ಟ್ರೋಲ್ ಬಗ್ಗೆ ಕ್ಯಾರ್ ಮಾಡಲ್ಲ, ಲಂಚ- ಮಂಚದ ವಿಡಿಯೋ ಅಲ್ಲ, ಅಸಹ್ಯ ನಿಂದಿಸಿದವರನ್ನು ಹಾಗೇ ಬಿಡೋದಿಲ್ಲ ; ಪ್ರತಿಭಾ ಕುಳಾಯಿ

21-10-22 10:36 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ರಸ್ತೆಯಲ್ಲಿ ಮಲಗಿ ಧರಣಿ ನಡೆಸಿದ್ದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರ ವಿಡಿಯೋ ವೈರಲ್ ಆಗಿತ್ತು.

ಮಂಗಳೂರು, ಅ.21: ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ರಸ್ತೆಯಲ್ಲಿ ಮಲಗಿ ಧರಣಿ ನಡೆಸಿದ್ದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರ ವಿಡಿಯೋ ವೈರಲ್ ಆಗಿತ್ತು. ಆದರೆ ಆ ವಿಡಿಯೋವನ್ನು ಹಿಂದು ಸಂಘಟನೆ ಕಾರ್ಯಕರ್ತರು ವಿಕೃತವಾಗಿ ಬಿಂಬಿಸಿ ಟ್ರೋಲ್ ಮಾಡಿದ್ದರು. ಪ್ರತಿಭಾ ಕುಳಾಯಿ ಬಗ್ಗೆ ಅಶ್ಲೀಲವಾಗಿ ಜಾಲತಾಣದಲ್ಲಿ ಬರೆದು ಹಾಕಿದ್ದರು. ಈ ಬಗ್ಗೆ ಪ್ರತಿಭಾ ಕುಳಾಯಿ ಮಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪ್ರತಿಭಾ ಕುಳಾಯಿ, ನೀವು ಟ್ರೋಲ್ ಮಾಡಿದ್ದೀರಿ ಅಂತ ನಾನೇನು ಪ್ರತಿಭಟನೆಯಿಂದ ಹಿಂದೆ ಸರಿಯೋದಿಲ್ಲ. ಆದರೆ, ವಿಕೃತವಾಗಿ ಟ್ರೋಲ್ ಮಾಡಿದವರನ್ನು ನಾನು ಬಿಡುವುದಿಲ್ಲ. ಸೈಬರ್ ಕಾಯ್ದೆಯಡಿ ದೂರು ನೀಡುತ್ತೇನೆ. ಯಾರೆಲ್ಲ ಅಸಹ್ಯವಾಗಿ ಬಿಂಬಿಸಿ, ಟ್ರೋಲ್ ಮಾಡಿದ್ದಾರೆ. ಅಂಥವರನ್ನು ತಕ್ಕ ಶಾಸ್ತಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಪ್ರತಿಭಾ ಕುಳಾಯಿ ತನ್ನನ್ನು ಪೊಲೀಸರು ಎತ್ತಿಕೊಂಡು ಹೋಗಲು ಯತ್ನಿಸಿದಾಗ, ಕಿರುಚಾಡಿದ್ದರು. ಫೇಸ್ಬುಕ್ ಜಾಲತಾಣದಲ್ಲಿ ಇದೇ ವಿಡಿಯೋವನ್ನು ಕಾಂತಾರ – 2 ಎನ್ನುವ ರೀತಿ ಬಿಂಬಿಸಿ ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಿಭಾ ಅವರು, ನನಗೆ ಕಾಂತಾರ-2, 3, 4 ಮಾಡುವುದಕ್ಕೆ ಗೊತ್ತಿದೆ. ಕಾನೂನು ಏನೆಂದು ಗೊತ್ತಿದೆ. ಅಲ್ಲಿ ಒಬ್ಬ ಬ್ರಾಹ್ಮಣನಾಗಿ ಆತನ ಭಾಷೆಯೇ ವಿಕೃತಿಯನ್ನು ತೋರಿಸುತ್ತಿದೆ. ಕೆ.ಆರ್ ಶೆಟ್ಟಿ ಅಡ್ಯಾರ್ ಪದವು ಮತ್ತು ಶ್ಯಾಮಸುದರ್ಶನ್ ಭಟ್ ಹೊಸಮೂಲೆ ಎಂಬವರು ವಿಕೃತವಾಗಿ ಬರೆದುಕೊಂಡಿದ್ದಾರೆ. ಇವರ ವಿರುದ್ಧ ಕೇಸು ದಾಖಲಿಸುತ್ತೇನೆ ಎಂದಿದ್ದಾರೆ.

ನನ್ನದು ಲಂಚ- ಮಂಚದ ವಿಡಿಯೋ ಅಲ್ಲ

ಟ್ರೋಲ್ ವಿಡಿಯೋ ಕಾರಣಕ್ಕೆ ನನಗೇನು ಅಸಹ್ಯ ಆಗಿಲ್ಲ. ಲಂಚದ ಅಥವಾ ಮಂಚದ ವಿಡಿಯೋ ಅಲ್ಲ. ಹಾಲಪ್ಪ, ರೇಣುಕಾಚಾರ್ಯ, ಜಾರಕಿಹೊಳಿಯವರು ಮಂಚದ ವಿಡಿಯೋದಲ್ಲಿದ್ದು, ನಾಚಿಕೆ ಇಲ್ಲದೆ ಚುನಾವಣೆ ಎದುರಿಸುತ್ತಿದ್ದಾರೆ. ಅಂಥವಳು ನಾನೇನು ಅಲ್ಲ. ಸುರತ್ಕಲ್ ಟೋಲ್ ಗೇಟ್ನದ್ದು ಕಾಂತಾರ 2 ಆಗಿರಬಹುದು. ಹಿಂದೊಮ್ಮೆ ಹೆಣ್ಮಕ್ಕಳ ಮೇಲೆ ಕಿರುಕುಳ ಕೊಟ್ಟವನಿಗೆ ಹೊಡೆದಿದ್ದೆ ಅದು ಕಾಂತಾರ-3, ಸುರತ್ಕಲ್ ನಲ್ಲಿ ಅರ್ಧಕ್ಕೆ ಎದ್ದು ನಿಂತ ಬಿಲ್ಡಿಂಗ್ ಇದೆ, ಅದನ್ನು ಹಾಗೆಯೇ ಬಿಟ್ಟು ಬಿಟ್ಟಿದ್ದಾರೆ. ಅದರ ವಿಡಿಯೋ ಬರಲಿದೆ, ಅದು ಕಾಂತಾರ -4. ಎಂಆರ್ ಪಿಎಲ್ ನಲ್ಲಿ ಕೆಲಸ ಕೊಡದೆ ವಂಚಿಸುತ್ತಿದ್ದಾರಲ್ಲಾ ಇವರು, ಅದು ಕಾಂತಾರ-5. ಸಿನಿಮಾದ ನಾಗವಲ್ಲಿ ಅಂತ ಹೇಳ್ತಾರಲ್ಲಾ, ನಾನು ರಿಯಲ್ ನಾಗವಲ್ಲಿ. ಸಿನಿಮಾದ ನಾಗವಲ್ಲಿ ಅಲ್ಲ. ಇವರ ಟ್ರೋಲ್ ಗೆಲ್ಲ ಕ್ಯಾರ್ ಮಾಡೋದಿಲ್ಲ. ಹಾಗಂತ, ಹರೀಶ್ ಪೂಂಜಾನ ಹಾಗೆ ಸುಳ್ಳು ದೂರು ಕೊಟ್ಟು ಪ್ರಚಾರ ಪಡೆಯುವುದಿಲ್ಲ. ರಾತ್ರಿ ನನ್ನ ಮನೆಗೆ ಪೊಲೀಸರು ಹೊಕ್ಕರೂ, ತಲವಾರು ಹಿಡಿದು ಬಂದರೆಂದು ನಾನು ಹೇಳೋದಿಲ್ಲ ಎಂದು ಕಿಚಾಯಿಸಿದರು.

ನನ್ನ ವಿಡಿಯೋವನ್ನು ಅಸಹ್ಯವಾಗಿ ಬಿಂಬಿಸಿದ, ಕೀಳಾಗಿ ಬರೆದ ಇವರ ಮನೆಗೆ ನಾನೇ ಬರುತ್ತೇನೆ. ಅದರ ವಿಡಿಯೋವನ್ನು ನಾನೇ ಜಾಲತಾಣದಲ್ಲಿ ಹಾಕುತ್ತೇನೆ. ಇವರ ಅಕ್ಕ, ತಂಗಿ, ಅಮ್ಮ ಇದೇ ರೀತಿ ಇರಬೇಕೋ ಏನೋ.. ಇವ ಆರೆಸ್ಸೆಸ್ ಅಥವಾ ಬಿಜೆಪಿ ಏನೇ ಆಗಿರಲಿ. ನಾನು ಬಿಡೋದಿಲ್ಲ. ಬಿಜೆಪಿಯವರು ಧರ್ಮ, ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಆದರೆ ನಾನೊಬ್ಬ ಹೆಣ್ಮಗಳಾಗಿ ನನ್ನ ಬಗ್ಗೆ ಬಿಜೆಪಿಯವರು ಅತಿರೇಕವಾಗಿ ವರ್ತಿಸುತ್ತಿದ್ದಾರೆ. ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಮುಂದಕ್ಕೆ ಕೇಸ್ ಆದಬಳಿಕ, ಬಿಜೆಪಿ ನಾಯಕರು ಅದು ನಮ್ಮವರು ಮಾಡಿದ್ದಲ್ಲ, ಯಾರೋ ಜಿಹಾದಿಗಳು ಮಾಡಿರಬೇಕು ಎಂದು ಹೇಳಿಯಾರು.

ನಾನೊಬ್ಬ ಬಿಲ್ಲವ ಯುವತಿ. ಮೇಲಾಗಿ ಹಿಂದು ಮಹಿಳೆ. ಹಿಂದು ಸಂಘಟನೆಗಳೆಂದು ಹೇಳಿಕೊಂಡವರು ಮಹಿಳೆಯನ್ನು ನೋಡುವ ದೃಷ್ಟಿ ಇದರಿಂದ ಕಾಣುತ್ತಿದೆ. ಇವರಿಗೆ ಕಾನೂನು ಪ್ರಕಾರ, ಏನೆಲ್ಲ ಮಾಡಬೇಕೋ ಮಾಡುತ್ತಿದ್ದೀನಿ. 500ಕ್ಕೂ ಹೆಚ್ಚು ಮಕ್ಕಳನ್ನು ದತ್ತು ಪಡೆದು ಶಿಕ್ಷಣದ ವೆಚ್ಚ ಭರಿಸುತ್ತಿದ್ದೇನೆ. ನನ್ನ ಸಮಾಜ ಪರ ಚಟುವಟಿಕೆ ಸಮಾಜದ ಜನರಿಗೆ ಗೊತ್ತಿದೆ. ಇಂಥ ಟ್ರೋಲ್ ಮಾಡುವ ಮಂದಿಯ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಪ್ರತಿಭಾ ಹೇಳಿದ್ದಾರೆ.

KPCC coordinator Prathibha Kulai has lashed out at the social media trolls against her and said she will file a complaint with the police against the derogatory remarks made in the trolls over her participation in the toll gate protests held on October 18.