ಎಂಆರ್ ಪಿಎಲ್ ವಿಷ ತ್ಯಾಜ್ಯ ನೀರಿಗೆ ; ಜೋಕಟ್ಟೆ ಆಸುಪಾಸಿನಲ್ಲಿ ಸಾವಿರಾರು ಮೀನುಗಳ ಮಾರಣಹೋಮ, ಅಧಿಕಾರಸ್ಥರ ನಿರ್ಲಕ್ಷ್ಯ  

16-10-22 10:01 pm       Mangalore Correspondent   ಕರಾವಳಿ

ಎಂಆರ್ ಪಿಆಲ್ ಕೈಗಾರಿಕೆಯ ಮಾಲಿನ್ಯವನ್ನು ಶುದ್ಧೀಕರಿಸದೆ ಹೊರ ಬಿಡಲಾಗುತ್ತಿದ್ದು, ಜೋಕಟ್ಟೆ ಭಾಗದಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿವೆ.

ಮಂಗಳೂರು, ಅ.16: ಎಂಆರ್ ಪಿಆಲ್ ಕೈಗಾರಿಕೆಯ ಮಾಲಿನ್ಯವನ್ನು ಶುದ್ಧೀಕರಿಸದೆ ಹೊರ ಬಿಡಲಾಗುತ್ತಿದ್ದು, ಜೋಕಟ್ಟೆ ಭಾಗದಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿವೆ. ಕೈಗಾರಿಕೆಯ ಮಾಲಿನ್ಯದ ಬಗ್ಗೆ ಸ್ಥಳೀಯರು ಹಲವಾರು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಎಂಆರ್ ಪಿಎಲ್ ಅಧಿಕಾರಿಗಳು ಕ್ಯಾರೆಂದಿಲ್ಲ.

ಭಾನುವಾರ ಬೆಳಗ್ಗೆ ಎಂಆರ್ ಪಿಎಲ್ ಆವರಣದಿಂದ ಕಲುಷಿತ ನೀರು ಹೊರ ಬಂದಿದ್ದರಿಂದ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಹಠಾತ್ ಸತ್ತು ಬಿದ್ದಿವೆ. ಈ ಬಗ್ಗೆ ಸ್ಥಳೀಯರು, ಡಿವೈಎಫ್ಐ ಮುಖಂಡರು ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಎಂಆರ್ ಪಿಎಲ್ ಕೈಗಾರಿಕೆಗೆ ನೋಟೀಸ್ ನೀಡುವುದಾಗಿ ಹೇಳಿದ್ದಾರೆ.

ಆದರೆ ಈ ಹಿಂದೆಯೂ ಪರಿಸರ ಅಧಿಕಾರಿಗಳು ಇದೇ ಮಾತು ಹೇಳಿದ್ದರು. ಕೀರ್ತಿ ಕುಮಾರ್ ಎಂಬ ಅಧಿಕಾರಿಯೂ ಇದೇ ಮಾತು ಹೇಳುತ್ತಲೇ ಇದ್ದರು. ಏನೂ ಕ್ರಮ ಆಗಿರಲಿಲ್ಲ. ಇತ್ತೀಚೆಗೆ ಕೀರ್ತಿ ಕುಮಾರ್ ಅವರನ್ನು ವರ್ಗ ಮಾಡಲಾಗಿತ್ತು. ಅದು ಬಿಟ್ಟರೆ ಜಿಲ್ಲಾಡಳಿತ ಕಲುಷಿತ ತ್ಯಾಜ್ಯ ಬಿಡುವ ಕೈಗಾರಿಕೆಗಳ ವಿರುದ್ಧ ಕ್ರಮ ಜರುಗಿಸಿಲ್ಲ. ಜಿಲ್ಲಾಧಿಕಾರಿಯೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

Thousands of fish found dead as MRPLBchemical water flow into river at Jokatte.