ಹಿಂದುಳಿದ ವರ್ಗಕ್ಕೆ ಸಾಲ ಸೌಲಭ್ಯ, ಲಾಟರಿಯಿಂದ ವಿಜೇತರ ಆಯ್ಕೆ ; ಆಕ್ಷೇಪ

22-10-20 09:35 pm       Mangalore reporter   ಕರಾವಳಿ

ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಜಾತಿಗಳ ಅಭಿವೃದ್ಧಿ ನಿಗಮದಡಿ ಸಾಲ ಸೌಲಭ್ಯಕ್ಕೆ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು

ಮಂಗಳೂರು, ಅಕ್ಟೋಬರ್ 22  : ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ವಿವಿಧ ಜಾತಿಗಳ ಅಭಿವೃದ್ಧಿ ನಿಗಮದಡಿ ಸಾಲ ಸೌಲಭ್ಯಕ್ಕೆ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ಉಪ್ಪಾರ ಜನಾಂಗ 2 (1.5 ಲಕ್ಷ ), ವಿಶ್ವಕರ್ಮ 12 (6 ಲಕ್ಷ), ಸವಿತಾ ಸಮಾಜ 12 (6 ಲಕ್ಷ ), ಮಡಿವಾಳ ಸಮಾಜ 143, ಅಂಬಿಗರ 117 (58.5 ಲಕ್ಷ) ಮಂದಿಯನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಲಾಯಿತು. ವಿಶ್ವಕರ್ಮ ಸಮುದಾಯದಿಂದ 341 ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿತ್ತು. ಆದರೆ ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಜಿಲ್ಲೆಗೆ 6 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದ್ದರಿಂದ 12 ಮಂದಿ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಯ್ತು. ಮಡಿವಾಳ ಸಮಾಜ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕಾಗಿ 72 ಲಕ್ಷ ರೂ. ಅನುದಾನ ಬಂದಿದ್ದು, ಅರ್ಜಿ ಸಲ್ಲಿಕೆ ಮಾಡಿದ್ದ 143 ಮಂದಿಗೂ ಸಾಲ ಯೋಜನೆಗ ಪರಿಗಣಿಸಲಾಯ್ತು.

ವಿಶ್ವಕರ್ಮ ಸಮುದಾಯದಿಂದ ಅತಿ ಹೆಚ್ಚು 341 ಅರ್ಜಿಗಳು ಬಂದಿದ್ದವು. ಪ್ರತಿ ವರ್ಷ ಈ ಸಮುದಾಯಕ್ಕೆ ಅನುದಾನ ಕಡಿಮೆ ಬರುತ್ತಿರುವುದರಿಂದ ಫಲಾನುಭವಿಗಳ ಆಯ್ಕೆ ಕಗ್ಗಂಟಾಗಿದೆ. ಹೀಗಾಗಿ ಬಂಟ್ವಾಳ, ಬೆಳ್ತಂಗಡಿ ಹೀಗೆ ದೂರದ ಪ್ರದೇಶಗಳಿಂದ ಬಂದಿದ್ದ ಜನರು ತಮಗೆ ಸೌಲಭ್ಯ ಸಿಗದಿರುವ ವಿಚಾರದಲ್ಲಿ ಅಧಿಕಾರಿಗಳನ್ನು ಶಪಿಸುತ್ತಾ ಮರಳಿದರು.

ಈ ಬಗ್ಗೆ ಅಧಿಕಾರಿಗಳ ಬಳಿ ಪ್ರಶ್ನೆ ಮಾಡಿದಾಗ, ಅನುದಾನ ಬಂದ ಹಣದಲ್ಲಿ ನಾವು ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುತ್ತೇವೆ. ಹಣ ಕಡಿಮೆ ಬಂದಲ್ಲಿ ನಾವು ಏನೂ ಮಾಡಲು ಬರುವುದಿಲ್ಲ. ಪ್ರತಿ ವರ್ಷದ ಅರ್ಜಿಗಳನ್ನು ಮುಂದಿನ ಬಾರಿಗೆ ಸೇರ್ಪಡೆ ಮಾಡುತ್ತೇವೆ. ಲಾಟರಿ ಎತ್ತುವ ದಿನ ಎಲ್ಲರಿಗೂ ಸಂದೇಶ ಕಳಿಸಿ, ಬರಲು ಹೇಳುತ್ತೇವೆ ಎಂದು ತಿಳಿಸಿದ್ದಾರೆ.