ಉಳ್ಳಾಲ ನಗರಸಭೆ ವಿರುದ್ದ ಭ್ರಷ್ಟಾಚಾರ ಆರೋಪ ; ಸದಸ್ಯನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಕೈ ನಾಯಕರು ! 

20-09-22 09:02 pm       Mangalore Correspondent   ಕರಾವಳಿ

ಉಳ್ಳಾಲ ನಗರಸಭೆಯಲ್ಲಿ ತೆರಿಗೆ ಹಣ, ಡೋರ್ ನಂಬರ್ ನೀಡುವ ಪ್ರಕ್ರಿಯೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ನಗರಸಭೆ ಕಚೇರಿಯಲ್ಲಿ ಅರೆ ನಗ್ನವಾಗಿ ಪ್ರತಿಭಟನೆ ನಡೆಸಿದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ರವಿಚಂದ್ರ ಗಟ್ಟಿ ವಿರುದ್ಧ ಕೈ ನಾಯಕರು ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

ಉಳ್ಳಾಲ, ಸೆ.20 : ಉಳ್ಳಾಲ ನಗರಸಭೆಯಲ್ಲಿ ತೆರಿಗೆ ಹಣ, ಡೋರ್ ನಂಬರ್ ನೀಡುವ ಪ್ರಕ್ರಿಯೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ನಗರಸಭೆ ಕಚೇರಿಯಲ್ಲಿ ಅರೆ ನಗ್ನವಾಗಿ ಪ್ರತಿಭಟನೆ ನಡೆಸಿದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ರವಿಚಂದ್ರ ಗಟ್ಟಿ ವಿರುದ್ಧ ಕೈ ನಾಯಕರು ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

ತೊಕ್ಕೊಟ್ಟಿನಲ್ಲಿ ಈ ಬಗ್ಗೆ ಉಳ್ಳಾಲ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರುಗಳು ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಉಪಾಧ್ಯಕ್ಷರಾದ ಆಯೂಬ್ ಮಂಚಿಲ ಮಾತನಾಡಿ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದು 18 ತಿಂಗಳಾಗಿದ್ದು ಪ್ರತೀ ವಾರ್ಡ್ ಗಳ ಅಭಿವೃದ್ದಿಗೆ ನಾವು ಶ್ರಮಿಸುತ್ತಿದ್ದೇವೆ. ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷಗಳು ನಗರಾಡಳಿತದ ವಿರುದ್ಧ ಅನೇಕ ಆರೋಪಗಳನ್ನ ಮಾಡಿದ್ದು ಅವರ ಆರೋಪಗಳನ್ನ ಅಲ್ಲಗಳೆಯದೆ ಅದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳಲು ಪೌರಾಯುಕ್ತರಿಗೆ ಮುಕ್ತ ಅವಕಾಶ ನೀಡಿದ್ದೇವೆ. ಡೋರ್ ನಂಬರ್ ನೀಡುವುದು ಅಧಿಕಾರಿಗಳ ಕೆಲಸ. ಅದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಪಾತ್ರ ಇಲ್ಲ ಎಂದರು. 

ಕಾಂಗ್ರೆಸ್ ವಕ್ತಾರ ದಿನೇಶ್ ರೈ ಮಾತನಾಡಿ ಬಿಜೆಪಿ ಸರಕಾರವು ನಗರಸಭೆಗೆ ಸಮರ್ಪಕ ಅನುದಾನ ನೀಡುತ್ತಿಲ್ಲ. ಸಾಮಾನ್ಯ ಸಭೆಯಲ್ಲಿ ಮಹಿಳಾ ಅಧ್ಯಕ್ಷೆಯ ಜೊತೆ ಹೇಗೆ ವರ್ತಿಸಬೇಕೆಂದು ವಿರೋಧ ಪಕ್ಷದವರಾದ ಬಿಜೆಪಿ, ಜೆಡಿಎಸ್, ಎಸ್ ಡಿಪಿಐ ಪಕ್ಷದ ಅನನುಭವಿ ಕೌನ್ಸಿಲರ್ ಗಳಿಗೆ ಗೊತ್ತಿಲ್ಲ. ಅವರು ಏನೇ ಮಾಡಿದರೂ ಆಡಳಿತ ಕಾಂಗ್ರೆಸ್ ಪಕ್ಷವನ್ನ ಏನೂ ಮಾಡಲು ಸಾಧ್ಯವಿಲ್ಲ. ಆಡಳಿತ ಪಕ್ಷದ ಕೌನ್ಸಿಲರ್ ರವಿ ಗಟ್ಟಿ ಅವರು ತನ್ನ ವಾರ್ಡ್ ನ ಕಾಮಗಾರಿ ನಡೆದಿಲ್ಲವೆಂದು ಆರೋಪಿಸಿ ಮದ್ಯ ಸೇವಿಸಿ ಅರೆನಗ್ನವಾಗಿ ಪ್ರತಿಭಟಿಸಿದ ರೀತಿ ತಪ್ಪು. ಅವರ ಸಮಸ್ಯೆಯನ್ನು ನಗರಸಭೆ ಅಧ್ಯಕ್ಷರು, ಪಕ್ಷದ ಮುಖಂಡರ ಜೊತೆ ಹೇಳಬಹುದಿತ್ತು. ಇಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬೆಂಗಳೂರಿಗೆ ತೆರಳಿದ್ದು ಅವರು ವಾಪಾಸಾದ ಮೇಲೆ ರವಿ ವಿರುದ್ಧ ಶಿಸ್ತು‌ ಕ್ರಮ ಕೈಗೊಳ್ಳಲಾಗುವುದೆಂದರು.

ಜನರಿಗೆ ನಕಲಿ ರಶೀದಿ ನೀಡಿ ತೆರಿಗೆ ಹಣ ವಂಚಿಸುವುದರಲ್ಲಿ ನಗರಸಭೆಯಲ್ಲಿ ಅನೇಕ ವರುಷಗಳಿಂದ ಝಂಡಾ ಊರಿರುವ ಅಧಿಕಾರಿಗಳಾದ ಚಂದ್ರ ಮತ್ತು ತುಳಸಿ ಎಂಬವರ‌ ಕೈವಾಡ ಇದೆ ಎಂದು ಕೌನ್ಸಿಲರ್ ರವಿ ಆರೋಪಿಸಿದ್ದರು. ಅಧಿಕಾರಿಗಳ ಬಗ್ಗೆ ತನಿಖೆ ಇಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಉಪಾಧ್ಯಕ್ಷ ಆಯೂಬ್ ಅವರ ತನಿಖೆ ನಡೆಸಲು ಸಮರ್ಪಕ ಸಾಕ್ಷಾಧಾರಗಳು ಬೇಕೆಂದು ಸಬೂಬು ನೀಡಿದರು.

ಉಳ್ಳಾಲ ನಗರಸಭೆಯಲ್ಲಿ ಭ್ರಷ್ಟಾಚಾರ ; ಆಡಳಿತಾರೂಢ ಕಾಂಗ್ರೆಸ್ ಸದಸ್ಯನಿಂದಲೇ ಅರೆನಗ್ನ ಪ್ರತಿಭಟನೆ 

Mangalore Congress member half naked protest inside ullal municipality, leaders seek for action against counsellor Ravichandra Gatti.