ಅಬ್ಬಕ್ಕ ಭವನಕ್ಕೆ 25 ಕೋಟಿ ಅನುದಾನ ನೀಡಿದರೆ ಅಬ್ಬಕ್ಕಳ ಸಂಪೂರ್ಣ ಚಿತ್ರಣ ಕೊಡಲು ಸಾಧ್ಯ ; ಕತ್ತಲ್ ಸಾರ್ 

01-11-22 05:45 pm       Mangalore Correspondent   ಕರಾವಳಿ

ಅಬ್ಬಕ್ಕ ಭವನಕ್ಕೆ ಕನಿಷ್ಠ 25 ಕೋಟಿ ಅನುದಾನವನ್ನ ಸರಕಾರ ಮಂಜೂರು ಮಾಡಿದರೆ ರಾಣಿ ಅಬ್ಬಕ್ಕನ ಕುರಿತು ಸಂಪೂರ್ಣ ಚಿತ್ರಣ ಕೊಡಲು ಸಾಧ್ಯ.

ಉಳ್ಳಾಲ, ನ.1 : ಅಬ್ಬಕ್ಕ ಭವನಕ್ಕೆ ಕನಿಷ್ಠ 25 ಕೋಟಿ ಅನುದಾನವನ್ನ ಸರಕಾರ ಮಂಜೂರು ಮಾಡಿದರೆ ರಾಣಿ ಅಬ್ಬಕ್ಕನ ಕುರಿತು ಸಂಪೂರ್ಣ ಚಿತ್ರಣ ಕೊಡಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಅಬ್ಬಕ್ಕ ಭವನ‌ ನಿರ್ಮಾಣ ಮಾಡುವುದೇ ನಮ್ಮ ಧ್ಯೇಯವಾಗಿರಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್ ಸಾರ್ ಹೇಳಿದರು. 

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಪೆರ್ಮನ್ನೂರು ಬಬ್ಬುಕಟ್ಟೆಯ ಚಂದಪ್ಪ ಎಸ್ಟೇಟ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಾಸ್ತವದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ಸಮುದ್ರದಲ್ಲಿ ದೋಣಿಯಲ್ಲಿ ನಿಂತು ಪಂಜು(ಸೂಟೆ) ಹಿಡಿದು ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸಿದ್ದು, ನಾವು ಮಾತ್ರ ಅಬ್ಬಕ್ಕಳಿಗೆ ವೃತ್ತ ಮಾಡಿ ಕುದುರೆಯಲ್ಲಿ ಕೂರಿಸಿದ್ದೇವೆ. ಸಾಧ್ಯವಾದರೆ ಆಕೆಯನ್ನ ದೋಣಿ ಏರಿಸುವ ಕಾರ್ಯ ನಡೆಸೋಣ. ಒಬ್ಬ ವ್ಯಕ್ತಿ ಉನ್ನತ ಸ್ಥಾನಕ್ಕೇರಿದಾಗ ಆಗುವ ಅವಮಾನಗಳು, ಕಾಲೆಳೆಯುವ ಮಂದಿಯ ಮುಂದೆ ನಾವು ಪಾರದರ್ಶಕವಾಗಿ ನಿಸ್ವಾರ್ಥವಾಗಿ ಪ್ರಾಮಾಣಿಕವಾಗಿ ದುಡಿದರೆ ಎಲ್ಲರ ಮನ ಗೆಲ್ಲಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಅಬ್ಬಕ್ಕ  ಭವನ ನಿರ್ಮಾಣ ಮಾಡಿಯೇ ಸಿದ್ಧ, ಅದಕ್ಕಾಗಿ ಅಬ್ಬಕ್ಕ ಉತ್ಸವ ಸಮಿತಿ ಸದಸ್ಯನಾಗಿ ನನ್ನಿಂದಾದ ಸೇವೆ ಖಂಡಿತ ಮಾಡುತ್ತೇನೆ. ಜಿಲ್ಲೆಯ ಪ್ರಮುಖ ತಾಣಗಳಲ್ಲಿ ಅಬ್ಬಕ್ಕ ಸೇರಿದಂತೆ ತುಳುನಾಡ ಸಾಧಕರ ಹೆಸರು ಮುಂದೆ ಕಾಣಬೇಕು. ತುಳು ಭಾಷೆಯನ್ನು ಅಧಿಕೃತ ರಾಜ್ಯ ಭಾಷೆ ಮಾಡಲಿ. ಯಾವುದೇ ಹೆಸರು ಪ್ರಸ್ತಾಪ ಮಾಡುವುದಿದ್ದರೂ ಅದಕ್ಕೆ ತುಳುನಾಡು ಎಂಬುದನ್ನು ಸೇರಿಸಬೇಕು ಎಂದು ಆಗ್ರಹಿಸಿದರು. 

ಪತ್ರಕರ್ತ ಮನೋಹರ್ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ಹರಿವ ನದಿಯಂತೆ ಇತರರಿಗಾಗಿ ಬದುಕುತ್ತಾ ಸಾಗಬೇಕು ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ‌ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಹಾಗೂ ಉಳ್ಳಾಲ ನಗರಸಭೆಯ ಮಾಜಿ ಸದಸ್ಯೆ ಮಿಸೆಸ್ ಕರ್ನಾಟಕ ಶಶಿಕಾಂತಿ‌ ಉಳ್ಳಾಲ್ ಅವರನ್ನು ಸನ್ಮಾನಿಸಲಾಯಿತು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ತನುಂಜಯ ರಾವ್, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ್ ಉಳ್ಳಾಲ್, ಸ್ವಾಗತಾಧ್ಯಕ್ಷ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

25 crores is a must for the construction of Abbakka Bhavana in Mangalore says dayanand kattalsar.