ಧರ್ಮಸ್ಥಳದಲ್ಲಿ ಡ್ರೋಣ್ ಬಳಸಿ ಸಾವಯವ ಸ್ಯಾನಿಟೈಸರ್ ಸಿಂಪಡಣೆ 

30-07-20 02:47 pm       Mangalore Reporter   ಕರಾವಳಿ

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಹೊಸ ಉಪಾಯ ಕಂಡುಕೊಳ್ಳಲಾಗಿದೆ. ಸಾವಯವ ಸ್ಯಾನಿಟೈಸರ್ ಬಳಸಿ, ಸಾಮೂಹಿಕವಾಗಿ ಜನರ ಮೇಲೆ ಸಿಂಪಡಣೆಗೆ ಯೋಜನೆ ರೂಪಿಸಲಾಗಿದೆ. 

ಮಂಗಳೂರು, ಜುಲೈ 30: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಹೊಸ ಉಪಾಯ ಕಂಡುಕೊಳ್ಳಲಾಗಿದೆ. ಸಾವಯವ ಸ್ಯಾನಿಟೈಸರ್ ಬಳಸಿ, ಸಾಮೂಹಿಕವಾಗಿ ಜನರ ಮೇಲೆ ಸಿಂಪಡಣೆಗೆ ಯೋಜನೆ ರೂಪಿಸಲಾಗಿದೆ. 

ಸಾಮೂಹಿಕವಾಗಿ ಜನ ಸೇರುವ ಪ್ರದೇಶದಲ್ಲಿ ಸೋಂಕು ತಡೆಗಟ್ಟುವ ವಿಧಾನದ ಬಗ್ಗೆ ಗಂಭೀರ ಚರ್ಚೆಗಳು ನಡೆದಿರುವಾಗಲೇ ಈ ಸಮಸ್ಯೆಗೆ ಪರಿಹಾರ ಎಂಬಂತೆ ಚೆನ್ನೈ ಮೂಲದ ಸಂಸ್ಥೆಯೊಂದು ಧರ್ಮಸ್ಥಳದಲ್ಲಿ ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡಿಸುವ ವಿಧಾನದ ಪ್ರಾತ್ಯಕ್ಷಿಕೆ ನೀಡಿದೆ.

ಚೆನ್ನೈ ಮೂಲದ ಸುಗಾರಾಧನಾ ಎನ್ನುವ ತಂಡ ಸಾವಯವ ಸ್ಯಾನಿಟೈಸರ್ ಅನ್ನು ಡ್ರೋನ್  ಮೂಲಕ ಪರಿಸರದಲ್ಲಿ ಸಿಂಪಡಿಸುವ ಪ್ರಾತ್ಯಕ್ಷಿಕೆ ನೀಡಿದೆ. ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ಇಂಥ ಪ್ರದೇಶದಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಸುತ್ತಮುತ್ತ ಡ್ರೋನ್  ಮೂಲಕ ಸಾವಯವ  ಸ್ಯಾನಿಟೈಸರ್ ಸಿಂಪಡಿಸಲು ಯೋಜನೆ ರೂಪಿಸಲಾಗಿದೆ.  ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಸ್ಯಾನಿಟೈಸರ್ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಸಂಪೂರ್ಣ  ಸಾವಯವ  ವಸ್ತುಗಳನ್ನು ಬಳಸಿಕೊಂಡು ಈ ಸ್ಯಾನಿಟೈಸರ್ ತಯಾರಿಸಲಾಗಿದ್ದು,  ಕೊರೊನಾ ಸೋಂಕು  ತಡೆಯುವಲ್ಲಿ ಇದು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗಿದೆ. ತಮಿಳುನಾಡಿನ ಕೊರೊನಾ ಪೀಡಿತ ಪ್ರದೇಶಗಳಲ್ಲಿ ಇದೇ ಮಾದರಿಯ ಡ್ರೋಣ್ ಮೂಲಕ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಅಣ್ಣಾ ವಿಶ್ವವಿದ್ಯಾನಿಲಯದ ಎಂ.ಐ.ಟಿ ವಿದ್ಯಾರ್ಥಿಗಳು ಈ ಡ್ರೋನ್  ತಯಾರಿಸಿದ್ದಾರೆ. 16 ಲೀಟರ್ ಸ್ಯಾನಿಟೈಸರ್ ತುಂಬಿಸಿಕೊಂಡು ಹಾರಾಡುವ ಸಾಮರ್ಥ್ಯ ಈ ಡ್ರೋನ್ ಗಿದ್ದು, ದೊಡ್ಡ ಕಟ್ಟಡಗಳನ್ನು ಈ ಡ್ರೋನ್  ಮೂಲಕ ಸಂಪೂರ್ಣ ಸ್ಯಾನಿಟೈಸ್ ಮಾಡಬಹುದಾಗಿದೆ.