ಬಿಜೆಪಿ ವಿರುದ್ಧವೇ ಜನಾರ್ದನ ರೆಡ್ಡಿ ಅಸಮಾಧಾನ ; ಚುನಾವಣೆ ವೇಳೆಗೆ ಬಂಡಾಯದ ಸುಳಿವು, ಬಿಜೆಪಿ ನಾಯಕರಿಂದ ಕಿರುಕುಳ ಎಂದ ರೆಡ್ಡಿ

30-10-22 10:19 pm       HK News Desk   ಕರಾವಳಿ

ಒಂದು ಕಾಲದಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದ ಗಾಲಿ ಜನಾರ್ದನ ರೆಡ್ಡಿ ತಾವು ಬೆಳೆಸಿದ ಪಕ್ಷದ ವಿರುದ್ಧವೇ ಕಿಡಿಕಾರಿದ್ದಾರೆ.

ಬಳ್ಳಾರಿ, ಅ.30:ಒಂದು ಕಾಲದಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದ ಗಾಲಿ ಜನಾರ್ದನ ರೆಡ್ಡಿ ತಾವು ಬೆಳೆಸಿದ ಪಕ್ಷದ ವಿರುದ್ಧವೇ ಕಿಡಿಕಾರಿದ್ದಾರೆ. ಮುಂದಿನ ನಿರ್ಧಾರ ಕಾದು ನೋಡಿ ಎಂದು ರೆಡ್ಡಿ ಹೇಳಿಕೆ ನೀಡಿರುವುದು ವಿಧಾನಸಭೆ ಚುನಾವಣೆ ವೇಳೆಗೆ ರಾಜಕೀಯ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.

ಯಾರು ಏನು ಹೇಳಿದರೂ ದಕ್ಷಿಣ ಭಾರತದಲ್ಲಿ ಬಿಜೆಪಿ ಪಾಲಿಗೆ ಅಧಿಕಾರದ ರುಚಿ ತೋರಿಸಿದ್ದು ಬಳ್ಳಾರಿ ರೆಡ್ಡಿ ಸೋದರರು. ‌2008ರಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪ ಸರಕಾರ ಬರಲು ಕಾರಣವಾಗಿದ್ದು ರೆಡ್ಡಿ ಸುರಿದ ದುಡ್ಡು. ಆದರೆ ಬಿಜೆಪಿ ಇಂದು ಉಚ್ಛ್ರಾಯ ಸ್ಥಿತಿಗೆ ಬಂದಿದ್ದು ಹಣ, ಜನ ಎಲ್ಲದರ ಬಲವೂ ಇದೆ. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಆನಂತರ ಜೈಲು ಸೇರಿದ್ದ ರೆಡ್ಡಿ ಅಕ್ಷರಶಃ ಸೋತು ಹೋಗಿದ್ದರು. ಹಣ ಇದ್ದರೇನು ಬಂತು ಎಷ್ಟೋ ಕಾಲ ಜೈಲು ಪಾಲಾಗಿ ಬಂದಿದ್ದು ರೆಡ್ಡಿ ಪಾಲಿಗೆ ಹಿನ್ನಡೆಯಾಗಿತ್ತು. ಅದೇ ಕಾರಣಕ್ಕೆ ಪಕ್ಷದಲ್ಲಿ ಪೂರ್ತಿ ಸೈಡ್ ಲೈನ್ ಆಗಿದ್ದ ಜನಾರ್ದನ ರೆಡ್ಡಿ ಇಂದು ಬಿಜೆಪಿ ವಿರುದ್ಧವೇ ಗರಂ ಆಗಿದ್ದಾರೆ. ತಾನು ಕಷ್ಟ ಪಡುತ್ತಿದ್ದರೂ, ರಾಜ್ಯ ಮತ್ತು ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದ್ದರೂ ನೆರವಿಗೆ ಬಂದಿಲ್ಲವೆಂದು ಸಿಟ್ಟುಗೊಂಡಿದ್ದಾರೆ.‌

ತನ್ನ ಪರಮಾಪ್ತ ಶ್ರೀರಾಮುಲು ಸಚಿವ ಸ್ಥಾನದಲ್ಲಿದ್ದರೂ ತನ್ನನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವುದಕ್ಕೂ ಪಕ್ಷ ಹಿಂದೇಟು ಹಾಕುತ್ತಿದೆ. ಇದೇ ಕಾರಣಕ್ಕೆ ಜನಾರ್ದನ ರೆಡ್ಡಿ ಅವರು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಹೆಚ್ಚು ತೊಂದರೆ ಕೊಟ್ಟಿದ್ದರು. ಆದರೆ ಈಗ, ಬಿಜೆಪಿ ನಾಯಕರು ಕೂಡ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನ್ನ ರಾಜಕೀಯ ಜೀವನ ಮುಂದೆ ಹೇಗಿರತ್ತೆ, ಅದು ನನಗೆ ಗೊತ್ತಿಲ್ಲ. ನಾನು ಬೆಳೆಸಿದ ಪಕ್ಷದವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ. ಕಾಂಗ್ರೆಸ್ ನವರು ಕಷ್ಟ ಕೊಟಿದ್ದಾರೆ, ಆದ್ರೆ ಬಿಜೆಪಿಯವರು ಕೂಡ ಕಷ್ಟ ಕೊಡುತ್ತಿದ್ದಾರೆ. ನವಂಬರ್ 6ರ ಬಳಿಕ ಬಳ್ಳಾರಿಯಲ್ಲಿ ಇರುವಂತಿಲ್ಲ.

ಸುಪ್ರೀಂ ಕೋರ್ಟ್ ಆದೇಶದ ಕಾರಣ ನವೆಂಬರ್ 6ರ ಬಳಿಕ ಬಳ್ಳಾರಿ ಬಿಡಬೇಕಾಗಿದೆ. ಆದ್ರೆ ಬಳ್ಳಾರಿ ಬಿಟ್ಟು ಬೆಂಗಳೂರಿನಲ್ಲಿ ಇರೋದಿಲ್ಲ. ಇಲ್ಲಿಯೇ ಆಸು ಪಾಸಿನಲ್ಲಿ ಇರುತ್ತೇನೆ. ಇದಕ್ಕಾಗಿ ಮುಂದಿನ ದಿನ ನಾನು ಸೂಕ್ತ ನಿರ್ಧಾರ ಮಾಡುತ್ತೇನೆ. ಪಕ್ಷದಲ್ಲಿ ಇರಬೇಕೋ, ಇಲ್ಲವೋ ಅಂತಲೂ ನಿರ್ಧರಿಸುತ್ತೇನೆ ಎಂದಿದ್ದಾರೆ.

Janardhana Reddy unhappy with BJP party