ಕಮಲಶಿಲೆ ; ಭಕ್ತರ ಚಾಕರಿಯೇ ಆತನಿಗೆ ಪರಮಸೇವೆ ! ತಮಿಳು ಭಕ್ತನ ವಿಶಿಷ್ಟ ದೇವಿ ಸೇವೆ

22-10-20 10:41 am       Udupi Correspondent   ಕರಾವಳಿ

ತಮಿಳುನಾಡು ಮೂಲದ ರಾಜಶೇಖರ ಎಂಬವರು ದೇವಸ್ಥಾನದ ಚಾಕರಿ ಕೆಲಸದಲ್ಲಿ ತೊಡಗಿಸಿದ್ದಾರೆ. ಹೀಗೂ ಒಂದು ರೀತಿಯ ಅರ್ಪಣಾ ಭಾವದ ಸೇವೆಯನ್ನು ನಡೆಸುತ್ತಿರುವುದು ಗಮನ ಸೆಳೆದಿದೆ. 

ಉಡುಪಿ, ಅಕ್ಟೋಬರ್ 22: ನವರಾತ್ರಿ ವೇಳೆ ಉಪವಾಸ ವ್ರತ ಮಾಡೋದು, ದೇವಸ್ಥಾನಕ್ಕೆ ತೆರಳಿ ಹೋಮ ಹವನಗಳನ್ನು ಸಲ್ಲಿಸೋದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬರು ತಮಿಳುನಾಡು ಮೂಲದ ಭಕ್ತ ವಿಶಿಷ್ಟ ರೀತಿಯಲ್ಲಿ ನವರಾತ್ರಿ ಸೇವೆ ಸಲ್ಲಿಸಿದ್ದಾರೆ. 

ಉಡುಪಿ ಜಿಲ್ಲೆಯ ಪ್ರಸಿದ್ಧ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಮಿಳುನಾಡು ಮೂಲದ ರಾಜಶೇಖರ ಎಂಬವರು ದೇವಸ್ಥಾನದಲ್ಲಿ ಭಕ್ತರು ಊಟ ಮಾಡಿದ ಎಲೆಯನ್ನು ಎತ್ತುವುದು ಹಾಗೂ ಭಕ್ತರಿಗೆ ನೀರು, ದೇಗುಲದಲ್ಲಿ ಚಾಕರಿ ಮಾಡುವ ಕೆಲಸದಲ್ಲಿ ತೊಡಗಿಸಿದ್ದಾರೆ. ನವರಾತ್ರಿ ಉತ್ಸವ ಸಂದರ್ಭದಲ್ಲಿ ಹೀಗೂ ಒಂದು ರೀತಿಯ ಅರ್ಪಣಾ ಭಾವದ ಸೇವೆಯನ್ನು ನಡೆಸುತ್ತಿರುವುದು ಗಮನ ಸೆಳೆದಿದೆ. 

ರಾಜಶೇಖರ್ ತಮಿಳುನಾಡಿನಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ಪ್ರತಿವರ್ಷ ನವರಾತ್ರಿಗೆ ತಾಯಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇಗುಲಕ್ಕೆ ಆಗಮಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ಚಾಕರಿ ಕೆಲಸ ಮಾಡುವ ಮೂಲಕ ದೇವಿಯ ಸೇವೆ ನೆರವೇರಿಸುತ್ತಾರೆ. ದೇವಸ್ಥಾನದ ಧರ್ಮದರ್ಶಿ ಸಚ್ಚಿದಾನಂದ ಚಾತ್ರಾ ಹೇಳುವ ಪ್ರಕಾರ, ದೇವಿಗೆ ಭಕ್ತರು ಬಂದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಥರಾವರಿ ಸೇವೆಗಳನ್ನು ಸಲ್ಲಿಸುತ್ತಾರೆ. ತಮಿಳುನಾಡು ಮೂಲದ ವ್ಯಕ್ತಿಯ ಸೇವೆ ಬಹಳ ವಿಶಿಷ್ಟವಾಗಿ ಕಾಣುತ್ತಿದೆ. ದೇವರ ಮುಂದೆ ಭಕ್ತರೆಲ್ಲ ಸಮಾನರು ಎಂದು ಅವರು ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ. 

ಹಿಂದೆ ಕೊಲ್ಲೂರಿಗೆ ಬಂದಿದ್ದಾಗ, ಕಮಲಶಿಲೆ ದೇವಸ್ಥಾನದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಮನಸ್ಸಿಗೆ ಬಹಳ ಸಂತೋಷವಾಗಿದೆ. ನವರಾತ್ರಿ ಸಂದರ್ಭದಲ್ಲಿ ಮೂರು ವರ್ಷಗಳಿಂದ ದೇವಸ್ಥಾನಕ್ಕೆ ಬರುತ್ತಿದ್ದು ಹತ್ತು ದಿನ ಇಲ್ಲೇ ಇದ್ದು ಚಾಕರಿ ಕೆಲಸಗಳನ್ನು ಮಾಡುತ್ತಿದ್ದೇನೆ. ಯಾವುದೇ ಹರಕೆ ಹೊತ್ತು ಈ ಕೆಲಸ ಮಾಡುತ್ತಿಲ್ಲ. ನನ್ನ ಮನ ಸಂತೋಷಕ್ಕಾಗಿ ದೇವರ ಸೇವೆ ನಡೆಸುತ್ತಿದ್ದೇನೆ ಎಂದು ರಾಜಶೇಖರ್ ಹೇಳುತ್ತಾರೆ.