ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ; ತೀವ್ರ ಜಟಾಪಟಿ, ಸಂಸದ, ಶಾಸಕರ ವಿರುದ್ಧ ತೀವ್ರ ಆಕ್ರೋಶ, ಪೊಲೀಸರ ಬಲ ಪ್ರಯೋಗ, ನೂರಾರು ಮಂದಿಯ ಬಂಧನ

18-10-22 12:50 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟ್ ವಿರುದ್ಧ ಹೋರಾಟಗಾರರು ಮುತ್ತಿಗೆ ಹಾಕಿದ್ದಾರೆ. ನೂರಾರು ಜನರು ಪೊಲೀಸರ ಸರ್ಪಗಾವಲನ್ನು ಲೆಕ್ಕಿಸದೆ ಮುತ್ತಿಗೆ ಹಾಕಿದ್ದಾರೆ.

ಮಂಗಳೂರು, ಅ.18: ಸುರತ್ಕಲ್ ಟೋಲ್ ಗೇಟ್ ವಿರುದ್ಧ ಹೋರಾಟಗಾರರು ಮುತ್ತಿಗೆ ಹಾಕಿದ್ದಾರೆ. ನೂರಾರು ಜನರು ಪೊಲೀಸರ ಸರ್ಪಗಾವಲನ್ನು ಲೆಕ್ಕಿಸದೆ ಮುತ್ತಿಗೆ ಹಾಕಿದ್ದಾರೆ. ಸುಮಾರು ಒಂದು ಗಂಟೆ ಕಾಲ ಟೋಲ್ ಗೇಟನ್ನು ಬಂದ್ ಮಾಡಿದ್ದು, ಬಳಿಕ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ತೀವ್ರ ಜಟಾಪಟಿ ನಡೆಯಿತು. ಕೊನೆಗೆ ನೂರಾರು ಮಂದಿಯನ್ನು ಪೊಲೀಸರು ಬಲಪ್ರಯೋಗಿಸಿ ಬಂಧಿಸಿದ್ದಾರೆ.

ಬೆಳಗ್ಗೆ 9.30ರ ಸುಮಾರಿಗೆ ಕಾಂಗ್ರೆಸ್, ಕಮ್ಯುನಿಸ್ಟ್, ಆಮ್ ಆದ್ಮಿ ಪಕ್ಷ ಸೇರಿದಂತೆ ವಿವಿಧ ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಪಕ್ಷಗಳ ಕಾರ್ಯಕರ್ತರು ಟೋಲ್ ಗೇಟ್ ಮುಂಭಾಗದಲ್ಲಿ ಸೇರಿದ್ದರು. ಸಂಸದ ನಳಿನ್ ಕುಮಾರ್, ಶಾಸಕ ಭರತ್ ಶೆಟ್ಟಿ ವಿರುದ್ಧ ಧಿಕ್ಕಾರದ ಘೋಷಣೆ, ರಾಜಿನಾಮೆ ಒತ್ತಾಯದ ಘೋಷಣೆಯ ಬಳಿಕ ಬಿಜೆಪಿ ಸರಕಾರ, ಬಿಜೆಪಿ ಪಕ್ಷದ ವಿರುದ್ಧವೂ ಘೋಷಣೆಗಳು ಕೇಳಿಬಂದವು. ನಲ್ವತ್ತು ಪರ್ಸೆಂಟ್ ಸರಕಾರ, ಟೋಲ್ ಗೇಟ್ ತೆರವು ಮಾಡಲಾಗದ ಸಂಸದರು ಇಲ್ಲಿಗೆ ಬೇಡ ಎನ್ನುವ ಘೋಷಣೆಯನ್ನೂ ಕೂಗಲಾಯಿತು.

ಆನಂತರ, ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಪೊಲೀಸರ ಬ್ಯಾರಿಕೇಡ್ ಲೆಕ್ಕಿಸದೆ ರಸ್ತೆಗೆ ನುಗ್ಗಿ ಬಂದಿದ್ದು ಟೋಲ್ ಗೇಟಿನತ್ತ ಧಾವಿಸಿದ್ದಾರೆ. ಪೊಲೀಸರು ಅಡ್ಡ ನಿಂತು ಜಟಾಪಟಿ ನಡೆಸಿದ್ದಾರೆ. ಪೊಲೀಸರನ್ನು ದೂಡಿಕೊಂಡೇ ಕೆಲವು ಕಾರ್ಯಕರ್ತರು ಮುನ್ನುಗ್ಗಿದ್ದು, ಕಾಂಗ್ರೆಸ್ ಮುಖಂಡ ಮಿಥುನ್ ರೈ ಟೋಲ್ ಗೇಟ್ ಪೆಟ್ಟಿಗೆಯ ಮೇಲೆ ಹತ್ತಿ ಘೋಷಣೆ ಕೂಗಿದರು. ಅಲ್ಲದೆ, ಕೆಲವು ಕಾರ್ಯಕರ್ತರು ಟೋಲ್ ಗೇಟ್ ಕಂಬಗಳನ್ನು ಒಡೆಯುವ ಪ್ರಯತ್ನ ಮಾಡಿದರು. ಅಷ್ಟರಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸರು ಟೋಲ್ ಗೇಟ್ ಒಡೆಯಲು ಯತ್ನಿಸಿದವರನ್ನು ದೂಡುತ್ತಾ ಬಂದಿದ್ದು, ಬಂಧಿಸಲು ಸೂಚಿಸಿದರು. ಈ ವೇಳೆ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಜಟಾಪಟಿ ನಡೆಯಿತು. ತಳ್ಳಾಟ ನಡೆದು ಪೊಲೀಸರು ಒಂದು ಹಂತದಲ್ಲಿ ಕೈಚೆಲ್ಲುವಂತಾಗಿತ್ತು.

ಜನರು ಎಲ್ಲ ಕಡೆಯಿಂದಲೂ ನುಗ್ಗಿ ಬಂದಿದ್ದು, ಪೊಲೀಸರ ಮೇಲೆಯೇ ಎಗರಾಡುವಂತಾಗಿತ್ತು. ಆನಂತರ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಬಂದಿದ್ದು, ನೆಲದಲ್ಲಿ ಕುಳಿತಿದ್ದ ಮುಖಂಡರನ್ನು ಎತ್ತಿ ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದರು. ನೆಲದಲ್ಲಿ ಕುಳಿತಿದ್ದ ಐವಾನ್ ಡಿಸೋಜ, ಟೋಲ್ ಗೇಟ್ ಹತ್ತಿದ್ದ ಮಿಥುನ್ ರೈ, ಮುನೀರ್ ಕಾಟಿಪಳ್ಳ ಅವರನ್ನು ಎತ್ತಿಕೊಂಡೇ ಹೋಗಿ ಪೊಲೀಸ್ ಬಸ್ಸಿಗೆ ಒಯ್ದರು. ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ನೆಲದಲ್ಲಿ ಮಲಗಿ ಹೈಡ್ರಾಮಾ ನಡೆಸಿದರು. ಮಹಿಳಾ ಪೊಲೀಸರು ಅವರನ್ನು ಬಲವಂತದಿಂದ ಎತ್ತಿಕೊಂಡು ಹೋಗಲು ಯತ್ನಿಸಿದ್ದು, ಪ್ರತಿಭಾ ಅವರು ಕಿರುಚಾಡಿದ್ದಾರೆ. ಪ್ರತಿಭಟನಾಕಾರರು ಮಹಿಳೆಯ ಮೇಲೆ ಯಾಕೆ ಹಲ್ಲೆ ಮಾಡುತ್ತಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಈ ವೇಳೆ, ನೆಲದಲ್ಲಿ ಮಲಗಿದ್ದ ಪ್ರತಿಭಾ ಅವರನ್ನು ಎಳೆದುಕೊಂಡೇ ಬಸ್ಸಿಗೆ ತಳ್ಳಿದ್ದು, ನಿತ್ರಾಣರಾಗಿ ಕುಸಿತಕ್ಕೆ ಒಳಗಾಗಿದ್ದಾರೆ. ಅಲ್ಲಿದ್ದ ಕೆಲವರು ಅವರಿಗೆ ನೀರು ಹಾಕಿ ಆಸರೆ ನೀಡಿದ್ದಾರೆ. ಆನಂತರ, ಒಬ್ಬೊಬ್ಬರನ್ನು ರಸ್ತೆಯಿಂದ ತೆರವು ಮಾಡಿದ್ದು, ನಾಲ್ಕೈದು ಬಸ್ ಗಳಲ್ಲಿ 150ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ಪಾಂಡೇಶ್ವರ, ಪಣಂಬೂರು ಠಾಣೆಗೆ ಒಯ್ದಿದ್ದಾರೆ. ಅಷ್ಟರಲ್ಲಿ ದೂರ ನಿಂತಿದ್ದ ಮಹಿಳೆಯರು, ಒಂದಷ್ಟು ಯುವಕರು ಚದುರಿದ್ದಾರೆ. ಜಟಾಪಟಿ ಸಂದರ್ಭದಲ್ಲಿ ಅಬ್ದುಲ್ ಖಾದರ್ ಎಂಬ ಯುವಕನಿಗೆ ಪೊಲೀಸರ ಲಾಠಿಯೇಟು ಬಿದ್ದು ಗಾಯಗೊಂಡಿದ್ದು, ಪ್ರತಿಭಟನಾಕಾರರು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜಿಲ್ಲಾಡಳಿತ, ರಾಜ್ಯ ಸರಕಾರಕ್ಕೆ ಮೈನಸ್  

ಟೋಲ್ ಗೇಟ್ ತೆರವು ನೆಪದಲ್ಲಿ ಜನರು ಪೊಲೀಸರೊಂದಿಗೆ ಜಟಾಪಟಿ ನಡೆಸಿದ್ದು, ಪೊಲೀಸರ ಬಲಪ್ರಯೋಗ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ ದೊಡ್ಡ ಮೈನಸ್. ಟೋಲ್ ಗೇಟ್ ಅಕ್ರಮ, ತೆರವು ಮಾಡುತ್ತೇವೆಂದು ವಿಧಾನಸಭೆಯಲ್ಲೇ ಹೇಳಿದ ಬಳಿಕವೂ ಮೀನ ಮೇಷ ಎಣಿಸುತ್ತಿರುವುದನ್ನು ಖಂಡಿಸಿ ಜನರು ಟೋಲ್ ಗೇಟ್ ವಿರೋಧಿ ಸಮಿತಿಯ ಹೆಸರಲ್ಲಿ ಪಕ್ಷ ಭೇದ ಮರೆತು ಮುತ್ತಿಗೆ ಹಾಕಿದ್ದಾರೆ. ಆದರೆ ಜಿಲ್ಲಾಡಳಿತ ನೂರಾರು ಪೊಲೀಸರನ್ನು ಮುಂದಿಟ್ಟು ಹೋರಾಟವನ್ನು ಹತ್ತಿಕ್ಕಲು ಮುಂದಾಗಿದ್ದು, ಜಿಲ್ಲೆಯ ಆಡಳಿತದ ಬಗ್ಗೆ ನೆಗೆಟಿವ್ ಸಂದೇಶ ನೀಡಿದಂತಾಗಿದೆ.

The protest against Surathkal toll gate here on Tuesday October 18, turned worse after the protesters managed to cross the barricade put near NITK restricting them. The protesters, after crossing the barricade, reached the toll. Congress leader Mithun Rai climbed the toll gate and raised slogans. Many protesters were arrested. Former MLC Ivan D’Souza, Muneer Katipalla, Imthiyaz, Sunil Kumar Bajal, former MLA Vinay Kumar Sorake, Dinesh Ullepady and others were arrested.