ಬೆಳ್ತಂಗಡಿ ಶಾಸಕನಿಗೆ ಬೆದರಿಕೆ ಪ್ರಕರಣ ; ಓವರ್ ಟೇಕ್ ಕಾರಣಕ್ಕೆಂದು ಎಸ್ಪಿ ಸಾಹೇಬ್ರು ಸ್ಪಷ್ಟನೆ ಕೊಟ್ಟರೂ ಸಿಐಡಿಗೆ ಒಪ್ಪಿಸಿದ ರಾಜ್ಯ ಸರಕಾರ

18-10-22 01:55 pm       Mangalore Correspondent   ಕರಾವಳಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿದೆ. ಈಗಾಗಲೇ ಪ್ರಕರಣದಲ್ಲಿ ರಿಯಾಜ್ ಎಂಬ ಯುವಕನನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು.

ಮಂಗಳೂರು, ಅ.18: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿದೆ. ಈಗಾಗಲೇ ಪ್ರಕರಣದಲ್ಲಿ ರಿಯಾಜ್ ಎಂಬ ಯುವಕನನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ತನಿಖೆಯ ಸಂದರ್ಭದಲ್ಲಿ ಕೇವಲ ಓವರ್ ಟೇಕ್ ಮಾಡುವ ವಿಚಾರದಲ್ಲಿ ಬೈಗುಳ ನೀಡಿದ್ದೇನೆ ಹೊರತು ವೈಯಕ್ತಿಕ ದ್ವೇಷ ಇಲ್ಲವೆಂದು ತಿಳಿದುಬಂದಿತ್ತು.

ಈ ಬಗ್ಗೆ ತನಿಖೆ ನಡೆಸಿದ್ದ ಎಸ್ಪಿ ಋಷಿಕೇಷ್ ಸೋನವಾಣೆ, ಪ್ರಕರಣದಲ್ಲಿ ಯಾವುದೇ ಶಸ್ತ್ರ ಬಳಕೆಯಾಗಿಲ್ಲ. ತಲವಾರು ಕಂಡುಬಂದಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಓವರ್ ಟೇಕ್ ವಿಚಾರದಲ್ಲಿ ಘಟನೆ ನಡೆದಿತ್ತು. ಆರೋಪಿ ರಿಯಾಜ್ ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ. ಶಾಸಕರು ಪ್ರಯಾಣಿಸುತ್ತಿದ್ದ ಖಾಸಗಿ ಕಾರು ಓವರ್ ಟೇಕ್ ಮಾಡಲು ಬಿಡಲಿಲ್ಲವೆಂದು ಹಿಂದಿನಿಂದ ತೆರಳುತ್ತಿದ್ದ ಸ್ಕಾರ್ಪಿಯೋ ಚಾಲಕ ರಿಯಾಜ್ ಫರಂಗಿಪೇಟೆಯಲ್ಲಿ ಶಾಸಕರಿದ್ದ ವಾಹನದ ಚಾಲಕನಿಗೆ ದಬಾಯಿಸಿದ್ದರು. ಶಾಸಕರಿಗೆ ಬೆದರಿಕೆ ಹಾಕುವ ವಿಚಾರ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಮರುದಿನ ಒತ್ತಡಕ್ಕೆ ಒಳಗಾಗಿಯೋ ಏನೋ, ಆರೋಪಿ ಕಾರಿನಲ್ಲಿ ಸ್ಪಾನರ್ ಪತ್ತೆಯಾಗಿತ್ತು. ಆತ ಬೆದರಿಕೆ ಹಾಕುವ ಸಂದರ್ಭದಲ್ಲಿ ತಲವಾರಿನಂತೆ ಸ್ಪಾನರ್ ತೋರಿಸಿದ್ದ ಅನ್ನುವುದನ್ನು ಎಸ್ಪಿ ಹೇಳಿದ್ದರು.  

ಎಸ್ಪಿ ನೀಡಿದ್ದ ಸ್ಪಷ್ಟನೆಯಿಂದ ಶಾಸಕ ಹರೀಶ್ ಪೂಂಜಾ ತೀವ್ರ ಮುಜುಗರಕ್ಕೊಳಕ್ಕೆ ಒಳಗಾಗಿದ್ದರು. ಹರೀಶ್ ಪೂಂಜ ಕಾರು ಚಾಲಕ ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿದ್ದ ದೂರಿನಲ್ಲಿ ಆರೋಪಿ ತಲವಾರು ತೋರಿಸಿ ಬೆದರಿಕೆ ಹಾಕಿದ್ದ ಎಂದು ದೂರಲಾಗಿತ್ತು. ಈ ನಡುವೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಹರೀಶ್ ಪೂಂಜಾ, ಕಾರಿನಲ್ಲಿ ಒಬ್ಬನೇ ಇದ್ದ, ಆತನೇ ಕಾರು ಚಲಾಯಿಸಿಕೊಂಡಿದ್ದಲ್ಲದೆ ತಲವಾರು ಹಿಡಿದುಕೊಂಡಿದ್ದ ಎಂದು ಹೇಳಿರುವ ವಿಡಿಯೋ ಜಾಲತಾಣದಲ್ಲಿ ಟ್ರೋಲ್ ಆಗಿತ್ತು. ಇದೀಗ ರಾಜ್ಯ ಸರಕಾರ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಐಡಿ ಪೊಲೀಸರಿಗೆ ಒಪ್ಪಿಸಿದೆ. ಸಿಐಡಿ ತನಿಖೆಯಲ್ಲಿ ಸ್ಪಾನರ್ ಜೊತೆಗೆ ಹೊಸ ವಿಚಾರ ಏನು ಬೆಳಕಿಗೆ ಬರುತ್ತದೆ ಅನ್ನೋದು ನೋಡಬೇಕು.

Mangalore Life threat to MLA Harish Poonja, case handed over to CID for investigation.