ಕೋರ್ಟ್ ಕೇಸ್ ಬಗ್ಗೆ ನಿಗಾ ಇಡಲು ಪ್ರತ್ಯೇಕ ವಿಭಾಗ, ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತೇವೆ ; ಕಮಿಷನರ್

28-02-23 10:37 pm       Mangalore Correspondent   ಕರಾವಳಿ

ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕೈತೊಳೆದು ಬಿಡುತ್ತಾರೆ. ಈ ರೀತಿಯ ಧೋರಣೆಯಿಂದಾಗಿ ಆರೋಪಿಗಳು ನ್ಯಾಯಾಲಯದಲ್ಲಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಾರೆ.

ಮಂಗಳೂರು, ಫೆ.28: ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕೈತೊಳೆದು ಬಿಡುತ್ತಾರೆ. ಈ ರೀತಿಯ ಧೋರಣೆಯಿಂದಾಗಿ ಆರೋಪಿಗಳು ನ್ಯಾಯಾಲಯದಲ್ಲಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಾರೆ. ಪೊಲೀಸರು ಸಂತ್ರಸ್ತರ ಪರವಾಗಿ ನಿಲ್ಲದೆ ಕ್ರಿಮಿನಲ್ ವಕೀಲರ ತಾಳಕ್ಕೆ ತಕ್ಕಂತೆ ಕುಣಿಯುವ ವರ್ತನೆಯಿಂದಾಗಿ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳು ಪಾರಾಗುವ ಸಂದರ್ಭ ಇರುತ್ತದೆ. ಇಂಥ ನಿರ್ಲಕ್ಷ್ಯ ತಪ್ಪಿಸಿ, ಜನರಿಗೆ ಪೊಲೀಸರ ಬಗ್ಗೆ ಭಯ, ನಂಬಿಕೆ ಬರುವುದಕ್ಕಾಗಿ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹೊಸ ವಿಭಾಗ ಒಂದನ್ನು ತೆರೆಯಲು ಹೊಸ ಕಮಿಷನರ್ ಕುಲದೀಪ್ ಆರ್ ಜೈನ್ ಚಿಂತನೆ ನಡೆಸಿದ್ದಾರೆ.

ದಿನಂಪ್ರತಿ ನಡೆಯುವ ಪ್ರಮುಖ ಪ್ರಕರಣಗಳು ಮತ್ತು ಆ ಕುರಿತು ಕೋರ್ಟಿನಲ್ಲಿ ಏನೇನಾಗುತ್ತಿದೆ ಅನ್ನುವುದರ ಬಗ್ಗೆ ನಿಗಾ ಇಡಲು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹೊಸ ವಿಭಾಗ ಒಂದನ್ನು ಆರಂಭಿಸಲಾಗಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅನ್ಶು ಕುಮಾರ್ ಮತ್ತು ಸಿಸಿಆರ್ ಬಿ ಘಟಕದ ಪೊಲೀಸರು ಈ ಬಗ್ಗೆ ನಿಗಾ ವಹಿಸಲಿದ್ದಾರೆ. ಸಂತ್ರಸ್ತರಿಗೆ ಕಾನೂನು ನೆರವು, ಸಲಹೆಗಳನ್ನು ನೀಡಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಈ ವಿಭಾಗದ ಹೊಣೆಯಾಗಿರುತ್ತದೆ. ಇದರಿಂದ ಆರೋಪಿಗಳ ಶಿಕ್ಷೆಯ ಪ್ರಮಾಣ ಹೆಚ್ಚಲಿದೆ ಎಂದು ಕುಲದೀಪ್ ಜೈನ್ ಹೇಳುತ್ತಾರೆ.

ನಗರ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಠಾಣೆಗಳಲ್ಲಿ ನಡೆಯುವ ಗಂಭೀರ ಪ್ರಕರಣಗಳ ಬಗ್ಗೆ ನಿಗಾ ಇಡುತ್ತೇವೆ. ಬಂಧಿಸಿ ಜೈಲಿಗೆ ತಳ್ಳುವುದು ಒಮ್ಮೆಗೆ ಮಾತ್ರ. ಪ್ರಕರಣದ ಮೇಲೆ ನಿಗಾ ಇಟ್ಟು ಆದಷ್ಟು ಬೇಗ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಂಡರೆ, ಸಮಾಜಕ್ಕೆ ಅದರಿಂದ ವಿಭಿನ್ನ ಸಂದೇಶ ಹೋಗುತ್ತದೆ. ಗಂಭೀರ ಪ್ರಕರಣಗಳಾದಲ್ಲಿ ಶಿಕ್ಷೆ ಖಚಿತ, ಪಾರಾಗುವುದಕ್ಕೆ ಸಾಧ್ಯವಿಲ್ಲ ಅನ್ನುವ ಮೆಸೇಜ್ ಸಮಾಜಕ್ಕೆ ಹೋಗಬೇಕು. ನಾವು ಗಂಭೀರ ಪ್ರಕರಣಗಳ ಬಗ್ಗೆ ನಿಗಾ ವಹಿಸಿ, ಶಿಕ್ಷೆಯಾಗುವಂತೆ ನೋಡಿಕೊಂಡರೆ ಅದರ ಪರಿಣಾಮ ದೂರಗಾಮಿ ಇರುತ್ತದೆ ಎಂದು ಹೇಳುತ್ತಾರೆ, ಕುಲದೀಪ್ ಜೈನ್.

ತಲೆಮರೆಸಿಕೊಂಡವರು, ಪದೇ ಪದೇ ಕೃತ್ಯಗಳಲ್ಲಿ ಭಾಗಿಯಾಗುವ ಮಂದಿಯ ಲಿಸ್ಟ್ ತಯಾರಿಸುತ್ತೇವೆ. ಅವರಿಗೆ ಜಾಮೀನು ನೀಡುವ ಮಂದಿಯ ಲಿಸ್ಟನ್ನೂ ಮಾಡುತ್ತೇವೆ. ಡಿಜಿ ಮತ್ತು ಐಜಿಯವರ ನಿರ್ದೇಶನದಂತೆ ಈ ರೀತಿಯ ಕೆಲಸವನ್ನು ಠಾಣಾ ಮಟ್ಟದಲ್ಲೂ ನಡೆಸುತ್ತೇವೆ. ಕೋರ್ಟ್ ಮಾನಿಟರಿಂಗ್ ಸೆಲ್ ಅನ್ನುವುದು ಪ್ರತಿ ಠಾಣೆಯಲ್ಲೂ ಇರಲಿದೆ. ಅದೇ ರೀತಿ, ಮಂಗಳೂರು ಕಮಿಷನರ್ ಕಚೇರಿಯಲ್ಲೂ ಇರಲಿದೆ ಎಂದು ಹೇಳಿದ ಅವರು, ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಮಾನಿಟರಿಂಗ್ ಮಾಡುವ ಕ್ರಮ ಇಲ್ಲದಿರುವುದನ್ನು ಗಮನಿಸಿದ್ದೇನೆ. ಇದಕ್ಕಾಗಿ ಪ್ರತ್ಯೇಕ ವಿಭಾಗ ಇದ್ದರೆ, ಪ್ರತಿ ಪ್ರಕರಣದ ಬಗ್ಗೆ ನಿಗಾ ವಹಿಸುತ್ತಾರೆ. ಸಮನ್ಸ್ ಇದೆಯೇ, ವಿಚಾರಣೆ ಇದೆಯೇ ಅನ್ನುವುದನ್ನು ನಿಗಾ ಇಟ್ಟು ಫಾಲೋ ಮಾಡುತ್ತಾರೆ ಎಂದರು.

ತನಿಖಾ ಹಂತದಲ್ಲಿ ತಾಂತ್ರಿಕ ಸಾಕ್ಷ್ಯ ಕಲೆಹಾಕುವುದು ಅತ್ಯಂತ ಮಹತ್ವದ್ದು. ಮಹಜರು ನಡೆಸುವ ಸಂದರ್ಭದಲ್ಲಿ ತನಿಖಾಧಿಕಾರಿ ಅಥವಾ ಉಪ ತನಿಖಾಧಿಕಾರಿಗಳು ಜೊತೆಗಿದ್ದಾರೆ ಅನ್ನುವುದನ್ನು ಸೂಚಿಸಲು ಫೋಟೋ ಅಗತ್ಯವಿರುತ್ತದೆ. ಮಹಜರು ಸಂದರ್ಭದಲ್ಲಿ ತನಿಖಾಧಿಕಾರಿ ಜೊತೆಗಿರುವ ರೀತಿಯಲ್ಲೇ ಫೋಟೋ ದಾಖಲಿಸಲು ಸೂಚಿಸಿದ್ದೇನೆ. ಕೇಸ್ ಫೈಲ್ ನಲ್ಲಿ ಎಲ್ಲವೂ ಪಕ್ಕಾ ಇರಬೇಕು. ಆರೋಪಿಗಳ ಆಧಾರ್ ಕಾರ್ಡ್ ನಕಲಿ ಇದೆಯೇ ಅನ್ನುವುದನ್ನೂ ತಪಾಸಣೆ ನಡೆಸಬೇಕು. ಅಪರಾಧ ಪ್ರಕರಣಗಳಲ್ಲಿ ಪೊಲೀಸರು ತುಂಬ ಅಲರ್ಟ್ ಇರುವುದನ್ನು ತೋರಿಸಿದರೆ ಶಿಕ್ಷೆಯ ಪ್ರಮಾಣ ತನ್ನಿಂತಾನೇ ಹೆಚ್ಚುತ್ತದೆ ಎಂದು ಹೇಳಿದರು.

B'luru city police commissioner Alok Kumar transferred | Deccan Herald

ಪ್ರಶಂಸೆ ವ್ಯಕ್ತಪಡಿಸಿದ ಎಡಿಜಿಪಿ ಅಲೋಕ್

ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಂಗಳೂರಿನ ವಿವಿಧ ಠಾಣೆಗಳಿಗೆ ತೆರಳಿ, ಅಲ್ಲಿನ ಸಿಬಂದಿಯ ಕುಂದು ಕೊರತೆ ಆಲಿಸಿದ್ದಾರೆ. ಅಲ್ಲದೆ, ಬೀಟ್ ವ್ಯವಸ್ಥೆಯನ್ನೂ ಕೂಡಲೇ ಆರಂಭಿಸಲು ಸೂಚಿಸಿದ್ದಾರೆ. ಪೊಲೀಸರು ಆಯಾ ಠಾಣೆ ವ್ಯಾಪ್ತಿಯಲ್ಲಿ ಬೀಟ್ ಮೀಟಿಂಗ್ ನಡೆಸುವುದಕ್ಕೂ ವ್ಯವಸ್ಥೆ ಮಾಡಿದ್ದಾರೆ. ಹೊಸ ಕಮಿಷನರ್ ಬಂದ ಕೂಡಲೇ ಈ ಕೆಲಸವನ್ನು ಮಾಡಿರುವುದು ಮೇಲಧಿಕಾರಿಗಳ ಮೆಚ್ಚುಗೆಗೂ ಕಾರಣವಾಗಿದೆ. ಈ ಬಗ್ಗೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದು, ಕುಲದೀಪ್ ಜೈನ್ ಕೆಲಸವನ್ನು ಪ್ರಶಂಸಿಸಿದ್ದಾರೆ. ಈ ರೀತಿ ಮೇಲಧಿಕಾರಿಗಳು ಠಾಣಾ ಹಂತದಲ್ಲಿ ಮೀಟಿಂಗ್ ನಡೆಸುವುದು ಸಿಬಂದಿಯ ಸ್ಥೈರ್ಯಯನ್ನು ಹೆಚ್ಚಿಸುವುದರ ಜೊತೆಗೆ ಪೊಲೀಸಿಂಗ್ ವ್ಯವಸ್ಥೆ ಉತ್ತಮಗೊಳ್ಳಲು ಕಾರಣವಾಗುತ್ತದೆ ಎಂದು ಎಡಿಜಿಪಿ ಹೇಳಿದ್ದಾರೆ.

Police Commissioner of Mangaluru Kuldeep Kumar R Jain said, “A separate section will be established in the police commissioner’s office for day-to-day monitoring and follow-up on all important court cases. This is to ensure that there is an improvement in the conviction rate. The section will be under the direct supervision of DCP (Law & Order) Anshu Kumar and the City Crime Records Bureau (CCRB). This is an attempt to ensure that there is an improvement in the conviction rate for crimes registered under the Indian Penal Code that covers heinous offences”.