ಶಿವ ದೇವಸ್ಥಾನಗಳನ್ನು ವೈಷ್ಣವರು ಕುಟುಂಬದ ಉಂಬಳಿ ಮಾಡಿಕೊಂಡಿದ್ದಾರೆ ; ಆನುವಂಶಿಕ ಎಂದು ವಾದಕ್ಕೆ ನಿಲ್ಲುತ್ತಾರೆ ! 

12-11-22 08:57 pm       Mangalore Correspondent   ಕರಾವಳಿ

ಮುಜರಾಯಿ ದೇವಸ್ಥಾನಗಳಲ್ಲಿ ಸರಕಾರದ ಅನುಮತಿ ಇಲ್ಲದೆ ಯಾವುದೇ ಜಯಂತಿ ಆಚರಣೆ, ಫಲಕ ಅಳವಡಿಕೆ, ಮುದ್ರಾಧಾರಣೆ ಸೇರಿ ಆಗಮ ಶಾಸ್ತ್ರಕ್ಕೆ ವಿರುದ್ಧವಾದ ಆಚರಣೆಗಳನ್ನು ಮಾಡುವಂತಿಲ್ಲ ಎಂದು ಮುಜರಾಯಿ ಇಲಾಖೆ ಅಧಿಸೂಚನೆ ಹೊರಡಿಸಿರುವುದನ್ನು ಸ್ವಾಗತಿಸುತ್ತೇವೆ. ಈ ಆದೇಶವನ್ನು ಯಾವ ಕಾರಣಕ್ಕೂ ಸರಕಾರ ಹಿಂತೆಗೆದುಕೊಳ್ಳಬಾರದು.

ಮಂಗಳೂರು, ನ.12: ಮುಜರಾಯಿ ದೇವಸ್ಥಾನಗಳಲ್ಲಿ ಸರಕಾರದ ಅನುಮತಿ ಇಲ್ಲದೆ ಯಾವುದೇ ಜಯಂತಿ ಆಚರಣೆ, ಫಲಕ ಅಳವಡಿಕೆ, ಮುದ್ರಾಧಾರಣೆ ಸೇರಿ ಆಗಮ ಶಾಸ್ತ್ರಕ್ಕೆ ವಿರುದ್ಧವಾದ ಆಚರಣೆಗಳನ್ನು ಮಾಡುವಂತಿಲ್ಲ ಎಂದು ಮುಜರಾಯಿ ಇಲಾಖೆ ಅಧಿಸೂಚನೆ ಹೊರಡಿಸಿರುವುದನ್ನು ಸ್ವಾಗತಿಸುತ್ತೇವೆ. ಈ ಆದೇಶವನ್ನು ಯಾವ ಕಾರಣಕ್ಕೂ ಸರಕಾರ ಹಿಂತೆಗೆದುಕೊಳ್ಳಬಾರದು. ಸರಕಾರದ ಆದೇಶವು ಕಾನೂನುಬದ್ಧವಾಗಿದೆ ಮತ್ತು ಇದರಿಂದ ನ್ಯಾಯಾಲಯಗಳ ಆದೇಶದ ಪಾಲನೆಯಾಗುತ್ತದೆ ಎಂದು ಶೈವ ಕ್ಷೇತ್ರಗಳ ಸಂರಕ್ಷಣಾ ವೇದಿಕೆ ಹೇಳಿಕೆ ನೀಡಿದೆ. 

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಶೈವ ಕ್ಷೇತ್ರಗಳ ಸಂರಕ್ಷಣಾ ವೇದಿಕೆಯ ಸಂಸ್ಥಾಪಕ ನಿರ್ದೇಶಕ ಟಿ.ಎಸ್. ಶ್ರೀನಾಥ್, ನಮ್ಮ ನಾಡಿನ ಶಿವ ದೇವಸ್ಥಾನದ ದೇವರನ್ನು ಕಣ್ಮರೆ ಮಾಡಲಾಗುತ್ತಿದೆ. ಜೀರ್ಣೋದ್ದಾರ, ಬ್ರಹ್ಮಕಲಶ, ಪುನರ್ ಪ್ರತಿಷ್ಠಾಪನೆ ಹೆಸರಿನಲ್ಲಿ ಶೈವ ಪರಂಪರೆಯ ದೇವಾಲಯಗಳಲ್ಲಿ ಶೈವ ದೇವರುಗಳನ್ನು ಬದಲಾಯಿಸಿ ವೈಷ್ಣವ ದೇವರನ್ನು ಪ್ರತಿಷ್ಠಾಪಿಸುವ ಕೆಲಸ ನಡೆಯುತ್ತಿದ್ದು ಇದಕ್ಕಾಗಿ ಸರಕಾರ ಹೊರಡಿಸಿರುವ ಆದೇಶ ನ್ಯಾಯಯುತವಾಗಿದೆ ಎಂದಿದ್ದಾರೆ.

ಶೈವ ಪರಂಪರೆಯ ದೇವಾಲಯಗಳಿಗೆ ಪ್ರವೇಶ ಪಡೆದಿರುವ ವೈಷ್ಣವ ಅರ್ಚಕರು ದೇವಸ್ಥಾನಗಳನ್ನು ತಮ್ಮ ಕೈವಶ ಮಾಡಿಕೊಂಡಿದ್ದಾರೆ. ಅನಂತರ ತಮ್ಮದು ಅನುವಂಶಿಕ ಪೌರೋಹಿತ್ಯ ಎಂದು ವಾದಕ್ಕೆ ನಿಲ್ಲುತ್ತಾರೆ. ಅವ್ಯವಹಾರಗಳನ್ನು ನಡೆಸುತ್ತಾರೆ. ರಾಜಕೀಯ ಬೆಂಬಲದೊಂದಿಗೆ ಮುಜರಾಯಿ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಣಾಧಿಕಾರಿ ನೇಮಕ ಮಾಡಲು ಬಿಡುವುದಿಲ್ಲ. ಸಾರ್ವಜನಿಕ ದೇವಸ್ಥಾನಗಳು ಈ ರೀತಿಯಲ್ಲಿ ಅರ್ಚಕ ಕುಟುಂಬಗಳ ಉಂಬಳಿಕೆಯ ಸೊತ್ತಾಗುತ್ತಿದೆ. ಇಂದು ಸರಕಾರ ನಿಯಂತ್ರಣ ಮಾಡಿರುವ ಕೆಲವು ಆಚರಣೆಗಳ ಮೂಲಕವೇ ಶೈವ ಪರಂಪರೆಯ ದೇವಾಲಯಗಳನ್ನು ಕಬಳಿಸಲಾಗುತ್ತಿದೆ. ಸರಕಾರ ತಡವಾಗಿಯಾದರೂ ಉತ್ತಮ ಕೆಲಸ ಮಾಡಿದೆ. ಯಾವುದೇ ಒತ್ತಡಕ್ಕೆ ಸರಕಾರ ಮಣಿಯಬಾರದು ಎಂದವರು ಹೇಳಿದ್ದಾರೆ. 

ಕೇವಲ ಒಂದು ಪಂಗಡದವರು ಮಾತ್ರ ಸರಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂದು ಆಕ್ಷೇಪ ಎತ್ತಿದ ಜನರೇ ಅಂದು ನ್ಯಾಯಲಯಕ್ಕೆ ಹೋಗಿ ಪರಂಪರೆ ಬದಲಾಗಬಾರದು ಎಂದು ವಾದಿಸಿದ್ದರು. ಈಗ ಯಾಕೆ ಯಾವುದೇ ದೇವಲಾಯಗಳ ಆರಾಧನಾ ಪರಂಪರೆಯಲ್ಲಿ ಬದಲು ಮಾಡಬಾರದು ಎಂದು ಸರಕಾರ ಹೇಳಿರುವುದಕ್ಕೆ ವಿರೋಧಿಸುವುದು ಎಂದವರು ಪ್ರಶ್ನಿಸಿದ್ದಾರೆ. ಸರಕಾರ ಆದೇಶವನ್ನು ವಾಪಸ್ ಪಡೆದರೆ ಅದು ಕಾನೂನಿನ ಉಲ್ಲಂಘನೆ ಆಗುತ್ತದೆ. ನ್ಯಾಯಾಲಯದ ಉಲ್ಲಂಘನೆ ಕೂಡ ಆಗುತ್ತದೆ ಎಂದವರು ಹೇಳಿದ್ದಾರೆ. 

File:Kukke Subramanya Temple 4.jpg - Wikimedia Commons

ಕಳೆದ ವರ್ಷ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಶಿವ ಸಾನಿಧ್ಯದ ಮುಂದೆ ರುದ್ರ ಹೋಂ, ರುದ್ರಪಾರಾಯಣ ನಡೆಸಲು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದಾಗ ಕೆಲವು ಮಾಧ್ವಪರ ವ್ಯಕ್ತಿಗಳು ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿ ತಡೆಯಾಜ್ಞೆ ತಂದಿದ್ದರು. ಮಹಾಶಿವರಾತ್ರಿ ದಿಟ್ಟಂ ದಾಖಲೆ ಪ್ರಕಾರ ಆಗಬೇಕೆಂದು ನ್ಯಾಯಾಲಯ ಆದೇಶ ನೀಡಿತ್ತು ಈ ಬಗ್ಗೆ ಅಂತಿಮ ಆದೇಶ ಬರಬೇಕಾಗಿದೆ. ಹಿಂದೂ ದೇವಾಲಯಗಳು ಸಮಸ್ತ ಹಿಂದೂ ಸಮಾಜಕ್ಕೆ ಸೇರಿದ್ದು ಹೊರತು ಯಾವುದೇ ಒಂದು ಪಂಗಡಕ್ಕೆ ಸೇರಿದ್ದಲ್ಲ, ಪ್ರಮುಖವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಮುಂಜರಾಯಿ ದೇವಸ್ಥಾನಗಳಲ್ಲಿ ದಿಟ್ಟಂ ಪ್ರಕಾರವೇ ಪೂಜೆ ಪುರಸ್ಕಾರಗಳು ನಡೆಯಬೇಕು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಯಾವುದೇ ದೇವಸ್ಥಾನಗಳಲ್ಲಿ ದಿಟ್ಟಂ  ದಾಖಲೆ ಸೆಕ್ಷನ್ 38, 25ರ ಪ್ರಕಾರವೇ ನಡೆಯಬೇಕೆ ಹೊರತು ಮಾಧ್ವ ಜಯಂತಿ, ಮುದ್ರಾಧಾರಣೆ ಮುಂತಾದವುಗಳಿಗೆ ಅವಕಾಶ ಇಲ್ಲ. ರಾಜಕೀಯ ಪ್ರಭಾವದಿಂದ ಇಂತಹ ಕೆಲಸ ನಡೆದರೆ ಅದು ನ್ಯಾಯಾಂಗದ ಉಲ್ಲಂಘನೆ ಆಗುತ್ತದೆ. 

ಕರಾವಳಿಯ ಬಹುತೇಕ ಶಿವಾಲಯಗಳಲ್ಲಿ ಶೈವಾಗಮ ಪದ್ಧತಿ ಪ್ರಕಾರ ಪೂಜೆ ನಡೆಸಲಾಗುತ್ತಿಲ್ಲ. ಶಿವ ಭಕ್ತರಿಗೆ ವಿಭೂತಿ ಪ್ರಸಾದ ನೀಡಲಾಗುತ್ತಿಲ್ಲ. ಮಾಧ್ವರ ಸಂಪ್ರದಾಯ ವಿರೋಧಿ ಚಟುವಟಿಕೆಗಳು ಶಿವಭಕ್ತರ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಶ್ರೀನಾಥ್ ಹೇಳಿದರು.

Mangalore Shiva temples are lost in the state, replacing Shiva temples with Vaishnava is in progress slams Shiva vedike