ನರ್ಸಿಂಗ್ ಹಾಸ್ಟೆಲ್ ನಲ್ಲಿ ವಿಷಾಹಾರ ಸೇವನೆ ಪ್ರಕರಣ ; ಸಿಟಿ ಆಸ್ಪತ್ರೆ ಮತ್ತು ಕಾಲೇಜು ಆಡಳಿತದ ವಿರುದ್ಧ ಎಫ್ಐಆರ್ ದಾಖಲು 

07-02-23 12:49 pm       Mangalore Correspondent   ಕರಾವಳಿ

ಶಕ್ತಿನಗರದ ಸಿಟಿ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ವಿಷಾಹಾರ ಸೇವನೆ ಪ್ರಕರಣದ ಬಗ್ಗೆ ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಂಗಳೂರು, ಫೆ.7: ಶಕ್ತಿನಗರದ ಸಿಟಿ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ವಿಷಾಹಾರ ಸೇವನೆ ಪ್ರಕರಣದ ಬಗ್ಗೆ ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್, ಆಸ್ಪತ್ರೆ ಮತ್ತು ಕಾಲೇಜು ಆಡಳಿತ ನಿರ್ಲಕ್ಷ್ಯ ವಹಿಸಿದ್ದಾಗಿ ದೂರು ನೀಡಿದ್ದು ಅದರಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.‌

ಶಕ್ತಿನಗರದ ಸಿಟಿ ನರ್ಸಿಂಗ್ ಕಾಲೇಜು ಹಾಸ್ಟೆಲ್ ನಲ್ಲಿ ವಿಷಾಹಾರ ಸೇವನೆಯಿಂದಾಗಿ ದಿಢೀರ್ ಆಗಿ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ನಿನ್ನೆ ಮಧ್ಯಾಹ್ನದಿಂದಲೇ ಹೊಟ್ಟೆ ನೋವು, ವಾಂತಿ ಭೇದಿ ಕಾಣಿಸಿಕೊಂಡಿದ್ದು ಕಾಲೇಜು ಆಡಳಿತ ನಿರ್ಲಕ್ಷ್ಯ ವಹಿಸಿತ್ತು. ಸಂಜೆ ವೇಳೆಗೆ ಶಕ್ತಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಪಾಸಣೆ ನಡೆಸಿದ್ದು ಜಾಗ್ರತೆ ವಹಿಸಲು ಸೂಚಿಸಿದ್ದರು. ಅಲ್ಲದೆ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಕೈಗೊಂಡಿದ್ದರು. 

ರಾತ್ರಿ ವೇಳೆ, ಕಾಲೇಜು ಬಸ್ಸಿನಲ್ಲಿಯೇ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆತಂದಿದ್ದು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು. ಪೊಲೀಸರ ಪ್ರಕಾರ, 137 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹಾಸ್ಟೆಲ್ ಸಿಬಂದಿಗೆ ಜಾಗ್ರತೆ ವಹಿಸಲು ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾಗಿ ಮತ್ತು ವಿದ್ಯಾರ್ಥಿಗಳು ಗಂಭೀರ ಅಸ್ವಸ್ಥರಾಗಲು ಕಾರಣರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಪೊಲೀಸ್ ದೂರು ನೀಡಿದ್ದಾರೆ.

ಶಕ್ತಿನಗರದ ಸಿಟಿ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನ ಮೂರು ಹಾಸ್ಟೆಲ್ ಗಳಲ್ಲಿ 780 ವಿದ್ಯಾರ್ಥಿಗಳಿದ್ದು ಅವರಿಗೆ ಭಾನುವಾರ ರಾತ್ರಿ ಚಿಕನ್ ಬಿರಿಯಾನಿ ಪೂರೈಕೆ ಮಾಡಲಾಗಿತ್ತು. ಈ ಪೈಕಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೋಮವಾರ ಬೆಳಗ್ಗಿನಿಂದಲೇ ಹೊಟ್ಟೆ ಸಮಸ್ಯೆ ಕಾಣಿಸಿಕೊಂಡಿತ್ತು. ಹೊಟ್ಟೆ ನೋವು, ವಾಂತಿ, ಭೇದಿ ಕಾಣಿಸಿತ್ತು. ಹೆಚ್ಚಿನ ವಿದ್ಯಾರ್ಥಿಗಳು ಕೇರಳ ಮೂಲದವರಾಗಿದ್ದು ವಿಷಯ ತಿಳಿದ ಪೋಷಕರು ನಿನ್ನೆ ಸಂಜೆಯೇ ಮಂಗಳೂರಿಗೆ ಬಂದಿದ್ದರು. ಪೋಷಕರು ಬಂದು ಹಾಸ್ಟೆಲ್ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡ ಬಳಿಕ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮೆಡಿಕಲ್ ಕಾಲೇಜು ಹಾಸ್ಟೆಲ್ ನಲ್ಲಿ ಫುಡ್ ಪಾಯ್ಸನ್ ; ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ ! ವಿವಿಧ ಆಸ್ಪತ್ರೆಗಳಿಗೆ ದಾಖಲು

Food poisoning of Nursing students in Mangalore, Police register FIR against City Hospital and Medical College for showing negligence by providing unhygienic food to the students. As many as 130 students at nursing and paramedical college were hospitalised due to suspected food poisoning in Mangaluru's Shaktinagar on Monday. Some students reportedly consumed food in the mess of their respective hostel, after which they started complaining of stomach ache, loose motions and vomiting.