ಸುರತ್ಕಲ್ ; ವೀರ ಸಾವರ್ಕರ್ ಜಂಕ್ಷನ್ ನಾಮಕರಣಕ್ಕೆ ಪಾಲಿಕೆ ಸಭೆಯಲ್ಲಿ ಅಂಗೀಕಾರ

01-10-22 01:21 pm       Mangalore Correspondent   ಕರಾವಳಿ

ಸುರತ್ಕಲ್ ಜಂಕ್ಷನ್ ಗೆ ವೀರ ಸಾವರ್ಕರ್ ಜಂಕ್ಷನ್ ಎಂದು ಮರು ನಾಮಕರಣ ಮಾಡಬೇಕೆಂಬ ಶಾಸಕ ಭರತ್ ಶೆಟ್ಟಿ ಅಹವಾಲನ್ನು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ.

ಮಂಗಳೂರು, ಅ.1: ಸುರತ್ಕಲ್ ಜಂಕ್ಷನ್ ಗೆ ವೀರ ಸಾವರ್ಕರ್ ಜಂಕ್ಷನ್ ಎಂದು ಮರು ನಾಮಕರಣ ಮಾಡಬೇಕೆಂಬ ಶಾಸಕ ಭರತ್ ಶೆಟ್ಟಿ ಅಹವಾಲನ್ನು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ.

ವೀರ ಸಾವರ್ಕರ್ ಹೆಸರಿಡಬೇಕೆಂದು ಒಂದು ವರ್ಷದ ಹಿಂದೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಮಹಾನಗರ ಪಾಲಿಕೆಗೆ ಪ್ರಸ್ತಾವ ಮುಂದಿಡಲಾಗಿತ್ತು. 2021ರ ಆಗಸ್ಟ್ 3ರಂದು ನಡೆದ ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಕಾಂಗ್ರೆಸ್ ಸದಸ್ಯ ವಿನಯರಾಜ್, ಎಸ್ಡಿಪಿಐ ಸದಸ್ಯರಾದ ಮುನೀಬ್ ಬೆಂಗ್ರೆ ಮತ್ತು ಶಂಶದ್ ಅಬುಬಕ್ಕರ್ ವಿರೋಧಿಸಿದ್ದರು. ಆನಂತರ, ಪ್ರಸ್ತಾಪವು ಸ್ಥಾಯಿ ಸಮಿತಿಯಿಂದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಬಂದಿತ್ತು.

ಇತ್ತೀಚೆಗೆ ಹೊಸತಾಗಿ ಮೇಯರ್ ಆಯ್ಕೆಯಾದ ಬಳಿಕ ಸೆ.30ರಂದು ಮೊದಲ ಬಾರಿಗೆ ಸಾಮಾನ್ಯ ಸಭೆ ನಡೆದಿದ್ದು, ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಇದೇ ವೇಳೆ, ಮಹಾನಗರ ಪಾಲಿಕೆಯ ಆಡಳಿತ ಸುರತ್ಕಲ್ ಜಂಕ್ಷನ್ನಿಗೆ ಸಾವರ್ಕರ್ ಹೆಸರಿಡುವ ಪ್ರಸ್ತಾಪವನ್ನು ವಿರೋಧ ಪಕ್ಷಗಳ ಸದಸ್ಯರ ವಿರೋಧದ ನಡುವೆಯೂ ಅಂಗೀಕರಿಸಿದ್ದು, ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಿರ್ಣಯ ಮಾಡುವುದಾಗಿ ಹೇಳಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಆಕ್ಷೇಪ ಮತ್ತು ಸಲಹೆಗಳನ್ನು ಸ್ವೀಕರಿಸಲಿದೆ.

ಇತ್ತೀಚೆಗೆ ಆಗಸ್ಟ್ 14ರಂದು ಸುರತ್ಕಲ್ ಜಂಕ್ಷನ್ನ ಮೇಲ್ಸೇತುವೆ ಅಡಿಭಾಗದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿದ್ದು ಕೆಲವರ ಆಕ್ಷೇಪಕ್ಕೆ ಗುರಿಯಾಗಿತ್ತು. ಕೊನೆಗೆ, ಫ್ಲೆಕ್ಸನ್ನು ಸುರತ್ಕಲ್ ಪೊಲೀಸರು ತೆರವು ಮಾಡಿದ್ದರು.

 

The proposal of renaming Suratkal Junction as Veer Savarkar junction was accepted in the general meeting of Mangaluru City Corporation (MCC) on Friday September 30.