ಅಂತೂ ಸುರತ್ಕಲ್ ಟೋಲ್ ರದ್ದು ; ನಿರಂತರ ಪ್ರತಿಭಟನೆಯಿಂದ ಗಟ್ಟಿಗೊಂಡ ಜನಾಭಿಪ್ರಾಯ, ಡಬಲ್ ಶುಲ್ಕ ವಸೂಲಿಗೆ ಒಪ್ಪದ ನವಯುಗ! ಹೆಜಮಾಡಿ ಟೋಲ್ ಪ್ಲಾಜಾಕ್ಕೂ ಅಕ್ರಮದ ಭೀತಿ!   

01-12-22 11:04 pm       Mangalore Correspondent   ಕರಾವಳಿ

ನಿರಂತರ ಹೋರಾಟದ ಬಳಿಕ ಸುರತ್ಕಲ್ ಟೋಲ್ ಗೇಟ್ ಕಡೆಗೂ ತೆರವಾಗಿದೆ. ಆದರೆ, ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡಲಾಗುವುದೆಂಬ ಹೆದ್ದಾರಿ ಪ್ರಾಧಿಕಾರದ ಆದೇಶ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನಾಕ್ರೋಶದ ಅಲೆ ಎಬ್ಬಿಸಿದೆ.

ಮಂಗಳೂರು, ಡಿ.2: ನಿರಂತರ ಹೋರಾಟದ ಬಳಿಕ ಸುರತ್ಕಲ್ ಟೋಲ್ ಗೇಟ್ ಕಡೆಗೂ ತೆರವಾಗಿದೆ. ಆದರೆ, ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡಲಾಗುವುದೆಂಬ ಹೆದ್ದಾರಿ ಪ್ರಾಧಿಕಾರದ ಆದೇಶ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನಾಕ್ರೋಶದ ಅಲೆ ಎಬ್ಬಿಸಿದೆ. ಒಂದ್ಕಡೆ ಅನಿಷ್ಟವಾಗಿದ್ದ ಟೋಲ್ ಗೇಟ್ ತೆರವಾಯ್ತು ಅನ್ನುವಾಗಲೇ ಮತ್ತೊಂದು ಕಡೆ ವಸೂಲಿ ಮಾಡಲಾಗುತ್ತೆ ಅನ್ನುವ ವಿಚಾರ ಜನರಲ್ಲಿ ಕರಾವಳಿಯ ಜನಪ್ರತಿನಿಧಿಗಳ ವಿರುದ್ಧವೇ ಆಕ್ರೋಶದ ಕಿಡಿ ಮೂಡಿಸಿದೆ. 

ಈ ನಡುವೆ, ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಡಿಸೆಂಬರ್ 1ರಿಂದ ಸುರತ್ಕಲ್ ಟೋಲ್ ಗೇಟ್ ನಲ್ಲಿ ವಸೂಲಿ ನಿಂತುಬಿಟ್ಟಿದೆ. ಇದೇ ವೇಳೆ, ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಶುರುವಾಗಬೇಕಿದ್ದ ಹೆಚ್ಚುವರಿ ಶುಲ್ಕ ವಸೂಲಿ ಇನ್ನೂ ಶುರುವಾಗಿಲ್ಲ. ಭಾರೀ ಜನವಿರೋಧ ಕೇಳಿಬಂದಿರುವುದರಿಂದ ತಾತ್ಕಾಲಿಕ ಮುಂದೂಡಲಾಗಿದೆ ಎನ್ನುವ ಮಾತು ಮೇಲ್ನೋಟಕ್ಕೆ ಕೇಳಿಬರುತ್ತಿದೆ. ಆದರೆ ವಾಸ್ತವವಾಗಿ ಹೆಜಮಾಡಿಯ ಟೋಲ್ ಪ್ಲಾಜಾ ನಿರ್ವಹಿಸುವ ನವಯುಗ ಕಂಪನಿಯವರು ಈ ಕುರಿತ ಒಪ್ಪಂದಕ್ಕೆ ಸಹಿಯನ್ನೇ ಹಾಕಿಲ್ಲ ಅನ್ನುವ ವಿಚಾರ ತಿಳಿದುಬಂದಿದೆ.

About Us | NHTIS

ಡಬಲ್ ವಸೂಲಿಗೆ ಒಪ್ಪದ ನವಯುಗ ಕಂಪನಿ

ಭಾರೀ ಜನವಿರೋಧ, ನಿರಂತರ ಪ್ರತಿಭಟನೆಗೆ ಮಣಿದು ಸುರತ್ಕಲ್ ಟೋಲ್ ಗೇಟನ್ನು ತೆರವು ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಹೆದ್ದಾರಿ ಪ್ರಾಧಿಕಾರ, ಆ ಬಗ್ಗೆ ನ.11ಕ್ಕೆ ನೋಟಿಫಿಕೇಶನ್ ಹೊರಡಿಸಿತ್ತು. ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸುವ ಬದಲು ನವಯುಗದ ಹೆಜಮಾಡಿ ಟೋಲ್ ಗೇಟ್ ಜೊತೆಗೆ ವಿಲೀನಗೊಳಿಸಿ ಆದೇಶ ಮಾಡಿತ್ತು. ಆದರೆ ಹೆಜಮಾಡಿ ಟೋಲ್ ಗೇಟನ್ನು ಬೇರೆಯದ್ದೇ ಕಂಪನಿ ನಿರ್ವಹಿಸುತ್ತಿದ್ದು, ಅಲ್ಲಿ ಹೆಚ್ಚುವರಿ ಟೋಲ್ ವಸೂಲಿಗೆ ಆ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳಬೇಕಿತ್ತು. ಹೆಜಮಾಡಿಯಲ್ಲಿ ಹೆಚ್ಚುವರಿ ವಸೂಲಿ ಮಾಡಿದರೆ, ಅದರಿಂದುಂಟಾಗುವ ಜನವಿರೋಧವನ್ನು ತಾನೇ ಎದುರಿಸಬೇಕಾದೀತು ಅನ್ನುವ ಮುನ್ನೆಚ್ಚರಿಕೆಯಲ್ಲಿ ನವಯುಗ ಕಂಪನಿ ಅಧಿಕಾರಿಗಳು ಡಬಲ್ ಶುಲ್ಕ ವಸೂಲಿಗೆ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

ಹೆದ್ದಾರಿ ಪ್ರಾಧಿಕಾರದಿಂದ ಟೋಲ್ ಗೇಟ್ ರದ್ದತಿಗೆ ಆರ್ಡರ್ ಮಾಡಿದ್ದರೂ, ಡಿಸೆಂಬರ್ 1ರಿಂದ ಹೆಜಮಾಡಿಯಲ್ಲಿ ಶುಲ್ಕ ವಸೂಲಿ ಮಾಡಬೇಕೆಂಬ ಸೂಚನೆಯನ್ನು ನವಯುಗ ಕಂಪನಿ ಪಾಲಿಸಿಲ್ಲ. ಈ ಬಗ್ಗೆ ಹೆದ್ದಾರಿ ಅಧಿಕಾರಿಗಳು ಡಿ.1ರಂದು ಕಂಪನಿ ಪ್ರತಿನಿಧಿಗಳನ್ನು ಕರೆದು ಮಾತುಕತೆ ನಡೆಸಿದ್ದಾರೆ. ಆದರೆ ಜನವಿರೋಧ ವ್ಯಕ್ತವಾದರೆ, ಹೆಜಮಾಡಿಯ ಟೋಲ್ ಗೇಟನ್ನೇ ರದ್ದು ಮಾಡಬೇಕಾದೀತು ಅನ್ನುವ ದೂರದೃಷ್ಟಿಯಿಂದ ಹೆದ್ದಾರಿ ಅಧಿಕಾರಿಗಳ ಮಾತು ಕೇಳಲು ಕಂಪನಿ ಪ್ರತಿನಿಧಿಗಳು ತಯಾರಿಲ್ಲ.

Hejamadi Toll Plaza Charges & Contact Details - travelfare.in

ಹೆಜಮಾಡಿಯದ್ದೂ ಅಕ್ರಮ ಟೋಲ್ ಗೇಟ್ !

ಹಾಗೆ ನೋಡಿದರೆ, ಹೆಜಮಾಡಿಯ ಟೋಲ್ ಗೇಟ್ ಕೂಡ ಅಕ್ರಮ. ಕೇಂದ್ರ ಸರಕಾರದ 60 ಕಿಮೀಗೆ ಒಂದು ಟೋಲ್ ಅನ್ನುವ ನಿಯಮ ಪಾಲಿಸಿದರೆ ತಲಪಾಡಿಯಿಂದ ಕುಂದಾಪುರಕ್ಕೆ ಇರುವುದು 110 ಕಿಮೀ ಆಗಿರುವಾಗ ನವಯುಗ ಕಂಪನಿಯು ಎರಡು ಟೋಲ್ ಮಾತ್ರ ನಿರ್ವಹಿಸಲು ಅವಕಾಶ ಇದೆ. ಆದರೆ ತಲಪಾಡಿ, ಹೆಜಮಾಡಿ ಮತ್ತು ಸಾಸ್ತಾನದಲ್ಲಿ ಮೂರು ಕಡೆ ಟೋಲ್ ಗೇಟ್ ಹಾಕಲಾಗಿದೆ. ಆಮೂಲಕ ಈಗಾಗ್ಲೇ ಜನರ ಕಣ್ಣಿಗೆ ಮಣ್ಣೆರಚಿ ಟೋಲ್ ನಿರ್ವಹಿಸುತ್ತಿರುವಾಗ ಮತ್ತೊಂದು ಟೋಲ್ ಗೇಟ್ ಉಸಾಬರಿಯನ್ನು ಹೊತ್ತುಕೊಂಡು ಜನ ವಿರೋಧ ಕಟ್ಟಿಕೊಳ್ಳುವುದೇಕೆ ಎನ್ನುವ ಇರಾದೆಯಲ್ಲಿ ಕಂಪನಿಯಿದೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಈಗಾಗಲೇ 60 ಕಿಮೀ ನಡುವೆ ಒಂದು ಟೋಲ್ ಮಾತ್ರ ಉಳಿಸಲಾಗುವುದು, ಉಳಿದವನ್ನು ತೆಗೆದು ಹಾಕಲಾಗುವುದು ಎಂದಿದ್ದರು. ಆ ನೀತಿಯನ್ನು ಕಡ್ಡಾಯಗೊಳಿಸಿದರೆ ಹೆಜಮಾಡಿ ಟೋಲ್ ಗೇಟ್ ಕೂಡ ರದ್ದಾಗುತ್ತದೆ.

ಕಾನೂನು ಹೋರಾಟಕ್ಕೆ ನಿರ್ಧಾರ

ಸುರತ್ಕಲ್ ಟೋಲ್ ಗೇಟ್ ಮಾತ್ರವಲ್ಲದೆ, ಹೆದ್ದಾರಿ ಪ್ರಾಧಿಕಾರ ನಡೆಸುತ್ತಿರುವ ಹಗಲು ದರೋಡೆ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವರು ಸೇರಿಕೊಂಡು ಜಂಟಿಯಾಗಿ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ. ಬಳಕೆದಾರರ ವೇದಿಕೆಯ ರವೀಂದ್ರನಾಥ ಶಾನುಭೋಗ್ ನೇತೃತ್ವದಲ್ಲಿ ಕಾನೂನು ಹೋರಾಟಕ್ಕೆ ಇಳಿಯಲು ತಂಡ ಮುಂದಾಗಿದೆ. ಸುರತ್ಕಲ್ ನಿಂದ ಬಿಸಿ ರೋಡ್ ವರೆಗಿನ ಹೆದ್ದಾರಿ ಹೆಸರಲ್ಲಿ ಈಗಾಗಲೇ 350 ಕೋಟಿ ರೂಪಾಯಿ ಸಂಗ್ರಹವಾಗಿದ್ದರೂ, ಅದನ್ನು ಮರೆಮಾಚಿ ಹೆದ್ದಾರಿ ಅಧಿಕಾರಿಗಳು ಇನ್ನೂ ತಮ್ಮ ಹೊಟ್ಟೆ ತುಂಬಿಲ್ಲ ಅನ್ನುವಂತೆ ವರ್ತಿಸುತ್ತಿದ್ದಾರೆ. 60 ಕಿಮೀಗೆ ಒಂದು ಟೋಲ್ ಗೇಟ್ ಅನ್ನುವ ಕಾನೂನು ಮುಂದಿಟ್ಟು ಇಡೀ ರಾಜ್ಯದಲ್ಲಿರುವ ಅಕ್ರಮ ಟೋಲ್ ಗೇಟ್ ಮುಚ್ಚಲು ಸಮರ್ಥ ಕಾನೂನು ಹೋರಾಟ ರೂಪಿಸಲು ತಂಡ ರೆಡಿಯಾಗಿದೆ.

Mangaluru: NHAI proposes to convert B C Road-Suratkal highway into six-lane  - Daijiworld.com

ಪ್ರತ್ಯೇಕ ಸರ್ವಿಸ್ ರಸ್ತೆಯನ್ನೇ ಮಾಡಬೇಕಿತ್ತು !

ಬಿಲ್ಟ್ ಆಪರೇಟ್ ಅನ್ನುವ ನಿಯಮದಡಿ ರಸ್ತೆ ನಿರ್ಮಿಸಿದರೆ ಸ್ಥಳೀಯರಿಗೆ ಸಾಗಲು ಪ್ರತ್ಯೇಕ ರಸ್ತೆಯನ್ನೇ ನಿರ್ಮಿಸಬೇಕಾಗುತ್ತದೆ. ನವಯುಗದ ತಲಪಾಡಿ- ಕುಂದಾಪುರ ಮತ್ತು ಬಿಸಿ ರೋಡ್ – ಸುರತ್ಕಲ್ ಹೆದ್ದಾರಿ ಮಾಡಿದ್ದ ಎನ್ಎಂಪಿಟಿ ಪೋರ್ಟ್ ಅಥಾರಿಟಿ ಕಂಪನಿಯು ಎಲ್ಲಿಯೂ ಸರ್ವಿಸ್ ರಸ್ತೆಯನ್ನೇ ಮಾಡಿಲ್ಲ. ಹೆದ್ದಾರಿಯಲ್ಲಿ ಯಾವುದೇ ಅಡೆ ತಡೆ ಇಲ್ಲದೆ ಸಾಗಲು ಒಂದು ರಸ್ತೆಯಾದರೆ, ಸ್ಥಳೀಯರಿಗೆ ಟೋಲ್ ಉಸಾಬರಿಯೇ ಇಲ್ಲದೆ ಸಾಗಲು ಪ್ರತ್ಯೇಕ ಸರ್ವಿಸ್ ರಸ್ತೆ ಮಾಡಿರಬೇಕು. ಆದರೆ ಕರಾವಳಿಯ ಎಲ್ಲಿಯೂ ಇಂಥ ಸರ್ವಿಸ್ ರಸ್ತೆಯನ್ನೇ ಮಾಡಿಲ್ಲ. ಬಿಲ್ಟ್ ಆಪರೇಟ್ ನಿಯಮದಡಿ ರಸ್ತೆ ನಿರ್ಮಿಸಿದ್ದರೆ, ಅಂಥ ವ್ಯವಸ್ಥೆ ಮಾಡಿರದೇ ಇದ್ದರೆ ಅದನ್ನು ಕೋರ್ಟಿನಲ್ಲಿ ಪ್ರಶ್ನಿಸುವ ಅವಕಾಶ ಇದೆ. ಬೆಂಗಳೂರಿನ ನೈಸ್ ರಸ್ತೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿರುವುದನ್ನು ಗಮನಿಸಬಹುದು.

35 ದಿನಗಳ ಧರಣಿ ಅಂತ್ಯ, ಸಂಭ್ರಮಾಚರಣೆ  

ಇದೇ ವೇಳೆ, ಸುರತ್ಕಲ್ ಟೋಲ್ ಗೇಟ್ ತೆರವಿನ ಬೆನ್ನಲ್ಲೇ ಕಳೆದ 35 ದಿನಗಳಿಂದ ನಡೆಯುತ್ತಿದ್ದ ಹಗಲು- ರಾತ್ರಿ ಧರಣಿಯನ್ನು ಕೊನೆಗೊಳಿಸಲಾಗಿದೆ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಸೇರಿದಂತೆ ಉಭಯ ಜಿಲ್ಲೆಗಳ ಹತ್ತಾರು ಸಂಘಟನೆಗಳ ಬೆಂಬಲದಲ್ಲಿ ನಿರಂತರ ಧರಣಿ ನಡೆಸಲಾಗಿತ್ತು. ಗುರುವಾರ ಸಂಜೆ ನೂರಾರು ಮಂದಿ ಸೇರಿ ಧರಣಿಯ ಸಮಾರೋಪ ನಡೆಸಿದ್ದಾರೆ. ಅಲ್ಲದೆ, ಇದು ತುಳುನಾಡಿನ ಜನರು ನಡೆಸಿದ ಒಕ್ಕೊರಳ ಪ್ರತಿಭಟನೆಗೆ ಸಂದ ಜಯ ಎನ್ನುವ ಸಂದೇಶವನ್ನೂ ಸಾರಿದ್ದಾರೆ.

Union Transport Minister Suggests Use Of AI-driven Tech To Improve Road  Safety In India

ನಿರಂತರ ಧರಣಿಯಿಂದ ವ್ಯಾಪಕ ಜನಾಭಿಪ್ರಾಯ

ಒಂದೆಡೆ ಟೋಲ್ ಗೇಟ್ ತೆರವುಗೊಂಡಿದ್ದರೆ, ನಿರಂತರ ಪ್ರತಿಭಟನೆ ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಆಡಳಿತದ ವಿರುದ್ಧ ಭಾರೀ ಜನಾಭಿಪ್ರಾಯ ರೂಪುಗೊಳ್ಳಲು ಕಾರಣವಾಗಿದೆ. ಇದರಿಂದ ಉಡುಪಿ ಮತ್ತು ದಕ್ಷಿಣ ಜಿಲ್ಲೆಯ ಬಿಜೆಪಿ ಶಾಸಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್ ದೆಹಲಿಗೆ ತೆರಳಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾಗಿದ್ದಾರೆ. ಸುರತ್ಕಲ್ ಟೋಲ್ ಗೇಟ್ ಶುಲ್ಕವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡುವ ಹೆದ್ದಾರಿ ಪ್ರಾಧಿಕಾರದ ಆದೇಶ ಜಾರಿಗೊಳಿಸದಿರಿ. ಈ ರೀತಿ ಮಾಡಿದರೆ ಉಡುಪಿ ಜಿಲ್ಲೆಯ ಜನರಿಗೆ ಮಾಡಿದ ವಂಚನೆಯಾಗುತ್ತದೆ, ಇದರಿಂದ ನಾವು ವ್ಯಾಪಕ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದಿದ್ದಾರೆ.

The Surathkal toll gate has finally been opened after continuous struggle. However, the highways authority's order that surathkal toll fee will be collected at Hejamady has created a wave of public anger in Udupi and Dakshina Kannada districts. The fact that the toll gate, which was bad on the one hand, has been opened and that it will be collected on the other side has sparked anger among the people against the people's representatives in the coastal areas.