ಬಾರ್ ಆರಂಭಿಸುವುದಕ್ಕೆ ಗ್ರಾಮಸ್ಥರ ವಿರೋಧ, ಸುಳ್ಯದಲ್ಲಿ ವಿಕೋಪಕ್ಕೆ ತಿರುಗಿದ ಪ್ರತಿಭಟನೆ ; ಹೊಡೆದಾಟ, ತಳ್ಳಾಟ, ತಾತ್ಕಾಲಿಕ ಬಂದ್

05-11-22 02:28 pm       HK News Desk   ಕರಾವಳಿ

ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಲ್ಲದೆ, ಇದೇ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಹೊಯ್ ಕೈ ನಡೆದ ಘಟನೆ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕದಲ್ಲಿ ನಡೆದಿದೆ.

ಮಂಗಳೂರು, ನ.5:ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಲ್ಲದೆ, ಇದೇ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಹೊಯ್ ಕೈ ನಡೆದ ಘಟನೆ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕದಲ್ಲಿ ನಡೆದಿದೆ.

ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಹೊಸತಾಗಿ ಬಾರ್ & ರೆಸ್ಟೋರೆಂಟ್ ಆರಂಭಿಸಿದ್ದು ಶುಕ್ರವಾರ ತೆರೆದುಕೊಂಡ ಮೊದಲ ದಿನವೇ ಪ್ರತಿಭಟನೆ ಬಿಸಿ ತಟ್ಟಿದೆ. ಗ್ರಾಮಸ್ಥರು ಮತ್ತು ಮದ್ಯ ಮುಕ್ತ ಹೋರಾಟ ಸಮಿತಿಯ ಮುಖಂಡರು ಬಾರ್ ಆರಂಭಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸ್ಥಳದಲ್ಲಿ ಜಮಾಯಿಸಿದ್ದರು. ಬೆಳಗ್ಗೆಯಿಂದ ಸಂಜೆ ತನಕವು ಪ್ರತಿಭಟನೆ ಮುಂದುವರಿದಿದೆ. ಈ ನಡುವೆ ಮದ್ಯದಂಗಡಿ ಪರ ಬೇರೆ ಸ್ಥಳಗಳಿಂದ ಬಂದಿದ್ದವರಿಗೂ, ಹೋರಾಟಗಾರರ ಮಧ್ಯೆ ಮಾತಿನ ಚಕಮಕಿ, ತಳ್ಳಾಟ ನಡೆದಿದೆ. ಮದ್ಯದಂಗಡಿ ಬಂದ್ ಮಾಡುವಂತೆ ಕತ್ತಲಾಗುವ ತನಕವೂ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಸಂಜೆ ವೇಳೆ ಪ್ರತಿಭಟನೆ ವಿಕೋಪಕ್ಕೂ ತಿರುಗಿದ್ದು ಆಕ್ರೋಶಿತ ಪ್ರತಿಭಟನಾಕಾರರು ಮದ್ಯದಂಗಡಿ ಬಳಿ ಇದ್ದ ಚಯರ್, ನಾಮಫಲಕ ಕಿತ್ತು ರಸ್ತೆಗೆ ಎಸೆದಿದ್ದಾರೆ. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಜನರನ್ನು ಚದುರಿಸಿದರು.

ಮದ್ಯದಂಗಡಿ ತಾತ್ಕಾಲಿಕ ಬಂದ್ ಮಾಡುವಂತೆ ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ ಮೊದಲಾದವರು ಮನವೊಲಿಸಲು ಯತ್ನಿಸಿದ್ದು ಈ ವೇಳೆ ಮದ್ಯದಂಗಡಿ ಪರ ಬಂದವರು ಮುಖಂಡರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಕೆಲಹೊತ್ತು ಉದ್ನಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ಬಾರ್ ಮಾಲೀಕರು ತಾವು ಲೈಸೆನ್ಸ್ ಪಡೆದು ಬಾರ್ ಆರಂಭಿಸುತ್ತಿದ್ದೇವೆ. ಅಕ್ರಮವಾಗಿ ಮಾಡುತ್ತಿಲ್ಲ. ನಿಮ್ಮ ವಿರೋಧ ಇದ್ದರೆ, ಆಡಳಿತದ ವಿರುದ್ಧ ತೋರಿಸುವಂತೆ ಹೇಳಿದ್ದಾರೆ. ಆದರೆ ಸ್ಥಳದಲ್ಲಿ ಸೇರಿದ ಹೋರಾಟದ ಪರ ಇದ್ದ ಪಂಚಾಯತ್ ಸಮಿತಿ ಸದಸ್ಯರು, ಬಾರ್ ಆರಂಭಿಸಲು ಪಂಚಾಯತ್ ಪರವಾನಗಿ ಪಡೆದಿಲ್ಲ. ಪಂಚಾಯತ್ 60 ದಿನಗಳಲ್ಲಿ ಎನ್ಓಸಿ ಕೊಟ್ಟಿಲ್ಲ ಅಂದ್ರೆ ಅದಕ್ಕೆ ಅವಕಾಶ ಇಲ್ಲ ಎಂದೇ ಅರ್ಥ. ಈಗ ದಿಢೀರ್ ಆಗಿ ಲೈಸೆನ್ಸ್ ಪಡೆದು ಬಾರ್ ಆರಂಭಿಸುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹೋರಾಟ ಸ್ಥಳದಲ್ಲಿ ಸೇರಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ವಿರೋಧ ವ್ಯಕ್ತಪಡಿಸಿದರು.

ರಾತ್ರಿ ವೇಳೆ ಸಚಿವ ಎಸ್. ಅಂಗಾರ ಸೂಚನೆಯಂತೆ ಹಿರಿಯ ಅಧಿಕಾರಿಗಳು ಮದ್ಯದಂಗಡಿ ತಾತ್ಕಾಲಿಕ ಬಂದ್ ಮಾಡುವಂತೆ ಬಾರ್ ಮಾಲಕರಿಗೆ ಸೂಚಿಸಿದ್ದಾರೆ. ಅದರಂತೆ ಬಾರ್ ಅನ್ನು ತಾತ್ಕಾಲಿಕ ಬಂದ್ ಮಾಡಲಾಗಿದೆ. ಶನಿವಾರ ಬಾರ್ ತೆರೆದಲ್ಲಿ ಮಹಿಳೆಯರ ಸಹಿತ ಬೃಹತ್ ಸಂಖ್ಯೆಯಲ್ಲಿ ಜನ ಸೇರಿ ಪ್ರತಿಭಟನೆ ನಡೆಸುವುದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಭದ್ರತಾ ವ್ಯವಸ್ಥೆ ಮಾಡಿದ್ದು ಜನರು ಒಂದು ಹಂತದಲ್ಲಿ ಹೊಯ್ ಕೈ ನಡೆಸಿದಾಗ ಲಾಠಿ ಬೀಸಿ ಚದುರಿಸಿದ್ದಾರೆ.

Villagers oppose opening of Bar in Sullia, fight ends with assault on each other, bar Temporarily closed