ಸಿಗದ ವಿದ್ಯಾರ್ಥಿ ವೇತನ, ಪದವಿ ಫಲಿತಾಂಶ ವಿಳಂಬ ; ತಾಂತ್ರಿಕ ತೊಂದರೆಯೆಂದು ನೆಪ ಹೇಳುತ್ತಿರುವ ಶಿಕ್ಷಣ ಇಲಾಖೆ, ಎಬಿವಿಪಿ ಪ್ರತಿಭಟನೆ

03-11-22 10:55 pm       Mangalore Correspondent   ಕರಾವಳಿ

2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬಾಕಿಯಿರುವ ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ UUCMS ತಂತ್ರಾಂಶವನ್ನು ಸರಿಪಡಿಸಿ ಪದವಿ ಫಲಿತಾಂಶವನ್ನು ಪ್ರಕಟಿಸುವಂತೆ ಆಗ್ರಹಿಸಿ ಎಬಿವಿಪಿ ವಿದ್ಯಾರ್ಥಿಗಳು ನಗರದ ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟನೆ ನಡೆಸಿದರು.‌

ಮಂಗಳೂರು, ನ.3 : 2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬಾಕಿಯಿರುವ ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ UUCMS ತಂತ್ರಾಂಶವನ್ನು ಸರಿಪಡಿಸಿ ಪದವಿ ಫಲಿತಾಂಶವನ್ನು ಪ್ರಕಟಿಸುವಂತೆ ಆಗ್ರಹಿಸಿ ಎಬಿವಿಪಿ ವಿದ್ಯಾರ್ಥಿಗಳು ನಗರದ ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟನೆ ನಡೆಸಿದರು.‌

ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿ ವರ್ಷ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿ ವೇತನದಿಂದ ಬರುವ ಹಣವನ್ನು ಶಿಕ್ಷಣಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ, ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿದರೂ, ವಿದ್ಯಾರ್ಥಿ ವೇತನ ಬಿಡುಗಡೆ ಆಗಿಲ್ಲ. ಪೋರ್ಟಲ್ ನಲ್ಲಿ ಹಣ ಬಿಡುಗಡೆ ಆಗಿದೆಯೆಂದು ತೋರಿಸಿದ್ದರೂ, ಬಹುತೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆತಿರುವುದಿಲ್ಲ. ಕೂಡಲೇ ಸರಕಾರ ಈ ಕುರಿತು ಗಮನಹರಿಸಿ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಬೇಕಾಗಿ ಒತ್ತಾಯಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆಯೂ ಆರೋಪ ಕೇಳಿಬಂದಿದ್ದು ಸೂಕ್ತ ತನಿಖೆ ನಡೆಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಆಗ್ರಹಿಸಿದೆ.

ಎನ್ಇಪಿ ಜಾರಿಯಾದ ನಂತರ ಎಲ್ಲಾ ವಿಶ್ವವಿದ್ಯಾನಿಲಯಗಳು UUCMS ತಂತ್ರಾಂಶವನ್ನು ಬಳಸಿ, ದಾಖಲಾತಿಯಿಂದ ಹಿಡಿದು ಫಲಿತಾಂಶದ ವರೆಗಿನ ಎಲ್ಲ ಮಾಹಿತಿಗಳನ್ನು ನಮೂದಿಸಬೇಕಾಗಿದೆ. ಆದರೆ ಈ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ರಾಜ್ಯ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಲು, ಬೇರೆ ಕಾಲೇಜಿಗೆ ವರ್ಗಾವಣೆ ಪಡೆಯಲು, ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಹೀಗೆ ಎಲ್ಲದಕ್ಕೂ ಈ ವೆಬ್ ಸೈಟ್ ಅಗತ್ಯವಾಗಿದ್ದು ತಾಂತ್ರಿಕ ತೊಂದರೆಯ ಕಾರಣ ಎಡವಟ್ಟು ಆಗಿದೆ.‌

ವಿಶ್ವವಿದ್ಯಾಲಯಗಳಿಗೆ ಫಲಿತಾಂಶ ಪ್ರಕಟಿಸುವುದಕ್ಕೂ ಆಗಿಲ್ಲ. ಮೊದಲ ಮತ್ತು ದ್ವಿತೀಯ ವರ್ಷದ ಪದವಿ ಫಲಿತಾಂಶ ಇನ್ನೂ ಬಂದಿಲ್ಲ.  ಶೈಕ್ಷಣಿಕ ವರ್ಷ ಅರ್ಧಕ್ಕೆ ಬಂದರೂ ಹಿಂದಿನ ವರ್ಷದ ಫಲಿತಾಂಶ ಬಾರದೆ ಸಮಸ್ಯೆ ಆಗಿದೆ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದು ಈ ಕೂಡಲೇ ಇದನ್ನು ಬಗೆಹರಿಸುವಂತೆ ವಿದ್ಯಾರ್ಥಿ ಪರಿಷತ್‌ ಆಗ್ರಹಿಸಿದೆ. 

ಲಾಲ್ ಬಾಗ್ ವೃತ್ತದ ಬಳಿಯ ಮಹಾನಗರ ಪಾಲಿಕೆಯ ಮುಂಭಾಗ ನೂರಕ್ಕೂ ಹೆಚ್ಚು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಹೋರಾಟದ ನೇತೃತ್ವವನ್ನು ಅಭಾವಿಪ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ, ಜಿಲ್ಲಾ ಸಂಚಾಲಕರಾದ ಶ್ರೇಯಸ್ ಶೆಟ್ಟಿ ವಹಿಸಿದ್ದರು. ಇದೇ ಸಮಸ್ಯೆ ಇಡೀ ರಾಜ್ಯದಲ್ಲಿ ಎದುರಾಗಿದ್ದು ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ತಾಲೂಕು ಕೇಂದ್ರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಎಬಿವಿಪಿ ಪ್ರತಿಭಟನೆ ನಡೆಸಿದೆ.

Delay in granting scholarships to students, ABVP holds protests in front of Mangalore city corporation demanding quick release of funds.