ಸಿಟಿ ಬಸ್ ; ಕ್ಯಾಶ್ ಲೆಸ್ ಪ್ರಯಾಣಕ್ಕೆ ಬಂತು ಚಲೋ ಕಾರ್ಡ್, ದಿನಕ್ಕೆ ನಾಲ್ಕು ಬಾರಿ ಉಚಿತ !!

17-10-20 03:03 pm       Mangaluru Correspondent   ಕರಾವಳಿ

ಚಲೋ ಸೂಪರ್‌ ಸೇವರ್‌ ಪ್ಲಾನ್‌ ಹೆಸರಲ್ಲಿ ವಾರಕ್ಕೆ, ತಿಂಗಳಿಗೆ ಪಾಸ್ ವ್ಯವಸ್ಥೆಯನ್ನು ಅನುಷ್ಠಾನಿಸಿದ್ದು, ಟಿಕೆಟ್ ಪಡೆಯೋ ಉಸಾಬರಿ ಇಲ್ಲದೆ ಬಸ್ಸಿನಲ್ಲಿ ಪ್ರಯಾಣಿಸಬಹುದು.

ಮಂಗಳೂರು, ಅಕ್ಟೋಬರ್ 17: ನಗರದಲ್ಲಿ ಬಸ್ಸಿನಲ್ಲಿ ಪ್ರಯಾಣಿಸಿದರೆ ಪ್ರತೀ ಬಾರಿ ಚಿಲ್ಲರೆಯದ್ದೇ ಸಮಸ್ಯೆ. ಹತ್ತು ರೂ. ಕೊಟ್ಟರೆ ಕಂಡೆಕ್ಟರ್ ಎರಡು ರೂಪಾಯಿ ನುಂಗಿಬಿಟ್ಟ. 12 ರೂ. ಟಿಕೆಟ್ ದರ ಇದ್ದರೆ 15 ಕೊಟ್ಟರೆ ರಿಟರ್ನ್ ಕೊಡಲ್ಲ ಎಂದು ಆರೋಪ ಮಾಡುವುದು ಕೇಳಿದ್ದೇವೆ. ಅಂಥ ಮಂದಿಗೆಲ್ಲ ಇದು ಸಿಹಿಸುದ್ದಿ. ಡೈಲಿ ಸಿಟಿ ಬಸ್ ಪ್ರಯಾಣಿಸೋರಿಗೆ ಲಾಭ ಆಗಬಲ್ಲ ಪಾಸ್ ವ್ಯವಸ್ಥೆಯನ್ನು ಬಸ್ ಮಾಲಕರ ಸಂಘ ಜಾರಿಗೆ ತಂದಿದೆ.

ಚಲೋ ಸೂಪರ್‌ ಸೇವರ್‌ ಪ್ಲಾನ್‌ ಹೆಸರಲ್ಲಿ ವಾರಕ್ಕೆ, ತಿಂಗಳಿಗೆ ಪಾಸ್ ವ್ಯವಸ್ಥೆಯನ್ನು ಅನುಷ್ಠಾನಿಸಿದ್ದು, ಟಿಕೆಟ್ ಪಡೆಯೋ ಉಸಾಬರಿ ಇಲ್ಲದೆ ಬಸ್ಸಿನಲ್ಲಿ ಪ್ರಯಾಣಿಸಬಹುದು. ಒಮ್ಮೆ ಕಾರ್ಡ್ ಪಡೆದ ಬಳಿಕ ಪ್ರತಿ ಬಾರಿ ಮೊಬೈಲ್ ರಿಚಾರ್ಜ್ ಮಾಡಿದ ಹಾಗೆ ರಿಚಾರ್ಜ್ ಮಾಡಿದ್ರೆ ಮುಗೀತು. ಮಿನಿಮಮ್ ದರ ಪ್ರಯಾಣಕ್ಕೆ ಸೂಪರ್ ಸೇವರ್ ತಿಂಗಳಿಗೆ 399 ರೂಪಾಯಿ ಆಗಿದ್ದು, 28 ದಿನಗಳಲ್ಲಿ 100 ಬಾರಿ ಪ್ರಯಾಣಿಸಲು ಅವಕಾಶವಿದೆ. ಒಮ್ಮೆಗೆ ಹತ್ತು ರೂ. ನೀಡುವ ಮಂದಿ ದಿನಕ್ಕೆ ನಾಲ್ಕು ಬಾರಿ ಉಚಿತವಾಗಿ ಪ್ರಯಾಣ ಮಾಡಬಹುದು. ಇದರಿಂದ ಗರಿಷ್ಠ ಉಳಿತಾಯ ಸಾಧ್ಯ ಎನ್ನುತ್ತಾರೆ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ.

ಈ ಕಾರ್ಡ್ ಪಡೆಯಲು ಪ್ರಯಾಣಿಕರು ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಜೆರಾಕ್ಸ್ ನೀಡಿ, ನೋಂದಣಿ ಮಾಡಿಸಬೇಕು. ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಕಟ್ಟಡದಲ್ಲಿರುವ ದ.ಕ. ಬಸ್ ಮಾಲಕರ ಸಂಘದ ಕಚೇರಿ, ಸ್ಟೇಟ್ ಬ್ಯಾಂಕ್ ಪ್ರದೇಶದ ಸಿಟಿ ಬಿಲ್ಡಿಂಗ್ ನಲ್ಲಿರುವ ಚಲೋ ಸೂಪರ್ ಸೇವರ್ ಕಚೇರಿ, ಬಲ್ಮಠ ರಸ್ತೆಯ ಮಾಂಡೋವಿ ಮೋಟರ್ಸ್ ಎದುರಿನ ಸಾಗರ್ ಟೂರಿಸ್ಟ್ ನಲ್ಲಿ ಪಡೆಯಬಹುದು. ಬಸ್ ನಿರ್ವಾಹಕರಲ್ಲಿಯೂ ಪಡೆಯಬಹುದು. ಆದರೆ, ಅದಕ್ಕೆ ಕೆವೈಸಿ ಅಪ್ಡೇಟ್ ಬೇಕಾಗುವುದರಿಂದ ಬಸ್ಸಿನಲ್ಲಿ ಮಾಡಿಸುವುದು ಕಷ್ಟವಾಗುತ್ತದೆ, ಕಚೇರಿಗೆ ಬಂದರೆ ಉತ್ತಮ ಎನ್ನುತ್ತಾರೆ, ಚಲೋ ಏಪ್ ಆಪರೇಶನ್ ಮ್ಯಾನೇಜರ್ ಅಮೃತ್ ಮಯ್ಯ.

ಮಿನಿಮಮ್ ಟಿಕೆಟ್ ಹತ್ತು ರೂ. ಪ್ರಯಾಣಕ್ಕೆ 399 ರೂ.ಗಳಾದರೆ, ಹತ್ತರಿಂದ 20 ರೂಪಾಯಿ ಟಿಕೆಟ್ ದರದಲ್ಲಿ ಪ್ರಯಾಣಿಸಲು 499 ರೂ. ಮತ್ತು 20ರಿಂದ ಹೆಚ್ಚಿನ ದರದ ಪ್ರಯಾಣಕ್ಕೆ ತಿಂಗಳಿಗೆ 799 ರೂ. ಪಾಸ್ ಮಾಡಬೇಕಾಗುತ್ತದೆ. ಈ ಕಾರ್ಡ್ ನಲ್ಲಿ ದಿನಕ್ಕೆ ನಾಲ್ಕು ಬಾರಿ ಯಾರು ಬೇಕಾದ್ರೂ ಪ್ರಯಾಣಿಸಬಹುದು. ಕಾರ್ಡ್ ಮಾಡಿಸಿದವರೇ ಹೋಗಬೇಕಂತಿಲ್ಲ. ಹೀಗಾಗಿ ಕ್ಯಾಶ್ ಲೆಸ್ ಬಸ್ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ ಈ ಕಾರ್ಡ್. ಸದ್ಯ ಮಂಗಳೂರು ನಗರದಲ್ಲಿ 4 ಸಾವಿರ ಚಲೋ ಕಾರ್ಡ್‌ ಮಾರಾಟವಾಗಿದೆ. ಸದ್ಯ ಶೇ.90ರಷ್ಟು ಸಿಟಿ ಬಸ್‌ಗಳು ಸಂಚಾರ ಆರಂಭಿಸಿದ್ದು, ಎಲ್ಲದರಲ್ಲೂ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ

ಇನ್ನು ಶಾಲೆ, ಕಾಲೇಜಿನ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಪಾಸ್ ಜಾರಿಗೆ ಬರಲಿದೆ. ಈ ಬಾರಿ ಶಾಲೆ ವಿಳಂಬ ಆಗಿರುವ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ದರ ಕಡಿಮೆಯಾಗಲಿದೆ. ನ.14ರಂದು ವಿದ್ಯಾರ್ಥಿ ಪಾಸ್ ವ್ಯವಸ್ಥೆಗೆ ಚಾಲನೆ ನೀಡಲಾಗುವುದು. ಪ್ರಾಥಮಿಕ, ಹೈಸ್ಕೂಲ್, ಪಿಯುಸಿ, ಪದವಿ ಹೀಗೆ ಪಾಸ್ ದರ ಪ್ರತ್ಯೇಕವಾಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ, ದಿಲ್ ರಾಜ್ ಆಳ್ವ.

ಇನ್ನು ಯಾವಾಗಲೊಮ್ಮೆ ಕ್ಯಾಶ್ ಲೆಸ್ ಆಗಿ ಪ್ರಯಾಣಿಸುವ ಮಂದಿಗೂ ಚಲೋ ಕಾರ್ಡ್ ಪಡೆಯಬಹುದು. 100, 200, 500 ಎಷ್ಟಾದ್ರೂ ರಿಚಾರ್ಜ್ ಮಾಡಿಸಿ, ಅಗತ್ಯ ಬಿದ್ದಾಗ ಪ್ರಯಾಣಿಸಬಹುದು. ಅದರಲ್ಲೂ ಹತ್ತು ಪರ್ಸೆಂಟ್ ಆಫರ್ ಕೊಡುತ್ತೇವೆ. ಬಸ್ ನಿರ್ವಾಹಕರು ಪ್ರತಿ ಬಾರಿ ಸ್ವೈಪ್ ಮಾಡಿದಾಗ, ಟಿಕೆಟ್ ದರ ಕಡಿತ ಆಗುತ್ತದೆ. ಚಿಲ್ಲರೆ ಸಮಸ್ಯೆ ಇದ್ದವರಿಗೆ ಈ ಕಾರ್ಡ್ ಮಾಡಿಸಬಹುದು. ಈ ಕಾರ್ಡನ್ನು ಕೂಡ ಪ್ರತಿ ಬಾರಿ ಬಸ್ ಕಂಡಕ್ಟರ್ ಬಳಿಯೇ ರಿಚಾರ್ಜ್ ಮಾಡಿಸಲು ಅವಕಾಶವಿದೆ. 

The city buses here have proposed a weekly and monthly bus pass facility known as 'Chalo Super Saver Plan' to the passengers. The passes will enable passengers to undertake trips at a cost of about Rs 3.99. This was announced by Dakshina Kannada District Bus Owners Association president, Dilraj Alva.