ಮಂಗಳೂರು ರಥಬೀದಿಯಲ್ಲಿ ನೂರನೇ ವರ್ಷದ ಶಾರದಾ ಮಹೋತ್ಸವ ಶೋಭಾಯಾತ್ರೆ 

06-10-22 10:44 pm       Mangalore Correspondent   ಕರಾವಳಿ

ನಗರದ ರಥಬೀಬಿಯ ವೆಂಕಟರಮಣ ದೇವಸ್ಥಾನದಲ್ಲಿ 100ನೇ ವರ್ಷದ ಸಾರ್ವಜನಿಕ ಶಾರದಾ ಮಹೋತ್ಸವ ನಡೆದಿದ್ದು ಹತ್ತು ದಿನಗಳ ಪೂಜೆಯ ಬಳಿಕ ಗುರುವಾರ ವಿಸರ್ಜನಾ ಮೆರವಣಿಗೆ ನಡೆಸಲಾಯಿತು. 

ಮಂಗಳೂರು, ಅ.6 : ನಗರದ ರಥಬೀಬಿಯ ವೆಂಕಟರಮಣ ದೇವಸ್ಥಾನದಲ್ಲಿ 100ನೇ ವರ್ಷದ ಸಾರ್ವಜನಿಕ ಶಾರದಾ ಮಹೋತ್ಸವ ನಡೆದಿದ್ದು ಹತ್ತು ದಿನಗಳ ಪೂಜೆಯ ಬಳಿಕ ಗುರುವಾರ ವಿಸರ್ಜನಾ ಮೆರವಣಿಗೆ ನಡೆಸಲಾಯಿತು. 

ವೆಂಕಟರಮಣ ದೇವಸ್ಥಾನದ ಆವರಣದ ಆಚಾರ್ಯ ಮಠದ ವಸಂತ ಮಂಟಪದಲ್ಲಿ ನೂರು ವರ್ಷಗಳಿಂದ ನಡೆಸಿಕೊಂಡು ಬಂದ ಶಾರದಾ ಮಹೋತ್ಸವಕ್ಕೆ ಈ ಬಾರಿ ಶತಮಾನೋತ್ಸವದ ಸಂಭ್ರಮವಾಗಿತ್ತು. ಸ್ವಾತಂತ್ರ್ಯಕ್ಕೂ ಮೊದಲೇ ದೇಶದ ಜನರನ್ನು ಏಕೀಕರಿಸುವ ಉದ್ದೇಶದಿಂದ ಜಿ.ಎಸ್.ಬಿ. ಸಮಾಜದ ಹಿರಿಯರ ದೂರದರ್ಶಿತ್ವ ಮತ್ತು ಕಲ್ಪನೆಯ ಕೂಸು ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವ ಆಗಿತ್ತು. ಅಂದಿನಿ೦ದ ಶ್ರೀ ಶಾರದಾ  ಮಾತೆಯ ಮೂರ್ತಿಯನ್ನು ಮಣ್ಣಿನಲ್ಲಿ ರಚಿಸಿ, ದೇವರ ಸ್ವರೂಪದಲ್ಲಿ ಪೂಜಿಸಲು ಆರಂಭಿಸಲಾಗಿತ್ತು.  

ಹತ್ತು ದಿನಗಳ ಪರ್ಯಂತ ಶ್ರೀ ಮಾತೆಯ ವಿಗ್ರಹಕ್ಕೆ ದೇವಿಯ ವಿವಿಧ ಅವತಾರಗಳ ಅಲಂಕಾರಗಳ ಮಾಡಲಾಗಿತ್ತು. ವಿಜಯದಶಮಿ ಪ್ರಯುಕ್ತ ಗುರುವಾರ ರಾತ್ರಿ ಕೊನೆಯ ಪೂಜೆ ನಡೆದು ಶ್ರೀ ವೆಂಕಟರಮಣ ದೇವರ ಪ್ರದಕ್ಷಿಣೆ ಬಳಿಕ ರಾತ್ರಿ 10 ಗಂಟೆಗೆ ಶ್ರೀ ಶಾರದಾ ಮಾತೆಯ ಬೃಹತ್ ವಿಸರ್ಜನಾ ಶೋಭಾಯಾತ್ರೆ ಹೊರಟಿತ್ತು. ಮೆರವಣಿಗೆ ಹೊರಟು ಶ್ರೀ ಮಹಾಮಾಯಿ ದೇವಸ್ಥಾನ, ಗದ್ದೆಕೇರಿ, ಕೆನರಾ ಹೈಸ್ಕೂಲ್ ಹಿಂಬದಿ ರಸ್ತೆಯಿಂದ ನವಭಾರತ ವೃತ್ತ, ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರಾ ಟಾಕೀಸ್, ಬಸವನ ಗುಡಿ, ಚಾಮರಗಲ್ಲಿ ರಥಬೀದಿಯಾಗಿ ಬಂದು ಶ್ರೀ ಮಹಾಮಾಯಾ ತೀರ್ಥದಲ್ಲಿ ವಿಸರ್ಜಿಸುವುದು ಸಂಪ್ರದಾಯ. ‌

ಸ್ವಯಂಸೇವಕರು ಭಜನಾ ಸೇವೆಯ ಮೂಲಕ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ವೇಷಧಾರಿಗಳಿಂದ ವಿಶೇಷ ಟ್ಯಾಬ್ಲೋಗಳು, ಹರಕೆಯ ಶಾರದಾ ಹುಲಿವೇಷದ ಟ್ಯಾಬ್ಲೋಗಳು ಜನಾಕರ್ಷಣೆ ಗಿಟ್ಟಿಸಿದವು.

100th year Sharada Mahotsava at Rathabidi begins in Mangalore.