್ಪೋರ್ಟಿಗೆ ಕಳಿಸಿಕೊಟ್ಟಿದ್ದು ಯಾರು..? ಆಗ ರಮಾನಾಥ ರೈಗೆ ನಾರಾಯಣ ಗುರು ನೆನಪಾಗಲಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಸುರತ್ಕಲ್ ಬಂಟರ ಭವನದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಜನಾರ್ದನ ಪೂಜಾರಿಯನ್ನು ಅಪಮಾನಿಸಿ ಮಾತಾಡಿದ್ದರಲ್ಲ. ಆಗ ಪೂಜಾರಿಯವರ ಬಗ್ಗೆ ಗೌರವ ಇರಲಿಲ್ಲವೇ.. ರಮಾನಾಥ ರೈ ಯಾರನ್ನೂ ಬೆಳೆಯಲು ಬಿಟ್ಟಿಲ್ಲ. ಈಗ ನಾರಾಯಣ ಗುರು ಹೆಸರಲ್ಲಿ ವಿವಾದ ಎಬ್ಬಿಸುತ್ತಿದ್ದಾರೆ. ನಾರಾಯಣ ಗುರು ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ ಮಾಡಲಾಗಿದೆ. ಕುದ್ರೋಳಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, 18 ಟ್ಯಾಬ್ಲೋಗಳಲ್ಲಿ ನಾರಾಯಣ ಗುರುಗಳ ಪ್ರಚಾರ ಜಾಥಾ ಮೆರವಣಿಗೆ ಮಾಡಲಾಗಿದೆ. ಆನಂತರ, ನಾರಾಯಣ ಗುರುಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಯಬೇಕೆಂದು ಉಪನ್ಯಾಸ ಏರ್ಪಡಿಸಲಾಗಿದೆ. ನಾರಾಯಣ ಗುರುಗಳು ಒಂದು ಜಾತಿಗೆ ಸೀಮಿತರಾದವರಲ್ಲ. ಹಿಂದೆ ಸೆಂಥಿಲ್ ಜಿಲ್ಲಾಧಿಕಾರಿಯಾಗಿದ್ದಾಗ ಕಾಟಾಚಾರಕ್ಕೆ ಕಾರ್ಯಕ್ರಮ ಮಾಡುತ್ತಿದ್ದರು. ಪ್ರತಿ ಬಾರಿ ಜಯಂತಿ ಕಾರ್ಯಕ್ರಮ ಆಗುತ್ತಿದ್ದರೂ, ಬೆರಳೆಣಿಕೆ ಜನ ಸೇರುತ್ತಿದ್ದರು. ಅದಕ್ಕಾಗಿಯೇ ಗುರುಗಳ ಜಯಂತಿಯನ್ನು ಜಿಲ್ಲಾ ಕೇಂದ್ರಗಳಲ್ಲಿ ಅದ್ದೂರಿಯಾಗಿ ಮಾಡುವಂತೆ ಮುಖ್ಯಮಂತ್ರಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಾಕೆ ಪಾಲ್ಗೊಂಡಿರಲಿಲ್ಲ ಎಂಬ ಪ್ರಶ್ನೆಗೆ, ಎಲ್ಲ ಜಯಂತಿ ಕಾರ್ಯಕ್ರಮಗಳಲ್ಲಿಯೂ ಮುಖ್ಯಮಂತ್ರಿಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಾ ಎಂದು ಹರಿಕೃಷ್ಣ ಪ್ರಶ್ನೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಹೆಸರೆತ್ತಿಲ್ಲ ಎಂದಿದ್ದಾರೆ. ಜನಸ್ಪಂದನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಭಾಷಣ ಆರಂಭಿಸುವಾಗಲೇ ನಾರಾಯಣ ಗುರು ಹೆಸರನ್ನು ಉಲ್ಲೇಖಿಸಿದ್ದಾರೆ. ನಾವು ಪಕ್ಷದ ಕಾರ್ಯಕ್ರಮದಲ್ಲಿಯೂ ನಾರಾಯಣ ಗುರುಗಳಿಗೆ ಗೌರವ ಕೊಡುತ್ತೇವೆ. ಯಾಕೆ ಕೆಪಿಸಿಸಿ ಕಚೇರಿಯಲ್ಲಿ ನಾರಾಯಣ ಗುರು ಜಯಂತಿ ಮಾಡಿಲ್ಲ. ಇವರು ಟಿಪ್ಪು ಜಯಂತಿ ಮಾಡಿದ್ದಾರಲ್ಲಾ.. ಇವರಿಗೆ ಗೌರವ ಇದ್ದರೆ ನಾರಾಯಣ ಗುರುಗಳ ಜಯಂತಿ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾಸ್ಕರಚಂದ್ರ ಶೆಟ್ಟಿ, ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.

Ramanath rai will never win in his own constituency slams Harikrishna Bantwal in Mangalore