ಚುನಾವಣೆ ತಯಾರಿ ; ಮಂಗಳೂರು ಉತ್ತರ, ದಕ್ಷಿಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು?  ಬಿಲ್ಲವ ಅಭ್ಯರ್ಥಿ ಕಣಕ್ಕಿಳಿಸಲು ಪಕ್ಷದಲ್ಲಿ ಒತ್ತಡ

20-10-22 06:02 pm       Mangalore Correspondent   ಕರಾವಳಿ

ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ತಿಂಗಳಷ್ಟೇ ಬಾಕಿಯಿದೆ. ಹೀಗಾಗಿ ಆಕಾಂಕ್ಷಿ ಅಭ್ಯರ್ಥಿಗಳು ಸೀಟು ಗಿಟ್ಟಿಸಲು ಈಗಲೇ ಕಸರತ್ತು ನಡೆಸುತ್ತಿದ್ದಾರೆ.

ಮಂಗಳೂರು, ಅ.20: ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ತಿಂಗಳಷ್ಟೇ ಬಾಕಿಯಿದೆ. ಹೀಗಾಗಿ ಆಕಾಂಕ್ಷಿ ಅಭ್ಯರ್ಥಿಗಳು ಸೀಟು ಗಿಟ್ಟಿಸಲು ಈಗಲೇ ಕಸರತ್ತು ನಡೆಸುತ್ತಿದ್ದಾರೆ. ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ಈ ಬಾರಿ ಗೆಲುವು ದಕ್ಕಿಸಿಕೊಳ್ಳಲು ಶತಪ್ರಯತ್ನ ಹಾಕಲು ಮುಂದಾಗಿದೆ. ಯುವ ಅಭ್ಯರ್ಥಿಗಳಿಂದ ಹಿಡಿದು ಜಾತಿವಾರು ಅಳೆದು ತೂಗಿ ಸೀಟು ಕೊಡಬೇಕೆಂಬ ನೆಲೆಯಲ್ಲಿ ಕಾರ್ಯಕರ್ತರು, ಜಿಲ್ಲಾ ಕಾಂಗ್ರೆಸ್ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ.

2018ರ ಚುನಾವಣೆ ವೇಳೆಗೆ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಮತ್ತು ಕಾಂಗ್ರೆಸಿನ ಜೆ.ಆರ್.ಲೋಬೊ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿತ್ತು. ಫಲಿತಾಂಶ ಬಂದಾಗ, ವೇದವ್ಯಾಸ ಕಾಮತ್ 16,075 ಮತಗಳಿಂದ ಗೆಲುವು ಕಂಡಿದ್ದರು. ಬಿಜೆಪಿ ಮಾಡಿದ್ದ ಕೋಮು ಧ್ರುವೀಕರಣ, ಸುಂದರರಾಮ್ ಶೆಟ್ಟಿ ರಸ್ತೆ ನಾಮಕರಣ ವಿಚಾರದಲ್ಲಿ ಬಂಟ ಸಮುದಾಯದ ಅಸಮಾಧಾನ ಸೇರಿದಂತೆ ಸ್ಥಳೀಯ ವಿಚಾರಗಳೇ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದವು. 2013ರಲ್ಲಿ ನಿವೃತ್ತ ಅಧಿಕಾರಿಯಾಗಿದ್ದ ಜೆ.ಆರ್ ಲೋಬೊ, ನಾಲ್ಕು ಬಾರಿಯ ಬಿಜೆಪಿ ಶಾಸಕ ಯೋಗೀಶ್ ಭಟ್ ಅವರನ್ನು ಸೋಲಿಸಿ ಗೆಲುವು ಕಂಡಿದ್ದರು. 1994ರಿಂದ ತೊಡಗಿ 2008ರ ವರೆಗೂ ಸತತವಾಗಿ ನಾಲ್ಕು ಬಾರಿ ಯೋಗೀಶ್ ಭಟ್ ಗೆಲ್ಲುತ್ತಾ ಬಂದಿದ್ದರು.

ಮಂಗಳೂರು ದಕ್ಷಿಣ ಕ್ಷೇತ್ರವನ್ನು ಹಿಂದಿನಿಂದಲೂ ಕಾಂಗ್ರೆಸ್, ಕ್ರಿಸ್ತಿಯನ್ ಕೋಟಾದಡಿ ಆ ಸಮುದಾಯದ ಅಭ್ಯರ್ಥಿಗಳಿಗೆ ಬಿಟ್ಟುಕೊಡ್ತಾ ಬಂದಿತ್ತು. ಹಾಗಂತ, ಮಂಗಳೂರು ದಕ್ಷಿಣದಲ್ಲಿ ಕ್ರಿಸ್ತಿಯನ್ ಮತದರಾರೇನು ಮೆಜಾರಿಟಿ ಇದ್ದಾರೆಂದಲ್ಲ. ಕರಾವಳಿಯ ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಕ್ರಿಸ್ತಿಯನ್ ಮತಗಳು ಈ ಕ್ಷೇತ್ರದಲ್ಲಿ ಹೆಚ್ಚಿವೆ. ಹಾಗಾಗಿ ರಾಜ್ಯದಲ್ಲಿ ಒಬ್ಬರಿಗೆ ಕ್ರಿಸ್ತಿಯನ್ ಕೋಟಾದಡಿ ಸೀಟು ಕೊಡಬೇಕು ಎನ್ನುವ ನೆಲೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರವನ್ನು ಮೀಸಲಿರಿಸಿತ್ತು. ಈ ಕ್ಷೇತ್ರದಲ್ಲಿ ಹೆಚ್ಚಿರುವ ಬಿಲ್ಲವರು ಮತ್ತು ಬಂಟ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು ಇವೆರಡು ಸಮುದಾಯಗಳ ಓಟು ಗಿಟ್ಟಿಸಿದರೆ ಗೆಲುವು ನಿಶ್ಚಿತ ಅನ್ನುವ ಲೆಕ್ಕಾಚಾರ ಇದೆ. ಜೊತೆಗೆ, ಒಂದಷ್ಟು ಜಿಎಸ್ ಬಿ ಕೊಂಕಣಿ ಸಮುದಾಯದ ಮತಗಳೂ ರಥಬೀದಿ ಆಸುಪಾಸಿನಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಜಿಎಸ್ ಬಿ ಸಮುದಾಯಕ್ಕೆ ಸೀಟು ಬಿಟ್ಟು ಕೊಡುತ್ತಿದ್ದರೆ, ಕಾಂಗ್ರೆಸ್ ಕ್ರಿಸ್ತಿಯನ್ನರಿಗೆ ಸೀಟು ಕೊಡ್ತಾ ಬಂದಿತ್ತು.

ಮಂಗಳೂರಿನಲ್ಲಿ ಐವಾನ್, ಲೋಬೊ ಲಾಬಿ

Mangaluru: Chance now for J R Lobo or Ivan D'Souza to be minister? -  Daijiworld.com

ಕ್ರಿಸ್ತಿಯನ್ ಕೋಟಾ ಲೆಕ್ಕಾಚಾರದಲ್ಲಿ ಈ ಬಾರಿಯೂ ಜೆ.ಆರ್ ಲೋಬೊ ಮತ್ತು ಐವಾನ್ ಡಿಸೋಜ ಟಿಕೆಟ್ ಗಿಟ್ಟಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರ ಇದ್ದಾಗ ವಿಧಾನ ಪರಿಷತ್ ಸದಸ್ಯರಾಗಿದ್ದ ಐವಾನ್ ಡಿಸೋಜ ಸದ್ಯಕ್ಕೆ ಮಾಜಿಯಾಗಿದ್ದಾರೆ. ಈ ಬಾರಿ ಲೋಬೊ ಬದಲು ತನಗೇ ಸೀಟು ಕೊಡಬೇಕೆಂದು ಲಾಬಿ ನಡೆಸುತ್ತಿದ್ದಾರೆ. ಲೋಬೊ ಮತ್ತು ಬೆಂಬಲಿಗರು ಮಾತ್ರ ಸದ್ದಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಜಿಲ್ಲಾ ಕಾಂಗ್ರೆಸ್ ಘಟಕದ ಕೆಳಹಂತದ ನಾಯಕರು ಮಾತ್ರ, ಈ ಬಾರಿ ಹಿಂದು ಅಭ್ಯರ್ಥಿಗೆ ಸೀಟು ಕೊಡಬೇಕು ಎಂದು ಕೇಳುತ್ತಿದ್ದಾರೆ. ಬಿಜೆಪಿಯ ಹಿಂದುತ್ವದ ರಾಜಕಾರಣಕ್ಕೆ ಹಿಂದು ಅಭ್ಯರ್ಥಿಯನ್ನೇ ನಿಲ್ಲಿಸಿದರೆ ಠಕ್ಕರ್ ಕೊಡಬಹುದು ಅನ್ನುವ ಲೆಕ್ಕಾಚಾರ ಅವರದ್ದಿದೆ. ಅಧಿಕಾರಕ್ಕೆ ಬಂದಲ್ಲಿ ಕ್ರಿಸ್ತಿಯನ್ ಕೋಟಾದಡಿ ಐವಾನ್ ಅಥವಾ ಲೋಬೊಗೆ ಪರಿಷತ್ತಿನಲ್ಲಿ ಸೀಟು ದೊರಕಿಸಬಹುದು. ಸರಕಾರ ಬರಬೇಕಿದ್ದರೆ ಗೆಲುವು ಮುಖ್ಯ ಅನ್ನುವ ಇರಾದೆಯಲ್ಲಿದ್ದಾರೆ. ಒಂದ್ವೇಳೆ, ಕ್ರಿಸ್ತಿಯನ್ ಬಿಟ್ಟು ಬೇರೆ ಅಭ್ಯರ್ಥಿಯನ್ನು ಪರಿಗಣಿಸಿದರೆ ಬಿಲ್ಲವ ಕೋಟಾದಡಿ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ, ವಕೀಲ ಪದ್ಮರಾಜ್ ಹೆಸರು ಇದೆಯಂತೆ.

ಉತ್ತರದಲ್ಲಿ ಇನಾಯತ್ ಆಲಿ, ಬಾವಾ, ಮಲ್ಲಿ  

Life Threat to Former MLA Moideen Bava, Case Filed - Mangalorean.com

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಈ ಬಾರಿಯೂ ಮೊಯ್ದೀನ್ ಬಾವ ಸೀಟು ಗಿಟ್ಟಿಸಲು ಕಸರತ್ತಿನಲ್ಲಿದ್ದಾರೆ. ಇದರ ಜೊತೆಗೆ, ಇತ್ತೀಚೆಗೆ ಕೆಪಿಸಿಸಿ ಕಾರ್ಯದರ್ಶಿ ಪಟ್ಟ ಗಿಟ್ಟಿಸಿಕೊಂಡಿರುವ ಯುವ ನಾಯಕ ಇನಾಯತ್ ಆಲಿ ಕೂಡ ಸೀಟಿಗಾಗಿ ಲಾಬಿ ನಡೆಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿರುವ ಇನಾಯತ್ ಆಲಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಪ್ತರಾಗಿದ್ದು, ಹಣ ಬಲದಿಂದ ಸೀಟು ಗಿಟ್ಟಿಸುತ್ತಾರೆ ಅನ್ನುವ ಮಾತುಗಳು ಕೇಳಿಬರುತ್ತಿವೆ. ಇದೇ ವೇಳೆ, ತನಗೆ ಸೀಟು ಕೊಡದೇ ಇದ್ದಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡುತ್ತೇನೆಂದು ಮೊಯ್ದೀನ್ ಬಾವ ಹೇಳಿಕೊಂಡು ತಿರುಗುತ್ತಿದ್ದಾರೆ. ಇದರ ಮಧ್ಯೆ ಮಂಗಳೂರು ಉತ್ತರ ಕ್ಷೇತ್ರದಲ್ಲಿಯೂ ಹಿಂದು ಅಭ್ಯರ್ಥಿಯನ್ನು ನಿಲ್ಲಿಸಬೇಕು ಎನ್ನುವ ಕೂಗು ಕಾರ್ಯಕರ್ತರಲ್ಲಿದೆ. ಕ್ಷೇತ್ರದಲ್ಲಿ ಬಿಲ್ಲವ ಮತಗಳು ಅತಿ ಹೆಚ್ಚಿದ್ದು, ಅದೇ ಸಮುದಾಯದ ಅಭ್ಯರ್ಥಿಗೆ ಸೀಟು ಕೊಟ್ಟರೆ ಗೆಲುವು ನಿಶ್ಚಿತ ಎನ್ನುವ ಮಾತು ಜಿಲ್ಲಾ ಕಾಂಗ್ರೆಸ್ ಒಳಗಿದೆ.

ಹಿಂದು ಅಭ್ಯರ್ಥಿ ಕಣಕ್ಕಿಳಿದರೆ ಪೈಪೋಟಿ

Speculations arise over BS Yediyurappa's exit from Karnataka CM post;  here's all you need to know

2013ರಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದು, ಆ ಪಕ್ಷದಿಂದ ಅಭ್ಯರ್ಥಿ ಹಾಕಿದ್ದರಿಂದ ಮಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿತ್ತು. ಅದೇ ಕಾರಣಕ್ಕೆ ಯಡಿಯೂರಪ್ಪ ಸರಕಾರದಲ್ಲಿ ಸಚಿವರಾಗಿದ್ದ ಕೃಷ್ಣ ಪಾಲೆಮಾರ್ ಅವರನ್ನು ಹೆಸರೇ ಇಲ್ಲದ ಮೊಯ್ದೀನ್ ಬಾವ ಚುನಾವಣೆಯಲ್ಲಿ ಸೋಲಿಸಿದ್ದರು. ದಕ್ಷಿಣದಲ್ಲಿ ಯೋಗೀಶ್ ಭಟ್ ಕೂಡ ಲೋಬೊ ಮುಂದೆ ಸೋಲುವಂತಾಗಿತ್ತು. 2018ರಲ್ಲಿ ಮೊಯ್ದೀನ್ ಬಾವ, ಬಿಜೆಪಿಯ ಹಿಂದುತ್ವದ ರಾಜಕಾರಣದ ಮುಂದೆ ಸೋಲು ಕಂಡಿದ್ದರೆ, ಬಿಜೆಪಿಯಿಂದ ಹೊಸ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಭರತ್ ಶೆಟ್ಟಿ 26 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಚುನಾವಣೆಗೆ ಮುನ್ನ ಸುರತ್ಕಲ್ ನಲ್ಲಿ ನಡೆದ ದೀಪಕ್ ರಾವ್ ಕೊಲೆಯ ಕಾರಣದಿಂದ ಮತಗಳು ಧ್ರುವೀಕರಣಗೊಂಡಿದ್ದು ಮೊಯ್ದೀನ್ ಬಾವ ಸೋಲಲು ಕಾರಣವಾಗಿತ್ತು. ಈ ಬಾರಿಯೂ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸಿನಿಂದ ಹಿಂದು ಅಭ್ಯರ್ಥಿ ಕಣಕ್ಕಿಳಿದಲ್ಲಿ ನೇರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ರಾಕೇಶ್ ಮಲ್ಲಿ, ಪ್ರತಿಭಾ ಕುಳಾಯಿ ಸೀಟಿಗಾಗಿ ಲಾಬಿ ನಡೆಸುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮೂಲಗಳ ಪ್ರಕಾರ, ಮಂಗಳೂರು ದಕ್ಷಿಣದಲ್ಲಿ ಕ್ರಿಸ್ತಿಯನ್ ಕೊಟ್ಟರೆ, ಉತ್ತರಕ್ಕೆ ಬಿಲ್ಲವ ಕೋಟಾದಡಿ ಅಭ್ಯರ್ಥಿ ಪರಿಗಣನೆ ಮಾಡುತ್ತಾರೆ ಎನ್ನಲಾಗುತ್ತಿದೆ.

AAP opens membership, starts mega-programme in Rajasthan

ತೊಡರುಗಾಲು ಆಗುವರೇ ಆಮ್ ಆದ್ಮಿ ?  

ಇದಲ್ಲದೆ, ಮಂಗಳೂರು ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷ ಮತ್ತು ಹಿಂದು ಮಹಾಸಭಾದಿಂದಲೂ ಅಭ್ಯರ್ಥಿ ಹಾಕಲಿದ್ದಾರೆ. ಆಮ್ ಆದ್ಮಿಯಿಂದ ಮಂಗಳೂರು ದಕ್ಷಿಣದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಸ್ಪರ್ಧಿಸುವುದು ಖಚಿತವಾಗಿದೆ. ಇವರು ಸ್ಪರ್ಧಿಸಿದಲ್ಲಿ ಒಂದಷ್ಟು ಜಿಎಸ್ ಬಿ ಕೋಟಾದ ಮತಗಳು ಅತ್ತ ಹೋಗುವ ಸಾಧ್ಯತೆಯಿದೆ. ಜೊತೆಗೆ, ಒಂದಷ್ಟು ಕ್ರಿಸ್ತಿಯನ್ನರು ಆಮ್ ಆದ್ಮಿಯಲ್ಲಿ ಸಕ್ರಿಯರಾಗಿದ್ದು, ಆ ಮತಗಳು ಪಕ್ಷದ ಆಪ್ ಪಾಲಾಗಲಿವೆ. ಇವರು ಪಡೆಯುವ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಒಂದಷ್ಟು ಹೊಡೆತ ನೀಡುವ ಸಾಧ್ಯತೆಯೂ ಇಲ್ಲದಿಲ್ಲ. ಕಳೆದ ಚುನಾವಣೆಯಲ್ಲಿ ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಬಿಜೆಪಿ ಭಾರೀ ಅಂತರದಿಂದ ಗೆಲುವು ಕಂಡಿರುವುದರಿಂದ ಕಾಂಗ್ರೆಸ್ ನಿಂದ ಈ ಬಾರಿ ಹಿಂದು ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆಂಬ ಒತ್ತಾಸೆ ಕಾರ್ಯಕರ್ತರಲ್ಲಿ ಇದೆ.

Election 2023, Mangalore south and north contestants from Billava community under pressure.