ಅತಿಥಿ ಶಿಕ್ಷಕರ ವೇತನ ನವರಾತ್ರಿ ಒಳಗೆ ಹಾಕದಿದ್ದರೆ ಅ.6ರಂದು ಧರಣಿ ನಡೆಸುತ್ತೇನೆ ; ಎಂಎಲ್ಸಿ ಭೋಜೇಗೌಡ

29-09-22 05:54 pm       Mangalore Correspondent   ಕರಾವಳಿ

​​​​​​​ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ಐದು ತಿಂಗಳಿಂದ ವೇತನ ಆಗಿಲ್ಲ ಎನ್ನುವುದು ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಅಧಿವೇಶನದಲ್ಲಿಯೂ ಸರಕಾರದ ಗಮನಕ್ಕೆ ತಂದಿದ್ದೇನೆ.

ಮಂಗಳೂರು, ಸೆ.29: ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ಐದು ತಿಂಗಳಿಂದ ವೇತನ ಆಗಿಲ್ಲ ಎನ್ನುವುದು ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಅಧಿವೇಶನದಲ್ಲಿಯೂ ಸರಕಾರದ ಗಮನಕ್ಕೆ ತಂದಿದ್ದೇನೆ. ಮುಖ್ಯಮಂತ್ರಿ ವೇತನ ಕೂಡಲೇ ದೊರಕಿಸುವ ಬಗ್ಗೆ ಹೇಳಿದ್ದಾರೆ. ಆದರೆ ಶಿಕ್ಷಕರ ಬವಣೆ ನನಗೆ ತಿಳಿದಿದೆ. ನವರಾತ್ರಿ ಹಬ್ಬ ಮುಗಿಯುವುದರ ಒಳಗೆ ಶಿಕ್ಷಕರಿಗೆ ಐದು ತಿಂಗಳ ವೇತನ ಹಾಕದೇ ಇದ್ದರೆ ಅ.6ರಂದು ಬೆಂಗಳೂರಿನಲ್ಲಿ ಧರಣಿ ನಡೆಸುತ್ತೇನೆ ಎಂದು ಜೆಡಿಎಸ್ ಮುಖಂಡ, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಭೋಜೇಗೌಡ, ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿಭಾಗದಲ್ಲಿ 45 ಶೇಕಡಾ ಶಿಕ್ಷಕರ ಕೊರತೆ ಇದೆ. ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ಆಗಿಲ್ಲ. ಶಾಲೆಗಳಲ್ಲಿ 20 ಶೇಕಡಾ ಮಾತ್ರ ಖಾಯಂ ಶಿಕ್ಷಕರಿದ್ದಾರೆ. 80 ಶೇಕಡಾ ಅತಿಥಿ ಶಿಕ್ಷಕರಿಂದಲೇ ಶಿಕ್ಷಣ ನಡೆಯುತ್ತಿದೆ. ವಾಸ್ತವ ಹೀಗಿದ್ದರೂ ಎನ್ಇಪಿ ಜಾರಿಗೆ ಸರಕಾರ ತರಾತುರಿಯಲ್ಲಿದೆ. ಶಿಕ್ಷಕರು, ಮೂಲಸೌಕರ್ಯವೇ ಇಲ್ಲದೆ ಎನ್ಇಪಿ ಜಾರಿಯಿಂದೇನು ಪ್ರಯೋಜನ ಎಂದು ಪ್ರಶ್ನಿಸಿದರು. ಬಿಸಿಯೂಟ, ಶಿಕ್ಷಕರು ಸೇರಿದಂತೆ ಶಾಲೆಗಳ ಎಲ್ಲ ಸಿಬಂದಿಗೂ ಆಯಾ ತಿಂಗಳಲ್ಲಿ ಸಂಬಳ ಆಗುವಂತೆ ನೋಡಿಕೊಳ್ಳಬೇಕು. ಮುಖ್ಯಮಂತ್ರಿಗೆ ಕೇಳಿದರೆ ಹಣಕಾಸು ಸ್ಥಿತಿ ಚೆನ್ನಾಗಿದೆ ಅಂತಿದ್ದಾರೆ. ವಾಸ್ತವಕ್ಕೆ ರಾಜ್ಯದ ಬೊಕ್ಕಸ ಸ್ಥಿತಿಯೇ ಚೆನ್ನಾಗಿಲ್ಲ. ತೋರಿಕೆಗಷ್ಟೇ ಹಾಗೆ ಹೇಳುತ್ತಿದ್ದಾರೆ. ಹಣ ಹೊಂದಿಸಲಾಗದೆ ಮಾಧುಸ್ವಾಮಿ ಹೇಳಿದಂತೆ ದಿನ ದೂಡುತ್ತಿದ್ದಾರೆ ಎಂದು ಟೀಕಿಸಿದರು.

Aadhaar stands in way of farmers awaiting flood relief | Deccan Herald

ರೈತರಿಗೆ ಮಳೆ ನಷ್ಟ ಪರಿಹಾರ ಕೊಡಿ  

ರಾಜ್ಯದಲ್ಲಿ ಈ ಬಾರಿ ಮಳೆಯಿಂದ ಹಿಂದೆಂದೂ ಕಂಡರಿಯದಷ್ಟು ನಷ್ಟ ಆಗಿದೆ. ಆಹಾರ ಬೆಳೆಗಳು, ತೋಟಗಾರಿಕೆ ಬೆಳೆಗಾರರು ತುಂಬ ನಷ್ಟ ಅನುಭವಿಸಿದ್ದಾರೆ. ಆದರೆ ರಾಜ್ಯ ಸರಕಾರ ಈವರೆಗೂ ನಷ್ಟದ ಅಂದಾಜು ಮಾಡಿಲ್ಲ. ಹೂವು, ಹಣ್ಣು, ತರಕಾರಿ ಬೆಳೆಗಳು, ಬೇಳೆಕಾಳು, ಭತ್ತ, ರಾಗಿ ಜೋಳ ಎಲ್ಲವೂ ಹಾಳಾಗಿದ್ದು ಈಗಷ್ಟೇ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ಮಲೆನಾಡಿನಲ್ಲಿ ನಿರಂತರ ಭೂಕುಸಿತದಿಂದಾಗಿ ಸಂಕಷ್ಟ ಎದುರಾಗಿದೆ. ಆದರೆ ಇಲ್ಲಿ ಶಾಶ್ವತ ಪರಿಹಾರ ಯಾಕೆ ಆಗ್ತಾ ಇಲ್ಲ. ಪ್ರತಿ ವರ್ಷ ಭೂಕುಸಿತ ಆಗುತ್ತಿದ್ದರೂ, ಯಾಕಾಗಿ ಆಗುತ್ತಿದೆಯೆಂದು ಅಧಿಕಾರಿಗಳು ವರದಿ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಅಲ್ಲದೆ, ಬೆಳೆ ನಷ್ಟಕ್ಕೊಳಗಾದ ರೈತರಿಗೆ ಕೂಡಲೇ ನಷ್ಟ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ ಭೋಜೇಗೌಡ, 2019ರಲ್ಲಿ ಮನೆ ಕಳಕೊಂಡವರಿಗೇ ಬಿಜೆಪಿ ಸರಕಾರ ಮನೆ ನಿರ್ಮಿಸಿಕೊಟ್ಟಿಲ್ಲ. 5 ಲಕ್ಷಕ್ಕೆ ಮನೆ ಎಂದು ಹೇಳಿದ್ದರೂ, ಅದನ್ನು ಈಡೇರಿಸಿಲ್ಲ. ಐದು ಲಕ್ಷಕ್ಕೆ ಮನೆ ಆಗುತ್ತಾ ಅನ್ನುವುದಕ್ಕೂ ಉತ್ತರ ಇಲ್ಲ. ದುರಂತಕ್ಕೊಳಗಾದವರಿಗೆ ಒಂದು ಮನೆಯನ್ನಾದ್ರೂ ನಿರ್ಮಿಸಿಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

Muslim organisations give mixed reactions to ban on PFI, affiliates

ಆರೆಸ್ಸೆಸ್ ಬಗ್ಗೆ ದಾಖಲೆ ಇದ್ದರೆ ಮುಂದಿಡಲಿ

ಪಿಎಫ್ಐ ಬ್ಯಾನ್ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಸಮಾಜದಲ್ಲಿ ಕೋಮು ಪ್ರಚೋದನೆ ಮಾಡುವ, ಅಶಾಂತಿ ಸೃಷ್ಟಿಸುವ ಸಂಘಟನೆಗಳಿದ್ದರೆ ಅದನ್ನು ಬ್ಯಾನ್ ಮಾಡಬೇಕು. ಅದು ಆರೆಸ್ಸೆಸ್, ಬಜರಂಗದಳ, ಪಿಎಫ್ಐ ಇನ್ಯಾವುದೇ ಸಂಘಟನೆ ಆಗಿದ್ದರೂ ನಿಷೇಧ ಮಾಡಬೇಕು ಎಂದರು. ಆರೆಸ್ಸೆಸ್ ನಿಷೇಧಕ್ಕೆ ಸಿದ್ದರಾಮಯ್ಯ ಹೇಳಿದ್ದಾರಲ್ಲಾ, ಆ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಕ್ಕೆ, ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಹಾಗೆ ಹೇಳಿದ್ದಾರೆ. ಅವರಲ್ಲಿ ಅಂತಹ ದಾಖಲೆಗಳಿದ್ದರೆ ಹೈಕೋರ್ಟ್ ಮುಂದಿಡಲಿ. ಅಥವಾ ಸರಕಾರಕ್ಕೆ ಒಪ್ಪಿಸಿ ಆರೆಸ್ಸೆಸ್ ನಿಷೇಧಕ್ಕೆ ಒತ್ತಾಯಿಸಲಿ. ನಲ್ವತ್ತು ಪರ್ಸೆಂಟ್ ಕಮಿಷನ್ ಆರೋಪದ ರೀತಿ ಗಾಳಿಯಲ್ಲಿ ಗುಂಡು ಹೊಡೆಯೋದಲ್ಲ. ನಲ್ವತ್ತು ಪರ್ಸೆಂಟ್ ಆರೋಪದಲ್ಲಿಯೂ ದಾಖಲೆ ಇದ್ದರೆ ಲೋಕಾಯುಕ್ತಕ್ಕೋ, ಹೈಕೋರ್ಟಿಗೋ ಒಪ್ಪಿಸಿ ತನಿಖೆಗೆ ಆಗ್ರಹ ಮಾಡಬಹುದಲ್ಲವೇ.. ನಾವು ಆ ರೀತಿ ಮಾಡಲ್ಲ. ಬಿಎಂಎಸ್ ಹಗರಣದ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ, ನಾವು ಹೈಕೋರ್ಟ್ ಮುಂದಿಡುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

Guest lectures salary must increase before  October 6th, Bhojegowda warns of protest in Mangalore.