ಮರೆಯಾಯ್ತು ಯಕ್ಷಗಾನದ ಕಂಚಿನ ಸಿರಿಕಂಠ ; ಬಲಿಪ ನಾರಾಯಣ ಭಾಗವತರು ಇನ್ನಿಲ್ಲ 

16-02-23 08:52 pm       Mangalore Correspondent   ಕರಾವಳಿ

ಯಕ್ಷಗಾನ ರಂಗದಲ್ಲಿ ತಮ್ಮ ಕಂಚಿನ ಕಂಠದಿಂದಲೇ ಛಾಪು ಮೂಡಿಸಿದ್ದ ತೆಂಕುತಿಟ್ಟಿನ ಪ್ರಖ್ಯಾತ ಭಾಗವತ ಬಲಿಪ ನಾರಾಯಣ ಭಾಗವತ ಇನ್ನಿಲ್ಲ. ತಮ್ಮ 85ನೇ ಇಳಿ ವಯಸ್ಸಿನಲ್ಲಿ ಬಲಿಪರು ಇಹಲೋಕ ತ್ಯಜಿಸಿದ್ದಾರೆ. 

ಮಂಗಳೂರು, ಫೆ.16 : ಯಕ್ಷಗಾನ ರಂಗದಲ್ಲಿ ತಮ್ಮ ಕಂಚಿನ ಕಂಠದಿಂದಲೇ ಛಾಪು ಮೂಡಿಸಿದ್ದ ತೆಂಕುತಿಟ್ಟಿನ ಪ್ರಖ್ಯಾತ ಭಾಗವತ ಬಲಿಪ ನಾರಾಯಣ ಭಾಗವತ ಇನ್ನಿಲ್ಲ. ತಮ್ಮ 85ನೇ ಇಳಿ ವಯಸ್ಸಿನಲ್ಲಿ ಬಲಿಪರು ಇಹಲೋಕ ತ್ಯಜಿಸಿದ್ದಾರೆ. 

ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಪಡ್ರೆಯವರಾದ ಬಲಿಪ ನಾರಾಯಣ ಭಾಗವತರು 1938ರಲ್ಲಿ ಜನಿಸಿದ್ದರು. ತಮ್ಮ ಅಜ್ಜನ ಮೂಲಕವೇ ಸಣ್ಣಂದಿನಲ್ಲೇ ಯಕ್ಷಗಾನ ಭಾಗವತಿಕೆ ಕಲಿತುಕೊಂಡಿದ್ದ ಬಲಿಪರು 60 ವರ್ಷಗಳಿಗೂ ಹೆಚ್ಚು ಕಾಲ ಕಲಾ ಸೇವೆ ಮಾಡಿದ್ದಾರೆ. ನಿವೃತ್ತಿಯ ಬಳಿಕ ಮಗನ ಜೊತೆಗೆ ಮೂಡುಬಿದಿರೆ ಸಮೀಪದ ನೂಯಿ ಎಂಬಲ್ಲಿ ನೆಲೆಸಿದ್ದರು. 

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದಲ್ಲಿ ಸುದೀರ್ಘ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ವಿಶಿಷ್ಟ ಸೊಬಗಿನ ಆಲಾಪ, ಏರು ಕಂಠದ ಸ್ವರ ಕೇಳಿದರೇ ಅದು ಬಲಿಪರದ್ದು ಎನ್ನುವ ಹಿರಿಮೆಯನ್ನು ಮೂಡಿಸಿದವರು ಬಲಿಪ ನಾರಾಯಣ ಭಾಗವತರು. ಮಗ ಪ್ರಸಾದ್ ಬಲಿಪ ಅವರೂ ಭಾಗವತಿಕೆ ಶುರು ಮಾಡಿದ ಬಳಿಕ ಹಿರಿಯ ಬಲಿಪ, ಕಿರಿಯ ಬಲಿಪ ಎನ್ನುವ ವಿಭಜನೆಯನ್ನು ಯಕ್ಷಗಾನದ ಅಭಿಮಾನಿಗಳೇ ಮಾಡಿಕೊಂಡಿದ್ದರು. ಯಾವುದೇ ಪ್ರಸಂಗ ಇದ್ದರೂ ಇಳಿ ವಯಸ್ಸಿನಲ್ಲೂ ಕಂಠ ಪಾಠ ಹೊಂದಿದ್ದ ಅಪರೂಪದ ಪ್ರತಿಭೆ ಬಲಿಪರದ್ದು. 

ಭಾಗವತಿಕೆ ಜೊತೆಗೆ 35ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದರು. ಅದ್ಭುತ ಸಿರಿಕಂಠ ಇದ್ದರೂ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲದ ವ್ಯಕ್ತಿತ್ವ ಅವರದಾಗಿತ್ತು. ಯಾರೇ ಮಾತನಾಡಿಸಿದರೂ, ಅತ್ಯಂತ ವಿನಯದಿಂದ ಮಾತನಾಡಿಸುತ್ತಿದ್ದರು. ಕಟೀಲಿನ ದೇವಿ ಮಹಾತ್ಮೆ ಯಕ್ಷಗಾನಕ್ಕೆ ಹೊಸ ಅಭಿಮಾನಿ ಬಳಗವನ್ನು ಸೃಷ್ಟಿಸಿದ್ದೂ ಇವರ ಹೆಗ್ಗಳಿಕೆ. ಕಟೀಲು ಮೇಳವಲ್ಲದೆ, ಆ ಕಾಲದ ಕುಂಡಾವು, ರೆಂಜಾಳ, ಕೂಡ್ಲು ಮೇಳದಲ್ಲಿಯೂ ಇವರು ಕಲಾಸೇವೆ ಮಾಡಿದ್ದರು. ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಬಹಳಷ್ಟು ಪ್ರಶಸ್ತಿ, ಬಿರುದುಗಳು ಅವರಿಗೆ ಸಂದಿದ್ದವು.

Mangalore Yakshagana Bhagavatha Balipa Narayana Bhagavatha No More. Bhagavatha originally hails from Padre village in Kasaragod district. He lived in Nooi near Moodbidri.