ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ನಾಮಕರಣ ; ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಗದ್ದಲ, ಆಕ್ಷೇಪ

29-10-22 02:17 pm       HK News Desk   ಕರಾವಳಿ

ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ಅವರ ಹೆಸರಿಡುವುದಕ್ಕೆ ಕಾಂಗ್ರೆಸ್ ಸದಸ್ಯರು ಪ್ರಬಲ ಆಕ್ಷೇಪ ಸಲ್ಲಿಸಿದ್ದು ಪಾಲಿಕೆಯ ಸಭೆಯಲ್ಲಿ ಗದ್ದಲ ನಡೆಸಿದ್ದಾರೆ.

ಮಂಗಳೂರು, ಅ.29: ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ಅವರ ಹೆಸರಿಡುವುದಕ್ಕೆ ಕಾಂಗ್ರೆಸ್ ಸದಸ್ಯರು ಪ್ರಬಲ ಆಕ್ಷೇಪ ಸಲ್ಲಿಸಿದ್ದು ಪಾಲಿಕೆಯ ಸಭೆಯಲ್ಲಿ ಗದ್ದಲ ನಡೆಸಿದ್ದಾರೆ. ಶನಿವಾರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸಾವರ್ಕರ್ ನಾಮಕರಣ ವಿಚಾರ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಪಾಲಿಕೆಯ ಕಳೆದ ಸಾಮಾನ್ಯ ಸಭೆಯಲ್ಲಿ ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ಹೆಸರಿಡುವ ಪ್ರಸ್ತಾಪವನ್ನು ಕೊನೆಯ ಕ್ಷಣದಲ್ಲಿ ಕಾರ್ಯಸೂಚಿಗೆ ಸೇರಿಸಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ನಾಯಕರಿಂದ ಆಕ್ಷೇಪವೂ ವ್ಯಕ್ತವಾಗಿತ್ತು. ಆದರೆ‌ ಪಾಲಿಕೆ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಿರಲಿಲ್ಲ. ಈ ಬಗ್ಗೆ ಇಂದಿನ ಪಾಲಿಕೆ ಸಭೆಯಲ್ಲಿ  ನಿರ್ಣಯ ಸ್ವೀಕರಿಸುವ ಮುನ್ನ ಕಾಂಗ್ರೆಸ್ ಪಕ್ಷದ ಆಕ್ಷೇಪವನ್ನು ದಾಖಲಿಸಬೇಕು ಎಂದು ಪಾಲಿಕೆಯ ಪ್ರತಿಪಕ್ಷದ ನಾಯಕ ನವೀನ್ ಡಿಸೋಜ ಒತ್ತಾಯಿಸಿದ್ದಾರೆ. ಇದಕ್ಕೆ ಇತರೇ ಕಾಂಗ್ರೆಸ್ ಸದಸ್ಯರು ಕೂಡ ದನಿಗೂಡಿಸಿದ್ದಾರೆ.

ಕಾಂಗ್ರೆಸ್ ಮಾಜಿ ವಿಪಕ್ಷ ನಾಯಕ ಅಬ್ದುಲ್ ರವೂಫ್ ಮಾತನಾಡಿ, ಅಭಿವೃದ್ಧಿ ಕಾರ್ಯ, ತುರ್ತು ವಿಚಾರಗಳನ್ನು ಮಾತ್ರ ಕೊನೆ ಕ್ಷಣದಲ್ಲಿ ಕಾರ್ಯಸೂಚಿಗೆ ಸೇರಿಸಬಹುದು. ನಾಮಕರಣ ವಿಚಾರಗಳ ಬಗ್ಗೆ ಪಾಲಿಕೆಯಲ್ಲಿ ಚರ್ಚೆಗೂ ಅವಕಾಶ ನೀಡದೆ ಯಾಕೆ ಕೊನೆ ಕ್ಷಣದಲ್ಲಿ ಕಾರ್ಯ ಸೂಚಿಗೆ ಸೇರಿಸುತ್ತೀರಿ. ಇದರ ಅರ್ಥ ಏನು ಎಂದು ಆಡಳಿತಾರೂಢ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಆದರೆ ಬಿಜೆಪಿ ಸದಸ್ಯರು ಮಾತ್ರ ತಮ್ಮ ಕಾರ್ಯವನ್ನು ಸಮರ್ಥನೆ ಮಾಡಲು ತೊಡಗಿದರು. ಎರಡು ವರ್ಷಗಳ ಹಿಂದೆಯೇ ಪ್ರಸ್ತಾಪ ಆಗಿತ್ತು. ನಾಮಕರಣ ವಿಚಾರದಲ್ಲಿ ರಾಜ್ಯ ಸರಕಾರದಿಂದಲೂ ಒಪ್ಪಿಗೆ ಪಡೆದಿದ್ದೇವೆ ಎಂದರು. ಕಾಂಗ್ರೆಸ್ ಸದಸ್ಯರ ಆಕ್ಷೇಪ ದಾಖಲಿಸಲು ಮೇಯರ್ ಒಪ್ಪದ ಕಾರಣ, ವಿಪಕ್ಷ ಸದಸ್ಯರು ಸಭೆಯ ನಡುವೆ ಮೇಯರ್ ಪೀಠದ ಮುಂದೆ ಧರಣಿ ನಡೆಸಿ ಗದ್ದಲ ಎಬ್ಬಿಸಿದರು. ಬಳಿಕ ಮೇಯರ್ ಪಾಲಿಕೆ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿ ಹೊರ ನಡೆದದರು. ಕೆಲವು ನಿಮಿಷಗಳ ಬಳಿಕ ಸಭೆಯನ್ನು ಮತ್ತೆ ಆರಂಭಿಸಲಾಯಿತು. ಪ್ರತಿಪಕ್ಷ ಸದಸ್ಯರು ತಮ್ಮ ಪಟ್ಟು ಸಡಿಲಿಸದ ಕಾರಣ ಕಾಂಗ್ರೆಸ್ ಆಕ್ಷೇಪವನ್ನು ದಾಖಲಿಸಲು ಮೇಯರ್ ಒಪ್ಪಿಗೆ ನೀಡಿದರು. ಕೊನೆಗೆ, ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಆಕ್ಷೇಪ ಅಂಗೀಕರಿಸುವುದಾಗಿ ಮೇಯರ್ ಜಯಾನಂದ್ ಸಭೆಗೆ ತಿಳಿಸಿದರು.

Mangalore Naming Surathkal circle as
Savarkar, congress leaders oppose in MCC meeting