ನಾರಾಯಣ ಗುರು ಹೆಸರಲ್ಲಿ ಜೀವವೇ ಇಲ್ಲದ ಕೋಶ ಯಾಕೆ ಬೇಕು? ದಿಕ್ಕು ತಪ್ಪಿಸುವ ಯತ್ನಕ್ಕೆ ಮಣಿಯಲ್ಲ ; ಜನವರಿಯಲ್ಲಿ 26 ಪಂಗಡಗಳ ಹಕ್ಕೊತ್ತಾಯ ಸಭೆ 

01-11-22 09:48 pm       Mangalore Correspondent   ಕರಾವಳಿ

​​​​ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ, ಕಡಿಮೆ ಜನಸಂಖ್ಯೆ ಇರುವ ಕಾಡುಗೊಲ್ಲ, ಆರ್ಯ ವೈಶ್ಯ, ಉಪ್ಪಾರ, ಸವಿತಾ ಹಾಗು ಅತ್ಯಂತ ಆರ್ಥಿಕವಾಗಿ ಬಲಿಷ್ಠವಾಗಿರುವ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಮರಾಠ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ.

ಮಂಗಳೂರು, ನ.1 : ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ, ಕಡಿಮೆ ಜನಸಂಖ್ಯೆ ಇರುವ ಕಾಡುಗೊಲ್ಲ, ಆರ್ಯ ವೈಶ್ಯ, ಉಪ್ಪಾರ, ಸವಿತಾ ಹಾಗು ಅತ್ಯಂತ ಆರ್ಥಿಕವಾಗಿ ಬಲಿಷ್ಠವಾಗಿರುವ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಮರಾಠ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ರಾಜ್ಯದಲ್ಲಿ 70 ಲಕ್ಷದಷ್ಟು ಜನಸಂಖ್ಯೆ ಇರುವ ಬಿಲ್ಲವ, ಈಡಿಗ ಸೇರಿದಂತೆ 26 ಪಂಗಡಗಳಿರುವ ಸಮುದಾಯಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಿಗಮ ನೀಡಬೇಕೆಂಬ ಬೇಡಿಕೆಯನ್ನು ಸರಕಾರ ಪರಿಗಣಿಸಿಲ್ಲ.‌ ಇಡೀ ಸಮುದಾಯವನ್ನು ದಿಕ್ಕು ತಪ್ಪಿಸಲು ಇದೀಗ ಬ್ರಹ್ಮಶ್ರೀ ನಾರಾಯಣ ಗುರು ಕೋಶ ಘೋಷಿಸಲಾಗಿದೆ. ಇದನ್ನು ಕಣ್ಣೊರೆಸುವ ತಂತ್ರವಾಗಿದ್ದು ಈ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇವೆ ಎಂದು ಬಿಲ್ಲವರ ಸಂಘದ ಮುಂದಾಳು ಪದ್ಮರಾಜ್ ಮತ್ತು ಸತ್ಯಜಿತ್‌ ಸುರತ್ಕಲ್ ಹೇಳಿದ್ದಾರೆ. ‌

ಕುದ್ರೋಳಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಸರ್ಕಾರ ಕೋಶದ ಹೆಸರಲ್ಲಿ ನಮ್ಮ ಹೋರಾಟ ದಿಕ್ಕುತಪ್ಪಿಸಲು ಯತ್ನಿಸಿದ್ದಾರೆ. ಇದೊಂದು ತೀರ ಹಿಂದುಳಿದ ಸಮುದಾಯದ ಜನರ ಮೂಗಿಗೆ ತುಪ್ಪ ಸವರುವ ರೀತಿಯ ಆದೇಶ. ಬ್ರಹ್ಮಶ್ರೀ ನಾರಾಯಣಗುರು ಕೋಶವನ್ನು ಘೋಷಣೆ ಮಾಡಿರುವ ಸರ್ಕಾರಕ್ಕೆ ನಿಗಮ ಮತ್ತು ಕೋಶಕ್ಕಿರುವ ವ್ಯತ್ಯಾಸಗಳ ಬಗ್ಗೆ ಜ್ಞಾನ ಇಲ್ಲವೇ? ನಿಗಮ ಎನ್ನುವುದು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಪ್ರತ್ಯೇಕ, ಅಧ್ಯಕ್ಷ, ನಿರ್ದೇಶಕರಿದ್ದು, ಸಮುದಾಯಯ ಅಭಿವೃದ್ಧಿಗೆ ಬೇಕಾದ ಯೋಜನೆ ರೂಪಿಸಲು ಇವರಿಗೆ ಸ್ವಾತಂತ್ರ್ಯ ಇರುತ್ತದೆ. ಆದರೆ ‘ಕೋಶ’ ಎನ್ನುವುದು ಸರ್ಕಾರದ ಇಲಾಖೆಯೊಂದರ ಚಿಕ್ಕ ಅಂಗವಾಗಿದ್ದು, ಇದೊಂದು ಹಲ್ಲಿಲ್ಲದ ಹಾವಿನಂತಿರುತ್ತದೆ. ಇಲ್ಲಿ ಉನ್ನತ ಅಧಿಕಾರಿಯನ್ನು ನೇಮಿಸಿದರೂ ಇಲಾಖೆ ಕಾರ್ಯದರ್ಶಿಯ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಇವರಿಗೆ ಅಧಿಕಾರ ಇರುವುದಿಲ್ಲ.
 
ಬಿಲ್ಲವ, ಈಡಿಗ ಸಮುದಾಯದ ಅಭಿವೃದ್ಧಿ ನಿಗಮವಾದರೆ ಅದೇ ಸಮುದಾಯದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಇದಕ್ಕೆ ಸೇರಿದ 26 ಪಂಗಡಗಳ ಪ್ರತಿನಿಧಿಗಳು ನಿರ್ದೇಶಕ ಮಂಡಳಿಯಲ್ಲಿದ್ದು, ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿ ತೀರ್ಮಾನಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ. ಈಗಾಗಲೇ ಸ್ಥಾಪನೆಯಾಗಿರುವ ಬೇರೆ ಬೇರೆ ಸಮುದಾಯದ ಅಭಿವೃದ್ಧಿ ನಿಗಮಗಳಿಗೆ ಅದೇ ಜಾತಿಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ ಕೋಶದಲ್ಲಿ ಇಂತಹ ಕೆಲಸಕ್ಕೆ ಆಸ್ಪದ ಇರುವುದಿಲ್ಲ. 

Siddaramaiah dares Bommai for public debate on corruption | Deccan Herald

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೇಂದಿ ಇಳಿಸುವವರಿಗಾಗಿ ವಿಶೇಷ ಪ್ಯಾಕೇಜ್ ನೀಡಿದ್ದು, ಅದಕ್ಕೆ 12 ಕೋಟಿ ರೂಪಾಯಿ ಮೀಸಲಿರಿಸಿತ್ತು. ಇದರಲ್ಲಿ 3 ಕೋಟಿ ರೂಪಾಯಿ ಮಾತ್ರ ವ್ಯಯವಾಗಿದ್ದು, ಉಳಿದ ಹಣ ಈಗಲೂ ಸರ್ಕಾರದ ಬೊಕ್ಕಸದಲ್ಲಿದೆ. ಇದೇ ರೀತಿ ಸರ್ಕಾರ ಘೋಷಿರುವ ಕೋಶಕ್ಕೆ 10-15 ಕೋಟಿ ರೂ. ಅನುದಾನ ಘೋಷಿಸಿ, ವಿವಿಧ ಕಾರಣ ಹೇಳಿ ಹಾಗೆಯೇ ಉಳಿಸುವ ತಂತ್ರಗಾರಿಕೆ ಇದೆ. ನಿಗಮದ ಬದಲಿಗೆ ಕೋಶವನ್ನು ಘೋಷಿಸಿ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸುವ ಹುನ್ನಾರ ಇದರ ಹಿಂದಿದೆ ಎಂದು ಪದ್ಮರಾಜ್ ಹೇಳಿದರು.‌

ಇದಕ್ಕಾಗಿ ಐದಾರು ಜಿಲ್ಲೆಗಳಲ್ಲಿ ಹರಡಿರುವ 26 ಪಂಗಡಗಳನ್ನು ಒಟ್ಟುಗೂಡಿಸಿ ಜನವರಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಜನವರಿ 29ರಂದು ಬಿಲ್ಲವರ ಸಮಾವೇಶ ನಡೆಯಲಿದ್ದು ಲಕ್ಷಾಂತರ ಜನರು ಸೇರಿ ಹಕ್ಕೊತ್ತಾಯ ಮಂಡಿಸಲಿದ್ದಾರೆ.‌ ಮಂಗಳೂರು ನಗರದಲ್ಲಿಯೇ ಕಾರ್ಯಕ್ರಮ ನಡೆಯಲಿದ್ದು ಎಲ್ಲಿ ಮಾಡಬೇಕು ಎನ್ನುವುದನ್ನು ಸದ್ಯದಲ್ಲೇ ತೀರ್ಮಾನಿಸುತ್ತೇವೆ ಎಂದು ಸತ್ಯಜಿತ್‌ ಸುರತ್ಕಲ್ ಹೇಳಿದ್ದಾರೆ.

Mangalore BJP government has still failed to Set up Narayana Guru development board slams satyajit and Padmaraj.