ಕನ್ನಡ ಮಾದರಿ ಶಾಲೆಗಳ ನಿರ್ಮಾಣ ; ಕನ್ನಡ ಶಾಲಾ ಮಕ್ಕಳ ಹಬ್ಬದಲ್ಲಿ ಸಚಿವ ಬಿ.ಸಿ‌.ನಾಗೇಶ್ ಇಂಗಿತ 

19-11-22 10:49 pm       Mangalore Correspondent   ಕರಾವಳಿ

ಮಕ್ಕಳ ಕೇಂದ್ರಿತ ಶಿಕ್ಷಣವನ್ನು ನೀಡುವ ಗುರಿಯೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲಾಗಿದೆ. ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ಪಡೆಯುವ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದರೆ ಅಸಾಮಾನ್ಯವಾದ್ದನ್ನು ಸಾಧಿಸಬಲ್ಲರು ಎಂದು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಮಂಗಳೂರು, ನ.19 : ಮಕ್ಕಳ ಕೇಂದ್ರಿತ ಶಿಕ್ಷಣವನ್ನು ನೀಡುವ ಗುರಿಯೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲಾಗಿದೆ. ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ಪಡೆಯುವ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದರೆ ಅಸಾಮಾನ್ಯವಾದ್ದನ್ನು ಸಾಧಿಸಬಲ್ಲರು ಎಂದು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಕೇಶವ ಸ್ಮೃತಿ ಸಂವರ್ಧನ ಸಮಿತಿ ನಗರದ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. ಕನ್ನಡ ಶಾಲೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕನ್ನಡ ಮಾದರಿ ಶಾಲೆಗಳನ್ನು ರೂಪಿಸಲಾಗುವುದು‌. ಸರಕಾರಿ ಶಾಲೆಗಳ ಸಮಸ್ಯೆ ಏನಿದೆ ಎಂದು ತಿಳಿದು ಅದನ್ನು ಸರಿಪಡಿಸಲಾಗುವುದು. ಶಿಕ್ಷಕರ ನೇಮಕಾತಿ ಕಾರ್ಯವನ್ನೂ ಶೀಘ್ರದಲ್ಲೇ ಮಾಡಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಮಾತನಾಡಿ, ಮಾತೃಭಾಷೆಯಲ್ಲೇ ಶಿಕ್ಷಣ ಪಡೆದು ಸಾಧನೆ ಮಾಡಿದವರು ಮತ್ತು ಕನ್ನಡ ಮಾತೃಭಾಷೆ ಅಲ್ಲದೆಯೂ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದವರು ನಮಗೆ ಆದರ್ಶವಾಗಬೇಕು ಎಂದರು‌.‌ ಕನ್ನಡದಲ್ಲಿ ಓದಿ ಐಎಎಸ್ ಅಧಿಕಾರಿಯಾಗಿರುವ ನಂದಿನಿ ಕೆ.ಆರ್ ತಮ್ಮ ಅನುಭವ ಹಂಚಿಕೊಂಡರು.‌

ಕಾರ್ಯಕ್ರಮದ ಆಶಯ ಹೇಳಿದ ಡಾ.ಧನಂಜಯ ಕುಂಬ್ಳೆ, ಕನ್ನಡ ಮಾಧ್ಯಮ ಶಾಲೆಗಳು ಮಂಕಾದಂತಿರುವ ಸಂದರ್ಭದಲ್ಲಿ ಕನ್ನಡ ಶಾಲಾ ಮಕ್ಕಳಲ್ಲಿ ಆತ್ಮವಿಶ್ವಾಸ, ನಾಡಿನ ಕುರಿತು ಅಭಿಮಾನ ತುಂಬುವ ಗುರಿ ಇಟ್ಟುಕೊಂಡಿದ್ದೇವೆ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ, ಕಾಲ ಬದಲಾಗುತ್ತಾ ಹೋದಾಗ ಕನ್ನಡ ಶಾಲೆಗಳನ್ನು ಮೇಲ್ದರ್ಜೆಗೆ ಒಯ್ಯುವ ಕೆಲಸದಲ್ಲಿ ನಾವು ಸೋತಿದ್ದೇವೆ. ಆದ್ದರಿಂದ ಆದರ್ಶವಾದ ಕನ್ನಡ ಶಾಲೆಗಳನ್ನು ಖಾಸಗಿಯಾಗಿ ಕಟ್ಟುವ ಅನಿವಾರ್ಯತೆ ಪ್ರಸ್ತುತ ಇದೆ. ಇಂಗ್ಲೀಷಿನ ದಾಳಿ ನಮ್ಮ ಮೇಲೆ ಮಾತ್ರ ಆದುದಲ್ಲ. ಜಗತ್ತಿನ ಎಲ್ಲ ರಾಷ್ಟ್ರಗಳ ಮೇಲೂ ಆಗಿದೆ. ಆದರೆ ಅವರೆಲ್ಲರೂ ತಮ್ಮ ನೆಲದ ಭಾಷೆಯನ್ನೇ ಪ್ರಮುಖ ಭಾಷೆಯನ್ನಾಗಿಸಿದ್ದರಿಂದ ಪ್ರಾದೇಶಿಕ ಭಾಷೆಗಳೇ ಮಹತ್ವವನ್ನು ಪಡೆದಿವೆ ಎಂದರು. 

ಕೇಶವ ಸ್ಮೃತಿ ಸಂವರ್ಧನ ಸಮಿತಿ ಅಧ್ಯಕ್ಷ ವಾಮನ ಶೆಣೈ, ಕನ್ನಡ ಶಾಲಾ ಮಕ್ಕಳ ಹಬ್ಬದ ಸ್ವಾಗತ ಸಮಿತಿಯ ಉಪಾಧ್ಯಕ್ಷ  ಕೆ.ಸಿ.ನಾಯ್ಕ್ ಉಪಸ್ಥಿತರಿದ್ದರು.

The new National Education Policy has been brought in with the aim of bringing Indianness in education and with the mission of providing child-centred education. BC Nagesh, Minister of Primary and Secondary School Education, said that an effort is being made to reveal the hidden talents of children by imparting education in mother tongue and local language.