ಕಟೀಲಿನಲ್ಲಿ ಹಣ ತೆತ್ತು ವಿಶೇಷ ದರ್ಶನಕ್ಕೆ ವ್ಯವಸ್ಥೆ ; ಸಿರಿವಂತರಿಗೆ ತೆರೆದುಕೊಂಡ ಬಾಗಿಲು! ಹಣ ಎಣಿಸಲು ನಿಂತ ಸರಕಾರಿ ದೇಗುಲ

09-10-22 10:11 pm       Mangalore Correspondent   ಕರಾವಳಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಯೂ ಶೀಘ್ರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 100 ರೂ. ಹಣ ತೆತ್ತು ಭಕ್ತರು ಸೌಲಭ್ಯ ಪಡೆಯಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಮಂಗಳೂರು, ಅ.9 : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಯೂ ಶೀಘ್ರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 100 ರೂ. ಹಣ ತೆತ್ತು ಭಕ್ತರು ಸೌಲಭ್ಯ ಪಡೆಯಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ತಿರುಪತಿ ಸೇರಿದಂತೆ ಕೆಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಹಣ ತೆತ್ತು ವಿಶೇಷ ದರ್ಶನದ ವ್ಯವಸ್ಥೆ ಇದೆ. ಆದರೆ ಕರಾವಳಿಯಲ್ಲಿ ಅಂತಹ ಪದ್ಧತಿ ಇರಲಿಲ್ಲ. ಇದೀಗ ಮೊದಲ ಬಾರಿಗೆ ಕಟೀಲಿನಲ್ಲಿ ಅಂತಹ ವ್ಯವಸ್ಥೆ ತರಲಾಗಿದೆ. ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನಕ್ಕೆ ಅತಿ ಹೆಚ್ಚು ಭಕ್ತರು ಆಗಮಿಸುತ್ತಾರೆ. ಇದರ ಬೆನ್ನಲ್ಲೇ ಹೊಸ ನಿಯಮವನ್ನು ಜಾರಿಗೆ ತರುವ ಬಗ್ಗೆ ಆಡಳಿತ ಕಮಿಟಿ ಪ್ರಕಟಣೆ ಹೊರಡಿಸಿದೆ. 

ಇತ್ತೀಚೆಗೆ ಕಟೀಲಿನಲ್ಲಿ ವಾಹನ ಪಾರ್ಕಿಂಗ್ ಮೇಲೆ ದರ ವಿಧಿಸಲು ಆಡಳಿತ ಮಂಡಳಿ ತೀರ್ಮಾನಕ್ಕೆ ಬಂದಿತ್ತು. ಆದರೆ ಈ ರೀತಿಯ ನಿಯಮಕ್ಕೆ ಕ್ಷೇತ್ರದ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆನಂತರ, ಪಾರ್ಕಿಂಗ್ ಶುಲ್ಕದ ನಿರ್ಧಾರವನ್ನು ಹಿಂಪಡೆಯಲಾಗಿತ್ತು. ಇದೀಗ ಭಕ್ತರಿಗೆ ವಿಶೇಷ ದರ್ಶನಕ್ಕಾಗಿ ಹೆಚ್ಚುವರಿ ಶುಲ್ಕದ ವ್ಯವಸ್ಥೆಯನ್ನು ಮಾಡಲಾಗಿದೆ. ಅದರ ಮೂಲಕ ಸಿರಿವಂತರಿಗೆ ಶೀಘ್ರ ದರ್ಶನ ವ್ಯವಸ್ಥೆಗೆ ಕಟೀಲು ದೇವಸ್ಥಾನ ತೆರೆದುಕೊಂಡಿದೆ. ಈವರೆಗೂ ಸಾವಿರಾರು ಭಕ್ತರು ಬಂದರೂ ಯಾವುದೇ ನೂಕುನುಗ್ಗಲು ಇಲ್ಲದೆ ಸಾಗಿ ಬರುತ್ತಿದ್ದ ವ್ಯವಸ್ಥೆಯಲ್ಲಿ ಆಡಳಿತ ಮಂಡಳಿ ಹಣ ತೆತ್ತು ಶೀಘ್ರ ದರ್ಶನದ ವ್ಯವಸ್ಥೆ ಮಾಡಿದೆ.  

ರಜಾದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತದೆ‌. ಹೀಗಾಗಿ ಸರತಿ ಸಾಲಿನಲ್ಲಿ‌ ನಿಂತು ದರ್ಶನ ಪಡೆಯಲು ಸಾಧ್ಯವಾಗದವರು ಶೀಘ್ರ ದರ್ಶನದ ವ್ಯವಸ್ಥೆ ಪಡೆಯಬಹುದು ಎಂದು ಕ್ಷೇತ್ರದ ಆಡಳಿತ ಮಂಡಳಿ ಸಮರ್ಥನೆ ಮಾಡಿಕೊಂಡಿದೆ. ಈ ರೀತಿಯ ನಿರ್ಧಾರಕ್ಕೆ ಟೀಕೆಯೂ ಬಂದಿದ್ದು ಹಣ ಮಾಡುವುದಕ್ಕಾಗಿ ಇಂತಹ ನಿರ್ಧಾರಕ್ಕೆ ಬಂದಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

Fast service implemented for darshan at Kateel Temple in Mangalore, 100 rupees charged.