Impact: ಮುಡಿಪು ಮಣ್ಣು ಮಾರಾಟ ದಂಧೆ ; ಎಚ್ಚೆತ್ತ ದ.ಕ. ಜಿಲ್ಲಾಧಿಕಾರಿ, ಸಮಗ್ರ ವರದಿಗೆ ಸೂಚನೆ

11-10-20 01:59 pm       Mangaluru Correspondent   ಕರಾವಳಿ

ಮುಡಿಪು ಮಣ್ಣು ಮಾರಾಟ ದಂಧೆಯ ಬಗ್ಗೆ ‘ಹೆಡ್ ಲೈನ್ ಕರ್ನಾಟಕ’ ಮಾಡಿದ ವಿಸ್ತೃತ ವರದಿಯಿಂದ ಅಧಿಕಾರಿಗಳು ಎಚ್ಚತ್ತುಕೊಂಡಿದ್ದಾರೆ.

ಮಂಗಳೂರು, ಅಕ್ಟೋಬರ್ 11: ಮುಡಿಪು ಮಣ್ಣು ಮಾರಾಟ ದಂಧೆಯ ಬಗ್ಗೆ ‘ಹೆಡ್ ಲೈನ್ ಕರ್ನಾಟಕ’ ಮಾಡಿದ ವಿಸ್ತೃತ ವರದಿಯಿಂದ ಅಧಿಕಾರಿಗಳು ಎಚ್ಚತ್ತುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಗಣಿಗಾರಿಕೆ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವುದಕ್ಕಾಗಿ ಏಳು ಮಂದಿ ಅಧಿಕಾರಿಗಳನ್ನು ನಿಯೋಜಿಸಿದ್ದಾಗಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸೂಚನೆಯಂತೆ ಮಂಗಳೂರಿನ ಸಹಾಯಕ ಕಮಿಷನರ್ ಮದನ್ ಮೋಹನ್, ಪೊಲೀಸರ ಜೊತೆಗೆ ಅಕ್ರಮ ದಂಧೆ ನಡೆಯುವ ಮುಡಿಪು ಪ್ರದೇಶಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಗಣಿಗಾರಿಕೆ ಸ್ಥಳದಲ್ಲಿದ್ದ 30ಕ್ಕೂ ಹೆಚ್ಚು ಟಿಪ್ಪರ್ ಮತ್ತು ಕಂಟೇನರ್ ಲಾರಿ, 5 ಜೆಸಿಬಿ ಹಾಗೂ ಮೂರು ಹಿಟಾಚಿ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಮಣ್ಣು ಮಾರಾಟ ದಂಧೆಯ ಬಗ್ಗೆ ಗಮನಕ್ಕೆ ಬಂದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲು ಏಳು ಮಂದಿ ಅಧಿಕಾರಿಗಳನ್ನು ನಿಯೋಜಿಸಿದ್ದೇನೆ. ಪರಿಸರಕ್ಕೆ ಹಾನಿಯಾಗುವ ವಿಚಾರದಲ್ಲಿ ದೂರುಗಳು ಬಂದಿದ್ದವು. ಸ್ಥಳದಲ್ಲಿ ಗಣಿಗಾರಿಕೆ ನಡೆಸಲು ಲೈಸನ್ಸ್ ಇದೆಯೇ ಅಥವಾ ಮಣ್ಣು ಮಾರಾಟಕ್ಕೆ ಲೈಸನ್ಸ್ ಇದೆಯೇ ಅನ್ನುವ ವಿಚಾರದಲ್ಲಿ ಒಂದು ವಾರದೊಳಗೆ ರಿಪೋರ್ಟ್ ನೀಡಲು ಆದೇಶ ಮಾಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.  

ಮಂಗಳೂರು ಹೊರವಲಯದ ಮುಡಿಪು, ಪಜೀರು, ಕೈರಂಗಳ, ಬಾಳೆಪುಣಿ, ಕೋಣಾಜೆ ಗ್ರಾಮಗಳಲ್ಲಿ ದೊಡ್ಡ ಮಟ್ಟದ ಅಕ್ರಮ ಬಾಕ್ಸೈಟ್ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವರದಿ ಮಾಡಲಾಗಿತ್ತು. ಮಣ್ಣನ್ನು ಕಂಟೇನರ್ ಲಾರಿಗಳಲ್ಲಿ ತುಂಬಿಸಿ ತಮಿಳ್ನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ದಂಧೆಯಲ್ಲಿ ಪ್ರಭಾವಿ ಶಾಸಕರು ಮತ್ತು ರಾಜಕಾರಣಿಗಳು ಭಾಗಿಯಾಗಿದ್ದು, ಕಳೆದ ಐದಾರು ವರ್ಷಗಳಿಂದ ದಂಧೆ ನಡೆಯುತ್ತಿದೆ.

ಇದನ್ನೂ ಓದಿ: ಮುಡಿಪು ಗುಡ್ಡಕ್ಕೇ ಕನ್ನ ; ಮಣ್ಣಿನ ದಂಧೆ ಬಲುಜೋರು, ಪ್ರಭಾವಿಗಳ ಕಾರುಬಾರು !

Mangaluru DC Rajendra orders to draft seven member committee in probing illegal sand mining in Mudipu, Mangalore after a detailed News report by "Headline Karnataka". Concerning the scandal, one has been arrested.